ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡತಿಯರು

kamaladevi mar 20 j20 pg
Published on

ತಾಳ್ಮೆ, ತ್ಯಾಗ, ಕಷ್ಟಸಹಿಷ್ಣುತೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರ ಪರಿಶ್ರಮ ಒಂದು ರೀತಿಯಲ್ಲಿ ಬ್ರಿಟಿಷ್ ಸರ್ಕಾರವನ್ನು ಧಿಕ್ಕರಿಸುತ್ತ ಹೋದರೆ, ಮಹಿಳೆಯರ ಪಾತ್ರ ಮತ್ತೊಂದು ರೀತಿಯಲ್ಲಿ ಬ್ರಿಟಿಷ್ ಸರ್ಕಾರವನ್ನು ನಡುಗಿಸಿತು. ಬಲವಾದ ಹಾಗೂ ದೃಢವಾದ ಅಸಹಕಾರ ಚಳವಳಿ ಪ್ರಾರಂಭವಾದಾಗ, ಈ ಕ್ರಾಂತಿಯಲ್ಲಿ ದೇಶದ ದಿಟ್ಟ ಮಹಿಳಾ ಹೋರಾಟಗಾರರಲ್ಲದೆ ಕರ್ನಾಟಕದ ವನಿತೆಯರೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. ಸಹನೆ ಮತ್ತು ಧೀಮಂತ ಶಕ್ತಿಯಿಂದ ಹೋರಾಡಿ ಭಾರತದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಗಳಿಸಿದರು.

ದೇಶಬಾಂಧವ್ಯದಲ್ಲಿ ಅಣ್ಣ ತಂಗಿಯರೂ ಸತಿ ಪತಿಯರೂ ತಂದೆ ತಾಯಿ ಮಕ್ಕಳೂ ತಂತಮ್ಮ ಪಾಲಿನಲ್ಲಿ ಧೈರ್ಯೋತ್ಸಾಹಭರಿತರಾದರು. ಬೀದಿಬೀದಿಯಲ್ಲಿ ಮೆರವಣಿಗೆ ನಡೆದು ಗಗನದೆತ್ತರಕ್ಕೆ ವೀರಗೀತೆಯ, ದೇಶಭಕ್ತಿಯ ಘೊಷಣೆಯು ಕೇಳಿಸಿತು. ಪತಿಯು ಸಂಗ್ರಾಮದಲ್ಲಿ ಧುಮುಕಿ ಶ್ರಮಜೀವನ ಅನುಭವಿಸುತ್ತಿದ್ದಾಗ ಸತಿಯೂ ಸಹಕರಿಸಿ ಭೋಗಜೀವನಕ್ಕೆ ಬದಲಾಗಿ ತ್ಯಾಗ ಜೀವನವನ್ನು ಸ್ವೀಕರಿಸಿದಳು.

ಮನೆಯ ಒಳಗೂ ಹೊರಗೂ ಇಂತಹ ವಾತಾವರಣ ಹಬ್ಬಿ ಹರಡಿದಾಗ ಮಹಿಳೆಯರು ಅಡುಗೆ ಮನೆಯ ಸೆರೆ ತೊರೆದು ಸೆರೆಮನೆಯ ಕಠಿಣ ಶಿಕ್ಷೆಯ ವಾಸವನ್ನು ಮನಃಪೂರ್ವಕವಾಗಿ ಅನುಭವಿಸಿದರು. ಇಂಗ್ಲಿಷರಿಗೆ ಆಶ್ಚರ್ಯವಾಗುವ ರೀತಿಯಲ್ಲಿ ನಮ್ಮ ನಾಡಿನ ಮಹಿಳೆಯರು ವೀರವನಿತೆಯರಾದರು.

ಚಳವಳಿಗೆ ಪೂರಕವಾಗಿ ರಾಜ್ಯದಾದ್ಯಂತ ಮಹಿಳಾ ಸಂಸ್ಥೆಗಳಾದುವು. ಕುಮಟಾ ಮಹಿಳಾ ಮಂಡಲ, ಮಂಗಳೂರು ಮಹಿಳಾ ಸಭಾ, ಗದಗ ಮಹಿಳಾ ಸಮಿತಿ, ಹುಬ್ಬಳ್ಳಿಯ ಭಗಿನಿ ಮಂಡಳ, ಹಾನಗಲ್​ನ ರಾಷ್ಟ್ರೀಯ ಕನ್ಯಾ ಶಾಲೆ, ಧಾರವಾಡದ ಮಹಿಳಾ ಸಮಾಜ, ಹಾವೇರಿಯ ಭಗಿನೀ ಮಂಡಲ ಮುಂತಾದ ಮಹಿಳಾ ಸಂಸ್ಥೆಗಳು ಮಹಿಳೆಯರಿಗೆ ಮಾರ್ಗದರ್ಶನ ನೀಡುವ ಸಂಘಗಳಾದವು.

ತರಬೇತಿ ಕೇಂದ್ರಗಳೂ ಮಹಿಳಾ ಸಂಸ್ಥೆಗಳೂ ಹೆಚ್ಚು ಪ್ರಭಾವ ಬೀರಿ ಮಹಿಳೆಯರು ತರಬೇತಿ ಪಡೆದರು. ಮಹಿಳಾ ಸಂಘಗಳು ಸ್ಥಾಪನೆಯಾಗಬೇಕೆಂದು ಸಲಹೆ ಕೊಟ್ಟು ಡಾ. ಹರ್ಡಿಕರ್​ರವರು ಕರ್ನಾಟಕದ ಅನೇಕ ಮಹಿಳೆಯರ ಸಾಮರ್ಥ್ಯವನ್ನು ಗುರುತಿಸುವುದರಲ್ಲಿ ಯಶಸ್ವಿಯಾದರು.

ರಾಜಕೀಯ ರಂಗಪ್ರವೇಶ

1924ರಲ್ಲಿ ಬೆಳಗಾವಿ ಕಾಂಗ್ರೆಸ್ಸಿಗೆ ಪ್ರಪ್ರಥಮವಾಗಿ 150 ಜನ ಸೇವಿಕೆಯರು ಬಂದುದು ಕರ್ನಾಟಕದ ಸ್ತ್ರೀಯರಿಗೆ ಸಾರ್ವಜನಿಕ ರಂಗಪ್ರವೇಶಕ್ಕೆ ಅವಕಾಶವಾಯಿತು. ಅಪಾಯಕರವಾದ ಚಳವಳಿಗಳಲ್ಲಿ ಅಸಂಖ್ಯಾತ ಸ್ತ್ರೀಯರು ಪಾಲ್ಗೊಂಡರು. ಸಾರಾಯಿ ಅಂಗಡಿ ಪಿಕೆಟಿಂಗ್, ಕರನಿರಾಕರಣ ಚಳವಳಿಯಲ್ಲಿ ಜಪ್ತಿಯಾದ ಸತ್ಯಾಗ್ರಹಿಗಳ ವಸ್ತುಗಳನ್ನು ಕೊಂಡೊಯ್ದವರ ಮನೆ ಮುಂದೆ ಸತ್ಯಾಗ್ರಹ ಹೂಡುವುದು, ವಿದೇಶಿ ಬಟ್ಟೆಗಳನ್ನು ಭಸ್ಮ ಮಾಡುವುದು ಮುಂತಾದ ಚಟುವಟಿಕೆಗಳು ಮಹಿಳೆಯರ ಸಾಹಸದ ಪ್ರಸಂಗಗಳಾಗಿ ಚಿರಸ್ಮರಣೀಯವಾದುವು.

ರಾಷ್ಟ್ರೀಯ ಶಿಕ್ಷಣ ಪಡೆದ ಕರ್ನಾಟಕದ ಸ್ತ್ರೀಯರು ಎಚ್ಚೆತ್ತು ಹೆಚ್ಚುಹೆಚ್ಚಾಗಿ ಎಲ್ಲಾ ಚಳವಳಿಗಳಲ್ಲೂ ಭಾಗವಹಿಸಿದರು. ಶಾಲಾ ಕಾಲೇಜುಗಳ ತ್ಯಾಗ, ನೌಕರಿ ತ್ಯಾಗ, ಕಾನೂನು ಭಂಗ, ಕ್ವಿಟ್ ಇಂಡಿಯಾ ಚಳವಳಿ ಈ ಎಲ್ಲಾ ಆಂದೋಲನಗಳಲ್ಲೂ ಸ್ತ್ರೀ ಹೋರಾಟಗಾರರು ತಮ್ಮ ತ್ಯಾಗ, ತಪಸ್ಸು, ಪರಿಶ್ರಮ ಮತ್ತು ಧ್ಯೇಯ ನಿಷ್ಠೆಯನ್ನು ತೋರಿಸಿದ್ದಾರೆ. ಬ್ರಿಟಿಷ್ ಸರ್ಕಾರ ಕೊಟ್ಟ ಕಠಿಣ ಶಿಕ್ಷೆಯನ್ನು ಅನುಭವಿಸಿದ್ದಾರೆ. ಜೈಲು ವಾಸ ಕಂಡಿದ್ದಾರೆ. ಕಾಯಿಲೆಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ಹಿಂಸಾಚಾರ, ದೌರ್ಜನ್ಯ ಕಂಡು ಕೆಲವರು ಪ್ರಾಣಹತ್ಯೆ ಮಾಡಿಕೊಂಡಿದ್ದಾರೆ. ಸತ್ಯಾಗ್ರಹ ಉಪವಾಸ ಮಾಡಿ ಮಹಿಳೆಯರು ಸ್ವಾತಂತ್ರ್ಯಳಿಕೆಯ ಸಾಧನೆ ಮಾಡಿದ್ದಾರೆ.

ತರಬೇತಿ ಪಡೆದ ಮಹಿಳಾ ಸ್ವಯಂಸೇವಿಕೆಯರು ಆಂದೋಳನದ ನಾಯಕಿಯರಾದರು. ಸಮಾಜಸೇವೆ, ದೇಶಸೇವೆ ಮಾಡುವ ಮನೋಭಾವ ಉಕ್ಕಿತು. ಸ್ವಾತಂತ್ರ್ಯ ಸಂಗ್ರಾಮದ ರಚನಾತ್ಮಕ ಕಾರ್ಯಗಳಿಗಾಗಿ ಜೀವನವನ್ನೇ ಮುಡುಪಾಗಿಟ್ಟರು. ಇಂತಹ ಮಹಿಳಾ ವೀರರ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.

ಕರನಿರಾಕರಣ ಚಳವಳಿ

ಚಳವಳಿಗಳ ಪಟ್ಟಿಯನ್ನು ನೋಡಿದರೆ ಬಹುಶಃ ಕರನಿರಾಕರಣ ಚಳವಳಿಗೇ ಪ್ರಥಮ ಸ್ಥಾನ ಕೊಡಬೇಕು. ಅಹಿಂಸಾತ್ಮಕ ಹೋರಾಟದಲ್ಲಿ ಅಂತಿಮ ಹಂತವೇ ಕರನಿರಾಕರಣ ಚಳವಳಿ ಎಂದಿದ್ದಾರೆ ಬಾಪೂ. ಸರದಾರ ವೆಂಕಟರಾಮಯ್ಯನವರ ಪತ್ನಿ ಗೌರಮ್ಮನವರು ಕರನಿರಾಕರಣ ಚಳವಳಿಯ ನಾಯಕಿಯಾದರು. ಕರ್ನಾಟಕದಲ್ಲಿ ನಡೆದ ಈ ಚಳವಳಿ ಅತ್ಯಂತ ಯಶಸ್ವಿಯಾಗಲು ಗೌರಮ್ಮನವರ ವೀರತ್ಯಾಗಗಳೇ ಕಾರಣ. ಗೌರಮ್ಮನವರು ಸೇವಾದಳದ ಶಿಬಿರಕ್ಕೆ ಸೇರಿದ ನಂತರ ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಲು ಧೈರ್ಯ ಪಡೆದರು. ಅವರ ಅಭಿಪ್ರಾಯದಲ್ಲಿ, ನೈತಿಕ ಬಲ ಬಹುಶಕ್ತಿಶಾಲಿ. ಇದರಿಂದ ಮನೋನಿಶ್ಚಲತೆ, ಮನೋಧೈರ್ಯ ಬರುತ್ತದೆ. ಗೌರಮ್ಮನವರ ಪತಿಯೂ ಚಳವಳಿಯಲ್ಲಿ ಇದ್ದರಾದರೂ, ಗೌರಮ್ಮ ಕೂಡ ಇಷ್ಟಪಟ್ಟೇ ಚಳವಳಿಗಾರರಾದರು. ಅವಿಶ್ರಾಂತವಾಗಿ ದುಡಿದರು. ಇವರ ತ್ಯಾಗಜೀವನ, ದೇಶಪ್ರೇಮವು ಸ್ಪೂರ್ತಿಯ ವಾತಾವರಣವನ್ನುಂಟು ಮಾಡಿ ಇನ್ನಷ್ಟು ಮಹಿಳೆಯರನ್ನು ಹೊರಗೆ ಬರುವಂತೆ ಮಾಡಿತು.

ಕ್ವಿಟ್ ಇಂಡಿಯಾ ಚಳವಳಿ

ಬೆಳಗಾವಿ ಅಧಿವೇಶನಕ್ಕಾಗಿ ಭಾರತ ಸೇವಾ ದಳಕ್ಕೆ ಸ್ವಯಂಸೇವಿಕೆಯರನ್ನು ಆರಿಸುವ ಉದ್ದೇಶದಿಂದ ಉಮಾಬಾಯಿ ಕುಂದಾಪುರ ಅವರು ಕರ್ನಾಟಕ ಪ್ರವಾಸ ಕೈಗೊಂಡಾಗ ಅವರಿಂದ ಅನೇಕ ಮಹಿಳೆಯರು ಪ್ರಭಾವಿತರಾದರು. ಇಂತಹವರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರೂ ಒಬ್ಬರು. 1927ರಲ್ಲಿ ಪುಣೆಯಲ್ಲಿ ನಡೆದ ಅಖಿಲ ಭಾರತ ಮಹಿಳಾ ಪರಿಷತ್ತಿನ ಅಧಿವೇಶನ ಕಾರ್ಯನಿರ್ವಾಹಕ ಸಮಿತಿಯಲ್ಲಿ ಮಹಿಳಾ ಕಾರ್ಯದರ್ಶಿನಿಯಾಗಿ ದುಡಿದರು. ಆಲ್ ಇಂಡಿಯಾ ನ್ಯಾಷನಲ್ ಕ್ಯಾಂಪ್​ಗೆ ಬೇಕಾದ ತ್ಯಾಗಮಯಿಗಳೂ ಕಷ್ಟಸಹಿಷ್ಣುಗಳೂ ಆಗಿದ್ದ ಮಹಿಳೆಯರನ್ನು ಇಡೀ ಕರ್ನಾಟಕ ಸುತ್ತಿ ಆರಿಸಿ ತಂದರು. ಒಂದು ಮಹಿಳಾ ಸೇವಾದಳವನ್ನು ಸೃಷ್ಟಿಸಿದರು.

1942ರ ಆಗಸ್ಟ್​ನಲ್ಲಿ ‘ಭಾರತ ಬಿಟ್ಟು ತೊಲಗಿ ಆಂದೋಲನ’ ನಡೆದಾಗ ಕಮಲಾದೇವಿಯವರು ಸ್ತ್ರೀಯರನ್ನೂ ಪುರುಷರನ್ನೂ ಈ ಉಗ್ರರೂಪದ ಆಂದೋಲನಕ್ಕೆ ಸೇರಿಸುವಲ್ಲಿ ಸಫಲರಾದರು.

ದೇಶಕ್ಕಾಗಿ ಬ್ರಹ್ಮಚಾರಿಣಿ

ತಾಂಡೂರು ಸುನಂದಮ್ಮನವರು ತ್ಯಾಗ ವೈರಾಗ್ಯನಿಧಿಯಾಗಿ ದೇಶಸೇವೆಯನ್ನೇ ತಮ್ಮ ಉಸಿರಾಗಿಸಿಕೊಂಡು ರಾಷ್ಟ್ರಕ್ಕಾಗಿ ಜೀವ ಸವೆಸಿದರು. ದೇಶಸೇವೆ ನಿಮಿತ್ತವೇ ದಾಂಪತ್ಯ ಜೀವನ ಬೇಡವೆಂದು ಬ್ರಹ್ಮಚಾರಿಣಿಯಾಗಿದ್ದರು. ಮನೆ ಆಸ್ತಿ ಸ್ವಜನರು ಎಲ್ಲವನ್ನೂ ತೊರೆದು ಓಡಾಡುತ್ತಾ ಕೆಲಸ ಮಾಡಿದರು. ಸಮಾಜ ಆಡುತ್ತಿದ್ದ ವ್ಯಂಗ್ಯ ನುಡಿಗಳನ್ನು ಲೆಕ್ಕಿಸದೆ ಮುನ್ನುಗ್ಗಿದರು. ಕಾಂಗ್ರೆಸ್ ರ್ವಂಗ್ ಕಮಿಟಿಯಲ್ಲಿ ಇವರೊಬ್ಬರೇ ಮಹಿಳೆಯಾಗಿದ್ದು ಕಾರ್ಯನಿರ್ವಹಿಸಿದರು. ಮಹಿಳಾ ಸ್ವಯಂಸೇವಿಕೆಯರ ನಾಯಕಿಯಾದರು.

ಗುಂಡಿಗೂ ಹೆದರದ ಗುಂಡಿಗೆ

ದಾಸಪ್ಪನವರ ಪತ್ನಿ ಯಶೋಧರಾ ತಮ್ಮ ಮನೆಯನ್ನು ಭೂಗತ ಚಳವಳಿಯ ನಿರ್ದೇಶನದ ಕೇಂದ್ರವಾಗಿ ಮಾಡಿದ್ದರು. ಭೂಗತ ಚಳವಳಿ ನಡೆಸುವುದು ಅತ್ಯಂತ ಅಪಾಯಕಾರಿಯಾಗಿತ್ತು. ಬ್ರಿಟಿಷ್ ಸರ್ಕಾರದಿಂದ ಶಿಕ್ಷಾರ್ಹವಾಗಿತ್ತು. ಯಶೋಧರಾ ಅವರದು ದಿಟ್ಟತನದ ಸ್ವಭಾವ. ಕರ್ತವ್ಯನಿಷ್ಠೆ ಮತ್ತು ಕಾರ್ಯದಕ್ಷತೆಗೆ ಹೆಸರಾಗಿದ್ದರು. 1938ರ ಶಿವಪುರದ ಧ್ವಜಸತ್ಯಾಗ್ರಹದಲ್ಲಿ ಯಶೋಧರಾ ಪ್ರಮುಖ ಪಾತ್ರ ವಹಿಸಿದರು. ವಂದೇ ಮಾತರಂ ಹಾಡುವುದು, ಧ್ವಜ ಹಾರಿಸುವುದು ಬ್ರಿಟಿಷ್ ಸರ್ಕಾರದಿಂದ ನಿರ್ಬಂಧಿಸಲ್ಪಟ್ಟಿದ್ದವು. ಗುಂಡು ಹಾರಿಸುತ್ತಾರೆಂಬ ಆಜ್ಞೆ ಇದ್ದಾಗಲೂ ಯಶೋಧರಾ ಹಾಗೂ ಸುನಂದಮ್ಮನವರು ಧ್ವಜಾರೋಹಣ ಮಾಡಿ ಶಿವಪುರ ಧ್ವಜಸತ್ಯಾಗ್ರಹವನ್ನು ಯಶಸ್ವಿಗೊಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು.

ದೇಶಕ್ಕಾಗಿ ಹೊಸ್ತಿಲು ದಾಟಿದರು

ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಕ್ಕಳು ಹೊಸ್ತಿಲು ದಾಟಿದರೆ ಜನರು ಹುಬ್ಬೇರಿಸುತ್ತಿದ್ದ ಕಾಲದಲ್ಲಿ ಮಾನವರಿಂದ ಉತ್ತೇಜಿತರಾದ ಉಮಾಬಾಯಿ ಕುಂದಾಪುರ ಅವರು ಸಮಾಜಸೇವೆಗೆ ಹೊರಟುನಿಂತರು. ನಾಗಪುರ ಕಾಂಗ್ರೆಸ್ ಅಧಿವೇಶನದಲ್ಲಿ 1921ರಲ್ಲಿ ಕಾಂಗ್ರೆಸ್ ಸೇರಿದರು. ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 101 ಜನ ಮಹಿಳಾ ಸ್ವಯಂಸೇವಿಕೆಯರನ್ನು ಕಲೆಹಾಕಿದರು. ಇಳಕ ಕನ್ಯಾಶಾಲೆಯನ್ನು ತೆರೆದರು. ಭಗಿನಿಮಂಡಲವನ್ನು ಪ್ರಾರಂಭಿಸಿದರು. ಭಗನಿ ಮಂಡಲಕ್ಕೆ ಸೇರಿದವರಲ್ಲಿ ವಿದ್ಯೆ ಕಡಿಮೆ, ಅಡುಗೆಮನೆ ಆಚೆಯ ಜಗತ್ತನ್ನು ಅರಿಯದವರೂ, ಸಂಕುಚಿತ ಬುದ್ಧಿಯವರೂ ಇರುತ್ತಿದ್ದರು. ಇಂತಹವರನ್ನು ಕೂಡಿಸಿ ಸಾರ್ವಜನಿಕ ಕಾರ್ಯದಲ್ಲಿ ಆಸಕ್ತಿ ಬರುವಂತೆ ಮಾಡುವುದು ಕಡಿಮೆ ಕಷ್ಟದ ಕೆಲಸವಾಗಿರಲಿಲ್ಲ. ಅಂತಹ ಕಾರ್ಯದಲ್ಲಿ ಉಮಾಬಾಯಿ ಯಶಸ್ವಿಯಾದರು.

ಉಗ್ರ ಭಾಷಣ, ಬಿರುಸು ನಡೆ

ನಾಗಮ್ಮ ಪಾಟೀಲರು ಮಹಿಳಾ ವಿದ್ಯಾಪೀಠದ ನೆಪದಲ್ಲಿ ಕನ್ಯೆಯರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಚೋದಿಸಿದರು. ಹರಿಜನ ಮಕ್ಕಳನ್ನು ತಂದು ಸಾಕಿ ಸಲಹಿದರು. ಕೃಷ್ಣಾಬಾಯಿ ಪಂಜೇಕರ್ ಅವರು ವಿದೇಶೀ ವಸ್ತ್ರಗಳ ಮಾರಾಟದ ವಿರುದ್ಧ ಪಿಕೆಟಿಂಗ್ ನಡೆಸಲು ಸ್ತ್ರೀ ಸಮೂಹವನ್ನೇ ಸೃಷ್ಟಿಸಿದರು. ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಉಗ್ರಭಾಷಣ ಮಾಡಿ ಬಿರುಸಾದ ಕಾರ್ಯಕ್ರಮಗಳನ್ನು ನಡೆಸಿ ಕರ್ನಾಟಕದ ಮಹಿಳೆಯರನ್ನು ಸಾಧ್ಯವಾದ ಮಟ್ಟಿಗೂ ಸತ್ಯಾಗ್ರಹಕ್ಕೆ ಎಳೆದರು. ‘‘ರಮಾಬಾಯಿ ಯಾಳಗಿ, ಪ್ರಮೀಳಾ ದೇಶಪಾಂಡೆ, ಶಕುಂತಲಾ ಕುರ್ತಕೋಟಿ, ಮಣಿಬೆನ್, ಮೃಣಾಲಿನಿ ಸಾರಾಭಾಯ್ - ಇಂತಹ ಮಹಿಳೆಯರೊಡನೆ ಸಂಪರ್ಕವು ರಾಷ್ಟ್ರೀಯ ವಿಚಾರಗಳ ಮಂಥನಕ್ಕೆ ಅವಕಾಶ ಕೊಟ್ಟಿತು’’ ಎಂದು ಲೀಲಾವತಿ ಮಾಗಡಿ ಅವರು ಒಂದೆಡೆ ಹೇಳಿದ್ದಾರೆ.

ವಾತಾವರಣದ ಪ್ರಚೋದನೆಯಿಂದಲೂ, ವ್ಯಕ್ತಿಗಳ ಪ್ರಭಾವದಿಂದಲೂ ರಾಷ್ಟ್ರಸೇವೆಯ ಕೂಗಿನಿಂದಲೂ ಕರ್ನಾಟಕದ ಮಹಿಳೆಯರು ವೀರರಾದರು. ತ್ಯಾಗಿಯಾದರು. ಸುಖವನ್ನು ತ್ಯಜಿಸಿ ತಮ್ಮ ದೇಹವನ್ನು ಕಷ್ಟಕ್ಕೊಡ್ಡಿದರು. ಕಾಲ್ನಡಿಗೆಯಲ್ಲಿ ಊರೂರು ಸುತ್ತಿದರು. ಸಂಗ್ರಾಮದಲ್ಲಿ ಧುಮುಕಿ ಬಲಿದಾನ ನೀಡಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ವೀರವನಿತೆಯರ ಪಾತ್ರವು ಇತರರಿಗೂ ಅನುಕರಣೀಯವಾಯಿತು.

ಕಮಲಾ ಸಂಪಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net