_1784311319993.webp?w=480&auto=format%2Ccompress&fit=max)
_1784311319993.webp?w=480&auto=format%2Ccompress&fit=max)
ಸ್ವಾರಸ್ಯವೆಂದರೆ ಈ ಗಹನ ಚಿಂತನೆಯ ಕೆಲವು ಅಂಶಗಳನ್ನು ಲಘು ಧಾಟಿಯಲ್ಲಿ ಈಗಿನ ಹೋಮ್್ಟೇ ಸಂಸ್ಕೃತಿಗೂ ಹೋಲಿಸಲಿಕ್ಕೆ ಆಗುತ್ತದೆ! ಹೇಗೆಂದರೆ- ನಿಜವಾದ ಮನೆ ಬೇರೆಯೇ ಇರುತ್ತದೆ, ಮೈಮನಗಳಿಗೆ ಹೊಸತೊಂದು ಉಲ್ಲಾಸ ತರುವ ಬದಲಾವಣೆ ಬೇಕೆಂದು ವಿಹಾರ ತಾಣವಾಗಿ, ತಾತ್ಕಾಲಿಕ ನಿವಾಸವಾಗಿ ಹೋಮ್ಸ್ಟೇ ಆಯ್ದುಕೊಳ್ಳುತ್ತೇವೆ. ಇಂತಹ Homestay ಪ್ರವೃತ್ತಿಯನ್ನು ಕನ್ನಡದಲ್ಲಿ ಏನೆನ್ನಬಹುದು? ಚಿಕ್ಕಮಗಳೂರಿನ ಮೇಲುಕೊಪ್ಪದಿಂದ ಓದುಗ ಅರವಿಂದ ಸಿಗದಾಳ್ ಒಂದು ಕುತೂಹಲಕರ ಮಾಹಿತಿಯನ್ನು ಸಚಿತ್ರವಾಗಿ ಕಳುಹಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರು ಅಲ್ಲೊಂದು ಸಾತ್ವಿಕ ವಾತಾವರಣದ ಹೋಮ್ಸ್ಟೇ ನಡೆಸುತ್ತಿದ್ದಾರಂತೆ, ಅದಕ್ಕೆ ‘ತಂಗು ಮನೆ’ ಎಂಬ ಹೆಸರಿಟ್ಟಿದ್ದಾರಂತೆ! ಅದರದೊಂದಿಷ್ಟು ಹಿನ್ನೆಲೆಯನ್ನೂ ಬರೆದು ತಿಳಿಸಿದ್ದಾರೆ.
‘ಚಿಕ್ಕವನಿದ್ದಾಗ ನಾನು ನವರಾತ್ರಿಗಳಲ್ಲಿ ಹರಿಹರಪುರ ಮಠದಲ್ಲಿರುತ್ತಿದ್ದೆ. ಆಗಿನ ಗುರುಗಳಾದ ಶ್ರೀ ಅಭಿನವ ರಮಾನಂದ ಸರಸ್ವತಿಯವರ ಕೈಯಿಂದಲೇ ರಾತ್ರಿಪೂಜೆಯ ನೈವೇದ್ಯ ಮಾಡಿದ ಕಡಲೆ, ತೆಂಗಿನಕಾಯಿ ಚೂರುಗಳು ಇತ್ಯಾದಿ ಸಿಗುತ್ತಿತ್ತು. ಆಮೇಲೆ ಹರಿಹರಪುರದಲ್ಲಿ ಪ್ರೌಢಶಾಲೆ ಓದುವಾಗಲೂ ಮಠಕ್ಕೆ ಆಗಾಗ ಹೋಗುತ್ತಿದ್ದೆ. ಮಠದ ಪಕ್ಕದಲ್ಲಿ, ಪರವೂರಿಂದ ಬಂದವರಿಗೆ ಉಳಿದುಕೊಳ್ಳಲು ಒಂದಷ್ಟು ಕೊಠಡಿಗಳನ್ನು ಕಟ್ಟಿಸಿದ್ದರು. ಆ ಒಟ್ಟು ಸಮುಚ್ಚಯಕ್ಕೆ ‘ತಂಗು ಮನೆ’ ಎಂದು ಹೆಸರಿಟ್ಟಿದ್ದರು. ಹಾಗೆ, ನಾನೇ ಒಂದು ಹೋಮ್ಸ್ಟೇ ಉದ್ಯಮ ಆರಂಭಿಸಿ ಅದಕ್ಕೊಂದು ಹೆಸರು ಯೋಚಿಸುವಾಗ ಬಾಲ್ಯದ ನೆನಪಾಗಿ ‘ತಂಗು ಮನೆ’ ಎಂದೇ ಹೆಸರಿಟ್ಟೆ. ಇದರ ಉದ್ಘಾಟನೆಗೆ ಮಂಗಳೂರು ರಾಮಕೃಷ್ಣಾಶ್ರಮದ ಹಿರಿಯ ಸ್ವಾಮೀಜಿ ಶ್ರೀ ಜಿತಕಾಮಾನಂದಜೀ ಆಗಮಿಸಿದ್ದು, ಆಮೇಲೊಮ್ಮೆ ‘ತಂಗು ಮನೆ’ಯಲ್ಲಿ ಒಂದು ದಿನ ತಂಗಲಿಕ್ಕೆಂದೇ ಅವರು ಭೇಟಿಯಿತ್ತಿದ್ದು ನನ್ನ ಸುಕೃತವೆನ್ನಬೇಕು.’
ಆಶ್ಚರ್ಯವೆಂದರೆ Homestay ಪದಕ್ಕೆ ಪರ್ಯಾಯ ತಿಳಿಸಿದ ಪ್ರವೇಶಿಕೆಗಳಲ್ಲಿ ಬಹುಜನರ ಆಯ್ಕೆ ‘ತಂಗು ಮನೆ’ಯೇ. ಸೂಚಿಸಿರುವವರು: ಶೈಲಶ್ರೀ ರಾವ್, ಶ್ರೀನಿವಾಸ ಭಟ್ ಹೊಸನಗರ, ಸುನಯನಾ ಮಾರ್ನಾಡು, ಪಾರ್ವತಿ ರ್ಕ, ಡಾ.ಪ್ರಕಾಶ ತೇರಣಿ, ವನಮಾಲಾ ಬೀಜಾಡಿ, ಸಾವಿತ್ರಿ ಕ.ಬೇಲೆ ಬೇಡಕಿಹಾಳ, ಅನ್ನಪೂರ್ಣ ಹೇಮಚಂದ್ರ, ವಿ.ವಿಜಯೇಂದ್ರ ರಾವ್, ಸಿದ್ದರಾಮ ಕರಜಗಿ, ಸುಜಯ ಬಿ.ಜಿ, ಶಶಿಕಲಾ ಮೋಟೆಬೆನ್ನೂರ್, ವಿಲಾಸ ಹುದ್ದಾರ, ಗೋಪಿನಾಥ ಭರಮಸಾಗರ, ಮಂಜುನಾಥ ಡಿ.ಎಸ್, ಅಂಜಲಿ ಬರ್ವೆ, ಷಡಕ್ಷರಮುನಿ ಸ್ವಾಮೀಜಿ, ಜಯಲಕ್ಷ್ಮಿ ಅಡಿಗ, ಕುಶಲ್ ಭಾರದ್ವಾಜ್, ಶೋಭಾ ತಿಪಟೂರು, ಸುಜಾತ ಕುರ್ಪಾಡ್, ಟಿ.ಸಿ ಸರಳಕುಮಾರಿ ಮುಂತಾದವರು. ಹಾಗೆಯೇ ‘ತಂಗುಬೀಡು’ (ಕಾಡೇಶ ವಿ.ಬಿ, ಗೋಪಾಲ ಜೋಶಿ, ನಿತ್ಯಾನಂದ ಬ್ರಹ್ಮಾವರ) ಮತ್ತು ತಂಗುಬಿಡಾರ (ವಿಶ್ವಜ್ಯೋತಿ ಶಿವಮೊಗ್ಗ, ಗಂಗಾ ಹೆಗಡೆ, ಜಿ.ನಾರಾಯಣ ರಾವ್) ಸಹ ಸೂಕ್ತವೆನಿಸಬಲ್ಲವು.
‘ಎಲ್ಲಿ ತಂಗುವಿರಿ?’ ಎಂದು ಕೇಳುವಂತೆಯೇ ‘ಎಲ್ಲಿ ಉಳಿದುಕೊಳ್ಳುತ್ತೀರಿ?’ ಎಂದು ಕೇಳುವ ಕ್ರಮವಿರುವುದರಿಂದ ‘ಉಳಿಮನೆ’ (ಡಾ.ದಯಾನಂದ ಭಟ್ಟ, ಶಿವಶಂಕರ ಪ್ರಭು) ಸಹ ಅರ್ಥಪೂರ್ಣವೇ. ಆದರೂ ‘ತಂಗು ಮನೆ’ಯೇ ಹೆಚ್ಚು ಆಪ್ಯಾಯವೆನಿಸುತ್ತದೆ, ಕೇಳುವಾಗಲೇ ಮನಸ್ಸಿಗೆ ಒಂದು ರೀತಿಯ ತಂಪಿನ ಅನುಭವವಾಗುತ್ತದೆ. ಹರಿಹರಪುರ ಮಠದವರು ದಶಕಗಳ ಹಿಂದೆಯೇ ಇಂಥದ್ದೊಂದು ಚಂದದ ಪದ ಕಟ್ಟಿದ್ದಾರೆನ್ನುವುದು ಹೆಮ್ಮೆಯ ಸಂಗತಿ. ಕಳೆದ ಸಲ ಕೇಳಿದ್ದ Benchmark ಪದ ಇಂಗ್ಲಿಷ್ ಭಾಷೆಯಲ್ಲೂ ತೀರ ಹಳೆಯದೇನಲ್ಲ. ಸುಮಾರು 1840ರಿಂದ ಈಚೆಗಷ್ಟೇ ಬಳಕೆಯಲ್ಲಿರುವುದಂತೆ. Surveyor's point of reference ಎಂದು ಆರಂಭದಲ್ಲಿ ಅದಕ್ಕಿದ್ದ ಅರ್ಥ ಈಗ ವಿಸ್ತಾರಗೊಂಡಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿವಿಧ ತಂತ್ರಾಂಶಗಳ, ಅಥವಾ ಅವುಗಳನ್ನು ಒದಗಿಸುವ ಉದ್ಯಮಗಳ ದಕ್ಷತೆ ಕಾರ್ಯಕ್ಷಮತೆಗಳ ಆದರ್ಶ/ಅಪೇಕ್ಷಿತ ಮಟ್ಟವನ್ನು ತಿಳಿಸುವ ಸಂದರ್ಭದಲ್ಲೂ ಬೆಂಚ್ವಾರ್ಕ್ ಬಳಕೆಯಾಗುತ್ತದೆ. ಭೂಮಟ್ಟ ಮೊದಲಾದುವನ್ನು ಅಳತೆ ಮಾಡುವಲ್ಲಿ ಮೋಜಣಿದಾರರು ಬಂಡೆ ಇತ್ಯಾದಿಗಳ ಮೇಲೆ ಮಾಡುವ ಮಟ್ಟದ ಗುರುತು ಎಂಬ ಅರ್ಥ ಕೊಟ್ಟಿದ್ದಾರೆ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ. ಸಾಮಾನ್ಯವಾಗಿ ಅಂತಹ ಗುರುತು ಸೂಚಿಸುವ ಮಟ್ಟವನ್ನು ಅಪೇಕ್ಷಿತ ಅಥವಾ ಮಾದರಿ ಎಂದು ಪರಿಗಣಿಸುವುದರಿಂದ ಕನ್ನಡದಲ್ಲಿ ಮಾದರಿಮಟ್ಟ ಹೆಚ್ಚು ಸೂಕ್ತವೆನಿಸುತ್ತದೆ. ಸೂಚಿಸಿರುವವರು: ಅಚಲಾ ಬಾಪಟ್, ನಳಿನಿ ಜಿ.ಭಟ್, ಆನಂದರಾಮ ಮಡಿ, ಸತೀಶ ಭಟ್ ಬೆಂಗಳೂರು ಮತ್ತು ವಿದ್ಯಾಶಂಕರ ಶರ್ಮ. ‘ಮಾನದಂಡ’ (50ಕ್ಕೂ ಹೆಚ್ಚು ಪ್ರವೇಶಿಕೆಗಳಲ್ಲಿ) ಮತ್ತು ‘ಅಳತೆಗೋಲು’ (20ಕ್ಕೂ ಹೆಚ್ಚು ಪ್ರವೇಶಿಕೆಗಳಲ್ಲಿ) ಪದಗಳು ಬಂದಿವೆಯಾದರೂ ಅವು ಇಂಗ್ಲಿಷ್ನ Yardstick ಪದಕ್ಕೆ ಸಂವಾದಿಯಾಗುವಂಥವು. ಬರೀ ‘ಮಾದರಿ’ ಎಂದು ಕೆಲವರು ಸೂಚಿಸಿದ್ದಾರೆ. ಅದು ಇಂಗ್ಲಿಷ್ನ Model ಎಂಬರ್ಥದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ.
ಅಂತೆಯೇ ‘ಮೈಲಿಗಲ್ಲು’ ಸಹ ಹತ್ತಿಪ್ಪತ್ತು ಪ್ರವೇಶಿಕೆಗಳಲ್ಲಿ ಬಂದಿದೆ. ಅದು ಇಂಗ್ಲಿಷ್ನ Milestone ಪದದ ಅನುವಾದ. ಬೆಂಚ್ವಾರ್ಕ್ಗಿರುವ ಅರ್ಥವನ್ನು ಇವೆಲ್ಲ ಪೂರ್ಣವಾಗಿ ಪ್ರತಿಬಿಂಬಿಸಲಾರವು. ಕೊನೆಯದಾಗಿ Tamper.. ಇಂಗ್ಲಿಷ್ನಲ್ಲಿ meddle unwisely, interfere rashly ಎಂಬರ್ಥದಲ್ಲಿ ಸುಮಾರು 16ನೆಯ ಶತಮಾನದಿಂದಲೂ ಬಳಕೆಯಲ್ಲಿದೆ. ಅಂತಿಮ ಇಷ್ಟಪತ್ರ, ಹಸ್ತಪ್ರತಿ ಮೊದಲಾದುವುಗಳನ್ನು ಅಕ್ರಮವಾಗಿ, ಅಧಿಕಾರವಿಲ್ಲದೆ ತಿದ್ದುವ ಪ್ರಕ್ರಿಯೆ. ಇನ್ನೊಬ್ಬರ ಕೆಡುಕನ್ನು ಬಯಸಲಿಕ್ಕೆ, ತನ್ನದೇ ಸ್ವಾರ್ಥದ ಉದ್ದೇಶದಿಂದ, ಅಥವಾ ಕೆಲವೊಮ್ಮೆ ಅಮಾಯಕತ್ವದಿಂದಲೇ ತಿದ್ದುವಿಕೆ ನಡೆದಿರುತ್ತದೆ. ಚಂದ್ರಹಾಸನ ಕಥೆಯಲ್ಲಿ ದುಷ್ಟಬುದ್ಧಿಯು ತನ್ನ ಮಗ ಮದನಕುಮಾರನಿಗೆ ಚಂದ್ರಹಾಸನ ಮೂಲಕ ಒಂದು ಪತ್ರವನ್ನು ಕಳುಹಿಸಿದ್ದು, ಅದರಲ್ಲಿ ‘ಈ ಕಾಗದವನ್ನು ತಂದಿರುವವನು ಮುಂದೆ ರಾಜನಾಗುವ ಸಾಧ್ಯತೆಗಳಿವೆ, ಇವನಿಗೆ ಕೂಡಲೇ ವಿಷವನ್ನು ಕೊಡು’ ಎಂದು ಬರೆದಿದ್ದು, ಪತ್ರವನ್ನೊಯ್ಯುತ್ತಿದ್ದ ಚಂದ್ರಹಾಸ ದಣಿವಾರಿಸಲೆಂದು ಒಂದು ಮರದಡಿ ಕುಳಿತು ವಿಶ್ರಮಿಸಿದ್ದು, ಅಲ್ಲಿಗೆ ಬಂದ ವಿಷಯೆಯು ಆ ಪತ್ರದಲ್ಲಿ ತಂದೆಯ ಹಸ್ತಾಕ್ಷರ ಗಮನಿಸಿದ್ದು, ಪತ್ರವನ್ನು ಪೂರ್ಣವಾಗಿ ಓದಿ ದಿಗಿಲುಗೊಂಡಿದ್ದು, ವಿಷವನ್ನು ಅಂತಿದ್ದದ್ದನ್ನು ತನ್ನ ಕಣ್ಣಿನ ಕಾಡಿಗೆಯನ್ನೇ ಉಗುರಿಗೆ ಹಚ್ಚಿಕೊಂಡು ವಿಷಯೆಯನ್ನು ಎಂದು ತಿದ್ದಿದ್ದು... ಬಹುಶಃ ಟ್ಯಾಂಪರಿಂಗ್ನ ಅತಿಪ್ರಾಚೀನ ಮತ್ತು ಅತಿರೋಮಾಂಚಕಾರಿ ನಿದರ್ಶನ. ಇದಕ್ಕೆ ಹೊಂದುವಂತೆ ‘ಕದ್ದುತಿದ್ದು’ ಎಂಬ ಚಂದದ್ದೊಂದು ಪದ ಸೂಚಿಸಿದ್ದಾರೆ: ಶಂಭು ಇರಾಣಿ, ಶಾಮಸುಂದರ ಅತ್ರಿನಂದನ, ಮತ್ತು ಎಚ್.ಎಸ್ ಮಂಜುನಾಥ.
ಆದರೆ ಟ್ಯಾಂಪರ್ ಅಥವಾ ಟ್ಯಾಂಪರಿಂಗ್ಅನ್ನು ಗುಪ್ತ ಪ್ರಭಾವ ಬೀರು, ರಹಸ್ಯವಾಗಿ ಒಳಹಾಕಿಕೋ ಮುಂತಾದ ಸಂದರ್ಭಗಳಿಗೂ ಬಳಸುತ್ತೇವಾದ್ದರಿಂದ ಬಹಳಷ್ಟು ಪ್ರವೇಶಿಕೆಗಳಲ್ಲಿ ಬಂದಿರುವ, ಈಗಾಗಲೇ ಬಳಕೆಯಲ್ಲಿರುವ ‘ಹಸ್ತಕ್ಷೇಪ’ ಸಹ ಸ್ವೀಕಾರಾರ್ಹವೇ. ಸೂಚಿಸಿರುವವರು: ಎನ್.ದತ್ತಾತ್ರೇಯ, ನಂದಾ ಕುಲಕರ್ಣಿ, ನಂದಿನಿ ಹಾಸನ, ಗಿರೀಶ ಫಡ್ಕೆ, ರಜನೀಕಾಂತ ಕುಡ್ಪಿ, ಮಂಜುಳಾ ಆರ್.ಸಳುಖೆ, ಪ್ರಭಾಕರ ರಾವ್, ಶ್ರೀನಾಥ್ ಕೆ.ಟಿ, ಯಶೋದಾ ಎಂ.ಗೋಪಿ, ಪದ್ಮಮಾಲಿನಿ ಬೆಂಗಳೂರು, ಯು.ಎನ್ ಸಂಗನಾಳಮಠ, ಸಂಜೀವ ಜೋಶಿ, ಗೋಪಾಲಕೃಷ್ಣ ಹೆಮ್ಮಿಗೆ ಮುಂತಾದವರು. ‘ಹಸ್ತವ್ಯಸ್ತ’ ಎಂಬೊಂದು ಹೊಸ ಪದ ಹೆಣೆದಿದ್ದಾರೆ ವಸಂತಕುಮಾರ್ ಕಲ್ಯಾಣಿ. ವ್ಯಸ್ತ ಎಂದರೆ ವ್ಯತ್ಯಾಸ ಹೊಂದಿದ ಎಂಬರ್ಥವೂ ಇರುವುದರಿಂದ, ಕೈಯಾಡಿಸಿದ್ದರಿಂದಲೇ ಅಂತಹ ವ್ಯತ್ಯಾಸ ಆಗಿರುವುದರಿಂದ ಈ ಪದ ಅರ್ಥಬದ್ಧವೇ. ಅದೇ ಕಾರಣದಿಂದ ‘ಕೈಯಾಡಿಸು’ (ನಾಗಮಣಿ ಎನ್.ಶಾಂಪುರ್, ಸುರೇಶ ನಾಯಕ್) ಅಥವಾ ಅದರದೇ ಇನ್ನೊಂದು ರೂಪ ‘ಕಡ್ಡಿಯಾಡಿಸು’ (ಜ್ಯೋತಿ ಮಹಾದೇವ್) ಕೂಡ ಮಾನ್ಯವೇ.
ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವ, ಕುವೆಂಪು ವಿರಚಿತ ನಾಡಗೀತೆಗೆ ಯಾವ್ಯಾವುದೋ ಪದಗಳನ್ನು ಮನಬಂದಂತೆ ಸೇರಿಸಿ ತಿರುಚುವ ಕೆಲಸ ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲೇ ನಡೆಯುತ್ತಿರುವ ವಿದ್ಯಮಾನವನ್ನೂ ಇಲ್ಲಿ ಪ್ರಸ್ತಾವಿಸಬೇಕಿದೆ. ಏಕೆಂದರೆ ಇದು ಕೂಡ ಟ್ಯಾಂಪರಿಂಗೇ. ಮತ್ತು ಇದಕ್ಕೆ ಪರ್ಯಾಯವಾಗಿ ‘ತಿರುಚು’ ಪದ ಖಂಡಿತವಾಗಿಯೂ ಸೂಕ್ತವೇ. ಸೂಚಿಸಿದವರು: ವಿಜಯಲಕ್ಷ್ಮಿ ಮೈಸೂರು, ಶೋಭಾ ಪಿ.ಭಟ್ಟ, ಎನ್.ವಿ ಶಂಕರ್, ಉಷಾಕಿರಣ್ ಅತ್ತಾವರ, ಪ್ರಭುಪ್ರಸಾದ್ ನಡುತೋಟ, ದರ್ಬೆ ವಿಶ್ವೇಶ್ವರ ಭಟ್ಟ, ಡಾ.ಎಸ್.ಎಸ್ ಚೋರಗಿ, ಕಡ್ಡಿ ಕೊಟ್ರೇಶ, ಎನ್.ಆರ್ ರಮೇಶ್, ಯು.ಪರಮೇಶ್ವರ ಭಟ್, ಸಂತೋಷರಾವ್ ಕಡಬ, ಜಯಲಕ್ಷ್ಮೀ ಕೋಡಿಪಾಳ್ಯ, ಶಾಂತಲಾ ರಾಜಗೋಪಾಲ್, ಎನ್.ಸುಬ್ರಾಯ ಭಟ್, ನಾಗೇಶ್ ಫಾಟಕ್, ಡಾ.ಎನ್.ಎಮ್ ತುಳಪುಳೆ, ಮಮತಾ ಕುಂದಾಪುರ, ಮುನೀಶ್ವರ ಜಿ.ನಾಯಕ್ ಮುಂತಾದವರು. ಅಂದಹಾಗೆ ಲಿಖಿತ ದಾಖಲೆಗಳನ್ನಷ್ಟೇ ಅಲ್ಲ, ಯಂತ್ರೋಪಕರಣಗಳನ್ನು ನಮಗೆ ಬೇಕಾದಂತೆ ತಿರುಚುವುದನ್ನೂ ಟ್ಯಾಂಪರಿಂಗ್ ಎನ್ನುತ್ತೇವೆ. ಆದ್ದರಿಂದ ‘ತಿರುಚು’ ಸೂಕ್ತವಷ್ಟೇ ಅಲ್ಲ, ಬಳಕೆಯ ವಿಶಾಲ ವ್ಯಾಪ್ತಿಯುಳ್ಳದ್ದು ಕೂಡ. ಹೀಗೆ ಪದ ಕಟ್ಟುವ/ಹುಡುಕುವ ಚಟುವಟಿಕೆಯನ್ನು ಸಮರ್ಥವಾಗಿ, ಸರ್ತಾಕವಾಗಿ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆ ಮತ್ತು ಧನ್ಯವಾದಗಳು.
1. Appetizer: ಔತಣದ್ದೇ ಭಾಗ, ಲಾಲಾರಸ ಗ್ರಂಥಿಗಳನ್ನು ಉದ್ದೀಪಿಸಲಿಕ್ಕೆಂದು ಮತ್ತು ಹಸಿವು ಹೆಚ್ಚಿಸಲಿಕ್ಕೆಂದು ಆರಂಭದಲ್ಲಿ ಉಣಬಡಿಸುವ ತಿನಿಸು/ಪೇಯ.
2. Incognito: ವೇಷ/ಗುರುತು ಮರೆಸಿಕೊಂಡು ಅಜ್ಞಾತವಾಗಿ, ಸುರಕ್ಷತೆಗೆಂದೋ ತಪಾಸಣೆಗೆಂದೋ ಅಂತೂ ಒಳ್ಳೆಯ ಉದ್ದೇಶದಿಂದಲೇ ಪ್ರಕಟವಾಗುವುದು.
3. Location: ‘ಲೊಕೇಶನ್ ಕಳ್ಸಿ’ ಎಂದು ಈಗಿನ ವಿದ್ಯುನ್ಮಾನ ಸಂವಹನದಲ್ಲಿ ಸಾಮಾನ್ಯ ಬಳಕೆ. ‘ಲೋಕೇಶನನ್ನು ಕಳ್ಸಿ’ ಎಂದು ಹಾಸ್ಯ ಮಾಡುವುದೂ ಇದೆ!
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ ಆಪ್ ಸಂಖ್ಯೆ: +12404010945