ತುಟಿರಂಗು ಬಳಿದ ತುಟಿ ಹವಳದ ಕುಡಿಹಂಗ...

ಲಿಪ್​​ಸ್ಟಿಕ್​
ಲಿಪ್​​ಸ್ಟಿಕ್​
Published on

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)

ಆಕೆಯ ಹಲ್ಲುಗಳ ಬಿಳಿ ಬಣ್ಣದಿಂದ ಆಕೆ ಧರಿಸಿದ್ದ ಮುತ್ತುಗಳು ಹೊಳೆದವಂತೆ. ಆಕೆಯ ದೇಹದ ಕಾಂತಿಯಿಂದ ಅವಳು ಧರಿಸಿದ್ದ ಆಭರಣಗಳ ಬಂಗಾರವು ಎದ್ದು ಕಾಣುತ್ತಿತ್ತಂತೆ. ದ್ರೌಪದಿಯ ಅಂದವನ್ನು ಸರಿಯಾಗಿ ಬಣ್ಣಿಸಬಲ್ಲ ಕವಿಯಿಲ್ಲ ಎಂದು ಕುಮಾರವ್ಯಾಸನ ಅಭಿಪ್ರಾಯ. ‘ತಂಬುಲದ ತುಟಿಯ ತೋರಿ ಮಲ್ಲಿಗೆಯ ಮುಡಿದುಕೊಂಡು ಮೆಲ್ಲಗಾಗಿ ಬರುವವಳ್ಯಾರ ಸಂಜಿ ಏನ?’ ಎಂದಿದ್ದಾರೆ ವರಕವಿ ದ.ರಾ.ಬೇಂದ್ರೆ. ತಾಂಬೂಲ ಮೆಲ್ಲುವುದರಿಂದ ನಾಲಗೆ ಮತ್ತು ತುಟಿಗಳು ಕೆಂಪಾಗುವುದು ಪ್ರೀತಿ ಉಕ್ಕೇರುವ ಸಂಕೇತ ಎಂಬ ನಂಬಿಕೆಯೂ ಇದೆ.

‘ನಿಜವ ನುಡಿಯಲೇ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ, ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ...’ ಎಂದಿದ್ದಾರೆ ಚಿ. ಉದಯಶಂಕರ್ ‘ನಂಜುಂಡಿ ಕಲ್ಯಾಣ’ ಚಿತ್ರಗೀತೆಯಲ್ಲಿ. ಕನಕದಾಸರಂತೂ ಬರೀ ಹುಲುಮಾನವರದಲ್ಲ ವಾಗ್ದೇವಿ ಶಾರದೆಯ ತುಟಿಗಳನ್ನೇ ವರ್ಣಿಸಿದ್ದಾರೆ: ‘ಇಂಪು ಸೊಂಪಿನ ಚಂದ್ರ ಬಿಂಬೆ| ಕೆಂಪು ತುಟಿ ನಾಸಿಕದ ರಂಭೆ| ಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ| ಸಂಪಿಗೆಯ ಮುಡಿಗಿಟ್ಟ ಶಾರದಾಂಬೆ.’

ತುಟಿಗಳ ಬಣ್ಣನೆ ಕವಿವರೇಣ್ಯರಿಂದಷ್ಟೇ ಅಲ್ಲ, ಜನಪದದಿಂದಲೇ ಬಂದಿದೆ. ಅದೂ ಹರೆಯದ ಹೆಣ್ಣಿನ ತುಟಿಗಳಿಗಷ್ಟೇ ಸೀಮಿತವಲ್ಲ, ಪುಟ್ಟ ಮಗುವಿನ ಕೋಮಲ ತುಟಿಗಳಿಗೂ ಹಬ್ಬಿದೆ. ಆದ್ದರಿಂದಲೇ ‘ಅಳುವ ಕಂದನ ತುಟಿಯು ಹವಳದ ಕುಡಿ ಹಂಗ’ ಎಂದು ಬಣ್ಣನೆ. ಕೆಲವರಿಗೆ ತುಟಿ ಬಣ್ಣ ಕೆಂಪು ಸಹಜವಾಗಿಯೇ ಬಂದಿರುತ್ತದೆ. ಅದನ್ನು ಹವಳಕ್ಕೆ, ದಾಳಿಂಬೆ ಬೀಜಗಳ ಬಣ್ಣಕ್ಕೆ ಹೋಲಿಸುವುದೂ ಇದೆ. ಆದರೆ ಹಲವರಿಗೆ ಆ ಭಾಗ್ಯ ಇರುವುದಿಲ್ಲ, ಅಂಥವರು ಚೆನ್ನಾಗಿ ಕಾಣಿಸಲು ತುಟಿಗಳಿಗೆ ಬಣ್ಣ ಮೆತ್ತಿಕೊಳ್ಳುತ್ತಾರೆ. ಅದೇ Lipstick.

ಕನ್ನಡದಲ್ಲಿ ಇದಕ್ಕೆ ತುಟಿರಂಗು ಎನ್ನಬಹುದು. ಈ ಪದ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲೂ ಇದೆ, ‘ಅಲಂಕಾರಕ್ಕಾಗಿ ತುಟಿಗೆ ಬಳಿದುಕೊಳ್ಳುವ ಬಣ್ಣ’ ಎಂಬ ಅರ್ಥವಿವರಣೆಯೊಂದಿಗೆ. ರಂಗು ಅಂದರೆ ಬಣ್ಣ, ಅದರಲ್ಲೂ ಕೆಂಪು ಬಣ್ಣ ಎಂದೇ ಅರ್ಥ. ರಂಗುದುಟಿ ಅಂದರೆ ಕೆಂಪುಬಣ್ಣದ ತುಟಿ, ಕೆಂದುಟಿ ಅಥವಾ ಚೆಂದುಟಿ (ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ...) ಕೆನ್ನೆ ರಂಗೇರುವುದು ಎಂದರೆ ಕೆನ್ನೆ ಕೆಂಪಗಾಗುವುದು ಎಂದೇ ತಾನೆ? ಲಿಪ್​ಸ್ಟಿಕ್ ಕೆಂಪಲ್ಲದ ಬಣ್ಣಗಳದೂ ಇರಬಹುದಾದರೂ ಬಹುಮಟ್ಟಿಗೆ ಕೆಂಪು ಛಾಯೆಯೇ. ಲಿಪ್​ಸ್ಟಿಕ್​ಗೆ ‘ತುಟಿರಂಗು’ ಪದ ಸೂಚಿಸಿದವರು: ಭಾಗ್ಯಶ್ರೀ ಕುಲಕರ್ಣಿ, ಬಿ.ಎಸ್. ನಟರಾಜು, ಪ್ರಭುಪ್ರಸಾದ್ ನಡುತೋಟ, ಅನಂತಕೃಷ್ಣ ಶಿವಮೊಗ್ಗ, ಕೆ.ರಾಮಚಂದ್ರ ಜೋಯಿಸ, ಶ್ರೀಮತಿ ಅಭ್ಯಂಕರ್, ಡಾ.ದಯಾನಂದ ಭಟ್ಟ, ಭಾಗ್ಯಶ್ರೀ ಕೆಕ್ಕಾರ, ವಿದ್ಯಾಶಂಕರ ಶರ್ಮ, ಶ್ರೀನಾಥ್ ಕೆ.ಟಿ., ಸುಜನಾ ನಿಟ್ಟೂರು, ಕಡೂರು ದೇವೇಂದ್ರ, ಕೆ.ಎ. ಭಟ್, ವಿಜಯಲಕ್ಷ್ಮಿ ಎಸ್., ಗಿರೀಶ ಕೆ.ಎಸ್., ನರೇಂದ್ರನಾಥ ಎಚ್.ಎಂ., ಬೊ.ನಾ. ಕೃಷ್ಣಮೂರ್ತಿ, ನಾಗಮಣಿ ಎನ್. ಶಾಂಪುರ್, ಜನಾರ್ದನ ಸಾಲಿಯಾನ್, ನಾಗೇಶ ಫಾಟಕ್, ವಿಜಯಕಲ ಬೆಂಗಳೂರು, ಅನಂತ ಆಚಾರ್ ಮುಂತಾದವರು.

ಪಾಶ್ಚಾತ್ಯರು ಹಳೆಯ ಕಾಲದಿಂದಲೂ ತುಟಿಗಳಿಗೆ ಬಣ್ಣ ಹಚ್ಚಿಕೊಳ್ಳುತ್ತಿದ್ದರಾದರೂ Lipstick ಎನ್ನುವ ಪದ lip rouge molded into stick form ಎಂಬರ್ಥದೊಂದಿಗೆ ಇಂಗ್ಲಿಷ್​ನಲ್ಲಿ ಇತ್ತೀಚಿನ ನೂರಿನ್ನೂರು ವರ್ಷಗಳಿಂದೀಚೆಗಷ್ಟೇ ಬಳಕೆಯಲ್ಲಿರುವುದಂತೆ. ಹಚ್ಚಿಕೊಳ್ಳುವ ಅನುಕೂಲಕ್ಕಾಗಿ ಕಡ್ಡಿಯಂತಹ ರಚನೆಯಲ್ಲಿ ಬಣ್ಣ ತುಂಬಿದ್ದಿರುವುದರಿಂದ ಈ ಪದ ಬಳಕೆಗೆ ಬಂದಿರಬಹುದು. ಇದನ್ನೇ ಪದಶಃ ತರ್ಜುಮೆ ಮಾಡಿ ಕನ್ನಡದಲ್ಲಿ ‘ತುಟಿಕಡ್ಡಿ’ ಎನ್ನಬಹುದಲ್ಲವೇ ಎಂದು ಕೆಲವರ ಅನಿಸಿಕೆ. ಅಥವಾ ಇಂಗ್ಲಿಷ್​ನಲ್ಲಿ stick ಕ್ರಿಯಾಪದವಾಗಿ ಅಂಟು/ಅಂಟಿಕೊಳ್ಳು ಆಗುವುದರಿಂದ ಕನ್ನಡದಲ್ಲಿ ‘ತುಟಿಯಂಟು’ ಆಗದೇ ಎಂದು ಮತ್ತೆ ಕೆಲವರ ಪ್ರಶ್ನೆ. ಇಲ್ಲಿ ತೊಂದರೆಯೇನೆಂದರೆ ಇವು ಬಣ್ಣವನ್ನು ಬಿಂಬಿಸುವುದಿಲ್ಲ. 

ಅದಕ್ಕಿಂತ ‘ತುಟಿಬಣ್ಣ’ (ಸೀತಾ ವ್ಯಾಸಮುದ್ರಿ, ನಳಿನಿ ಜಿ.ಭಟ್, ಡಾ. ಎಚ್. ರಾಜೇಶ್ವರಿ ಶ್ರೀನಿವಾಸ, ರಾಜೇಶ್ವರಿ ಶಿವಮೊಗ್ಗ, ಆರ್.ವಿ. ಮೂರ್ತಿ, ಭಾರತಿ ಯ. ಕೊಟ್ನಿಕಲ್, ಚಂಪಾವತಿ ಜೋಶಿ, ಭಾರತಿ ಆರ್. ಭಟ್) ಹೆಚ್ಚು ಸಮಂಜಸವೆನಿಸುತ್ತದೆ. ‘ತುಟಿಲೇಪ’ ಎಂದು ಕೂಡ ಕೆಲವರು ಸೂಚಿಸಿದ್ದಾರೆ. ಆದರೆ ‘ತುಟಿ-ಲೇಪ’ ರೀತಿಯಲ್ಲಿ ಕನ್ನಡ-ಸಂಸ್ಕೃತ ಪದಗಳ ಕಸಿ ಕಟ್ಟಿ ಹೊಸ ಪದದ ರಚನೆ ಭಾಷಾತಜ್ಞರ ಸಮ್ಮತಿ ಪಡೆಯುವುದು ಕಷ್ಟ. ಒಂದೋ ಕನ್ನಡದ್ದೇ ಇರಬೇಕು, ಅಥವಾ ಪೂರ್ಣವಾಗಿ ಸಂಸ್ಕೃತದ್ದೇ ಇದ್ದರೆ ಒಳ್ಳೆಯದು.

ಸಂಸ್ಕೃತದ್ದೆನ್ನುವಾಗ ಈ ಸಂದರ್ಭದ ಮಟ್ಟಿಗೆ ಇನ್ನೊಂದು ಸೂಕ್ಷ್ಮವನ್ನೂ ಗಮನಿಸಬೇಕಾಗುತ್ತದೆ. ಸಂಸ್ಕೃತದಲ್ಲಿ, ಕಾವ್ಯಾತ್ಮಕ ವರ್ಣನೆಯ ಸಾಹಿತ್ಯದಲ್ಲೂ, ವ್ಯಾಪಕವಾಗಿ ಬಳಕೆಯಾಗುವ ‘ಅಧರ’ ಪದಕ್ಕೆ ‘ಕೆಳತುಟಿ’ ಎಂದಷ್ಟೇ ಅರ್ಥ. ಮೇಲ್ದುಟಿಯನ್ನು ಅಧರ ಎನ್ನಲಾಗದು. ಲಿಪ್​ಸ್ಟಿಕ್​ಅನ್ನು ಸಾಮಾನ್ಯವಾಗಿ ಎರಡೂ ತುಟಿಗಳಿಗೆ ಹಚ್ಚುವುದಾದ್ದರಿಂದ ‘ಅಧರಲೇಪ’ (ಅಥವಾ ಅಧರಲೇಪಕ, ಅಧರಲೇಪನ ಇತ್ಯಾದಿ) ಲಿಪ್​ಸ್ಟಿಕ್​ಗೆ ತರ್ಕಬದ್ಧ ಪರ್ಯಾಯವೆನಿಸದು. ಅದಕ್ಕಿಂತ, ಎರಡೂ ತುಟಿಗಳಿಗೆ ಅನ್ವಯವಾಗುವ ಸಂಸ್ಕೃತದ ‘ಓಷ್ಠ’ ಪದವನ್ನು ಬಳಸಿದರೆ ‘ಓಷ್ಠರಾಗ’ (ಎನ್.ಆರ್. ರಮೇಶ್), ‘ಓಷ್ಠಲೇಪಕ’ (ಅಂಜನಾ ಗುರುರಾಜ್), ‘ಓಷ್ಠವರ್ಣಕ’ (ಉಮೇಶ ಪ್ರಭು) ಅಥವಾ ಬರೀ ‘ಓಷ್ಠಕ’ (ಶಿವಶಂಕರ ಪ್ರಭು) ಎಲ್ಲವೂ ಒಪ್ಪುತ್ತವೆ.

ಹಾಗಂತ ಕೆಲವೊಮ್ಮೆ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು ಅರ್ಥವೈಶಾಲ್ಯ ಗಳಿಸುವುದಿದೆ. ಆದ್ದರಿಂದ ಅಧರವನ್ನೂ ಸಾರಾಸಗಟಾಗಿ ಅಲ್ಲಗಳೆಯುವಂತಿಲ್ಲ. ‘ಕೈಗಳಿಗೆ ಮದರಂಗಿಯಾದರೆ ತುಟಿಗಳಿಗೆ ‘ಅಧರಂಗಿ’ ಒಟ್ಟಿನಲ್ಲಿ ರಂಗುರಂಗಿನಾಟ’ ಎನ್ನುವ ಡಾ. ಎಸ್. ವೇಣುಗೋಪಾಲ್ ಅವರ ತಮಾಷೆ ತರ್ಕವನ್ನಂತೂ ಮೆಚ್ಚಲೇಬೇಕಾಗುತ್ತದೆ. ‘ಅಧರಂಗಿ’ ಪದವನ್ನೇ ವಸಂತಕುಮಾರ್ ಕಲ್ಯಾಣಿ ಸಹ ಸೂಚಿಸಿದ್ದಾರೆ. ಕಳೆದ ಸಲ ಕೇಳಿದ್ದ Abbreviation ಪದಕ್ಕೂ ಬಹಳಷ್ಟು ಆಯ್ಕೆಗಳು ಬಂದಿವೆ. ಇಂಗ್ಲಿಷ್​ನಲ್ಲಿ ಸುಮಾರು 15ನೆಯ ಶತಮಾನದಿಂದಲೂ ಬಳಕೆಯಲ್ಲಿರುವ ಈ ಪದ ಫ್ರೆಂಚ್ ಮೂಲಕ ಲ್ಯಾಟಿನ್ ಭಾಷೆಯಿಂದ ಬಂದದ್ದೆನ್ನಲಾಗಿದೆ.

shortness; act of shortening; a shortened thing ಎಂದು ಇದರ ಅರ್ಥ. ಸಾಮಾನ್ಯವಾಗಿ ಪದಗಳನ್ನು ಹ್ರಸ್ವಗೊಳಿಸುವ ಪ್ರಕ್ರಿಯೆ. ಇಂಗ್ಲಿಷ್​ನದೇ ಉದಾಹರಣೆಗಳನ್ನು ಕೊಡುವುದಾದರೆ-Dr (Doctor), Dept (Department), Wi-fi (Wireless Fidelity) ಇತ್ಯಾದಿ. ಒಂದಕ್ಕಿಂತ ಹೆಚ್ಚು ಪದಗಳಿದ್ದಾಗ ಪ್ರತಿಯೊಂದರ ಆರಂಭಿಕ ಅಕ್ಷರ ಆಯ್ದುಕೊಂಡು ಜೋಡಿಸಿದರೆ ಅದು ಕೂಡ ಒಂದು ರೀತಿಯ abbreviation ಆಗುತ್ತದೆ. ಕನ್ನಡದಲ್ಲಾದರೆ ‘ಕುವೆಂಪು’ (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ), ‘ವಿ.ಸೂ.’ (ವಿಶೇಷ ಸೂಚನೆ), ‘ಉದಾ.’ (ಉದಾಹರಣೆ), ‘ಚಿ.ಸೌ.’ (ಚಿರಂಜೀವಿ ಸೌಭಾಗ್ಯವತಿ) ಮುಂತಾದುವು ಒಳ್ಳೆಯ ಉದಾಹರಣೆಗಳು. abbreviation ಎಂದರೆ ಕುಗ್ಗಿಸುವುದು, ಸಂಕ್ಷೇಪಿಸುವುದು, ಕಡಿಮೆಗೊಳಿಸುವುದು. ಕನ್ನಡದಲ್ಲಿ ಇದಕ್ಕೆ ಸೂಕ್ತವಾಗಿ ‘ಅಡಕಮಾಡು’ ಎಂಬೊಂದು ಕ್ರಿಯಾಪದವಿದೆ. ‘ಅಡಕ’ ಅಂದರೆ ಹಿಡಿತಕ್ಕೆ ತಕ್ಕಷ್ಟು ಇರುವುದು. ಈ ದೃಷ್ಟಿಯಿಂದ ‘ಅಡಕಮೆ’ ಎಂಬ ಪದವನ್ನು abbreviation ಪರ್ಯಾಯವಾಗಿ ಬಳಸಬಹುದು. 

ಪುತಿನ, ತೀನಂಶ್ರೀ, ಪೂಚಂತೇ, ಅರಾಸೇ, ಕುರಸೀ - ಈ ಸಾಹಿತಿಗಳ ಹೆಸರಿನ ‘ಅಡಕಮೆ’ಗಳ ಬಿಡಿಸಿದ ರೂಪವನ್ನು ಬರೆಯಿರಿ ಎಂದು ಕನ್ನಡ ರಸಪ್ರಶ್ನೆ ರೀತಿಯಲ್ಲಿ ಕೇಳಬಹುದು. ‘ಅಡಕಮೆ’ ಪದ ಸೂಚಿಸಿದವರು ಮಿಥುನ್ ಗುಡ್ಡೇತೋಟ ಮತ್ತು ಎನ್.ಆರ್. ರಮೇಶ್. ಈಗಾಗಲೇ ಬಳಕೆಯಲ್ಲಿರುವ ‘ಸಂಕ್ಷೇಪ’ (ಡಾ.ರಂಗನಾಥ ಕಟ್ಟಿ, ಆಶಾಲತಾ ಜೈನ್, ಎಂ.ಡಿ. ಶ್ರೀನಿವಾಸಮೂರ್ತಿ, ಭಾರತಿ ಪ್ರಕಾಶ, ಕಡ್ಡಿ ಕೊಟ್ರೇಶ, ಶಾಂತಲಾ ರಾಜಗೋಪಾಲ್, ಗೋಪಿನಾಥ್ ಭರಮಸಾಗರ, ಜಿ.ಎಚ್. ಸಂಕಪ್ಪ, ಗಗನ ಶಿವಮೊಗ್ಗ, ವೀರೇಶ ವಾಲಿ ಮತ್ತಿತರರು) ಸಹ ಸೂಕ್ತವಾದುದೇ. ಹಾಗೆಯೇ ‘ಸಂಕ್ಷಿಪ್ತ’ (ಸಂಧ್ಯಾ ಅಡಿಗ, ರಂಗನಾಥ ಟಿ.ಕೆ., ಲಲಿತಾ ಬಾಳಿಹಳ್ಳಿಮಠ, ಮಂಜುಳಾ ಮರೋಳ, ಸಾವಿತ್ರಿ ಬೇಲೆಬೇಡಕಿಹಾಳ, ಆರ್.ಎಸ್. ಶೆಟ್ಟಿ, ವೀಣಾ ಕರುಣಾಕರ, ಶಂಭು ಐರಣಿ, ಎಂ.ಪಿ. ಶ್ರೀಧರ, ನಂದಿನಿ ಹಾಸನ, ಭವಾನಿ ಜೋಶಿ, ಪ್ರತಿಭಾ ಮಯ್ಯ, ಡಾ. ಸಂಗಮೇಶ ಸುರಭಿ, ಎಂ.ಕೆ. ರಮೇಶ್, ಆನಂದರಾಮ ಮಡಿ, ಶೋಭಾ ಎಚ್.ಜಿ., ಸತೀಶ ಕಬೇಕೋಡಿ ಮುಂತಾದವರು) ಕೂಡ. ತುಸು ವಿಭಿನ್ನವಾಗಿ ‘ಕಿಗ್ಗ’ ಎಂಬ ಇನ್ನೊಂದು ಪದ ಸೂಚಿಸಿದ್ದಾರೆ ಯಶೋದಾ ಎಂ. ಗೋಪಿ. ಕಿರಿದಾದ, ಚಿಕ್ಕದಾದ ಎಂಬ ಅರ್ಥ ಇದಕ್ಕಿರುವುದು ಹೌದು.

ಕೊನೆಯಲ್ಲಿ ಐಠಿಛ್ಟಿಚ್ಚಠಿಜಿಟ್ಞ. ಇದಕ್ಕೆ ಅತಿಸೂಕ್ತವೆನಿಸುವ ಪದವೆಂದರೆ ಭಾವ/ಅಭಿಪ್ರಾಯ/ವಿಷಯ ಮುಂತಾದುವನ್ನು ತಿಳಿಯಪಡಿಸುವುದು ಎಂಬರ್ಥದ ‘ಸಂವಹನ’. ಅದು ಮಾತಿನಿಂದಲೇ ಆಗಬೇಕೆಂದೇನಿಲ್ಲ. ಬರೆಹ ಅಥವಾ ಇತರ ಸಂಜ್ಞೆಗಳ ರೂಪದಲ್ಲೂ ಇರಬಹುದು. ಒಟ್ಟಾರೆಯಾಗಿ ಪರಸ್ಪರ ಅಭಿವ್ಯಕ್ತಪಡಿಸುವ ಪ್ರಕ್ರಿಯೆ. ‘ಸಂವಹನ’ ಪದ ಸೂಚಿಸಿದವರು: ಕಲಾ ಚಾರಿ, ಸೌಮ್ಯಾ ಜಿ. ಪ್ರಸಾದ್, ವಿ. ವಿಜಯೇಂದ್ರ ರಾವ್, ಸುರೇಂದ್ರ ಪೈ, ಗಂಗಾ ಹೆಗಡೆ, ಸಂಜೀವ ಜೋಶಿ, ಜಯಲಕ್ಷ್ಮಿ ಅಡಿಗ, ನಿತ್ಯಾನಂದ ಬ್ರಹ್ಮಾವರ, ನೇತ್ರಾ ವಿನೋದ್, ಪ್ರಭಾಕರ ಅಡಿಗ, ಅನಿಲ್​ಕುಮಾರ್ ಎಂ.ಕೆ., ಅಂಜಲಿ ಬರ್ವೆ, ಕುಶಲ್ ಭಾರದ್ವಾಜ್, ಸುಬ್ರಹ್ಮಣ್ಯ ಎಸ್., ಮೀನಾಕ್ಷಿ ಟಕ್ಕಳಕಿ, ಯು. ಪರಮೇಶ್ವರ ಭಟ್, ಯು.ಎನ್. ಸಂಗನಾಳಮಠ ಮುಂತಾದವರು.

ಅಚ್ಚಕನ್ನಡದ್ದೇ ಬೇಕಾದರೆ ‘ಮಾತಾಟ’ ಸಹ ಆದೀತು. ಏಕೆಂದರೆ ಮಾತಾಡು ಎಂಬ ಕ್ರಿಯಾಪದಕ್ಕೆ ಅಭಿವ್ಯಕ್ತಿಗೊಳಿಸು, ತಿಳಿಯಪಡಿಸು ಎಂಬ ಆಲಂಕಾರಿಕ ಅರ್ಥವೂ ಇದೆ. ಅದರ ಭಾವವಾಚಕ ನಾಮಪದ ಮಾತಾಟ. ಸೂಚಿಸಿದವರು: ಕಾಡೇಶ ವಿ.ಬಿ., ಶ್ರೀಕಾಂತ ಗೋಡಖಿಂಡಿ, ಶೋಭಾ ಪಿ. ಭಟ್ಟ, ಷಡಕ್ಷರಮುನಿ ಸ್ವಾಮೀಜಿ, ಜಿ. ನಾರಾಯಣರಾವ್, ಅಪ್ಪು ಮುತ್ಯ, ಕಂಪಲಾಪುರ ಶ್ರೀನಿವಾಸ್ ಮುಂತಾದವರು. ಹಳಗನ್ನಡದಲ್ಲೂ ಮಾತಾಟ ಬಳಕೆಯಲ್ಲಿತ್ತೆಂದು ಅವರ ‘ಮಾತಾಟವಂ ಕಿವಿಯಳತೆಯೊಳೆ ಕೇಳ್ವೆ...’, ‘ನೋಟದೆ ಬೇಟಮಂಕುರಿಸಿದಪ್ಪುದು ಮೇಳದೊಳಿಂಪುವೆತ್ತ ಮಾತಾಟದೆ ಮತ್ತೆ ಪಲ್ಲವಿಸಿದಪ್ಪುದು’ ಮುಂತಾದ ಉದಾಹರಣೆಗಳಿಂದ ಗೊತ್ತಾಗುತ್ತದೆ. ನಮ್ಮ ನೆಲದ ಇಂತಹ ಸರಳ-ಸುಂದರ ಪದಗಳನ್ನೆಲ್ಲ ಮರೆತು ನಾವೀಗ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿದ್ದೇವೆ ಎನ್ನುವುದು ವಿಷಾದನೀಯ. ಪರಿಸ್ಥಿತಿ ಇನ್ನೂ ಹದಗೆಡುವ ಮುನ್ನ ಹೆಚ್ಚುಹೆಚ್ಚು ಕನ್ನಡ ಪದಗಳನ್ನೇ ಬಳಸುವ ಸಂಕಲ್ಪ ಮಾಡೋಣ.

ಈ ವಾರದ ಮೂರು ಪದಗಳು:

1.  Decoction: ಕಾಫಿಯೆಂಬ ತ್ರಿವೇಣಿ ಸಂಗಮದಲ್ಲಿದು ಕಪ್ಪು ಬಣ್ಣದ ಯಮುನೆ ಎಂದಿದ್ದಾರೆ ಶತಾವಧಾನಿ ಡಾ. ರಾ. ಗಣೇಶ

2. Jogging: ವ್ಯಾಯಾಮಕ್ಕಾಗಿ ನಿಧಾನವಾಗಿ ಓಡುವ ಕ್ರಿಯೆಯನ್ನು ತಿಳಿಸುವುದಕ್ಕೊಂದು ಕನ್ನಡ ಪದ ಬೇಕಲ್ಲ!

3. Silhouette: ನೆರಳಿನ ಬೊಂಬೆಯಂತೆ ಬಿಡಿಸಿದ ಚಿತ್ರ ಅಥವಾ ಆಕಾರವನ್ನು ಕನ್ನಡದಲ್ಲಿ ಏನೆನ್ನಬಹುದು?

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net