ಕಳೆದ ಸಲ ಕೇಳಿದ್ದ ಎರಡನೆಯ ಪದ jogging. ಇಂಗ್ಲಿಷ್‌ನಲ್ಲಿ ಐದಾರು ಶತಮಾನಗಳಿಂದೀಚೆಗೆ ಬಳಕೆಯಲ್ಲಿರುವ ಪದ. ಆದರೂ ಶಾರೀರಿಕ ವ್ಯಾಯಾಮಕ್ಕೆಂದು ಓಡುವುದನ್ನು jogging ಎನ್ನತೊಡಗಿದ್ದು 1948ರಿಂದೀಚೆಗಷ್ಟೇ! ಅದಕ್ಕಿಂತ ಹಿಂದೆ ಕುಲುಕಾಟ, ಮೃದುವಾಗಿ ತಟ್ಟಿ ಅಥವಾ ದೂಡಿ ಚಲನೆ ನೀಡುವುದು, ಕುಲುಕುತ್ತ ನಡೆಸುವುದು ಅಥವಾ ಸವಾರಿ ಮಾಡುವುದು ಮುಂತಾದ ಅರ್ಥಗಳಲ್ಲಿ ಬಳಕೆಯಿದ್ದದ್ದು. ಮುಖ್ಯವಾಗಿ ಕುದುರೆಗಳ ಪಾಲನೆ-ಪೋಷಣೆ ಮತ್ತು ಕುದುರೆ ಸವಾರಿಗೆ ಸಂಬಂಧಿಸಿದಂತೆ ಮಾತ್ರ ಬಳಕೆಯಾಗುತ್ತಿತ್ತು. ತೂಕ ಇಳಿಸಿಕೊಳ್ಳಲು, ಹೃದಯ ಮತ್ತು ಮೂಳೆಗಳನ್ನು ಬಲಪಡಿಸಲು ಅತ್ಯಂತ ಪರಿಣಾಮಕಾರಿ ದೈಹಿಕ ವ್ಯಾಯಾಮ ಅಂತೆಲ್ಲ ಇತ್ತೀಚಿನ ಬೆಳವಣಿಗೆ. ಅದಕ್ಕೆ ವೈದ್ಯರಿಂದ, ಬೊಜ್ಜು ಕರಗಿಸುವ ತಜ್ಞರಿಂದ ಶಿಫಾರಸೂ ಸೇರುತ್ತದೆ. ಒಟ್ಟಿನಲ್ಲಿ ಈಗ ಜಾಗಿಂಗ್ ಒಂದು ಜೀವನಶೈಲಿಯೇ ಆಗಿಬಿಟ್ಟಿದೆ. ಉದ್ಯಾನದವರೆಗೆ ವಾಹನದಲ್ಲಿ ಹೋಗುವುದು, ಅಲ್ಲಿ ಜಾಗಿಂಗ್ ಮಾಡುವುದು, ಹಿಂದಿರುಗುವಾಗ ಎಂಟಿಆರ್‌ನಲ್ಲೋ ಮತ್ಯಾವುದೋ ದರ್ಶಿನಿಯಲ್ಲೋ ಪೊಗದಸ್ತಾಗಿ ಇಡ್ಲಿ-ವಡೆ-ದೋಸೆ-ಪೂರಿ ಜಮಾಯಿಸಿಯೇ ಬರುವುದು ಕೂಡ ಹಲವರ ಜೀವನಶೈಲಿಯೇ. jogging ಪದದ ಪ್ರಾಚೀನ ಅರ್ಥವನ್ನಷ್ಟೇ ಪರಿಗಣಿಸಿದರೆ ‘ಕುಲುಕೋಟ’ (ಪ್ರಭುಪ್ರಸಾದ್ ನಡುತೋಟ, ಶ್ರೀನಾಥ್ ಕೆ.ಟಿ., ನಾರಾಯಣ ಬೈಪಡಿತ್ತಾಯ, ವಸಂತಕುಮಾರ್ ಕಲ್ಯಾಣಿ) ಮತ್ತು ‘ಕುಲುಕುನಡೆ’ (ಪಿ.ಜೆ. ರಾಘವೇಂದ್ರ) ಸೂಕ್ತವೆನಿಸುತ್ತವೆ. ಈಗಿನ ದೈಹಿಕ ವ್ಯಾಯಾಮದ ಸಂದರ್ಭಕ್ಕಾದರೆ, ಜಾಗಿಂಗ್ ಎನ್ನುವುದು ವೇಗದ ನಡಿಗೆಯೂ ಹೌದು ಮೆಲ್ಲನೆಯ ಓಟವೂ ಹೌದು. ಆದ್ದರಿಂದ- ‘ದಾಪುನಡಿಗೆ’ (ಮಹಾಂತೇಶ ಗೋಲಪ್ಪನವರ), ‘ಬಿರುನಡಿಗೆ’ (ಡಾ.ದಯಾನಂದ ಭಟ್ಟ), ‘ಓಡುನಡಿಗೆ’ (ಅನಿತಾ ಕಿಶೋರ್, ಅಂಜನಾ ಗುರುರಾಜ್, ಎಂ.ಕೆ. ರಮೇಶ್, ಜಯಲಕ್ಷ್ಮಿ ಅಡಿಗ), ‘ಓಡುನಡೆ’ (ಅನ್ನಪೂರ್ಣ ಹೇಮಚಂದ್ರ, ಸಂತೋಷರಾವ್ ಕಡಬ), ‘ಮೆಲುಓಟ’ (ಚಂದನಾ ಸೂರಜ್, ಯು. ಪರಮೇಶ್ವರ ಭಟ್ಟ, ಶ್ರೀರಾಮ ಡೋಂಗ್ರೆ, ಅನಂತಕೃಷ್ಣ ಶಿವಮೊಗ್ಗ, ಗೀತಾ ಗುರುಸ್ವಾಮಿ, ವೀಣಾ ಕರುಣಾಕರ್, ಉಮೇಶ ಪ್ರಭು, ನೇತ್ರಾ ವಿನೋದ್, ಪ್ರಸನ್ನ ಶೆಂಡ್ಯೆ, ಉಲ್ಹಾಸ್ ಕುಲ್ಕರ್ಣಿ ಮುಂತಾದವರು) ಕೂಡ ಅರ್ಥಬದ್ಧವಾಗಿವೆ.