‘ಅದ್ಧೂರಿ ಲವರ್’ ಚಿತ್ರಕ್ಕಾಗಿ ಜಗಳಗಂಟಿಯಾದ ಸಂಜನಾ!

addhuri lover
Published on

ಬೆಂಗಳೂರು: ಡಾ. ರಾಜಕುಮಾರ್ ಅವರ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಮಂಜುಳಾ ಅಭಿನಯದ ದುರ್ಗಿ ಪಾತ್ರ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಇದೀಗ ಅಂತದ್ದೇ ಪಾತ್ರದಲ್ಲಿ ನಟಿ ಸಂಜನಾ ಆನಂದ್ ‘ಅದ್ಧೂರಿ ಲವರ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗಳಗಂಟಿಯಾಗಿ, ಬಜಾರಿ ಹುಡುಗಿಯಾಗಿ ತೆರೆಮೇಲೆ ತರಲೆ ಮಾಡಲಿದ್ದಾರೆ.

ಸಂಜನಾ ಇಂಥದ್ದೊಂದು ಅವತಾರವನ್ನು ಎತ್ತಿರುವುದು ‘ಅದ್ಧೂರಿ ಲವರ್’ ಚಿತ್ರಕ್ಕಾಗಿ. ಎ.ಪಿ ಅರ್ಜುನ್ ನಿರ್ದೇಶನದ ಜತೆಗೆ ನಿರ್ವಣವನ್ನೂ ಮಾಡುತ್ತಿರುವ ಈ ಚಿತ್ರದ ಘೋಷಣೆ ಕಳೆದ ವರ್ಷವೇ ಆಗಿತ್ತಾದರೂ, ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಷ್ಟೇ ಅಲ್ಲ, ಏಪ್ರಿಲ್ 1ರಿಂದ ಚಿತ್ರದ ಚಿತ್ರೀಕರಣ ಸಹ ಶುರುವಾಗಲಿದೆ. ‘ಮೊದಲ ಬಾರಿ ಪೂರ್ಣ ಪ್ರಮಾಣದ ಲವ್​ಸ್ಟೋರಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಬಜಾರಿ ಹುಡುಗಿಯಾಗಿ ಪಾತ್ರ ಸಾಗಲಿದೆ. ‘ಸಂಪತ್ತಿಗೆ ಸವಾಲ್’ ಚಿತ್ರದ ಮಂಜುಳಾ ರೀತಿಯ ಪಾತ್ರ ಸಿಕ್ಕಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸಂಜನಾ.

ಈ ಮೊದಲಿನ ‘ಅದ್ಧೂರಿ’ಗೂ ಈಗಿನ ‘ಅದ್ಧೂರಿ ಲವರ್’ಗೂ ಏನೆಲ್ಲ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎಂಬುದನ್ನು ಸ್ವತಃ ನಿರ್ದೇಶಕ ಎ.ಪಿ. ಅರ್ಜುನ್ ಹೇಳಿಕೊಂಡಿದ್ದಾರೆ. ‘‘ಕಿಸ್’ ಬಳಿಕ ನಾನು ಮತ್ತು ವಿರಾಟ್ ಮತ್ತೆ ಒಂದಾಗಿದ್ದೇವೆ. ಮತ್ತೊಂದು ಫ್ರೆಶ್ ಲವ್​ಸ್ಟೋರಿ ಜತೆಗೆ ಬರುತ್ತಿದ್ದೇನೆ. ಊಟಿ, ಬೆಂಗಳೂರು, ಮೈಸೂರು, ಕೊಡೈಕೆನಾಲ್, ಡಾರ್ಜಿಲಿಂಗ್, ಮೈಸೂರು, ಮಂಗಳೂರು, ಚಿಕ್ಕಮಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ’ ಎನ್ನುತ್ತಾರವರು.

ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ತೆರೆಕಾಣಲಿದ್ದು, 100 ದಿನಗಳ ಚಿತ್ರೀಕರಣ ನಡೆಯಲಿದೆ. ಸಂಕೇತ್ ಛಾಯಾಗ್ರಹಣ ಮಾಡಿದರೆ, ವಿ.ಹರಿಕೃಷ್ಣ ಅವರ ಮಗ ಆದಿ ಈ ಚಿತ್ರದ ಮೂಲಕ ಮೊದಲ ಸಲ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಲಿದ್ದಾರೆ. ಅಕ್ಟೋಬರ್ ವೇಳೆಗೆ ಚಿತ್ರ ಬಿಡುಗಡೆ ಆಗಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net