

ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ. ಹದಿನಾರನೆಯ ಶತಮಾನದಲ್ಲಿ, ಅಂದರೆ 1550ರಲ್ಲಿ ಬಾಡ ಎಂಬ ಉತ್ತರ ಕರ್ನಾಟಕದ ಹಳ್ಳಿಯಲ್ಲಿ, ಕುರುಬ ಸಮುದಾಯದಲ್ಲಿ ಹುಟ್ಟಿದ ತಿಮ್ಮಪ್ಪ ನಾಯಕ ಮುಂದೆ ಕನಕದಾಸರೆಂದು ಪ್ರಸಿದ್ಧರಾಗಿ ಕನ್ನಡ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತದ್ದು ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗಳ ಚೇತೋಹಾರಿಯಾದ ಒಂದು ಘಟ್ಟ. ಅನೇಕ ಕೀರ್ತನೆಗಳು (ದೇವರ ನಾಮಗಳು) ಹಾಗೂ ಮೋಹನತರಂಗಿಣಿ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ಅಲ್ಲದೆ ಹರಿಭಕ್ತಿಸಾರ ಎಂಬ ಕಾವ್ಯಕೃತಿಗಳನ್ನು ರಚಿಸಿದ ಕನಕದಾಸರು ಸಂಗೀತ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಈ ಪ್ರತಿಭಾಸಂಪನ್ನ ಹರಿದಾಸಕವಿಯು ಕನ್ನಡದ ಸಂಸ್ಕೃತಿರಂಗಕ್ಕೆ ಪ್ರವೇಶ ಮಾಡಿದ ಸನ್ನಿವೇಶ ತುಂಬ ಆಸಕ್ತಿದಾಯಕ.
ಕನ್ನಡ ನಾಡಿನ ಚರಿತ್ರೆಯಲ್ಲಿ ಹರಿದಾಸ ಪರಂಪರೆಗೆ ತಳಪಾಯ ಹಾಕಿದವರೆಂದರೆ ಮುಳುಬಾಗಿಲ ಮಠದ ಶ್ರೀಪಾದರಾಯರು. ಕನ್ನಡದಲ್ಲಿ ಧರ್ಮಗ್ರಂಥಗಳನ್ನು ರಚಿಸಬೇಕು ಎಂಬ ಹಂಬಲವನ್ನು ಇಟ್ಟುಕೊಂಡು, ಭಾಗವತರ ತಂಡವೊಂದನ್ನು ಮಾಡಿ ಪೂಜೆಯ ಸಮಯದಲ್ಲಿ ವೇದಪಾರಾಯಣ ಮಾಡಿದಂತೆ, ಈ ತಂಡದಿಂದ ಕನ್ನಡ ದೇವರನಾಮಗಳನ್ನು ಹಾಡಿಸಿದ ನವಪಥ ನಿರ್ವಪಕರಿವರು. ಇವರ ಪ್ರಮುಖ ಶಿಷ್ಯರೆಂದರೆ ವ್ಯಾಸರಾಯ ಇಲ್ಲವೇ ವ್ಯಾಸತೀರ್ಥರು. ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ನಿರ್ವಿುತವಾದ ವಿಜಯನಗರ ಸಾಮ್ರಾಜ್ಯದಲ್ಲಿ, ತಮ್ಮ ಗುರುಗಳ ಈ ಹೊಸಸಂಪ್ರದಾಯವನ್ನು ಶ್ರದ್ಧೆಯಿಂದ ವ್ಯಾಸರಾಯರು ಮುಂದುವರಿಸಿಕೊಂಡು ಹೋದರು. ಪಂಡಿತರೂ, ಯತಿಗಳೂ, ಗುಣಗ್ರಾಹಿಗಳು ಮತ್ತು ಜಾತಿಬೇಧವನ್ನು ಮೀರಿ ಆಲೋಚನೆ ಮಾಡಬಲ್ಲವರೂ ಆಗಿದ್ದ ವ್ಯಾಸರಾಯರ ಪ್ರಮುಖ ಶಿಷ್ಯರೆಂದರೆ ಪುರಂದರ ದಾಸರು ಮತ್ತು ಕನಕದಾಸರು. ದಾಸಸಾಹಿತ್ಯ ಎತ್ತರದ ಸಿದ್ಧಿಯನ್ನು ಗಳಿಸುವಲ್ಲಿ ಇವರಿಬ್ಬರ ಪಾತ್ರ ಪ್ರಮುಖವಾದದ್ದು.
ಹರಿದಾಸ ವಿರಚಿತ ದೇವರನಾಮಗಳಿಗೂ ಸಂಗೀತಕ್ಕೂ ನಿಕಟವಾದ ಸಂಬಂಧವಿದೆ. ಇದಕ್ಕೆ ಹಿನ್ನೆಲೆಯಾಗಿ ಕನ್ನಡ ನಾಡಿನಲ್ಲಿ ಸಂಗೀತಕ್ಕೂ ಸಾಹಿತ್ಯಕ್ಕೂ ಇರುವ ಕರುಳು ಬಳ್ಳಿಯಂಥ ಆಪ್ತಬಂಧವನ್ನು ಗಮನಿಸಬೇಕು. ಪ್ರಾಚೀನ ಕಾಲದ ಆದಿವಾಸಿ ಗೀತೆಗಳಾಗಲೀ, ಕೋಲಾಟದ ಪದ, ರಾಗಿ ಬೀಸುವ ಪದ ಮುಂತಾದ ಜನಪದ ಗೀತೆಗಳಾಗಲೀ, ಮಲೆ ಮಾದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ ಮುಂತಾದ ಜನಪದ ಕಾವ್ಯಗಳಾಗಲೀ ಅವು ಮೂಲದಲ್ಲಿ ಹುಟ್ಟುವಾಗಲೇ ಗಾನಶರೀರ ಧರಿಸಿ ಹುಟ್ಟಿದ್ದವು. ಮಾತು ಮತ್ತು ಧಾತು ಎರಡೂ ಬೆರೆತು ಹೋಗಿ ಹಾಲು ಜೇನಿನಂತೆ ಒಂದರಿಂದ ಒಂದನ್ನು ಬೇರ್ಪಡಿಸಲಾರದ ಜಂಟಿಘಟಕಗಳಾಗಿದ್ದವು. ನಮ್ಮ ಜಂಗಮರು, ತತ್ತ್ವಪದಕಾರ ರಂತೆ ಹರಿದಾಸರಿಗೂ ನಮ್ಮ ನಾಡಿನಲ್ಲಿ ಜನರ ಮನಸ್ಸನ್ನು ಹಾಡಿನ ಮೂಲಕ ಸುಲಭವಾಗಿ ತಲುಪಬಹುದೆಂಬ ಸಂಗತಿ ಗೊತ್ತಿತ್ತು.
ಕೈಯಲ್ಲಿ ತಾಳ ತಂಬೂರಿಗಳನ್ನು ಹಿಡಿದುಕೊಂಡು, ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಹರಿನಾಮ ಸಂಕೀರ್ತನೆಯನ್ನು ಹಾಡುತ್ತ ಬೀದಿ ಬೀದಿಗಳಲ್ಲಿ ತಿರುಗಿ ಮನೆಮನೆಗೆ ಹೋಗಿ ‘ಬೇಡಲು ದಾಸಯ್ಯ ಬಂದ, ನೀಡಿರೇ’ ಎಂದು ಗೋಪಾಳ ವೃತ್ತಿ ಮಾಡುತ್ತ ಇದ್ದವರು ಹರಿದಾಸರು. ಜನರ ಮನಸ್ಸಿನಲ್ಲಿ ಸದ್ಭಾವ ಉಂಟು ಮಾಡಲು ಸಂಗೀತವು ಸೊಗಸಾದ ಮಾರ್ಗ ಎಂಬುದನ್ನು ಇವರು ಅರಿತಿದ್ದರು. ಮಾತು ಮತ್ತು ಧಾತು ಬೇರೆ ಬೇರೆ ಎಂದು ಎಂದಿಗೂ ಅವರು ಭಾವಿಸಿದವರಲ್ಲ. ಕರ್ನಾಟಕದ ನಾಗರಿಕತೆಯು ಕೃಷಿಸಂಸ್ಕೃತಿಯನ್ನು ಆಧರಿಸಿದ್ದ ಕಾಲದಲ್ಲಿ ಹರಿದಾಸರು ನೀಡಿದ ಧಾರ್ವಿುಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆ ಗಮನೀಯವಾದದ್ದು. ಕನಕ ದಾಸರ ಸಮಕಾಲೀನರಾಗಿದ್ದ ಪುರಂದರ ದಾಸರು ಮಕ್ಕಳ ಸಂಗೀತ ಪಾಠಕ್ಕಾಗಿ ಪಿಳ್ಳಾರಿ ಗೀತೆಗಳನ್ನು ರಚಿಸಿ ಜೊತೆಗೆ ಕ್ರಮಬದ್ಧವಾದ ಸಂಗೀತಾಭ್ಯಾಸದ ರೀತಿಯನ್ನು ರೂಢಿಗೆ ತಂದು ‘ಕರ್ನಾಟಕ ಸಂಗೀತ ಪಿತಾಮಹ* ಅನ್ನಿಸಿಕೊಂಡರು. ಕನಕ ದಾಸರ ಬದುಕಿನ ಇತಿಹಾಸದ ಕುರಿತು ಸಿಕ್ಕಿರುವ ವಿವರಗಳನ್ನು ಗಮನಿಸಿದಾಗ ಅವರು ತಾವು ಹುಟ್ಟಿ ಬೆಳೆದ ಹಳ್ಳಿಯಲ್ಲಿ ದಂಡನಾಯಕರಾಗಿದ್ದರೆಂದೂ, ಯಾವುದೋ ಒಂದು ಸಂದರ್ಭದಲ್ಲಿ ಬದುಕಿನ ಬಗ್ಗೆ ವಿರಕ್ತಿ ಹುಟ್ಟಿ ಹರಿದಾಸರಾಗಿ ಮುಂದೆ ಕನಕದಾಸರೆಂದು ಕರೆಯಲ್ಪಟ್ಟರೆಂದೂ ತಿಳಿದುಬರುತ್ತದೆ. ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯ ಇವರಾಗಿದ್ದರೂ ತಮ್ಮ ಜಾತಿಯಿಂದಾಗಿ ಮಠಗಳಲ್ಲಿ, ದೇವಸ್ಥಾನಗಳಲ್ಲಿ ನಿಂದನೆ, ಅವಮಾನ ಅನುಭವಿಸಿದರು. ಉಡುಪಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಎಂಬ ಇವರ ಆರ್ತವಾದ ಗೀತ ಸಂಕೀರ್ತನೆಗೆ ಮೆಚ್ಚಿ ದೇವರ ಮೂರ್ತಿ ಹಿಂದಕ್ಕೆ ತಿರುಗಿ ಇವರಿಗೆ ದರ್ಶನ ನೀಡಿತು ಎಂಬ ‘ಕನಕನ ಕಿಂಡಿ’ಯ ಐತಿಹ್ಯವು, ಕನ್ನಡ ನಾಡಿನ ಜನಪ್ರಿಯ ದಂತಕಥೆಗಳಲ್ಲಿ ಒಂದು.
ಪ್ರತಿಭೆಗೆ ಜಾತಿಭೇದವಿಲ್ಲ. ಕನ್ನಡ ಶಬ್ದಗಳಲ್ಲಿರುವ ಸಹಜನಾದ ವನ್ನು ಅರ್ಥ ಮಾಡಿಕೊಂಡು ಎಲ್ಲರಿಗೂ ಇಷ್ಟವಾಗುವಂತೆ ದೇವರನಾಮ ಗಳನ್ನು ರಚಿಸಬಲ್ಲ ಪ್ರತಿಭೆ ಕನಕದಾಸರಲ್ಲಿತ್ತು. ಅವರ ರಚನೆಗಳು ಜನರ ಬಾಯಲ್ಲಿ ನಲಿದಾಡುವ ಸುಪ್ರಸಿದ್ಧ ಕೀರ್ತನೆಗಳಾಗಿ ಪ್ರಸಿದ್ಧವಾದವು. ‘ಈತನೀಗ ವಾಸುದೇವನು ಲೋಕದೊಡೆಯ’, ‘ಈಶ ನಿನ್ನ ಚರಣ ಭಜನೆ’, ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, ‘ನಾನು ನಾನು ಎನ್ನದಿರೊ ಹೀನಮಾನವ’, ‘ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ’, ‘ವರವ ಕೊಡು ಎನಗೆ ವಾಗ್ದೇವಿ’, ‘ಅಹುದಾದರಹುದೆನ್ನಿ ಇಲ್ಲವಾದರಿಲ್ಲವೆನ್ನಿ’ ಹೀಗೆ ನೂರಾರು ದೇವರನಾಮಗಳನ್ನು ಕನ್ನಡ ಜನರು ಮತ್ತೆ ಮತ್ತೆ ಹಾಡಿಕೊಂಡು ಸಂತೋಷ ಪಟ್ಟಿದ್ದಾರೆ/ಪಡುತ್ತಿದ್ದಾರೆ. ‘ಹರಿಭಕ್ತಿಸಾರ’ ಕಾವ್ಯದ ಅನುರಣಿಸುವ ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡು ರಾಗವಾಗಿ ದಿನವೂ ದೇವರ ಮುಂದೆ ಹಾಡಿಕೊಂಡು ಸಮಾಧಾನ ಪಟ್ಟಿದ್ದಾರೆ.
ಖಂಡಜಾತಿಯಲ್ಲಿ ನಡೆಯುವ ಲಲಿತ ಲಯವು ಕನ್ನಡ ಭಾಷೆಗೆ ತುಂಬ ಹೊಂದಿಕೆಯಾದ ಲಯ. ಐದು ಮಾತ್ರೆಗಳಲ್ಲಿ ತಕತಕಿಟ-ತಕತಕಿಟ-ತಕತಕಿಟ-ತಕತಕಿಟ ಎಂದು ನಡೆಯುವ ಅತಿ ವೇಗದ್ದೂ ಅಲ್ಲದ ಅತಿ ನಿಧಾನದ್ದೂ ಅಲ್ಲದ ಲಯ ಇದು. ಈ ಲಲಿತ ಲಯದ ನಾಡಿಯನ್ನು ಹಿಡಿದು ಅನೇಕ ಮಧುರವಾದ ಹಾಗೂ ಶ್ರುತಿಸೌಖ್ಯವುಳ್ಳ ಕೀರ್ತನೆಗಳನ್ನು ಕನಕದಾಸರು ರಚಿಸಿದ್ದಾರೆ. ಹಾಡಲು ಹೇಳಿ ಮಾಡಿಸಿದಂಥ ಛಂದಸ್ಸು, ಪ್ರಾಸ, ಶಬ್ದನಾದಗಳು ಕನಕ ದಾಸರ ರಚನೆಗಳಲ್ಲಿವೆ. ಅವರ ಅತಿ ಪ್ರಸಿದ್ಧ ಕೀರ್ತನೆಗಳಾದ ‘ನಮ್ಮಮ್ಮ ಶಾರದೆ’, ‘ನೀ ಮಾಯೆಯೊಳಗೋ’, ‘ತಲ್ಲಣಿಸದಿರು ಕಂಡ್ಯ’, ‘ಏನೂ ಇಲ್ಲದ ಎರಡು ದಿನದ ಸಂಸಾರ’, ‘ತೊರೆದು ಜೀವಿಸಬಹುದೇ’, ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಇವುಗಳನ್ನು ಈ ಮಾತಿಗೆ ಉದಾಹರಣೆಯಾಗಿ ಗಮನಿಸಬಹುದು. ಕರ್ನಾಟಕ ಸಂಗೀತವನ್ನು ಆಧರಿಸಿದ ಭರತನಾಟ್ಯಕ್ಕೆ ಈ ದೇವರನಾಮಗಳಿಂದ ಆಗಿರುವ ಪ್ರಯೋಜನವೇನೂ ಕಡಿಮೆಯಲ್ಲ. ಭಕ್ತಿಭಾವದ ಸ್ಥಾಯಿಯನ್ನು ಹೊಂದಿರುವ ಈ ಕೀರ್ತನೆಗಳು ತಮ್ಮೊಳಗೆ ನವರಸಗಳನ್ನು ಮೇಳೈಸಿಕೊಂಡಿರವುದರಿಂದ ಅನೇಕ ರೀತಿಯ ಸಂಚಾರಿ ಭಾವಗಳನ್ನು ಮೇಳೈಸಿ ನೃತ್ಯಸಂಯೋಜನೆ ಮಾಡುವುದಕ್ಕೆ ಅವಕಾಶ ನೀಡುತ್ತವೆ. ಹಿಂದುಸ್ಥಾನಿ ಸಂಗೀತ ಮತ್ತು ಸುಗಮಸಂಗೀತ ಕ್ಷೇತ್ರದಲ್ಲೂ ಕನಕ ದಾಸರ ಕೀರ್ತನೆಗಳು ಸುಶ್ರಾವ್ಯವಾಗಿ ಹಾಡಲ್ಪಡುವುದು ಸಂಗೀತಪ್ರೇಮಿಗಳು ಬಲ್ಲ ವಿಷಯವೇ ಆಗಿದೆ. ಬೆಡಗಿನ ವಚನಗಳಂತೆ ಕಾಣುವ ಹಾಗೂ ತಮ್ಮ ಒಗಟಿನಂಥ ರಚನೆಯಿಂದ ಸುಲಭವಾಗಿ ಅರ್ಥವನ್ನು ಬಿಟ್ಟುಕೊಡದಿರುವ ‘ಕನಕ ಮುಂಡಿಗೆ’ ಎಂಬ ಹಾಡುಗಳು ಕೂಡ ಸಾಹಿತ್ಯ ಮತ್ತು ಸಂಗೀತಪ್ರೇಮಿಗಳ ಆಸಕ್ತಿಯನ್ನು ಬಡಿದೆಬ್ಬಿಸಿವೆ.
ಆಧುನಿಕ ಕರ್ನಾಟಕದ ಸಿನಿಮಾಗಳಲ್ಲಿಯೂ ಕನಕ ದಾಸರ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಕನಕದಾಸರ ಜೀವನಚರಿತ್ರೆಯನ್ನು ಆಧರಿಸಿ ಚಿತ್ರಿಸಲಾದ ‘ಭಕ್ತ ಕನಕದಾಸ’ ಸಿನಿಮಾ ಡಾ.ರಾಜಕುಮಾರ್ ಅವರ ಅಮೋಘ ಅಭಿನಯವನ್ನು ಹೊಂದಿದೆ. ಇದರಲ್ಲಿನ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’, ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ಮುಂತಾದ ದೇವರನಾಮಗಳು ತುಂಬ ಪ್ರಸಿದ್ಧವಾಗಿವೆ. ‘ತಲ್ಲಣಿಸದಿರು ಕಂಡ್ಯ’ ಗೀತೆಯು ‘ಮೌನಗೀತೆ’ ಎಂಬ ಕನ್ನಡ ಏಕತಾರಿ ವಾದ್ಯದ ಹಿನ್ನೆಲೆಯಲ್ಲಿ ಚಲನಚಿತ್ರದಲ್ಲಿ ಮಧುರವಾಗಿ ಹಾಡಲ್ಪಟ್ಟಿದೆ. ಹೊಸ ಕಾಲದ ಚಿತ್ರ ‘ಲೂಸಿಯಾ’ದಲ್ಲೂ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಗೀತೆ ಅರ್ಥಪೂರ್ಣವಾಗಿ ಬಳಕೆಯಾಗಿರುವುದನ್ನು ಗಮನಿಸಬಹುದು. ಸಂಗೀತದ ಮೂಲಕ ಅನಕ್ಷರಸ್ಥರಿಗೂ ಸಾಹಿತ್ಯ ತಲುಪಲು ತಮ್ಮ ಓರಗೆಯ ಹರಿದಾಸರಂತೆ ಕನಕದಾಸರು ಸಹ ಕಾರಣರಾಗಿದ್ದಾರೆ. ಪೂಜೆ ಮಾಡುವಾಗ ಹೆಂಗಸರು ಹೇಳಿಕೊಳ್ಳುತ್ತಿದ್ದ ಇವರ ದೇವರನಾಮಗಳು ಜನಪದ ಹಾಡುಗಳ ರೀತಿಯಲ್ಲಿ ಬಾಯಿಂದ ಬಾಯಿಗೆ ಹರಿದಿವೆ. ಜೊತೆಗೆ ಇವರ ‘ಹರಿಭಕ್ತಿಸಾರ’ವು ರಾಗವಾಗಿ ಹಾಡಿಕೊಳ್ಳುವ ಒಂದು ಪಾರಾಯಣ ಕಾವ್ಯವಾಗಿ ಕನ್ನಡ ಭಕ್ತಿ ಸಂಪದವನ್ನು ಹೆಚ್ಚಿಸಿದೆ. ದೇವಸ್ಥಾನಗಳಲ್ಲಿ ಹರಿಕಥಾ ಕಾಲಕ್ಷೇಪ ಮಾಡುವ ಪ್ರತಿಭಾವಂತ ಹರಿದಾಸ, ಹರಿದಾಸಿಯರು ಕೂಡ ಕನಕದಾಸರ ರಚನೆಗಳನ್ನು ಮನದುಂಬಿ ಹಾಡಿದ್ದಾರೆ. ಕನಕದಾಸರ ಕೆಲವು ಗೀತೆಗಳು ಜನಪದ ಶೈಲಿಯಲ್ಲಿ ಇರುವುದನ್ನು ವಿದ್ವಾಂಸರು ಗಮನಿಸಿದ್ದಾರೆ. ‘ದ್ಯಾವಿ ನಮ್ಮ ದ್ಯಾವರು ಬಂದರು’, ‘ಸಾರಿ ದೂರಿ ಹೇಳುತೇನೆ’ ಈ ಮುಂತಾದ ಗೀತೆಗಳನ್ನು ಇದಕ್ಕೆ ಉದಾಹರಣೆಯಾಗಿ ಗಮನಿಸಬಹುದು.
ಪಠ್ಯಪುಸ್ತಕಗಳಲ್ಲಿ, ಬಾಲಪಾಠಗಳಲ್ಲಿ ಮಕ್ಕಳ ಬಾಯಲ್ಲಿ ಕನಕದಾಸ ವಿರಚಿತ ಹಾಡುಗಳು ನಲಿದಿವೆ, ನಲಿಯುತ್ತಿವೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’, ‘ಗಿಳಿಯ ಮರಿಯನು ತಂದು’, ‘ಕುಲಕುಲಕುಲವೆಂದು ಹೊಡೆದಾಡುವಿರಿ...’ ಈ ಮುಂತಾದ ರಚನೆಗಳನ್ನು ಅನೇಕ ಪೀಳಿಗೆಗಳ ಮುಗ್ಧ ಮಕ್ಕಳು ತಮ್ಮ ಶಾಲಾ ಕನ್ನಡ ಪಾಠದ ಭಾಗವಾಗಿ ಕಲಿಯುತ್ತ, ರಾಗವಾಗಿ ಹಾಡುತ್ತ ಬೆಳೆದಿದ್ದಾರೆ. ಹಾಡುಗಬ್ಬ, ಓದುಗಬ್ಬಗಳಿಗೆ ಇರುವ ವ್ಯತ್ಯಾಸವನ್ನು ಅರಿಯುವ ವಯಸ್ಸಿಗೆ ಮುನ್ನವೇ ಅವರ ಪ್ರಜ್ಞೆಯನ್ನು ಪ್ರವೇಶಿಸುವ ಈ ಗೀತೆಗಳು ಅವರ ಸ್ಮೃತಿ, ಸಂಸ್ಕೃತಿಗಳ ಭಾಗವಾಗಿಬಿಟ್ಟಿವೆ.
ಕರ್ನಾಟಕದ ಬದುಕಿನಲ್ಲಿ ಒಂದು ಐತಿಹ್ಯವಾಗಿ ಕನಕನ ಕಿಂಡಿ ಎಷ್ಟು ಪ್ರಸಿದ್ಧವೋ ‘ನಮ್ಮಮ್ಮ ಶಾರದೆ’, ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ ರಂಗ’, ‘ಏನೂ ಇಲ್ಲದ ಎರಡು ದಿನದ ಸಂಸಾರ’ ಈ ಮುಂತಾದ ಅವರ ದೇವರನಾಮಗಳೂ ಅಷ್ಟೇ ಪ್ರಸಿದ್ಧವಾಗಿವೆ. ಈ ದಾಸಶ್ರೇಷ್ಠರು ಸಾಮಾಜಿಕ ಒಳಗೊಳ್ಳುವಿಕೆ ದೃಷ್ಟಿಯಿಂದ, ಜಾತಿ ಸಮಾನತೆಯ ಆಶಯದಿಂದ ಕನ್ನಡ ಕಾವ್ಯದಲ್ಲಿ ಕ್ರಾಂತಿಕಾರಕ ವಸ್ತುಗಳನ್ನು ತಂದದ್ದು ಮಾತ್ರ ಅಲ್ಲ, ತಮ್ಮ ಮನೋಹರವಾದ ದೇವರನಾಮಗಳಿಂದಲೂ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿ ಅಜರಾಮರರಾಗಿದ್ದಾರೆ.
(ಲೇಖಕರು ಸಂಗೀತಗಾರರು)