ಅನಾಥವಾದ ಆತಿಥ್ಯ ಆವರಿಸಿದ ಕಾಮೋಡ

12-680d1ae46e575
Published on

ದಿಕ್ಕುಕಾಣದ ಸ್ಥಿತಿ, ಅನಾಥ ಪ್ರಜ್ಞೆ | 370ನೇ ವಿಧಿ ರದ್ದತಿ ನಂತರ ಉತ್ತುಂಗದಲ್ಲಿದ್ದ ಕಾಶ್ಮೀರದ ಪ್ರವಾಸೋದ್ಯಮ

| ವಿಕ್ರಮ್ ನಂದೋಡಿ, ನವದೆಹಲಿ

ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಜಮ್ಮು-ಕಾಶ್ಮೀರದ ಸಂಪೂರ್ಣ ಚಿತ್ರಣ ಬದಲಾಗಿದ್ದು 2020ರ ಬಳಿಕ. ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಉತ್ತುಂಗದಲ್ಲಿದ್ದ ಕಾಶ್ಮೀರದ ಪ್ರವಾಸೋದ್ಯಮ, ಏ.22ರಂದು ಪಹಲ್ಗಾಮ್ಲ್ಲಿ ನಡೆದ ಉಗ್ರರ ದಾಳಿಯಿಂದ ಸಂಪೂರ್ಣ ನೆಲಕಚ್ಚಿದಂತಾಗಿದೆ.

ಇಡೀ ಆತಿಥ್ಯ ಕ್ಷೇಕ್ರ ಕಕ್ಕಾಬಿಕ್ಕಿಯಾಗಿದ್ದು, ದಿಕ್ಕುಕಾಣದಂತಾಗಿದ್ದಾರೆ. ಇನ್ನೊಂದು ಕಡೆ ಏನೋ ಬದಲಾವಣೆ ಸೂರ್ಯ ಉದಯಿಸಿದ ಎಂಬ ಭಾವನೆಯಲ್ಲಿದ್ದವರಿಗೆ ಈಗ ಅನಾಥಪ್ರಜ್ಞೆ ಕಾಡಲಾರಂಭಿಸಿದೆ. ಕಾಶ್ಮೀರ ಪ್ರವಾಸ ಮಾಡಬೇಕು ಎಂಬ ಕನಸು ಹೊಂದಿದ್ದ ಲಕ್ಷಾಂತರ ಪ್ರವಾಸಿಗರು, ಇದೀಗ ತಮ್ಮ ಕನಸು ನನಸಾಗದಿದ್ದರೂ ಸರಿಯೇ ಕಾಶ್ಮೀರ ಪ್ರವಾಸ ಬೇಡ ಎಂಬ ಮಾನಸಿಕತೆಗೆ ಬಂದಿದ್ದು, ಪ್ರವಾಸಿಗರಿಂದ ತುಂಬಿರುತ್ತಿದ್ದ ಕಾಶ್ಮೀರದ ಹಲವು ಪ್ರದೇಶಗಳು ಇದೀಗ ಬಿಕೋ ಎನ್ನುತ್ತಿವೆ. ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಸಿಗುವ ಅಮರನಾಥ ಯಾತ್ರೆ, ಅಲ್ಲದೆ ವೈಷ್ಣೋದೇವಿ ದರ್ಶನವನ್ನು ಹೊರತುಪಡಿಸಿಯೂ ಇತ್ತೀಚಿನ ದಿನಗಳಲ್ಲಿ ಕಾಶ್ಮೀರಕ್ಕೆ ತೆರಳುವವರ ಸಂಖ್ಯೆ ಅಧಿಕವಾಗಿತ್ತು.

2020ರ ಬಳಿಕ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. 2021ರಲ್ಲಿ 1.1 ಕೋಟಿ, 2022ರಲ್ಲಿ 1.9ಕೋಟಿ, 2023ರಲ್ಲಿ 2.1 ಕೋಟಿ ಹಾಗೂ 2024ರಲ್ಲಿ 2.3 ಕೋಟಿ ಪ್ರವಾಸಿಗರು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಕಾಶ್ಮೀರದಲ್ಲಿ ದಾಲ್ ಸರೋವರ, ಶಂಕರಾಚಾರ್ಯ ದೇವಾಲಯ, ಗುಲ್ಮಾರ್ಗ್ ಹಾಗೂ ಸೋನ್ಮಾರ್ಗ್ ಸೇರಿದಂತೆ ಹಲವು ಪ್ರದೇಶಗಳ ಜತೆ ಪಹಲ್ಗಾಮ್ ಬೇತಾಬ್ ಕಣಿವೆ ಸೇರಿ ಚಂದನ್ವಾರಿ ಪ್ರದೇಶಗಳಿಗೂ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. ಆದರೆ ಏ.22ರಂದು ನಡೆದ ಉಗ್ರರ ಗುಂಡಿನ ದಾಳಿಯಿಂದಾಗಿ ಮುಂದಿನ 5 ತಿಂಗಳವರೆಗೆ ಕಾಯ್ದಿರಿಸಲಾಗಿದ್ದ ಹೋಟೆಲ್ ಬುಕಿಂಗ್ ಎಲ್ಲವೂ ರದ್ದಾಗಿದೆ.

ಆರ್ಥಿಕತೆಗೆ ಪೆಟ್ಟು ಕೊಟ್ಟ ಉಗ್ರರು

ಕಾಶ್ಮೀರದ ಪ್ರಮುಖ ಆದಾಯವೇ ಪ್ರವಾಸೋದ್ಯಮ. ದೇಶ-ವಿದೇಶದಿಂದ ಬರುವ ಪ್ರವಾಸಿಗರಿಂದಲೇ ಸ್ಥಳೀಯರ ಜೀವನ ನಡೆಯುತ್ತಿತ್ತು. ಹೋಟೆಲ್, ಸಾರಿಗೆ, ಕರಕುಶಲ ವಸ್ತುಗಳು, ಕಾಶ್ಮೀರಿ ಶಾಲು, ಬೆಡ್​ಶೀಟ್ ಸೇರಿದಂತೆ ಈ ರೀತಿಯ ಹಲವು ವಸ್ತುಗಳ ಮಾರಾಟಗಾರರು ಪ್ರವಾಸಿಗರಿಂದಲೇ ಉತ್ತಮ ಜೀವನ ಕಟ್ಟಿಕೊಂಡಿದ್ದರು. 2024ರ ಒಂದೇ ವರ್ಷದ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದಾಗಿ ಸೋಪೋರ್ ಹಣ್ಣಿನ ಮಾರುಕಟ್ಟೆಯಲ್ಲಿ 7000 ಕೋಟಿ ರೂ ವಹಿವಾಟು ನಡೆದಿತ್ತು. ವಾರ್ಷಿಕವಾಗಿ 18,500 ಕೋಟಿಯಿಂದ 21,200ಕೋಟಿ ರೂ.ವರೆಗೆ ಕಾಶ್ಮೀರ ಪ್ರವಾಸೋದ್ಯಮದಿಂದಲೇ ಗಳಿಕೆ ಮಾಡುತ್ತಿದೆ. 2019-20ರಲ್ಲಿ 6.7ರಷ್ಟಿದ್ದ ನಿರುದ್ಯೋಗ ದರ 2023-24ರಲ್ಲಿ ಶೇ.6.1ಕ್ಕೆ ಇಳಿಕೆಯಾಗಿದೆ. ಆದರೆ ಪಹಲ್ಗಾಮ್ ಭೀಕರ ಉಗ್ರ ದಾಳಿಯಿಂದಾಗಿ ಕಾಶ್ಮೀರದ ವಿಶಾಲ ಆರ್ಥಿಕತೆಯ ಮೇಲೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಕಾಶ್ಮೀರದ ವಿವಿಧ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಕನ್ನಡಿಗರು ಪಹಲ್ಗಾಮ್ ದಾಳಿಯ ನಂತರ ವಾಪಾಸಾಗಿದ್ದು, ಮನಶಾಂತಿಗೆಂದು ಕಾಶ್ಮೀರಕ್ಕೆ ಹೋದರೆ, ಬದುಕಿ ಬಂದಿದ್ದೇ ಹೆಚ್ಚು ಎಂಬಂತಾಗಿದೆ. ‘ಕಾಶ್ಮೀರ ಪ್ರವಾಸದ ಸಹವಾಸವೇ ಬೇಡ. ಕಾಶ್ಮೀರವನ್ನು ಹೊರತುಪಡಿಸಿಯೂ ನಮ್ಮ ದೇಶದಲ್ಲಿ ಹಲವು ಪ್ರವಾಸಿತಾಣಗಳಿವೆ ಅಲ್ಲಿಗೆ ಭೇಟಿ ನೀಡಬಹುದು’ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾತ್ರಿಕರು, ಪ್ರವಾಸಿಗರೇ ಟಾರ್ಗೆಟ್

ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಪ್ರವಾಸಕ್ಕೆಂದು ತೆರಳಿದ ಪ್ರವಾಸಿಗರಲ್ಲಿ ಪಹಲ್ಗಾಮ್ ಸಮೀಪದ ಬೈಸರನ್ ವ್ಯಾಲಿಯ ಸೌಂದರ್ಯ ಕಣ್ತುಂಬಿಕೊಳ್ಳದೆ ವಾಪಸಾದವರು ವಿರಳ. ಈ ಸ್ಥಳದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದನ್ನೇ ಅಸ್ತ್ರ ಮಾಡಿಕೊಂಡ ಉಗ್ರರು, ಅಮರನಾಥ ಯಾತ್ರೆಗೆ ಸುಮಾರು ಎರಡು ತಿಂಗಳು ಇರುವಾಗಲೇ ದಾಳಿ ನಡೆಸಿ ಅಮರನಾಥ ಯಾತ್ರಿಕರೇ ಟಾರ್ಗೆಟ್ ಎಂಬಂತೆ ಬಿಂಬಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿತ್ತು. ಕಾಶ್ಮೀರದಲ್ಲಿ ದಾಲ್ ಸರೋವರ, ಶಂಕರಾಚಾರ್ಯ ದೇವಾಲಯ ಇತ್ಯಾದಿ ಪ್ರದೇಶಗಳಿಗೆ ಮೊದಲಿಂದಲೂ ಪ್ರವಾಸಿಗರು ತೆರಳುವ ಉತ್ಸಾಹ ತೋರುತ್ತಿದ್ದರು. ಪಹಲ್ಗಾಮ್ ಪ್ರದೇಶದಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿಲ್ಲ. ಕಳೆದ 20 ವರ್ಷಗಳಿಂದಲೂ ಅಮರನಾಥ ಯಾತ್ರೆ ವೇಳೆ ಅಥವಾ ಅದಕ್ಕೂ ಮುನ್ನ ಪಹಲ್ಗಾಮ್ ಚಂದನ್ವಾರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. 1993ರಿಂದ ಇಲ್ಲಿಯವರೆಗೆ ಇದೇ ಪ್ರದೇಶದಲ್ಲಿ ಸುಮಾರು 380ಕ್ಕೂ ಅಧಿಕ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈ ವರ್ಷದ ಅಮರನಾಥ ಯಾತ್ರೆ ಜುಲೈ 3ರಂದು ಪ್ರಾರಂಭವಾಗಲಿದ್ದು, ಬೈಸರನ್, ನುನ್ವಾನ್ ಮುಂತಾದ ಪ್ರದೇಶಗಳ ಮೂಲಕವೇ ಹೋಗಬೇಕಾಗುತ್ತದೆ.

ಬುಕಿಂಗ್​ಗಳು ರದ್ದು

ಇನ್ನು ಸಾಮಾಜಿಕ ಜಾಲತಾಣದಲ್ಲಿ ‘ಲೋಕಲ್ ಸರ್ಕಲ್’ ಎಂಬ ಸಂಸ್ಥೆ ಕಾಶ್ಮೀರ ಪ್ರವಾಸ ಸಂಬಂಧ ಸಮೀಕ್ಷೆ ನಡೆಸಿದೆ. ದೇಶದ 361 ಜಿಲ್ಲೆಗಳ 21,000 ಜನರು ಪ್ರತಿಕ್ರಿಯಿಸಿದ್ದು, ಈ ವರ್ಷದ ಮೇ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಕಾಶ್ಮೀರ ಪ್ರವಾಸ ಕೈಗೊಳ್ಳಲು ತೀರ್ವನಿಸಿದ್ದ ಶೇಕಡ 62ರಷ್ಟು ಕುಟುಂಬಗಳು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಹೋಟೆಲ್-ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಗೌಹಾರ್ ಮಕ್ಬೂಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕಾಶ್ಮೀರದಲ್ಲಿರುವ ಬಹುತೇಕ ಹೋಟೆಲ್​ಗಳಲ್ಲಿ ಡಿಸೆಂಬರ್​ವರೆಗೆ ಮುಂಗಡವಾಗಿ ಬುಕಿಂಗ್ ಮಾಡಿದ್ದ ಪ್ರವಾಸಿಗರು ಇದೀಗ ಪಹಲ್ಗಾಮ್ ದಾಳಿ ಬಳಿಕ ತಮ್ಮ ಪ್ರವಾಸವನ್ನು ಮೊಟಕುಗಳಿಸಿ, ಹೋಟೆಲ್ ಬುಕಿಂಗ್​ಗಳನ್ನು ರದ್ದು ಮಾಡಿದ್ದಾರೆ.

ಉಗ್ರರ ದಾಳಿಯ ಕೆಲ ಪ್ರಕರಣ

1993ರ ಆಗಸ್ಟ್ 15

ಅಮರನಾಥ ಯಾತ್ರೆಗೆ ತೆರಳಿದ್ದ 8 ಯಾತ್ರಾರ್ಥಿಗಳನ್ನು ಗುಂಡಿಕ್ಕಿ ಕೊಂದ ಉಗ್ರರು.

1998ರ ಜುಲೈ 28

ಪಹಲ್ಗಾಮ್ ಸಮೀಪದ ಶೇಷನಾಗ ಕ್ಯಾಂಪ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ 20 ಅಮರನಾಥ ಯಾತ್ರಿಕರ ಹತ್ಯೆ.

2000 ಮಾರ್ಚ್ 21

ದಕ್ಷಿಣ ಕಾಶ್ಮೀರದ ಛತ್ತಿಸಿಂಗ್ ಪುರದಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ 35 ಸಿಖ್ಖರನ್ನು ಉಗ್ರರು ಹತ್ಯೆಗೈದಿದ್ದರು.

2000 ಆಗಸ್ಟ್ 02

ಪಹಲ್ಗಾಮ್ಂದ 3 ಕಿ.ಮೀ. ದೂರದಲ್ಲಿರುವ ನುನ್ವಾನ್ ಬೇಸ್ ಕ್ಯಾಂಪಿನಲ್ಲಿದ್ದ 30 ಅಮರನಾಥ ಯಾತ್ರಿಕರನ್ನು ಉಗ್ರರು ಹತ್ಯೆಗೈದರು, 60ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

2001ರ ಜುಲೈ 20

ಶೇಷನಾಗ ಸರೋವರದ ಬಳಿ ದಾಳಿ ನಡೆಸಿದ್ದ ಉಗ್ರರು ಅಮರನಾಥ ಯಾತ್ರಾರ್ಥಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ 15 ಜನರನ್ನು ಕೊಂದಿದ್ದರು.

2002ರ ಆಗಸ್ಟ್ 6

ನುನ್ವಾನ್ ಬೇಸ್ ಕ್ಯಾಂಪ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ 9 ಅಮರನಾಥ ಯಾತ್ರಾರ್ಥಿಗಳ ಪೈಕಿ 6 ಯಾತ್ರಾರ್ಥಿಗಳು ಉಗ್ರರ ದಾಳಿಗೆ ಬಲಿಯಾದರು.

2002ರ ನವೆಂಬರ್ 23

19 ಜನರನ್ನು ದಕ್ಷಿಣ ಕಾಶ್ಮೀರದಲ್ಲಿ ಕೊಂದ ಉಗ್ರರು.

2002ರ ನವೆಂಬರ್ 24

ಜಮ್ಮುವಿನ ರಘುನಾಥ ಮಂದಿರ ಹಾಗೂ ಪಂಜಭಕ್ತಾರ ಮಂದಿರದ ಮೇಲೆ ದಾಳಿ ನಡೆಸಿದ್ದ ಉಗ್ರರಿಂದ 13 ಭಕ್ತಾದಿಗಳ ಹತ್ಯೆ.

2003ರ ಮಾರ್ಚ್ 23

ಕಾಶ್ಮೀರದ ನದಿಮಾರ್ಗ ಎಂಬ ಹಳ್ಳಿಯಲ್ಲಿ ಉಗ್ರರು ಇಬ್ಬರು ಮಕ್ಕಳು,11 ಮಹಿಳೆಯರು ಸೇರಿ 24 ಕಾಶ್ಮೀರಿ ಪಂಡಿತರನ್ನು ಹತ್ಯೆಗೈದಿದ್ದರು.

2003ರ ಜುಲೈ 22

ವೈಷ್ಣೋದೇವಿ ದರ್ಶನಕ್ಕೆಂದು ತೆರಳುತ್ತಿದ್ದ ಭಕ್ತರು, ಕಾಠ್ರಾ ಸಮೀಪದ ಬಂಗಾಂಗದಲ್ಲಿ ಭೋಜನಕ್ಕೆಂದು ನಿಂತಾಗ ಉಗ್ರರ ಬಾಂಬ್ ದಾಳಿಯಿಂದ 6 ಮಂದಿ ಸ್ಥಳದಲ್ಲೇ ಸಾವಿಗೀಡಾಗಿ, 48ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿತ್ತು.

2005ರ ಜೂನ್ 13

ಪುಲ್ವಾಮಾದ ಸರ್ಕಾರಿ ಶಾಲಾ ಮುಂಭಾಗದಲ್ಲಿ ಉಗ್ರರು ಸ್ಪೋಟಿಸಿದ್ದ ಬಾಂಬ್​ನಿಂದಾಗಿ ಶಾಲಾ ಮಕ್ಕಳು, ಸೇನಾ ಅಧಿಕಾರಿಗಳು ಸೇರಿದಂತೆ 13 ಜನರು ಮೃತಪಟ್ಟಿದ್ದರು. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

2006ರ ಮೇ 25

ಗುಜರಾತಿನಿಂದ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ನಾಲ್ವರನ್ನು ಬಟಪೋರಾ ಪ್ರದೇಶದಲ್ಲಿ ಉಗ್ರರು ಹತ್ಯೆಗೈದಿದ್ದರು.

2006ರ ಜೂನ್ 12

ಬಿಹಾರ ಹಾಗೂ ನೇಪಾಳದಿಂದ ಆಗಮಿಸಿದ್ದ 9 ಮಂದಿ ಕುಲ್ಗಾಮ್ ಪ್ರದೇಶದಲ್ಲಿ ಉಗ್ರರ ದಾಳಿಗೆ ಬಲಿಯಾದರು.

2006ರ ಜುಲೈ 21

ಅಮರನಾಥ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಯಾತ್ರಾರ್ಥಿಗಳ ವಾಹನದ ಮೇಲೆ ಗ್ಯಾಂಡರ್ ಬಾಲ್ ಪ್ರದೇಶದಲ್ಲಿ ದಾಳಿ ನಡೆಸಿದ್ದ ಉಗ್ರರು 5 ಜನರನ್ನು ಕೊಂದಿದ್ದರು.

2017ರ ಜುಲೈ 10

ಅಮರನಾಥ ಯಾತ್ರಾರ್ಥಿಗಳನ್ನು ಗುರಿಯಾಗಿಸಿ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಗೆ 7 ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡು, 21ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

2022ರ ಮೇ 13

ವೈಷ್ಣೋದೇವಿ ಯಾತ್ರೆ ಮುಗಿಸಿ ಕಾಠ್ರಾದಿಂದ ಜಮ್ಮುಗೆ ವಾಪಾಸಾಗುತ್ತಿದ್ದ ವೇಳೆ ಉಗ್ರರು ನಾಲ್ವರು ಯಾತ್ರಿಕರನ್ನು

ಹತ್ಯೆಗೈದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net