ಕಾಮಾತುರ ಕ್ರೀಡಾ ಕೋಚ್

Sports
Published on
aa kshana
ಮಹಾರಾಷ್ಟ್ರ ರಾಜ್ಯದ ಕುಸ್ತಿ ಹಾಗೂ ಲಗೋರಿ ಕ್ರೀಡಾತಂಡಗಳ ಸದಸ್ಯನಾಗಿ ನಿವೃತ್ತಿ ಹೊಂದಿದ್ದ 42 ವರ್ಷದ ರಾಮನಾಥ್, ಕೆಲಕಾಲ ವಿಶ್ವವಿದ್ಯಾಲಯಗಳು ಹಾಗೂ ರಾಜ್ಯಮಟ್ಟದ ಟೀಂಗಳಿಗೆ ಕೋಚ್ ಆಗಿ ಅನುಭವವನ್ನು ಪಡೆದಿದ್ದು ಯಾವುದಾದರೊಂದು ಉತ್ತಮ ನೌಕರಿಗಾಗಿ ಹುಡುಕಾಟವನ್ನು ನಡೆಸಿದ್ದ.

2016ರ ಜನವರಿ 1ರಂದು ಮುಂಬೈ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಒಂದು ಶಾಲೆಯಲ್ಲಿ ರಾಮನಾಥ್​ಗೆ ಒಂದು ವರ್ಷದ ಅವಧಿಯವರೆಗೆ ಲಗೋರಿ ಆಟದ ಕೋಚ್ ಆಗಿ ಕೆಲಸ ಸಿಕ್ಕಿತು. ಆ ಹೆಣ್ಣುಮಕ್ಕಳ ಶಾಲೆಯ ಏಳನೆಯ, ಎಂಟನೆಯ ಮತ್ತು ಒಂಬತ್ತನೆಯ ತರಗತಿಗಳ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲು ಶಾಲೆಯ ಮುಖ್ಯೋಪಾಧ್ಯಾಯರು ಅವನಿಗೆ ತಿಳಿಸಿದರು. ಹದಿನೈದು ಬಾಲಕಿಯರನ್ನು ಶಾಲೆಯ ಲಗೋರಿ ತಂಡಕ್ಕೆ ಆಯ್ಕೆ ಮಾಡಿದ ರಾಮನಾಥ್, ಅವರಿಗೆ ಪ್ರತಿ ಸಂಜೆಯೂ ಒಂದು ಗಂಟೆ ಕಾಲ ಶಾಲೆಯಲ್ಲಿಯೇ ತರಬೇತಿ ನೀಡತೊಡಗಿದ. ಆರು ತಿಂಗಳ ಬಳಿಕ ಆತ ಆ ತಂಡಕ್ಕೆ ಪ್ರತಿ ಭಾನುವಾರವೂ ಮೂರು ಗಂಟೆಗಳ ಕಾಲ ತನ್ನ ಕ್ಲಬ್​ನ ಮೈದಾನದಲ್ಲಿ ವಿಶೇಷ ತರಬೇತಿ ನೀಡತೊಡಗಿದ.

ಕೆಲಕಾಲಾನಂತರ ಶಾಲೆಯಲ್ಲಿನ ಬಾಲಕಿಯರಿಗೆ ತಾನು ಕುಸ್ತಿ ಮತ್ತು ಕಬಡ್ಡಿ ಆಟಗಳ ತರಬೇತಿಯನ್ನು ಕೊಡುವೆನೆಂದೂ ರಾಮನಾಥ್ ತಿಳಿಸಿ ಆಸಕ್ತ ಬಾಲಕಿಯರ ಹೆಸರುಗಳನ್ನು ಕಲೆಹಾಕಿದ. ಲಗೋರಿ ಕಲಿಯುತ್ತಿದ್ದ ಹತ್ತು ಬಾಲಕಿಯರೊಡನೆ ಇನ್ನೂ ನಾಲ್ಕು ಬಾಲಕಿಯರು ಕುಸ್ತಿ ಮತ್ತು ಕಬಡ್ಡಿ ಆಟಗಳನ್ನು ಕಲಿಯಲು ಮುಂದೆ ಬಂದರು. ಈ ಆಟಗಳನ್ನು ಕಲಿಸುವಾಗ ಆತ ವಿದ್ಯಾರ್ಥಿನಿಯರ ಎದೆ, ತೊಡೆ, ಸೊಂಟ ಮುಂತಾದ ಅಂಗಾಂಗಗಳನ್ನು ಮುಟ್ಟುವುದಲ್ಲದೆ ಅಸಹ್ಯಕರವಾಗಿ ಅವರೊಂದಿಗೆ ವರ್ತಿಸುತ್ತಿದ್ದ. ಆದರೆ ಬಹುತೇಕ ವಿದ್ಯಾರ್ಥಿನಿಯರು ಅವನ ಉಪಟಳವನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದರು.

ಅಕ್ಟೋಬರ್ ತಿಂಗಳ ಒಂದು ದಿನ ರಾಮನಾಥ್ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ, ರಾಜ್ಯಮಟ್ಟದ ಲಗೋರಿ ಸ್ಪರ್ಧೆಯು ಮುಂಬೈ-ಪುಣೆ ನಡುವೆ ಇರುವ ಊರೊಂದರಲ್ಲಿ ನಡೆಯುತ್ತಿದ್ದು ತಾನು ಅವರ ತಂಡವನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಉದ್ದೇಶಿಸಿದ್ದೇನೆಂದ. ಮೂರು ದಿನಗಳ ಪಂದ್ಯಾವಳಿ ಅದಾಗಿದ್ದು ತಾವು ಆ ಊರಿನಲ್ಲಿ ಎರಡು ರಾತ್ರಿಗಳು ಉಳಿಯಬೇಕಾಗುತ್ತದೆ ಎಂದಿದ್ದಲ್ಲದೆ ಹೋಗಿ ಬರುವ ಖರ್ಚು ಮತ್ತು ಊಟ ವಸತಿಯ ಖರ್ಚು ತಲಾ 2000 ರೂ. ಆಗುತ್ತದೆ ಎಂದು ತಿಳಿಸಿದ. ‘ನಮ್ಮ ಟೀಂ ಅಲ್ಲಿ ಸ್ಪರ್ಧಿಸುವುದು ಒಳ್ಳೆಯದೆಂದು ನಾನು ಭಾವಿಸುವೆ. ನೀವು ನಿಮ್ಮ ಮಾತಾಪಿತರೊಂದಿಗೆ ಈ ಬಗ್ಗೆ ಸಮಾಲೋಚಿಸಿ ಮೂರು ದಿನಗಳ ಒಳಗೆ ನನಗೆ ತಿಳಿಸಬೇಕು’ ಎಂದ. ಮಾರನೆಯ ದಿನವೇ ನಾಲ್ಕೈದು ವಿದ್ಯಾರ್ಥಿನಿಯರ ಮಾತಾಪಿತರು ಶಾಲೆಗೆ ಬಂದು ರಾಮನಾಥ್​ನನ್ನು ಭೇಟಿಯಾಗಿ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ವಿಚಾರಿಸಿದರು. ‘ನೀವೇನೂ ಹೆದರಬೇಡಿ, ನಮ್ಮ ತಂಡದ ಜತೆ ನಾನು ಒಬ್ಬ ಮಹಿಳಾ ಕೋಚ್ ಮತ್ತು ಒಬ್ಬ ಸಹಾಯಕಿಯನ್ನು ಕರೆದೊಯ್ಯುವೆ. ಟೂರ್ನಮೆಂಟ್ ಕೇವಲ ಹೆಣ್ಣುಮಕ್ಕಳಿಗಾಗಿಯೇ ಮೀಸಲಾಗಿರುವ ಕಾರಣ ಅವರ ಸುರಕ್ಷತೆಯ ಎಲ್ಲ ಜವಾಬ್ದಾರಿಯನ್ನೂ ಸಂಘಟಕರು ಹೊತ್ತಿದ್ದಾರೆ. ಇಲ್ಲಿಂದ ಒಂದು ಮಿನಿ ಬಸ್ಸಿನಲ್ಲಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವಾಪಸ್ ಬರುವುದು ನನ್ನ ಜವಾಬ್ದಾರಿ’ ಎಂದ.

ಹತ್ತು ವಿದ್ಯಾರ್ಥಿನಿಯರ ಮಾತಾಪಿತರು ತಮ್ಮ ಮಕ್ಕಳನ್ನು ಟೂರ್ನಮೆಂಟಿಗೆ ಕಳಿಸಲು ಒಪ್ಪಿದರು. ಅವರಲ್ಲಿ ಎಲ್ಲ ಮಕ್ಕಳೂ 9 ಮತ್ತು 10ನೆಯ ತರಗತಿಯ ವಿದ್ಯಾರ್ಥಿನಿಯರಾಗಿದ್ದರು. ಎಲ್ಲರಿಂದ ತಲಾ 2000 ರೂ.ಗಳನ್ನು ಪಡೆದ ರಾಮನಾಥ್ ಒಂದು ಶನಿವಾರದ ಬೆಳಗ್ಗೆ ಮಿನಿ ಬಸ್ಸಿನಲ್ಲಿ ವಿದ್ಯಾರ್ಥಿನಿಯರು ಮತ್ತಿಬ್ಬರು ಮಹಿಳಾ ಸಹಾಯಕಿಯರ ಜತೆ ಹೊರಟ. ತಮ್ಮ ಮಕ್ಕಳನ್ನು ಬಿಡಲು ಬಂದಿದ್ದ ಮಾತಾಪಿತರಿಗೆ ಮತ್ತೊಮ್ಮೆ ಎಲ್ಲರನ್ನೂ ಸುರಕ್ಷಿತವಾಗಿ ಮರಳಿ ಕರೆತರುವೆನೆಂದು ಆಶ್ವಾಸನೆಯನ್ನು ನೀಡಿದ. ಅವರಿದ್ದ ಬಸ್ ಮುಂಬೈ ಬಿಟ್ಟು ಸುಮಾರು 60 ಕಿ.ಮೀ ದೂರ ಕ್ರಮಿಸಿದ ನಂತರ ರಸ್ತೆ ಬದಿಯ ಹೋಟೆಲ್ ಒಂದರಲ್ಲಿ ವಿರಾಮಕ್ಕೆಂದು ನಿಂತಿತು. ವಿದ್ಯಾರ್ಥಿನಿಯರೊಂದಿಗೆ ಚಹಾ ಸೇವಿಸುತ್ತಿದ್ದಾಗ, ರಾಮನಾಥ್​ನ ಮೊಬೈಲ್​ಗೆ ಒಂದು ಕರೆ ಬಂದಿತು. ಆ ಕರೆ ಮುಗಿದ ಕೂಡಲೇ ತನ್ನೊಂದಿಗಿದ್ದ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ರಾಮನಾಥ್, ‘ಒಂದು ಸಮಸ್ಯೆಯಾಗಿದೆ. ನಾವು ಹೋಗಬೇಕಾಗಿರುವ ಊರಿನಲ್ಲಿ ಭಾರಿ ಮಳೆಯಾಗಿರುವ ಕಾರಣ ಸಂಘಟಕರು ಸ್ಪರ್ಧೆಯನ್ನೇ ರದ್ದುಪಡಿಸಿದ್ದಾರೆ’ ಎಂದ. ಎಲ್ಲ ವಿದ್ಯಾರ್ಥಿನಿಯರೂ ಏಕ ಸ್ವರದಲ್ಲಿ ನಿಟ್ಟುಸಿರನ್ನು ಬಿಟ್ಟು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ತಾವು ತಮ್ಮ ಮನೆಗಳಿಗೆ ತಕ್ಷಣವೇ ಮರಳಲು ಇಚ್ಛಿಸುವುದಿಲ್ಲ ಎಂದರು. ಆಗ ರಾಮನಾಥ್, ‘ನಾನೇನಾದರೂ ಬದಲಿ ವ್ಯವಸ್ಥೆಯಾಗುತ್ತದೆಯೊ ಹೇಗೆ ಎಂದು ವಿಚಾರಿಸುವೆ, ನನಗೆ ಹತ್ತು ನಿಮಿಷ ಟೈಂ ಕೊಡಿ’ ಎಂದು ದೂರ ಹೋಗಿ ಕೆಲವು ಟೆಲಿಫೋನ್ ಕರೆಗಳನ್ನು ಮಾಡಿದ. ಆನಂತರ ವಿದ್ಯಾರ್ಥಿನಿಯರ ಬಳಿ ಬಂದು, ‘ನೀವು ಒಪ್ಪಿದರೆ ನಾವು ಈ ಎರಡು ದಿನಗಳು ಪಿಕ್​ನಿಕ್ ರೀತಿ ಕಳೆಯಬಹುದು. ಇಲ್ಲೇ ಹತ್ತಿರದಲ್ಲಿಯೇ ಒಂದು ಅತ್ಯುತ್ತಮ ರೆಸಾರ್ಟ್ ಇದೆ. ಅಲ್ಲಿ ನಾವು ಎರಡು ರಾತ್ರಿಗಳಿದ್ದು ಎಂಜಾಯ್ ಮಾಡಬಹುದು. ನೀವು ಟೂರ್ನಮೆಂಟಿಗಾಗಿ ಕೊಟ್ಟಿರುವ ಹಣವನ್ನು ರೆಸಾರ್ಟ್​ಗೆ ನೀಡಬಹುದು. ಏನಂತೀರಿ?’ ಎಂದ. ಕೆಲವು ವಿದ್ಯಾರ್ಥಿನಿಯರು ಕೂಡಲೇ ಒಪ್ಪಿದರು, ಕೆಲವರು ಒಪ್ಪಲಿಲ್ಲ, ಕೆಲವರು ಗಾಬರಿಯಾದರು. ‘ನೀವೇನೂ ಹೆಚ್ಚು ಯೋಚಿಸಬೇಕಾಗಿಲ್ಲ. ನಿಮ್ಮ ತಂದೆ-ತಾಯಿಯರಿಗೆ ನಾವು ಟೂರ್ನಮೆಂಟಿಗೇ ಹೋಗಿದ್ದೆವು, ಆದರೆ ಎರಡನೆಯ ಸುತ್ತಿನಲ್ಲಿಯೇ ಸೋತೆವು ಎಂದು ಹೇಳುವೆ. ನೀವೂ ನಿಮ್ಮ ಮನೆಗಳಲ್ಲಿ ಹಾಗೆಯೇ ಹೇಳಿ’ ಎಂದ ರಾಮನಾಥ್.

ಕೆಲನಿಮಿಷಗಳು ತಮ್ಮತಮ್ಮಲ್ಲಿ ವಿಚಾರವಿನಿಮಯವನ್ನು ಮಾಡಿಕೊಂಡ ವಿದ್ಯಾರ್ಥಿನಿಯರು ರೆಸಾರ್ಟಿಗೆ ಹೋಗಲು ಒಪ್ಪಿದರು. ನಂತರ ರಾಮನಾಥ್ ಮಿನಿಬಸ್ಸನ್ನು ಸುಮಾರು 25 ಕಿ.ಮೀ ದೂರದಲ್ಲಿದ್ದ ಒಂದು ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಅಲ್ಲಿ ವಿದ್ಯಾರ್ಥಿನಿಯರಿಗೆ ಮತ್ತು ತನ್ನ ಜತೆಗೆ ಬಂದಿದ್ದವರಿಗೆಂದು ಐದು ಕೋಣೆಗಳನ್ನು ಕೊಡಿಸಿದ. ಬಸ್ ಚಾಲಕನ ಜತೆ ತಾನು ಇನ್ನೊಂದು ಕೋಣೆಯಲ್ಲಿ ವಾಸ್ತವ್ಯ ಹೂಡಿದ. ಆ ದಿನ ಅವರು ರೆಸಾರ್ಟಿನಲ್ಲಿ ಲಭ್ಯವಿದ್ದ ಎಲ್ಲ ಬಗೆಯ ಮನರಂಜನಾ ಚಟುವಟಿಕೆಗಳನ್ನೂ ಮಾಡಿದ್ದಲ್ಲದೆ ಅಲ್ಲಿಯೇ ಲಗೋರಿ ಆಟವನ್ನೂ ಆಡಿದರು. ಮಾರನೆಯ ಬೆಳಗ್ಗೆ ವಿದ್ಯಾರ್ಥಿನಿಯರಿಗೆ ‘ರೇನ್ ಡ್ಯಾನ್ಸ್ ಮಾಡೋಣ’ ಎಂದು ಹೇಳಿದ ರಾಮನಾಥ್, ಅವರೆಲ್ಲರನ್ನೂ ನೀರಿನಲ್ಲಿ ಹಾಡಿಗೆ ತಕ್ಕಂತೆ ನಾಟ್ಯಮಾಡುವ ಜಾಗಕ್ಕೆ ಕರೆದೊಯ್ದ. ನಿಕ್ಕರ್ ಹಾಕಿಕೊಂಡು ಅವರೊಡನೆ ತಾನೂ ಡ್ಯಾನ್ಸ್ ಮಾಡಿದ. ನೀರಿನಿಂದ ತೋಯಿಸಿಕೊಂಡ ವಿದ್ಯಾರ್ಥಿನಿಯರು ಹೊರಗೆ ಬಂದಾಗ ಅವರ ಬಟ್ಟೆಗಳೆಲ್ಲವೂ ಒದ್ದೆಯಾಗಿ ಅವರ ಅಂಗಾಂಗಗಳು ಕಾಣತೊಡಗಿದ್ದವು. ಆಗ ಅವರೆಲ್ಲರನ್ನೂ ಒಂದು ಸಾಲಿನಲ್ಲಿ ನಿಲ್ಲಿಸಿ ಒಬ್ಬೊಬ್ಬರ ಬಳಿಯೂ ಬಂದು ಕೆಟ್ಟ ದೃಷ್ಟಿಯಲ್ಲಿ ಅವರ ದೇಹಗಳನ್ನು ನೋಡಿ ಅವರ ಫೋಟೋಗಳನ್ನು ತೆಗೆದುಕೊಂಡ. ಕೆಲವು ಬಾಲಕಿಯರ ದೇಹಗಳನ್ನು ಅಸಹ್ಯಕರವಾಗಿ ಮುಟ್ಟಿ ವಿಕೃತ ಕಾಮವನ್ನು ಮೆರೆದ. ಅವನ ಈ ನಡೆಯಿಂದ ಎಲ್ಲ ವಿದ್ಯಾರ್ಥಿನಿಯರೂ ತೀವ್ರ ಮುಜುಗರಕ್ಕೆ ಒಳಗಾದರು. ಅದೇ ಸಂಜೆ ಎಲ್ಲರೂ ಮುಂಬೈಗೆ ಮರಳಿದರು. ಮಾತಾಪಿತರು ಬೈಯುವರೆಂಬ ಹೆದರಿಕೆಯಿಂದ ರೆಸಾರ್ಟ್​ಗೆ ಹೋದ ವಿಷಯವನ್ನು ಅವರು ಮುಚ್ಚಿಟ್ಟರು.

ಮಾರನೆಯ ದಿನ ಎಲ್ಲ ವಿದ್ಯಾರ್ಥಿನಿಯರೂ ಶಾಲೆಗೆ ಮರಳಿದಾಗ ವಿದ್ಯಾ ಎನ್ನುವ 10ನೆಯ ತರಗತಿಯ ಬಾಲಕಿ ಸುಮಾ ಎನ್ನುವ ತನ್ನ ಸಹಪಾಠಿಗೆ ನಡೆದ ಎಲ್ಲ ವಿಷಯವನ್ನೂ ಚಾಚೂತಪ್ಪದೆ ತಿಳಿಸಿದಳು. ತನ್ನ ಗೆಳತಿಯ ಮಾತುಗಳನ್ನು ಕೇಳಿ ಕ್ರೋಧಗೊಂಡ ಸುಮಾ ನಡೆದ ಘಟನೆಯನ್ನು ತಮ್ಮ ಮಾತಾಪಿತರಿಗೂ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಿಗೂ ತಿಳಿಸಲು ಸೂಚಿಸಿದಳು. ರೆಸಾರ್ಟಿಗೆ ಹೋದವರು ಯಾರೂ ಹೀಗೆ ಮಾಡಲು ಧೈರ್ಯ ತೆಗೆದುಕೊಳ್ಳದಿದ್ದಾಗ ಸುಮಾ ತಾನಾಗಿಯೇ ಮುಖ್ಯೋಪಾಧ್ಯಾಯರ ಬಳಿಗೆ ಹೋಗಿ ಮಾಹಿತಿಯನ್ನು ನೀಡಿದಳು.

ಮುಖ್ಯೋಪಾಧ್ಯಾಯರು ಈ ಬಗ್ಗೆ ವಿಚಾರಣೆಯನ್ನು ನಡೆಸಿದಾಗ ತಾನು ಟೂರ್ನಮೆಂಟ್ ರದ್ದಾಗಿರುವ ಬಗ್ಗೆ ಮುಂಬೈ ನಗರದ ಹೊರವಲಯದಲ್ಲಿಯೇ ವಿದ್ಯಾರ್ಥಿನಿಯರಿಗೆ ತಿಳಿಸಿದೆನೆಂದೂ ಅವರೇ ರೆಸಾರ್ಟ್​ಗೆ ಕರೆದೊಯ್ಯಲು ತನ್ನನ್ನು ಬಲವಂತ ಮಾಡಿದರೆಂದೂ ರಾಮನಾಥ್ ಹೇಳಿದನಲ್ಲದೆ ತಾನು ಯಾವ ವಿದ್ಯಾರ್ಥಿನಿಯ ಮೈಯನ್ನೂ ಮುಟ್ಟಲಿಲ್ಲ ಎಂದ. ಅವರು ಸುಮ್ಮನಾದರು.

ಅವರ ಈ ಕ್ರಮದಿಂದ ಸುಮ್ಮನಾಗದ ಸುಮಾ ಈ ಮಾಹಿತಿಯನ್ನು ವಿದ್ಯಾಳ ತಾಯಿಗೇ ನೀಡಿದಳು. ಆಗ ವಿದ್ಯಾ ತನ್ನ ಮಾತಾಪಿತರ ಮುಂದೆ ನಿಜವನ್ನು ಹೇಳಬೇಕಾಯಿತು. ಲಗೋರಿ ತಂಡದ ಇತರ ವಿದ್ಯಾರ್ಥಿನಿಯರ ಮಾತಾಪಿತರನ್ನು ವಿದ್ಯಾಳ ತಂದೆ ಸಂರ್ಪಸಿ ಅವರನ್ನು ಜತೆ ಮಾಡಿಕೊಂಡು ಶಾಲೆಯ ಪ್ರಾಂಶುಪಾಲರ ಬಳಿಗೆ ಬಂದರು. ‘ನಾನು ಈ ಬಗ್ಗೆ ವಿಚಾರಣೆಯನ್ನು ಮಾಡಿರುವೆ, ನಿಮ್ಮ ಮಕ್ಕಳ ಕೋರಿಕೆಯ ಮೇರೆಗೇ ಲಗೋರಿ ಕೋಚ್ ಅವರನ್ನು ರೆಸಾರ್ಟಿಗೆ ಕರೆದೊಯ್ದಿದ್ದಾರೆ, ಅವರು ಕಬಡ್ಡಿ ಹಾಗೂ ಕುಸ್ತಿ ಆಟಗಳ ತರಬೇತಿ ನೀಡುವಾಗ ಮಕ್ಕಳ ಮೈಮುಟ್ಟುವುದು ಸಹಜವಲ್ಲವೇ?’ ಎಂದು ರಾಮನಾಥ್​ನನ್ನು ಸಮರ್ಥಿಸಿಕೊಂಡರು.

ನಂತರ ವಿದ್ಯಾಳ ತಂದೆ ಅವಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ರಾಮ್ಾಥ್​ನ ವಿರುದ್ಧ ಪೋಕ್ಸೋ ಕಾಯ್ದೆಯನ್ವಯ ದೂರು ದಾಖಲಿಸಿದರು. ಪೊಲೀಸರ ತನಿಖೆಯಲ್ಲಿ ಕೋಚ್ ಹೇಳಿದ್ದ ಸ್ಥಳದಲ್ಲಿ ಯಾವುದೇ ಲಗೋರಿ ಪಂದ್ಯಾವಳಿ ನಡೆಯುತ್ತಿರಲಿಲ್ಲವೆಂದೂ, ಮುಂಬೈನಿಂದ ಹೊರಡುವ ಎರಡು ದಿನಗಳ ಮುನ್ನವೇ ರಾಮ್ಾಥ್ ರೆಸಾರ್ಟ್ ಬುಕ್ ಮಾಡಿದ್ದನೆಂದೂ ತಿಳಿಯಿತು. ರಾಮನಾಥ್​ನ ಫೋನಿನಲ್ಲಿ ವಿದ್ಯಾರ್ಥಿನಿಯರು ಒದ್ದೆಬಟ್ಟೆಯಲ್ಲಿರುವ ಹಲವಾರು ಚಿತ್ರಗಳು ಸಿಕ್ಕವು. ಅವನ್ನು ಆತ ತನ್ನ ಗೆಳೆಯರೊಂದಿಗೂ ಹಂಚಿಕೊಂಡಿದ್ದ. ತನಿಖೆಯ ನಂತರ ಅವನ ವಿರುದ್ಧ ಪೊಲೀಸರು ಪೊಕ್ಸೋ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿದರು. ನ್ಯಾಯಾಲಯದಲ್ಲಿ ಐದು ವಿದ್ಯಾರ್ಥಿನಿಯರು ತಮ್ಮ ಕೋಚ್ ಬೇಕೆಂತಲೇ ತಮ್ಮ ಎದೆ ಮತ್ತು ದೇಹದ ಇತರ ಭಾಗಗಳನ್ನು ಮುಟ್ಟುತ್ತಿದ್ದುದಲ್ಲದೆ ತಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನೆಂದು ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದರು. ನ್ಯಾಯಾಲಯ ರಾಮನಾಥ್​ನಿಗೆ ಐದು ವರ್ಷ ಜೈಲುಶಿಕ್ಷೆ ವಿಧಿಸಿತು.

‘ಪ್ರೌಢಾವಸ್ಥೆಯಲ್ಲಿ ವರದಿಯೇ ಆಗದ ಕರಾಳ ಹಂತವೆಂದರೆ ಲೈಂಗಿಕ ಕಿರುಕುಳವೇ’ ಎನ್ನುತ್ತಾಳೆ ಅಮೆರಿಕದ ಲೇಖಕಿ ರೇಷಲ್ ಸಿಮನ್ಸ್. ಒಂದು ವೇಳೆ ಬಾಲಕಿ ಸುಮಾಳೂ ಎಲ್ಲರಂತೆ ಸುಮ್ಮನಿದ್ದಿದ್ದರೆ ಈ ಪ್ರಕರಣವೇ ಬೆಳಕಿಗೆ ಬರದೆ ರಾಮನಾಥ್ ಇನ್ನಷ್ಟು ಹೇಯ ಕೃತ್ಯಗಳನ್ನು ನಡೆಸುತ್ತಿದ್ದ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net