

ಕೈವಾರದ ಬಣಜಿಗರ ಕೊಂಡಪ್ಪ- ಮುದ್ದಮ್ಮ ದಂಪತಿಗೆ ಬಹುಕಾಲ ಮಕ್ಕಳಿರಲಿಲ್ಲ. ಅಮರ ನಾರಾಯಣಸ್ವಾಮಿ ಆರಾಧನೆ ನಂತರ 1726ರಲ್ಲಿ ಜನಿಸಿದ ಮಗನಿಗೆ ನಾರಾಯಣಪ್ಪ ಎಂದು ಹೆಸರಿಟ್ಟರು. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ನಾರಾಯಣಪ್ಪ, ಸಂಕಷ್ಟದಲ್ಲೇ ಬೆಳೆದು ದೊಡ್ಡವನಾದ. ಬಳೆಮಲಾರ ಹೊತ್ತು ಊರೂರು ತಿರುಗುತ್ತಿದ್ದ. ಪತ್ನಿ ಮುನಿಯಮ್ಮಗೆ ಹಣದ ವ್ಯಾಮೋಹ ಇದ್ದರೂ ನಾರಾಯಣಪ್ಪ ನಿಮೋಹಿ. ಜನರು ದುಡ್ಡು ಕೊಡಲಿ, ಕೊಡದಿರಲಿ ಬಳೆ ತೊಡಿಸುತ್ತಿದ್ದ. ಒಮ್ಮೆ ಬಳೆ ವ್ಯಾಪಾರ ಮುಗಿಸಿ ಮನೆಗೆ ಬರುತ್ತಿದ್ದಾಗ, ಜೋರು ಮಳೆ ಬಂತು. ಆಶ್ರಯ ಪಡೆಯಲು ಸಮೀಪದ ಗುಹೆಯೊಳಗೆ ಹೋದ. ಇದೇ ಆತನ ಬದುಕಿನಲ್ಲಿ ಮಹತ್ವದ ಪರಿವರ್ತನೆಗೆ ಕಾರಣವಾಯಿತು. ಗುಹೆಯಲ್ಲಿ ನೆಲೆಸಿದ್ದ ಪರದೇಶಿ ಸ್ವಾಮಿ ಈತನ ಗುರುವಾದರು. ಬೆಣಚು ಕಲ್ಲೊಂದನ್ನು ಕೊಟ್ಟು, ‘ಇದನ್ನು ಬಾಯಲ್ಲಿಟ್ಟುಕೊಂಡು ಅಷ್ಟಾಕ್ಷರಿ ಮಂತ್ರವನ್ನು ಜಪಿಸು, ಅದು ಕರಗಿ ಕಲ್ಲುಸಕ್ಕರೆಯಾದರೆ ಜ್ಞಾನ ಸಿದ್ಧಿಯಾದಂತೆ’ ಎಂದು ಹೇಳಿದರು. ದೈವ ಸಾಕ್ಷಾತ್ಕಾರಕ್ಕಾಗಿ ನಾರಾಯಣಪ್ಪ ಅನೇಕ ವರ್ಷ ಕೈವಾರದ ಆ ನರಸಿಂಹ ಗುಹೆಯಲ್ಲಿ ತಪಸ್ಸು ಮಾಡಿದರು. ಬಾಯಲ್ಲಿ ಕಲ್ಲಿಟ್ಟುಕೊಂಡಿದ್ದರಿಂದ ಓಂ ನಮೋ ನಾರಾಯಣಾಯ ಎನ್ನುವುದರ ಬದಲು ಓಂ ನಮೋ ನಾರೇಯಣಾಯ ಎಂಬುದಾಗಿ ಉಚ್ಛರಿಸುತ್ತಿದ್ದರು. ಒಂದು ದಿನ ಬಾಯಲ್ಲಿದ್ದ ಕಲ್ಲು ಕರಗಿ, ಕಲ್ಲುಸಕ್ಕರೆಯಾಯಿತು. ಇದರೊಂದಿಗೆ ನಾರಾಯಣಪ್ಪ, ಯತಿಯಾಗಿ ಬದಲಾದರು. ಸಂಕೀರ್ತನೆ, ತತ್ವಗಳೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಒಬ್ಬ ಗುರುವಾಗಿ ಗಮನ ಸೆಳೆದರು. ದೇವರ ಆರಾಧನೆಯ ಮಾಡುತ್ತಲೇ ಜಾತಿ ಪದ್ಧತಿ ಹೋಗಲಾಡಿಸಲು ಯತ್ನಿಸಿದರು. ‘ಮಾನವರೆಲ್ಲರೂ ಮೂತ್ರ ದ್ವಾರದ ಮೂಲಕವೇ ಬಂದವರು. ಉತ್ತಮ ಕುಲದವ ಎನ್ನುವವರು ಯಾರೂ ಇಲ್ಲ. ಉತ್ತಮ ಕುಲವೆಂದು ಹೇಳುವ ಮಾತು ಯುಕ್ತವಲ್ಲಣ್ಣ’ ಎಂದು ಬೋಧಿಸಿದರು. ಕಾಲಜ್ಞಾನ ಹೇಳತೊಡಗಿದರು. ಅವರ ಭವಿಷ್ಯಗಳು ನಿಜವಾಗತೊಡಗಿದವು. ಜನರು ಅವರನ್ನು ತಾತಯ್ಯ ಎಂದು ಕರೆಯತೊಡಗಿದರು. ಅವರ ಪವಾಡಗಳ ಬಗ್ಗೆಯೂ ಸಾಕಷ್ಟು ಚರ್ಚೆ ಆಗಿವೆ. 110 ವರ್ಷ ಬದುಕಿದ್ದ ತಾತಯ್ಯ 1836ರಲ್ಲಿ ತಪೋಭೂಮಿ ಕೈವಾರದಲ್ಲಿ ಜೀವ ಸಮಾಧಿಯಾದರು. ಆಗಿನಿಂದಲೂ ಇದು ಭಕ್ತರ ಪಾಲಿನ ಶ್ರದ್ಧಾತಾಣವಾಗಿದೆ.
ಭವಿಷ್ಯವಾಣಿ ಕಾಲಜ್ಞಾನದ ಸೃಷ್ಟಿ: 1814ರಲ್ಲಿ ಶ್ರಾವಣ ಮಾಸದ ಶುದ್ಧ ಪಂಚಮಿಯಂದು ಮಧ್ಯರಾತ್ರಿ ತಾತಯ್ಯ ಯೋಗ ನಿದ್ರೆಯಲ್ಲಿ ಕಾಲಜ್ಞಾನ ರಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಅವರು ತೆಗೆದುಕೊಂಡ ಅವಧಿ 3 ಗಂಟೆ. ಪರಮಾತ್ಮನು ಬಂದು ಕೈಗೆ ತಾಳೆಗರಿಗಳ ಸಂಚಿಕೆಯನ್ನು ಮತ್ತು ಅದರಲ್ಲಿ ಬರೆಯವ ಉಕ್ಕಿನ ಗಂಟವನ್ನು ಕೊಟ್ಟು ಕಾಲಜ್ಞಾನವನ್ನು ಬರೆಸಿದ್ದಾನೆ ಎಂದು ಪ್ರತೀತಿಯಿದೆ.
ತಾತಯ್ಯ ಕೃತಿಸರಣಿ: ತಾತಯ್ಯ ಯೋಗ ಸಾಧಕರು, ತಪಸ್ವಿ, ಸಮಾಜ ಸುಧಾರಕ. ತೆಲುಗು, ಕನ್ನಡದಲ್ಲಿ ಬರೆದಿದ್ದಾರೆ. ಅಮರನಾರೇಯಣ ವೇದಾಂತ ಸಾರಾವಳಿ ಕೀರ್ತನೆಗಳು, ನಾದಬ್ರಹ್ಮಾನಂದ ನಾರೇಯಣ ಕವಿ ಶತಕ, ಶ್ರೀಕೃಷ್ಣಚರಿತ ತತ್ವಾಮೃತ ಯೋಗಸಾರ, ಅಮರನಾರೇಯಣ ಶತಕ, ಆತ್ಮಬೋಧಾಮೃತ ವಚನಗಳು, ತಾರಕಬ್ರಹ್ಮಾನಂದ ದ್ವಯಕಂದ ಶತಕ, ಬ್ರಹ್ಮಾಂಡಪುರಿ ಶತಕ ಮತ್ತು ಕಾಲಜ್ಞಾನ ಅವರ ಪ್ರಮುಖ ಕೃತಿಗಳು.
ಇಂದು ಏನೇನು ಕಾರ್ಯಕ್ರಮ?: ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಪೂಜಾ ಕೈಂಕರ್ಯ ನೆರವೇರಲಿವೆ. ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರ ಮೆರವಣಿಗೆ, ಸಾಧುಗಳಿಗೆ ಕಾಷಾಯ ವಸ್ತ್ರ ವಿತರಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.