ಕೈವಾರವೇ ಕಾರ್ಯಕ್ಷೇತ್ರ ಧರ್ಮರಕ್ಷಣೆಯೇ ಮಂತ್ರ

kaivara
Published on
  • ಡಾ: ಎಸ್ ಆರ್ ಲೀಲಾ

ಕೋಲಾರ ಜಿಲ್ಲೆಯಲ್ಲಿರುವ ಕೈವಾರ ಸಕಲ ಜಾತಿ-ಧರ್ಮಗಳ ಅನುಯಾಯಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಸುಕ್ಷೇತ್ರ. ಅಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು ದಶಕಗಳಿಂದ ಹಿಂದು ಧಾರ್ವಿುಕ ಚಿಂತನೆಯ ಸುಗಂಧ ಸೂಸುತ್ತಿದೆ. ಅದಕ್ಕೆ ಮೂಲ ಕಾರಣರು ಗೋಕುಲ ಸಮೂಹ ಸಂಸ್ಥೆಗಳ ಅಧ್ಯಕ್ಷ, ಮಾಜಿ ಶಾಸಕ ಡಾ. ಎಂ.ಆರ್. ಜಯರಾಂ. ನಮ್ಮ ಧರ್ಮದ ಮೇಲೆ ಇತರ ಧರ್ಮಗಳ ಹೂಟ-ಹುನ್ನಾರಗಳು ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಅವರು ಹಿಂದುಧರ್ಮ ರಕ್ಷಣೆಯ ಪಣ ತೊಟ್ಟು ನಿಂತಿದ್ದಾರೆ.

ದೇವಾಲಯಗಳು ಸಮುದಾಯದ, ಸಾಂಸ್ಕೃತಿಕ, ಕಲಾತ್ಮಕ ಅಭಿವ್ಯಕ್ತಿಗಳಾಗಿ ಧರ್ವಚರಣೆಯ ಸೊಗಸಿನ ಸ್ವರೂಪಗಳಾಗಿವೆ. ಅಂಥ ಶ್ರದ್ಧಾಕೇಂದ್ರಗಳಲ್ಲಿ ಕೋಲಾರ ಜಿಲ್ಲೆಯ ಕೈವಾರವೂ ಒಂದು. ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಬದುಕನ್ನೂ, ಆದೇಶವನ್ನೂ ಅಲ್ಲಿನ ಜನ ಪರಿಪಾಲಿಸುತ್ತಿದ್ದಾರೆ.

ಆ ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳಿಂದ ಎಡಬಿಡದೆ ಧರ್ಮರಕ್ಷಣೆಯ ಕಾಯಕ ಮಾಡುತ್ತಿರುವವರು ಡಾ. ಎಂ.ಆರ್. ಜಯರಾಂ. ಇಪ್ಪತ್ತೇಳು ಶಿಕ್ಷಣ, ವೈದ್ಯಕೀಯ ಇನ್ನಿತರ ಸಂಸ್ಥೆಗಳ ಮಹಾಸಂಕುಲದ ಅಧ್ಯಕ್ಷರು. ಗೋಕುಲ ಸಮೂಹಸಂಸ್ಥೆಗಳ ಮುಖ್ಯಸ್ಥರು. ಅವರ ಕಾರ್ಯಾಲಯಕ್ಕೆ ಹೋದರೆ ಮೊದಲು ನಮ್ಮನ್ನು ಬರಮಾಡಿಕೊಳ್ಳುವವರು ಯಾರೆಂದುಕೊಂಡಿದ್ದೀರಿ? ಸೀತಾರಾಮಲಕ್ಷ್ಮಣರ ಭವ್ಯಮೂರ್ತಿಗಳು. ಪಕ್ಕದಲ್ಲೆ ರಾಧಾಕೃಷ್ಣರ ರಮ್ಯ ಪ್ರತಿಮೆಗಳು. ಒಳಗೆ ಕಾಲಿಟ್ಟರೆ, ಆಳೆತ್ತರದ ವೀಣಾಪಾಣಿಯಾದ ಸರಸ್ವತಿದೇವಿಯ ವಿಗ್ರಹ.

ಅವರು ಸಾವಿರಾರು ಜನರೊಡನೆ ಸಂಪರ್ಕ, ವ್ಯವಹಾರ ಇಟ್ಟುಕೊಂಡಿದ್ದರೂ ಧಾರ್ವಿುಕ ಕಾರ್ಯಗಳಲ್ಲಿ, ಗ್ರಾಮೋದ್ಧಾರದ ಕೆಲಸದಲ್ಲಿ ಎಡೆಬಿಡದೆ ನಿರತರಾಗಿದ್ದಾರೆ. ಪ್ರತಿ ಭಾನುವಾರವೂ ಕೈವಾರದ ಸುತ್ತಮುತ್ತಲ ಹಳ್ಳಿಗಳಲ್ಲಿ ಸಂಕೀರ್ತನೆ ಮಾಡಿ, ಮಾಡಿಸಿ ಹಳ್ಳಿಯ ಚಿತ್ರವನ್ನೇ ಬದಲಾಯಿಸಿದ್ದಾರೆ. 3 ಸಾವಿರಕ್ಕಿಂತ ಹೆಚ್ಚಿನ ಗ್ರಾಮಗಳನ್ನು ಸಂರ್ಪಸಿದ್ದಾರೆ. ಅವರಿಗೆ ಅಧಿಕಾರ, ಅಂತಸ್ತು, ಐಶ್ವರ್ಯ, ಪ್ರಭಾವ ಎಲ್ಲವೂ ಅಂದರೆ ಸಾಮಾನ್ಯರು ಅಪೇಕ್ಷಿಸುವ ಐಹಿಕಭಾಗ್ಯಗಳೆಲ್ಲ ಕಾಲಬುಡದಲ್ಲೆ ಬಿದ್ದಿವೆ.

ಇದೆಲ್ಲ ಇರುವವರು ಸಾಮಾನ್ಯವಾಗಿ ಇವುಗಳನ್ನು ಆಟಾಟೋಪದ ಬದುಕಿಗಾಗಿ ಬಳಸುತ್ತಾರೆ. ಆದರೆ ಅವರಿಗೆ ಇದಾವುದರ ಪರಿವೆಯಿಲ್ಲ. ಅವರು ಸೌಮ್ಯ, ಸಹಜ ಹಾಗೂ ಸರಳವಾದ ಅಧ್ಯಾತ್ಮಜೀವನ ನಡೆಸುತ್ತಿದ್ದಾರೆ. ತಮಗಿರುವ ಉನ್ನತ ಹುದ್ದೆ, ವೈಭವ, ಅಧಿಕಾರ ಎಲ್ಲವನ್ನೂ ಹಿಂದೂಧರ್ಮದ ಸೇವೆಗಾಗಿ, ಹಳ್ಳಿಗಳ, ಹಳ್ಳಿಗರ ಆಧ್ಯಾತ್ಮಿಕ ಪುನರುತ್ಥಾನಕ್ಕಾಗಿ ಸದ್ದಿಲ್ಲದೆ ತೊಡಗಿಸಿಕೊಂಡು ಅಹರ್ನಿಶಿ ದುಡಿಯುತ್ತಿದ್ದಾರೆ. ಒಂದರ್ಥದಲ್ಲಿ ಧರ್ವಧಿಕಾರಿಯೇ ಆಗಿದ್ದಾರೆ.

ಮೊದಲೇ ಇಂಥ ಹಳ್ಳಿಗೆ ಬರಬೇಕೆಂದು ಧರ್ವಧಿಕಾರಿಗೆ ಕೋರಿಕೆ ಸಲ್ಲಿಸಲಾಗಿರುತ್ತದೆ. ನಿಶ್ಚಿತ ದಿನದಂದು ಸಂಜೆ ಆ ಹಳ್ಳಿಗೆ ಪ್ರವೇಶ ಮಾಡುತ್ತಾರೆ. ಅಂದು ಇಡೀ ಹಳ್ಳಿಗೆ ಹಬ್ಬ, ಸಡಗರ-ಸಂಭ್ರಮ. ನಾನು ಇತ್ತೀಚೆಗೆ ಕೈವಾರದಿಂದ 35-40 ಕಿ.ಮೀ. ದೂರದಲ್ಲಿರುವ ಗಡದಾಸನಪಲ್ಲಿಗೆ ಹೋಗಿದ್ದಾಗ ಅಲ್ಲಿಯೂ ಇದೇ ಸಂಭ್ರಮ ಕಂಡುಬಂತು. ದೇವಾಲಯ ಗಳೆಲ್ಲವನ್ನೂ ತೊಳೆದು, ರಂಗೋಲೆ ಹಾಕಿ, ತೋರಣ ಕಟ್ಟಿ, ಪುಷ್ಪಾಲಂಕಾರ ಮಾಡಿದ್ದರು. ಇಡೀ ಗ್ರಾಮದ ಮನೆಮನೆಯೂ ಶುದ್ಧಗೊಂಡಿದ್ದವು. ಬೀದಿಗಳು ಕಸಮುಕ್ತವಾಗಿದ್ದವು. ಜನರೆಲ್ಲ ಶುದ್ಧರಾಗಿ ಮಡಿಬಟ್ಟೆತೊಟ್ಟು ಹಣೆಗೆ ವಿಭೂತಿ, ಕುಂಕುಮ, ಶ್ರೀನಾಮಗಳನ್ನು ಇಟ್ಟು, ಧಾರ್ವಿುಕ ಚಿಂತನೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಗಿದ್ದರು. ಹಿಂದೂಧರ್ವಚರಣೆಯ ಒಂದು ಸುಂದರ ಸನ್ನಿವೇಶ ಅಲ್ಲಿ ಅನಾವರಣಗೊಂಡಿತ್ತು. ಅಲಂಕೃತ ಕಳಸಗಳನ್ನು ಹೊತ್ತ ಪುಟ್ಟ ಹುಡುಗಿಯರನ್ನು ಮುಂದಿಟ್ಟುಕೊಂಡು ಊರ ಹಿರಿಯರು ಧರ್ವಧಿಕಾರಿಗಳನ್ನು ಸ್ವಾಗತಿಸಿದರು. ವೇದಮಂತ್ರಘೊಷವೂ ಮೊಳಗಿತು. ಪ್ರತಿ ದೇವಾಲಯದಲ್ಲೂ ಅರ್ಚನೆ, ಮಂಗಳಾರತಿ. 300-500 ಜನ ಕೂರಬಹುದಾದ ದೊಡ್ಡ ಬಯಲಿನಲ್ಲಿ ವೇದಿಕೆ ನಿರ್ವಿುಸಿ, ಚಪ್ಪರ ಹಾಕಿದ್ದರು. ವೇದಿಕೆಯಲ್ಲಿ ದೇವರ ಪಟಗಳ ಜತೆಗೆ ಯೋಗಿ ತಾತಯ್ಯನವರ ಚಿತ್ರವನ್ನೂ ಇಟ್ಟು ಅಲಂಕರಿಸಿ ಪೂಜೆ ಮಾಡಿದ್ದರು. ಪ್ರಾರ್ಥನೆ, ಸ್ವಾಗತ, ಪರಿಚಯ ಇತ್ಯಾದಿ ಔಪಚಾರಿಕಾಂಶಗಳೆಲ್ಲ ಮುಗಿದು, ಧರ್ವಧಿಕಾರಿಗಳು ಹೇಳುವ ಧರ್ಮಚಿಂತನೆಯನ್ನು ಜನರು ಗಮನವಿಟ್ಟು ಕೇಳಿದರು. ತಾತಯ್ಯನವರು ತೋರಿದ ಸರಳ-ಸುಲಭವಾದ, ಮಂತ್ರಗಳನ್ನು ಹೇಳುವಂತೆ, ನಿತ್ಯವೂ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಧರ್ವಧಿಕಾರಿಗಳು ಪ್ರೇರಣೆ ನೀಡಿದರು. ‘‘ಧರ್ವಚರಣೆ ಕೇವಲ ಪರೋಪದೇಶ ಪಾಂಡಿತ್ಯದ ವಸ್ತುವಲ್ಲ. ಚಾರಿಟಿ ಬಿಗಿನ್ಸ್ ಅಟ್ ಹೋಮ್ ಅಂತಾರಲ್ಲ ಹಾಗೆ ನಾವು ಮಾಡಿ ತೋರಿದರೆ ನಮ್ಮ ನುಡಿಗೂ ಬೆಲೆ ಇರುತ್ತದೆ’’ ಎನ್ನುತ್ತಾರೆ ಜಯರಾಂ.

ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಭಾರತೀಯರನ್ನು ಹತ್ತಿಕ್ಕಲು, ಮತಾಂತರಿಸಿ ಅವರ ಧರ್ಮ ಕೆಡಿಸಲು, ವೈಯಕ್ತಿಕ ನಿಷ್ಠೆ ಬದಲಾಯಿಸಲು ಸಕಲ ವಿಧವಾದ ದುಷ್ಟಶಕ್ತಿಗಳು ಕಾರ್ಯನಿರತವಾಗಿವೆ. ಅತ್ಯಂತ ಕ್ರೂರವಾದ ರೀತಿಯಲ್ಲಿ ಮುಸಲ್ಮಾನರು ಕ್ರೈಸ್ತರು ಹಿಂದುಗಳನ್ನು ಕುಲಗೆಡಿಸಿ ತಮ್ಮ ಮತದ ಬುಟ್ಟಿಗೆ ಹಾಕಿಕೊಳ್ಳಲು ಅಂದಿನಿಂದ ಇಂದಿನವರೆಗೆ ಪ್ರಯತ್ನಿಸುತ್ತಲೇ ಇದ್ದಾರೆ. ಮತಾಂತರದ ಹಾವಳಿ ಬಹುವ್ಯಾಪಕವಾಗಿ ಇಡಿ ಭಾರತದಲ್ಲಿ ಹರಡಿದೆ. ದೇಶದ ಧಾರ್ವಿುಕ, ಜನಾಂಗೀಯ ರೂಪಸ್ವರೂಪಗಳನ್ನೇ ಬದಲಾಯಿಸುವ ಮಟ್ಟಕ್ಕೆ ಹೋಗುತ್ತಿದೆ. ಇದನ್ನು ತಡೆಯುವ ಹಿಂದುಶಕ್ತಿಗಳು ಪರಿಣಾಮಕಾರಿಯಾಗಿಲ್ಲವೇನೋ ಎಂಬ ಸಂದೇಹವೂ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ಡಾ. ಜಯರಾಂ ಅವರ ಕೆಲಸವನ್ನು ಗಮನಿಸಬೇಕಾಗಿದೆ. ಅವರ ಧರ್ಮಚಿಂತನೆ, ಸಂಕೀರ್ತನ ಇತ್ಯಾದಿ ಕಾರ್ಯಕ್ರಮಗಳಿಂದ ಮತಾಂತರಿಸುವ ತಂತ್ರಗಳ ಪ್ರವೇಶಕ್ಕೆ ತಡೆಗೋಡೆ ಹಾಕಿದಂತಾಗಿದೆ. ಧಮೋ ರಕ್ಷತಿ ರಕ್ಷಿತ: ಎಂಬ ಪ್ರಾಚೀನವಾಣಿ ಅರ್ಥವತ್ತಾಗಿದೆ. ನಾವು ನಮ್ಮ ಧರ್ಮವನ್ನು ರಕ್ಷಿಸಿಕೊಂಡರೆ ಮಾತ್ರ ಅದು ನಮಗೆ ಉಳಿಯುತ್ತದೆ, ನಮ್ಮನ್ನು ಕಾಪಾಡುತ್ತದೆ. ಜನಗಳಲ್ಲಿ ಈ ದೃಷ್ಟಿಯಿಂದ ಜಾಗೃತಿ ಮೂಡಿಸುವ ಪ್ರಯತ್ನ ಧರ್ವಧಿಕಾರಿಗಳಿಂದ ನಡೆಯುತ್ತದೆ.

(ಲೇಖಕರು ವಿಧಾನಪರಿಷತ್ ಮಾಜಿ ಸದಸ್ಯರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net