

ಕೇರಳದಲ್ಲಿ ಸುದೀರ್ಘ ಕಾಲ ಕಮ್ಯುನಿಸ್ಟ್ ಹಿಂಸಾಚಾರದ ವಿರುದ್ಧ ಹೋರಾಟ ನಡೆಸಿದ ದಿ ಗ್ರೇಟ್ ಸದಾನಂದ ಮಾಸ್ಟರ್ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸಂಗತಿ ಕುರಿತು ಹಿಂದಿನ ವಾರದ ಅಂಕಣದಲ್ಲಿ ಬರೆಯುವಾಗ ಕೇರಳದಲ್ಲಿ ಅಂದಿನಿಂದ ಇಂದಿನವರೆಗೂ ಕಮ್ಯುನಿಸ್ಟರ ಮಾನಸಿಕತೆ ಒಂದಿಷ್ಟೂ ಬದಲಾಗಿಲ್ಲ ಮತ್ತು ಬದಲಾಗುವುದೂ ಇಲ್ಲ ಎಂಬುದನ್ನು ವಿವರಿಸಿದ್ದೆ.
ಕಮ್ಯುನಿಷ್ಟರ ಜೊತೆಗೆ ಡೋಂಗಿ ಸೆಕ್ಯುಲರ್ ಮಾನಸಿಕತೆ ಮತ್ತು ಜೆಹಾದಿ ಶಕ್ತಿಗಳ ಮಿಲಾಪಿ ಉಂಟು ಮಾಡುತ್ತಿರುವ ಅನಾಹುತವನ್ನು ಕ್ಲುಪ್ತವಾಗಿ ಉಲ್ಲೇಖ ಮಾಡಿದ್ದೆ. ಆದಕ್ಕೆ ಪೂರಕವಾಗಿ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧಿ್ವ ಪ್ರಜ್ಞಾ ಸಿಂಗ್ ನಿರಪರಾಧಿ ಎಂಬ ಮಹತ್ವದ ತೀರ್ಮಾನ ಹೊರಬಿದ್ದಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇನ್ನೂ ಕೆಲ ಆಯಾಮಗಳನ್ನು ಅವಲೋಕನ ಮಾಡೋಣ.
ಭಾರತದ ಅಂತಃಸತ್ವ ಎನಿಸಿಕೊಂಡಿರುವ ನಂಬಿಕೆ, ಶ್ರದ್ಧೆ, ಸಂಸ್ಕೃತಿಯ ಭಾಗವಾಗಿರುವ ಆಚರಣೆಗಳನ್ನು ಹೊಸಕಿ ಹಾಕಿದ ಹೊರತು ಭಾರತದ ಅಸ್ತಿತ್ವವನ್ನು ಈಗಲ್ಲ, ಮುಂದೆ ನೂರು ಶತಮಾನ ಕಳೆದರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬುದು ನೂರಿನ್ನೂರು ವರ್ಷಗಳ ಹಿಂದೆಯೇ ಮೆಕಾಲೆ ಮತ್ತು ಆತನ ಪರಿವಾರದ ವಾರಸುದಾರರಾದ ಬ್ರಿಟಿಷರು ಚೆನ್ನಾಗಿ ಅರಿತುಕೊಂಡಿದ್ದರು. ಅದಕ್ಕೂ ತುಸು ಹಿಂದೆ ಹೋಗಿ ನೋಡಿದರೆ ಮೊಘಲರು ಇತ್ಯಾದಿ ಮತಾಂಧ ಮುಸ್ಲಿಂ ಆಕ್ರಮಣಕಾರರಿಗೂ ಇದು ಗೊತ್ತಿತ್ತು. ಅದಕ್ಕೆ ಅನುಗುಣವಾಗಿ ಅವರು ಕಾರ್ಯಾಚರಣೆಯನ್ನು ನಡೆಸಿದರು.
ಘಜನಿ, ಘೊರಿ ಇತ್ಯಾದಿಗಳು ಆ ಕಾರ್ಯತಂತ್ರದ ಭಾಗವಾಗಿದ್ದರು ಅಷ್ಟೆ. ಭಾರತೀಯರ ರಕ್ತದಲ್ಲೇ ಇರುವ ಮತ್ತು ಭಾರತದ ಗೆಲುವಿನ ಮೂಲಾಧಾರವಾಗಿರುವ ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯನ್ನು ಅಳಿಸಿ ಹಾಕುವುದಕ್ಕೋಸ್ಕರವೇ ಮೊಘಲರು ಮತ್ತು ಇತರ ದಾಳಿಕೋರರು ಪುರಾತನ ಭಾರತೀಯ ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿ ನಂಬಿಕೆಯನ್ನು, ಆ ಮೂಲಕ ದೇಶವನ್ನು ನಾಶ ಮಾಡುವ ದುಸ್ಸಾಹಸ ಮಾಡಿದರು.
ವಿಚಿತ್ರ ಎಂದರೆ ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾದ ಬಳಿಕ ಮೊಘಲರು, ಬ್ರಿಟಿಷರ ದುಷ್ಟ ಪರಂಪರೆಯನ್ನು ಎಡಪಂಥೀಯ ಇತಿಹಾಸಕಾರರು, ಶಿಕ್ಷಣ ತಜ್ಞರು ಮುಂದುವರೆಸಿದರು. ಅದರ ಪರಿಣಾಮವನ್ನು ಈಗಲೂ ನಾವು ದೇಶದ ಉದ್ದಗಲಕ್ಕೆ ನಾವು ಕಾಣುತ್ತಿದ್ದೇವೆ. ಸೆಕ್ಯುಲರ್ ಹುನ್ನಾರ: ಸೆಕ್ಯುಲರ್ ಎಂಬ ಇಂಗ್ಲಿಷ್ ಪದವನ್ನು ಕನ್ನಡದಲ್ಲಿ ಜಾತ್ಯತೀತ ಎಂದು ಬಳಸಲಾಗುತ್ತದೆ. ವಾಸ್ತವದಲ್ಲಿ ಭಾರತದ ಸಂದರ್ಭದಲ್ಲಿ ಈ ಉಪದೇಶದ ಅವಶ್ಯಕತೆಯೇ ಇಲ್ಲ. ಸಾವಿರ ವರ್ಷಗಳ ಇತಿಹಾಸ ನೋಡಿದರೂ ಇಲ್ಲಿರುವ ಸಹಸ್ರಾರು ಜಾತಿಗಳು ಸಂಘರ್ಷ ನಡೆಸಿದ, ಪರಸ್ಪರ ಅತಿಕ್ರಮಣ ಮಾಡಿದ ಉದಾಹರಣೆ ಸಿಗುವುದಿಲ್ಲ. ಸಿಕ್ಕರೂ ಅದು ಅಪವ್ಯಾಖ್ಯಾನ, ಸುಳ್ಳು ಇತಿಹಾಸ, ಹಾದಿತಪ್ಪಿದ ಶಿಕ್ಷಣ ವ್ಯವಸ್ಥೆಯ ಪರಿಣಾಮ ಮಾತ್ರ. ವಾಸ್ತವ ಬೇರೆಯೇ ಇದೆ.
ವಿಪರ್ಯಾಸ ಎಂದರೆ ಯಾರು ಜಾತಿ ಅಥವಾ ಜಾತಿಗಳ ಹೆಸರಲ್ಲಿ ಅಸ್ತಿತ್ವವನ್ನು ಕಂಡುಕೊಂಡಿದ್ದಾರೋ ಅವರೇ ಹೆಚ್ಚು ಜಾತ್ಯತೀತತೆಯ ಉಪದೇಶ ಮಾಡುವುದು. ಮುಸ್ಲಿಂ ಲೀಗ್ ಎಂದಾದರೂ ಜಾತ್ಯತೀತ ಆಗಬಲ್ಲದೇ? ಕಾಂಗ್ರೆಸ್ ಇಂದು ತನ್ನ ಅಸ್ತಿತ್ವ ಇಟ್ಟುಕೊಂಡಿರುವುದು ಜಾತಿಗಳ ಹೆಸರಿನಲ್ಲಿ. ಬಹುತೇಕ ಎಲ್ಲ ಸೆಕ್ಯುಲರ್ ರಾಜಕೀಯ ಪಕ್ಷಗಳದ್ದು ಇದೇ ಕತೆ. ವಿಪರ್ಯಾಸ ಎಂದರೆ ಜಾತ್ಯತೀತರ ಪ್ರಕಾರ ಎಲ್ಲರನೊಳಗೊಳ್ಳುವ ಹಿಂದು, ಸನಾತನ ಎಂಬುದು ಕೋಮುವಾದ, ಸದಾ ಜಾತಿ ಜಾತಿ ಎನ್ನುವವರು ಸೆಕ್ಯುಲರ್. ಗೊತ್ತಿರಲಿ ಇದು ತಿಳಿವಳಿಕೆಯ ಕೊರತೆಯ ಪರಿಣಾಮವಲ್ಲ. ಇದು ನಿರ್ದಿಷ್ಟ ದುಷ್ಟ ಹುನ್ನಾರದ ಫಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿವಾದಕ್ಕೆ ಕಾರಣವಾದ ಸಂವಿಧಾನದ ಪೀಠಿಕೆಯಲ್ಲಿ ತುರುಕಿದ ಜಾತ್ಯತೀತ ಮತ್ತು ಸಮಾಜವಾದದ ವಿಚಾರಕ್ಕೆ ಬರೋಣ. ಇದು ಅಂಬೇಡ್ಕರ್ ಆಲೋಚನೆ ಅಲ್ಲ, ಬದಲಾಗಿ ಇಂದಿರಾ ಯೋಚನೆ. 1976ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಸೇರಿಸಿದ್ದು. ಹಾಗಾದರೆ ಅದಕ್ಕೂ ಮೊದಲು ಈ ದೇಶದಲ್ಲಿ ಜಾತ್ಯತೀತತೆ ಪ್ರಜ್ಞೆ ಇರಲಿಲ್ಲವಾ? ಆನಂತರ ನಿಜಾರ್ಥದಲ್ಲಿ ಜಾತ್ಯತೀತತೆ ಪ್ರಜ್ಞೆ ಈ ದೇಶದಲ್ಲಿ ಹೆಚ್ಚಾಯಿತೆ? ಯಾವುದೂ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಪದವನ್ನು ಸೇರಿಸಲು ಅಂದು ಇಂದಿರಾಗೆ ಇದ್ದ ಕಾರಣ ಆರ್ಎಸ್ಎಸ್ ಮತ್ತು ಭಾರತದಲ್ಲಿ ಗಟ್ಟಿಗೊಳ್ಳತೊಡಗಿದ್ದ ಹಿಂದುತ್ವದ ನೆಲೆ!
ತುರ್ತು ಪರಿಸ್ಥಿತಿ ಹೇರಿಕೆ ಮತ್ತು ಇಂದಿರಾ ಸರ್ವಾಧಿಕಾರಿ ಧೋರಣೆ ವಿರುದ್ಧ ಆರ್ಎಸ್ಎಸ್ನ ನೂರಾರು ಪ್ರಮುಖರು ಮತ್ತು ಲಕ್ಷಾಂತರ ಕಾರ್ಯಕರ್ತರು ಭೂಗತವಾಗಿ ರಣಾಂಗಣಕ್ಕೆ ಇಳಿದಿದ್ದರು. ಅದರಿಂದಾಗಿಯೇ ಇಂದಿರಾ ಗಾಂಧಿ ತುರ್ತಪರಿಸ್ಥಿತಿ ಮೊಟಕುಗೊಳಿಸಿ ಚುನಾವಣೆಗೆ ಹೋಗಲು ಮುಂದಾದದ್ದು, ಚುನಾವಣೆಯಲ್ಲಿ ಹೀನಾಯವಾಗಿ ಸೋತದ್ದು ಎಲ್ಲ. ನೆಹರುರಿಂದ ಹಿಡಿದು ಇಂದಿರಾ ಗಾಂಧಿವರೆಗೆ ಕಾಂಗ್ರೆಸ್ ಆರ್ಎಸ್ಎಸ್ ಸಂಘಟನೆಯನ್ನು ಮೂರು ಬಾರಿ ಬ್ಯಾನ್ ಮಾಡಿತು. ಅದು ಕಾಂಗ್ರೆಸ್ ಪಕ್ಷದ ಹಿಂದುತ್ವ ವಿರೋಧಿ ನಿಲುವಿನ ಫಲ ಎಂಬುದನ್ನು ಬೇರೆ ಹೇಳಬೇಕಿಲ್ಲ. ಅಷ್ಟೇ ಏಕೆ, ಈಗ ಪ್ರಿಯಾಂಕ್ ಖರ್ಗೆ ಅಂಥವರು ಆರ್ಎಸ್ಎಸ್ ಬ್ಯಾನ್ ಮಾಡಬೇಕೆಂದು ಬಡಬಡಾಯಿಸುತ್ತಿರುವುದಕ್ಕೂ ಅದೇ ಕಾರಣ.
ಹಿಂದೂ ಭಯೋತ್ಪಾದನೆ: ಇದು ನೆಹರು ಮನೆತನದ ನಾಲ್ಕನೇ ತಲೆಮಾರಿನ ರಾಹುಲ್ ಗಾಂಧಿ ವ್ಯಾಖ್ಯಾನ. 2004ರಿಂದ 2014ರವರೆಗೆ ಯುಪಿಎ ಸರಕಾರದ ಅವಧಿಯಲ್ಲಿ ಈ ಮಾತನ್ನು ಸಾಕ್ಷೀಕರಿಸಲು ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮಾಡಿದ ಕಸರತ್ತು, ಹುನ್ನಾರ ಒಂದೆರಡಲ್ಲ. ಈ ಷಡ್ಯಂತ್ರಕ್ಕೆ ಪೂರಕವಾಗಿ ಸಿಕ್ಕಿದ್ದು ಮಾಲೇಗಾಂವ್ ಸ್ಫೋಟ ಪ್ರಕರಣ. 2008ರ ಸೆಪ್ಟೆಂಬರ್ 28ರಂದು ಮಹಾರಾಷ್ಟ್ರದ ಮಾಲೇಗಾಂವ್ನಲ್ಲಿ ನಡೆದ ಸ್ಫೋಟ ಪ್ರಕರಣ. ಈ ಸ್ಪೋಟದಲ್ಲಿ 6 ಮಂದಿ ಸಾವನ್ನಪ್ಪಿ 101 ಮಂದಿ ಗಾಯಗೊಂಡಿದ್ದರು. ದೇಶದ್ರೋಹಿ ಸೆಕ್ಯುಲರ್ ಮಾನಸಿಕತೆ, ಅದರಿಂದ ದೇಶದ ಅಡಿಪಾಯಕ್ಕೆ ಎದುರಾಗಿರುವ ಅಪಾಯದ ವಿರುದ್ಧ ಉಗ್ರ ಕೆಂಡ ಉಗುಳುತ್ತಿದ್ದ ಸಾಧಿ್ವ ಪ್ರಜ್ಞಾ ಸಿಂಗ್ ಮತ್ತು ಕರ್ನಲ್ ಪ್ರಸಾದ್ ಪುರೋಹಿತ್ ಅವರನ್ನು ಮಾಲೇಗಾಂವ್ ಪ್ರಕರಣದಲ್ಲಿ ಸಿಲುಕಿಸಲು ಮಾಡಿದ ಹುನ್ನಾರ, ಕೊಟ್ಟ ಚಿತ್ರಹಿಂಸೆ ಒಂದೆರಡಲ್ಲ. ಈ ಪ್ರಕರಣದಲ್ಲಿ ಅನ್ಯಾಯವಾಗಿ ಸಿಲುಕಿದ ಪ್ರಜ್ಞಾ ಸಿಂಗ್ ಅಕ್ಷರಶಃ ಜರ್ಜರಿತರಾಗಿಹೋದರು. ಈ ಪ್ರಕರಣವನ್ನೇ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಮತ್ತು ಯುಪಿಎ ಸರಕಾರ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಥಿಯರಿ ಹೆಣೆಯಲು ಹವಣಿಸಿತು. 17 ವರ್ಷಗಳ ಬಳಿಕ ಕೇಸರಿ ಭಯೋತ್ಪಾದನೆ ಥಿಯರಿ ಒಂದು ಕಾನ್ಸ್ಪಿರಸಿ ಎಂಬುದನ್ನು ಮುಂಬೈನ ವಿಶೇಷ ನ್ಯಾಯಾಲಯದ ತೀರ್ಪು ಸಾಕ್ಷೀಕರಿಸಿತು.
ಹಿಂದೂ ಭಯೋತ್ಪಾದನೆ ಥಿಯರಿ ಷಡ್ಯಂತ್ರದ ಮಂದುವರೆದ ಭಾಗವಾಗಿ ಬೆಳಕಿಗೆ ಬಂದ ಮತ್ತೊಂದು ಆಘಾತಕಾರಿ ವಿಚಾರ ಎಂದರೆ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರ್ಎಸ್ಎಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರನ್ನು ಆರೆಸ್ಟ್ ಮಾಡುವ ತಂತ್ರ ಹೆಣೆಯಲಾಗಿತ್ತು ಎಂದು ಮಾಜಿ ಎಟಿಎಸ್ ಅಧಿಕಾರಿ ಮಹಿಬೂಬ್ ಮುಜಾವರ್ ಈಗ ಮಾಹಿತಿ ಬಹಿರಂಗ ಮಾಡಿರುವುದು.
ಪರಂವೀರ ಸಿಂಗ್ ಎನ್ನುವ ಅಧಿಕಾರಿ ಹಾಗೂ ಮೇಲಿನ ಅಧಿಕಾರಿಗಳು ಹಾಗೂ ಕಾಣದ ಕೈಗಳು ಇದರ ಹಿಂದೆ ಇದ್ದವು ಎನ್ನುವುದರ ಜೊತೆಗೆ ಸರ್ವಿಸ್ ಸೀಕ್ರೆಟ್ ಫಂಡ್ನಿಂದ ಹಣವನ್ನೂ ಒದಗಿಸಲಾಗಿತ್ತು, ಶಸ್ತ್ರಾಸ್ತ್ರ ಸರಬರಾಜು ಮಾಡಲಾಗಿತ್ತು. ಯಾವುದೇ ಪುರಾವೆ ಇಲ್ಲದೆ ಮೋಹನ್ ಭಾಗವತ್ ಅವರನ್ನು ಆರೆಸ್ಟ್ ಮಾಡಲು ಒತ್ತಡ ಹೇರಲಾಗಿತ್ತು ಎಂಬ ಆತಂಕಕಾರಿ ಮಾಹಿತಿಯನ್ನು ಮುಜಾವರ್ ಹೊರಹಾಕಿದ್ದಾರೆ. ಅಷ್ಟೇ ಏಕೆ, ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ತಾನು ವಿಚಾರಣಾಧೀನ ಕೈದಿ ಆಗಿದ್ದಾಗ ಇದಕ್ಕೆ ಪ್ರೇರಣೆ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಈಗಿನ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಹೆಸರು ಹೇಳುವಂತೆ ಎಟಿಎಸ್ ಅಧಿಕಾರಿಗಳು ತೀವ್ರ ಒತ್ತಡ ಹೇರಿದ್ದರು, ಸುಳ್ಳು ಹೇಳಲು ಒಪ್ಪದೇ ಹೋದಾಗ ಚಿತ್ರಹಿಂಸೆ ನೀಡಿದರೆಂಬುದನ್ನು ಸ್ವತಃ ಸಾಧಿ್ವ ಪ್ರಜ್ಞಾ ಸಿಂಗ್ ಬಹಿರಂಗಪಡಿಸಿದ್ದಾರೆ.
ಮೇಲಧಿಕಾರಿಗಳ ಸಂಚಿಗೆ ಪೂರಕ ಕೃತ್ಯವನ್ನು ವಿರೋಧಿಸಿದ ಕಾರಣಕ್ಕೆ ಎಟಿಎಸ್ ಅಧಿಕಾರಿ ಮಹಿಬೂಬ್ ಮುಜಾವರ್ ಮೇಲೆ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಹಾಕಲಾಗಿತ್ತು ಎನ್ನುವ ಸಂಗತಿ ಈಗ ಬಹಿರಂಗ ಸತ್ಯ. ಮಾಲೇಗಾಂವ್ ಪ್ರಕರಣದ ಅಂತಿಮ ತೀರ್ಪು ಬರುವುದಕ್ಕೂ, ಪೆಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನಡೆದ ಅಪರೇಷನ್ ಸಿಂಧೂರ ಕಾರ್ಯಾಚರಣೆ ಮೇಲೆ ಗೃಹ ಸಚಿವ ಅಮಿತಾ ಷಾ ಸಂಸತ್ತಿನಲ್ಲಿ ಭಾಷಣ ಮಾಡಿದ್ದೂ ಏಕಕಾಲಕ್ಕೆ ಆಯಿತು. ಆಗ ಅವರಾಡಿದ ಮಾತು ‘ಹಿಂದು ಎಂದೂ ಭಯೋತ್ಪಾದಕ ಆಗಲಾರ’ ಎಂಬುದು. ಇದು ಇನ್ನು ಮುಂದಿನ ಸಹಸ್ರ ಸಹಸ್ರ ವರ್ಷಕ್ಕೂ ಒಪ್ಪುವ ಮಾತು. ಹಿಂದು ಎಂದಾದರೂ ಭಯೋತ್ಪಾದಕ ಆಗಬಲ್ಲನೇ? ಜಗತ್ತಿನಾದ್ಯಂತ ಕಂಡುಬರುವ ಭಯೋತ್ಪಾದಕರು ಯಾರು? ಯಾಕಾಗಿ ಈ ಭಯೋತ್ಪಾದನೆ? ಕಮ್ಯುನಿಸ್ಟ್ ಚಿಂತನೆ, ಸೆಕ್ಯುಲರ್ ಬೋಧನೆ, ಹಿಂದೂ ಭಯೋತ್ಪಾದನೆ ಇವೆಲ್ಲ ಒಂದಕ್ಕೊಂದು ಹೆಣೆದುಕೊಂಡ ಸರಪಳಿ. ಒಂದರ್ಥದಲ್ಲಿ ಇದು ಬೌದ್ಧಿಕ ಭಯೋತ್ಪಾದನೆ. ಸನಾತನದ ವಿರೋಧಿ ಧೋರಣೆಯೂ ಇದರ ಭಾಗವೇ.
ದೇಶ-ಧರ್ಮದ ಪರವಾಗಿ ನಿಲ್ಲುವವರ ಪಾಲಿಗೆ ಅಗ್ನಿಪರೀಕ್ಷೆ ತಾನೇ? ಆಗಲಿ ನೋಡೋಣ.
(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)