

ಕಥೆಯೊಂದು ಓದುಗರ ಗಮನ ಸೆಳೆಯುವದು ತಂತ್ರಗಾರಿಕೆ, ಬಳಸುವ ಪ್ರತಿಮೆ ಮತ್ತು ಭಾಷೆಯನ್ನು ಪರಿಣಾಮಮಕಾರಿಯಾಗಿ ಧ್ವನಿಸುವಿಕೆಯಿಂದ. ಕತೆಗಾರ ಕತೆಯೊಂದನ್ನು ಕತೆಗಾಗಿಯೇ ಬರೆಯುವುದು ಒಂದು ವಿಧ; ಕತೆ ತನ್ನ ಪರಿಸರದ ಅನೇಕ ಅನುಭವಗಳನ್ನು ಅನುಭವಿಸಿ ಕತೆಗಾರನ ಹೃದಯದಿಂದ ಹೊರಬರುವುದು ಇನ್ನೊಂದು ವಿಧ. ಹೀಗೆ ಎರಡುಜಾಡಿನ ಕತೆಗಳನ್ನು ಇಂದಿನ ಕತೆಗಾರರಲ್ಲಿ ನೋಡಬಹುದು.
ಉತ್ತರ ಕನ್ನಡದ ಕತೆಗಾರರು ಎಲ್ಲಿಯೇ ಹೋದರೂ ಅವರ ಬೇರಿರುವುದು ತಾನು ಬೆಳೆದ ಹಳ್ಳಿಯ ಪರಿಸರದಲ್ಲಿಯೇ. ಅಲ್ಲಿನ ಮುಗ್ಧತೆ, ಆತಿಥ್ಯ, ಪ್ರಕೃತಿ ಸೌಂದರ್ಯ ಅವರನ್ನು ಬಿಡದೇ ಆವರಿಸಿಕೊಳ್ಳುತ್ತದೆ. ಉದ್ಯೋಗದ ಸ್ಥಳದಲ್ಲಿ ಇಂಥ ವಾತಾವರಣಕ್ಕಾಗಿ ಕತೆಗಾರ ಹುಡುಕುತ್ತಿರುತ್ತಾನೆ. ‘ನೈದಿಲೆಯ ಒಡಲು’ ಕೂಡ ಇದಕ್ಕೆ ಹೊರತಲ್ಲ. ಉರುಬು, ಅನೀರ್ಷೆ ಮತ್ತು ಜಾರು ದಾರಿಯ ಏರಿನಲ್ಲಿ ಶೀರ್ಷಿಕೆಯ ಇಲ್ಲಿನ ಕತೆಗಳಲ್ಲಿ ಇದನ್ನು ಗಮನಿಸಬಹುದು. ಉದ್ಯೋಗಕ್ಕಾಗಿ ನಗರ ಸೇರುವ ಕಥಾನಾಯಕನ ಮನೆಯಲ್ಲಿ ವಲಸೆಗಳ ವಿಪ್ಲವ ನಡೆಯುತ್ತದೆ.
ಇನ್ನೊಂದು ಕತೆ ಭೂಸುಧಾರಣೆಯ ಕಾಲದಿಂದ ಪ್ರಾರಂಭವಾಗಿ ಇಂದಿನ ಕಾಪೋರೇಟ್ ಪ್ರಪಂಚದ ಕಬಂಧಬಾಹುವಿನತನಕ ಬೆಳೆಯುತ್ತದೆ. ಪಾಲಿಗೆ ಕೊಟ್ಟ ಗದ್ದೆಯನ್ನು ಒಕ್ಕಲು ಹನುಮಂತ ತನ್ನಂತೆ ಮಾಡಿಕೊಂಡರೆ ಎನ್ನುವ ಹೆದರಿಕೆ; ಬದುಕು ಎನ್ನುವುದು ಕಾಲಾಂತರದಿಂದ ಬಂದ ನಂಬಿಕೆ ಎನ್ನುವ ಮಂಕಾಳಮ್ಮ; ಈ ಇಬ್ಬರನ್ನು ನೋಡಿ ಬೆಳೆದ ಹನುಮಂತನ ಮಗ ಕುಟ್ಣಗೂಸ; ಚೆನ್ನಾಗಿ ಓದಿ ಜಿ.ಕೆ. (ಗೌಡಾ ಕೃಷ್ಣ) ಆಗಿ ಕಾಪೋರೇಟ್ ಪ್ರಪಂಚದಲ್ಲಿ ದೊಡ್ಡ ಸಂಬಳದ ನೌಕರಿ ಹಿಡಿಯುವ ಕೃಷ್ಣ... ಪಾತ್ರಗಳೇ ಆಸಕ್ತಿ ಕೆರಳಿಸುತ್ತವೆ.
ಅರಿಂಧಮ್ ಮುಖರ್ಜಿ, ಷಣ್ಮುಗಂನಂತಹ ಸಿಇಒಗಳ ನಡುವೆ ಸಿಲುಕಿದ ಜಿ.ಕೆ.ಗೆ ತನ್ನ ಸಾಮರ್ಥ್ಯದಿಂದ ತಾನು ಕೆಲಸದಲ್ಲಿ ಯಶಸ್ಸು ಸಾಧಿಸಿದ್ದಲ್ಲ, ತಾವೆಲ್ಲಾ ಚದುರಂಗದ ದಾಳಗಳು ಮಾತ್ರ ಎಂದು ಅರಿವಾದಾಗ ಅವನಿಗೆ ನೆನಪು ಬರುವುದು ತನ್ನ ಹಳ್ಳಿಯ ಮಂಕಾಳಮ್ಮ, ಅಪ್ಪ ಹನುಮಂತ, ಮುಗ್ಧ ಅವ್ವ. ಆತ ಆ ಪ್ರಪಂಚಕ್ಕೆ ಹೋಗಲು ಇಚ್ಛಿಸುತ್ತಾನೆ. ಕಾಪೋರೇಟ್ ಪ್ರಪಂಚದ ಕುರಿತು ಬಂದ ಮಹತ್ವದ ಕತೆ ಇದು.
ಅನೀರ್ಷೆ ಕತೆಯಲ್ಲಿ ಗಂಡನನ್ನು ಬಿಟ್ಟು ಮುಂಬೈಗೆ ಓಡಿಹೋದ ಕಮಲಳಿಗಿರುವುದೂ ಪೇಟೆಯ ಆಕರ್ಷಣೆಯೇ. ಗಮನಿಸಲೇಬೇಕಾದ ಮತ್ತೊಂದು ಕತೆ ಅಂತೇವಾಸಿ. ಮರಣದ ನಂತರ ಏನು ಎನ್ನುವ ಕಥಾವಸ್ತುವನ್ನು ಉಪಯೋಗಿಸಿ ಚಿತ್ತಾಲರು, ವಿವೇಕ ಶಾನುಭಾಗ ಇವರೆಲ್ಲ ಬರೆದಿದ್ದಾರೆ. ಈ ಕತೆಯಲ್ಲಿಯೂ ಅಂಥದೇ ಕಥಾವಸ್ತುವಿದೆ.
ಕತೆಯ ಶೀರ್ಷಿಕೆಯನ್ನು ಹೊತ್ತ ‘ನೈದಿಲೆಯ ಒಡಲು’ ಪಟ್ಟಣದ ಬದುಕಿನಲ್ಲಿ ಪ್ರೀತಿಸಿ ಮದುವೆಯಾದವರ ಮಧ್ಯೆ ಹೇಗೆ ಸಣ್ಣವಸ್ತುವಿನ ಮೂಲಕ ಅವರ ಮನಸ್ಸನ್ನು ಕೆಡಿಸಬಹುದೆನ್ನುವದನ್ನು ಸಾರಿ ಹೇಳುವ ಕತೆ. ಇಡೀ ಸಂಕಲನದಲ್ಲಿ ಕತೆಗಾರ ಎಲ್ಲಿಯೂ ತನ್ನ ನಿರ್ಧಾರವನ್ನು ಪಾತ್ರಗಳ ಮೇಲೆ ಹೇರದೇ ಇರುವುದು ಇಷ್ಟವಾಗುತ್ತದೆ. ಸರಳವಾದ ಭಾಷೆ ಮತ್ತು ಹೊನ್ನಾವರದ ಸುತ್ತಮುತ್ತಲಿನ ಪರಿಸರವನ್ನು ತೋರಿಸುವ ಮಹತ್ವದ ಕಥಾಸಂಕಲನ ಇದು.
| ಎಂ.ಎಸ್. ಹೆಗಡೆ ಗುಣವಂತೆ