

ಈ ಕಾದಂಬರಿಯ ಕಾಲ ಸ್ವಾತಂತ್ರ್ಯ ಪೂರ್ವದ ಗ್ರಾಮಭಾರತ. ಆದರೆ ಸ್ವಾತಂತ್ರ್ಯ ಹೋರಾಟದ್ದೇ ಕಥೆಯಲ್ಲ. ಗೆದ್ದವರ ಚರಿತ್ರೆಯೂ ಅಲ್ಲ. ಆ ಕಾಲದ ಚರಿತ್ರೆಯಲ್ಲಿ ದಾಖಲಾಗದವರ ಅಂತರಂಗವನ್ನು ಕೆದಕುತ್ತ ಸಾಗುವ ಕಥೆ. ಒಂದರ್ಥದಲ್ಲಿ ಸೋತವರ ಕಥೆ. ಕಥೆಯಲ್ಲೊಬ್ಬ ಸ್ವಾತಂತ್ರ್ಯ ಹೋರಾಟಗಾರ ಸಂಸಾರ ಬಿಟ್ಟು ಬದುಕನ್ನು ದೇಶಕ್ಕಾಗಿ ಮೀಸಲಿಡುತ್ತಾನೆ. ಅವನ ಹೋರಾಟ ಇಲ್ಲಿ ವೈಭವೀಕರಣಗೊಂಡಿಲ್ಲ. ಆದರೆ ಆತನ ಪತ್ನಿ ಜಮೀನು ನೋಡಿಕೊಂಡು, ಮನೆಯನ್ನು ಜೋಪಾನವಾಗಿಡಲು ನಡೆಸುವ ಹೋರಾಟ ದಾಖಲಾಗಿದೆ. ಹೀಗಾಗಿ ಇದು ಸೋಲನ್ನು ಗೆದ್ದವರ ಕಥೆಯೂ ಹೌದು. ಹೋರಾಟದ ಸಂಗತಿ ಗೊತ್ತಿದ್ದರೂ ಅದು ತಮಗೆ ಅಲ್ಲ ಎಂಬಂತೆ ಬದುಕಿದವರ ಕಥೆಯೂ ಹೌದು. ಇಲ್ಲಿ ಬರುವ ಪಾತ್ರಗಳಲ್ಲಿ ಬಹುತೇಕರಿಗೆ ಸ್ವಾತಂತ್ರ್ಯ ಹೋರಾಟದ ಗಂಧವಿಲ್ಲ. ಆದರೆ ದೇಶಕ್ಕಾಗಿ ಮನೆ ತೊರೆದು ಹೋದವನ ಕುರಿತು ಅರಿವಿದೆ. ಆತನ ಕುಟುಂಬದ ತಲ್ಲಣಗಳು, ಆತನ ಸುತ್ತಲಿನ ಗೊಂದಲಗಳು, ಆತನ ಪತ್ನಿಯ ದುಗುಡಗಳು, ಜೀವನಪ್ರೀತಿ ಎಲ್ಲವನ್ನೂ ಒಳಗೊಳ್ಳುತ್ತ ಕಥೆ ಬೆಳೆಯುತ್ತದೆ. ಅವರವರು ಕಂಡಂತೆ ಗತಕಾಲದ ವಿದ್ಯಮಾನವನ್ನು ವರ್ತಮಾನದಲ್ಲಿ ದಾಖಲಿಸುತ್ತ ಹೋಗುವ ವಿಶಿಷ್ಟ ತಂತ್ರದಿಂದ ಕಾದಂಬರಿ ಗಮನ ಸೆಳೆಯುತ್ತದೆ. ಮಾತ್ರವಲ್ಲ, ಅದರಿಂದಾಗಿಯೇ ಕಥೆಗೊಂದು ಸೆಮಿ ಪತ್ತೆದಾರಿ ಸ್ವರೂಪವೂ ಪ್ರಾಪ್ತವಾಗಿಬಿಡುತ್ತದೆ. ಕಾದಂಬರಿಯ ಕೇಂದ್ರಸ್ಥಾನ ಉತ್ತರ ಕನ್ನಡ ಜಿಲ್ಲೆ. ಅದರಲ್ಲೂ ಕಾಡಿನ ನಡುವಿನ ಹಳ್ಳಿ ಈ ಕಥಾ ಲೋಕದ ಭೌತ ಪ್ರಪಂಚ. ಸಂಭಾಷಣೆಗಳಲ್ಲಿ ಅವರು ಬಳಸುವ ಭಾಷೆಯೂ ಅಲ್ಲಿಯದೇ. ಲೇಖಕರ ಬಾಲ್ಯದ ಜಗತ್ತು ಕೂಡ ಅದೇ ಆಗಿದ್ದರಿಂದಲೋ ಏನೋ ಅದೇ ಪರಿಸರದ ಕಿಂಡಿಯಿಂದ ಜಗತ್ತನ್ನು ನೋಡಲು ಲೇಖಕರು ಪ್ರಯತ್ನಿಸಿದ್ದಾರೆ. ಎಂದೇ ಈ ಕಾದಂಬರಿಯು ಕಾಲದೇಶಾತೀತವಾದ ಸತ್ಯದ ಹುಡುಕಾಟ ನಡೆಸುತ್ತದೆ. ದೇಶದ ಎಲ್ಲ ಊರುಗಳಲ್ಲೂ ಇರಬಹುದಾದ ಕಾಮ, ದ್ವೇಷ, ಸಣ್ಣತನ, ತ್ಯಾಗ ಇಲ್ಲೂ ಇವೆ. ಕಥೆಯಲ್ಲಿ ಬರುವ ಸುಬ್ರಾಯಪ್ಪ, ಅಂತೆ, ತಂಗು, ಪುಟ್ಟಣ್ಣ, ಶಂಕ್ರ ಕೂಡ ಎಲ್ಲ ಊರುಗಳಲ್ಲಿ ಇದ್ದಿರಬಹುದಾದವವರೇ. ಲೇಖಕರು ಕಟ್ಟಿಕೊಡುವ ಅನೇಕ ರಸಕ್ಷಣಗಳು ಕೂಡ ಬೇರೆ ಬೇರೆ ಊರುಗಳಲ್ಲೂ ಸಿಗಬಹುದಾದವೇ ಆಗಿ ಓದುಗರ ಅನುಭವಕ್ಕೆ ನಿಲುಕುವುದರಿಂದ ಲೇಖಕರು ಆಪ್ತವಾಗುತ್ತಾರೆ. ಒಂದು ಪ್ರಾದೇಶಿಕ ಕಥನ ಎಂದು ಮೇಲ್ನೋಟಕ್ಕೆ ಅನಿಸಬಹುದಾದರೂ ‘ಮೃಗಶಿರ’ ಅಂಥ ಪ್ರದೇಶಗಳನ್ನು ಹಾಗೂ ಇಂಥದೇ ಕಥನಗಳನ್ನು ಒಡಲಲ್ಲಿ ಇಟ್ಟುಕೊಂಡ ಗ್ರಾಮ ಭಾರತದ ಕಥನವೇ ಆಗಿದೆ. ಎಲ್ಲವನ್ನೂ ಒಂದು ಬೆರಗಿನಿಂದ ನೋಡುತ್ತ, ನಾವು ನೋಡಿದ ಪರಿಸರವೇ ಆಗಿರಬಹುದಾದರೂ ಅದನ್ನು ಹೊಸ ರೀತಿಯಲ್ಲಿ ಅರ್ಥ ಮಾಡಿಸುತ್ತ ಸಾಗುವ ಕಾದಂಬರಿಕಾರರು ಪ್ರಮುಖ ಪಾತ್ರಗಳನ್ನು ಅವುಗಳ ಸ್ವಗತದಂತೆ ನಿರ್ವಹಿಸಿದ ರೀತಿಯಲ್ಲಿಯೂ ಓದುಗರನ್ನು ಗೆಲ್ಲುತ್ತಾರೆ. ಸಿದ್ಧಾಂತ ಭೂಯಿಷ್ಠ ಚಿಂತನೆಗಳೇ ಹೆಚ್ಚು ಕಾಣುತ್ತಿರುವ ವರ್ತಮಾನದಲ್ಲಿ ಅದಾವುದರ ನೆರಳನ್ನೂ ಸೋಕಿಸಿಕೊಳ್ಳದ ಹಾಗೆ ಬರೆದಿರುವ ಬಳಗಾರರು ಅಭಿನಂದನಾರ್ಹರು.
ಪುಸ್ತಕಕ್ಕೆ ಹಿರಿಯ ಸಾಹಿತಿ ಓ. ಎಲ್. ನಾಗಭೂಷಣ ಸ್ವಾಮಿ ಅವರ ಮುನ್ನುಡಿ ಇದೆ. ಅವರ ಮಾತುಗಳಲ್ಲೇ ಹೇಳುವುದಾದರೆ, ‘ಯಾರು ಕೇವಲ ಕಥೆಯ ಕುತೂಹಲಕ್ಕಾಗಿ ಮಾತ್ರವೇ ಕಾದಂಬರಿಯನ್ನು ಓದುವುದಿಲ್ಲವೋ ಅಂಥ ಓದುಗರಿಗೆ ಮೃಗಶಿರದಲ್ಲಿ ಸಮೃದ್ಧ ಆಹಾರವಿದೆ. ಇಪ್ಪತ್ತನೆಯ ಶತಮಾನದ ಎರಡು-ಮೂರನೆಯ ದಶಕಗಳ ಬದುಕು ಉತ್ತರ ಕನ್ನಡ ಜಿಲ್ಲೆಯ ಕಾಡಿನ ಮಧ್ಯದ ಊರುಗಳಲ್ಲಿ ಹೇಗಿತ್ತು ಅನ್ನುವ ಜೀವಂತ ಲೋಕವನ್ನು ಬಳಗಾರರು ಭಾಷೆಯಲ್ಲಿ ಸೃಷ್ಟಿಸಿದ್ದಾರಲ್ಲ, ಆ ಲೋಕದಲ್ಲಿ ಮಗ್ನವಾಗಿ ಸಂಚರಿಸಬಹುದು. ಯಾರಿಗೆ ಒಂದೇ ಥರದ ಕನ್ನಡ ಓದಿ, ಕೇಳಿ ಬೇಸರವಾಗಿದೆಯೋ ಅವರು ಇಲ್ಲಿ ಇದು ಇಂಥ ಊರಿನ ಇಂಥ ಜನ ಆಡುವ ಕನ್ನಡ ಎಂದು ಓದುತ್ತಲೇ ಮನಸ್ಸಿನಲ್ಲಿ ಕೇಳಿಸಿಕೊಂಡು ನುಡಿಕುತೂಹಲ ತಣಿಸಿಕೊಳ್ಳಬಹುದು.’
ಭಾಷೆಯನ್ನು ಬಳಸಿ ನಾವು ತಲುಪುವ ತೀರ್ವನಗಳು, ಮಾಡಿಕೊಳ್ಳುವ ನಿರ್ಧಾರಗಳು ಎಲ್ಲವೂ ಅರ್ಧ ಸುಳ್ಳೋ, ಅರ್ಧ ಸತ್ಯವೋ, ಕಲ್ಪನೆಯೋ, ಸದಾಶಯಗಳೋ, ಸೇಡು-ಕೇಡಿನ ಬಯಕೆಗಳೋ ಆಗಿರುವುದನ್ನು ತಪ್ಪಿಸಲಾಗದೇನೋ; ಆದರೆ, ಮನುಷ್ಯರ ಇಂದ್ರಿಯಗಳು ಗ್ರಹಿಸುವ ಅನುಭವಗಳು ಮಾತ್ರ ವಾಸ್ತವ ಸತ್ಯ ಎಂದು ಲೇಖಕರಾಗಿ ಬಳಗಾರರು ನಂಬಿದ್ದಾರೆ ಅನಿಸುತ್ತದೆ. ಹಾಗಾಗಿ ಇಂದ್ರಿಯಗಳ ಮೂಲಕ ಪಡೆಯುವ ಗ್ರಹಿಕೆಗಳಿಗೆ ನುಡಿಯರೂಪವನ್ನು ಕೊಡುವುದೇ ಅವರ ಬರವಣಿಗೆಯ ಮುಖ್ಯ ಭಾಗವಾಗಿ ಕಾಣುತ್ತದೆ. ಪುಸ್ತಕಕ್ಕೆ ಮತ್ತೋರ್ವ ಹಿರಿಯ ಸಾಹಿತಿ ಜಿ. ರಾಜಶೇಖರ ಅವರ ಬೆನ್ನುಡಿಯಿದೆ. ಅವರು, ಈ ಕಾದಂಬರಿಯ ಬಗ್ಗೆ ಹೇಳುತ್ತ, ಇದು ಚರಿತ್ರೆಯಲ್ಲ. ಹೇಳಿ ಕೇಳಿ ಸೋತವರ ಕಥೆ; ಅದರಲ್ಲಿರುವುದು ಪ್ರಶ್ನೆಗಳು ಮಾತ್ರ. ‘ಮೃಗಶಿರ’ ಒಂದು ನಕ್ಷತ್ರದ ಹೆಸರು. ಕಾದಂಬರಿಯಲ್ಲಿ ಅದು ಕಾಲುಗಳು ಕೆಸರಲ್ಲಿ ಹೂತಿದ್ದರೂ ಮನಸ್ಸು ಮಾತ್ರ ಆಕಾಶದಲ್ಲಿ ವಿಹರಿಸುವ, ಇಬ್ಬಂದಿತನಕ್ಕೆ ಸಂಕೇತವಾಗುತ್ತದೆ ಎಂದಿದ್ದಾರೆ. ಒಟ್ಟಾರೆ ಮೃಗಶಿರ ಒಂದು ಗಂಭೀರ ಓದಿನ ಸರಕು ಎಂದರೆ ತಪ್ಪಲ್ಲ.
ಮೃಗಶಿರ (ಕಾದಂಬರಿ)
ಲೇಖಕರು: ಶ್ರೀಧರ ಬಳಗಾರ
ಪ್ರಕಾಶಕರು: ಅಭಿನವ ಬೆಂಗಳೂರು 9448804905
ಪುಟಗಳು: 152 ಬೆಲೆ: 150 ರೂ.