ನಿತ್ಯೋತ್ಸವದ ನಿರ್ಮತ್ಸರಿ….

ನಿಸಾರ್ ಅಹ್ಮದ್
Published on
ಚಿಂತಾಮಣಿ ಕೊಡ್ಲೆಕೆರೆ ಹಿರಿಯ ಕವಿ, ಸಾಹಿತಿ
ಆಧುನಿಕ ಕನ್ನಡ ಕಾವ್ಯದ ಪ್ರಮುಖ ಪ್ರಾತಿನಿಧಿಕ ಕವಿಗಳಲ್ಲೊಬ್ಬರು ಪೊ›. ಕೆ. ಎಸ್. ನಿಸಾರ್ ಅಹಮದ್. ‘ಸಂದ ಜೀವನದೊಂದು ರೀತಿಯಂತೆ; ಸರಳ ಸದಭಿರುಚಿಯ ಖ್ಯಾತಿಯಂತೆ’ ಬದುಕಿದ ಈ ಕವಿಯ ನೆನಕೆಯಿಂದ ‘ಬೆಳಗಾಗ ಛಳಿಯಲ್ಲಿ ಬಿಸಿನೀರ ಮಿಂದಂತೆ, ಎದೆ ಸ್ವಚ್ಛಗೊಳ್ಳುತ್ತದೆ; ಹಗುರಕ್ಕೆ ಸಲ್ಲುತ್ತದೆ’. ಅವತರಣಿಕೆ ಚಿಹ್ನೆಯಲ್ಲಿ ಬಳಸಿದ ಸಾಲುಗಳು - ನಿಸಾರ್ ಅವರು ಮಾಸ್ತಿಯವರ ಕುರಿತು ಬರೆದ ಸುಪ್ರಸಿದ್ಧ ಕವಿತೆಯವು. ಉನ್ನತ ಮೌಲ್ಯಗಳನ್ನು ಆರಾಧಿಸುತ್ತ ಸ್ವತಃ ತಾನೂ ಅಂಥ ಬದುಕಿಗಾಗಿ ಶ್ರಮಿಸಿದ ಈ ಧೀಮಂತ ಕವಿಗೂ ಈ ಸಾಲುಗಳು ಒಪ್ಪುತ್ತವೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಅವರು ಜನಿಸಿದರು (5.2.1936). ಭೂವಿಜ್ಞಾನದ ಅಧ್ಯಾಪಕರಾಗಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಮೂವತೆôದು ವರ್ಷ ಸೇವೆ ಸಲ್ಲಿಸಿದರು. ಕನ್ನಡ ಕಾವ್ಯರಸಿಕರ ಅಪಾರ ಪ್ರೀತಿ, ಅಭಿಮಾನ ಪಡೆದ ಈ ಕವಿ ಎಂಬತ್ನಾಲ್ಕು ವರ್ಷಗಳ ತುಂಬುಜೀವನ ನಡೆಸಿ ನಮ್ಮನ್ನಗಲಿದರು (3.5.2020).

‘ತಾತ್ಕಾಲಿಕವ ದಾಟಿ ಚಿರಂತನತೆ ಮೆರೆಯುವುದು’ಮೊದಲಿನಿಂದಲೂ ನಿಸಾರರ ಕಾವ್ಯದ ಮುಖ್ಯಆಶಯಗಳಲ್ಲಿ ಒಂದಾಗಿದೆ. ಹಾಗೆಂದು ಈ ಕವಿ ತಾತ್ಕಾಲಿಕವನ್ನು, ತತ್ಕಾಲೀನವಾದುದನ್ನು ಮರೆಯುವುದಿಲ್ಲ. ಅದು ಅವರಿಗೆ ಚಿರಂತನತೆಯನ್ನು ತಲಪುವ ಮಾರ್ಗ. ಹಿರಿಯ ಕವಿ ಪುತಿನ ಅವರು ಈ ಹುಟ್ಟುಕವಿಯ ‘ಅಸಾಧಾರಣವಾದ ಸ್ವೋಪಜ್ಞವಾಣಿ’ಯನ್ನು ಮೆಚ್ಚುತ್ತ, ಇವರ ಕಾವ್ಯದಲ್ಲಿ ಬಳಕೆಯಾಗುವ ಶಬ್ದಗಳನ್ನು‘ಜಾತ್ಯಶ್ವ’ಗಳೆಂದು ಕರೆದರು. ನಿಸಾರ್ ಅವರ ಕಾವ್ಯ ಮೊದಲಿನಿಂದಲೂ ವ್ಯಕ್ತಿವಿಶಿಷ್ಟವಾಗುವ ಹಂಬಲವನ್ನು ಪ್ರಕಟಿಸಿದೆ ಮತ್ತು ಸಾಮಾನ್ಯತೆಯನ್ನು, ಸಾಧಾರಣೀಕರಣವನ್ನು ನಿರಾಕರಿಸುತ್ತ ಬಂದಿದೆ. ಈ ನಿರಾಕರಣೆ ಎರಡು ಹಂತಗಳಲ್ಲಿ ಜರುಗುತ್ತದೆ: ಅಸಾಧಾರಣವಾದುದರ ಸ್ತುತಿ, ಬದುಕಿಗೆ ಬೆಳಕು ತರುವ ಸಂಗತಿಗಳು, ವ್ಯಕ್ತಿಗಳು, ತತ್ವಗಳನ್ನು ಕುರಿತು ಮೆಚ್ಚುಗೆ ಒಂದು ಹಂತವಾದರೆ, ‘ಸಾಧಾರಣ’, ‘ಸಾಮಾನ್ಯ’ಗೊಳಿಸುವ ಸಂದರ್ಭಗಳ ಗೇಲಿ, ವಿಮರ್ಶೆ ಮತ್ತು ತಿರಸ್ಕಾರ ಎರಡನೆಯ ಹಂತ. ಈ ಕವಿ ಬೇರೆಬೇರೆ ಕಾಲಘಟ್ಟಗಳಲ್ಲಿ ಬರೆದ ವ್ಯಕ್ತಿಚಿತ್ರದ ಮಾದರಿಯ ಕವಿತೆಗಳು (ಎಚ್ಚೆೆನ್, ಮಾಸ್ತಿ, ಭೀಮಪ್ಪ ಮಾಸ್ತರರು...) ಮೌಲ್ಯಾರಾಧನೆಯ ಅಪರೂಪದ ಅಭಿವ್ಯಕ್ತಿಗಳೇ ಆಗಿವೆ.

ಈ ಕವಿಯ ಮೊದಲ ಸುಪ್ರಸಿದ್ಧ ಕವಿತೆ ‘ಕುರಿಗಳು ಸಾರ್ ಕುರಿಗಳು’ ಸ್ವಂತಿಕೆಯನ್ನು ಕಳೆದುಕೊಂಡ ಸಾಮಾನ್ಯೀಕರಣ ರಾಜಕೀಯದ ಬಹುದೊಡ್ಡ ವಿಡಂಬನೆಯಾಗಿದೆ. ‘ಎಡ ದಿಕ್ಕಿಗೆ, ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ/ ಒಮ್ಮೆ ಅದೂ ಕಳೆದುಕೊಂಡು, ತಾಟಸ್ಥ್ಯದಿ ದಿಕ್ಕೆಟ್ಟು/ ಹೇಗೆ ಹೇಗೊ ಏಗುತಿರುವ,/ ಬರೀ ಕಿರುಚಿ ರೇಗುತಿರುವ,/ ನೊಣ ಕೂತರೆ ಬಾಗುತಿರುವ,/ ತಿನದಿದ್ದರು ತೇಗುತಿರುವ,/ ಹಿಂದೆ ಬಂದರೊದೆಯದ, ಮುಂದೆ ಬರಲು ಹಾಯದ ಅವರು, ಇವರು, ನಾವುಗಳು/ ಕುರಿಗಳು,ಸಾರ್, ಕುರಿಗಳು’

-ಇಂಥ ಮಂದೆಗೆ ‘ಹೊಟ್ಟೆ ಬಟ್ಟೆಗೊಗ್ಗದ ಕಲೆ’ಅರ್ಥವಾಗುವುದಿಲ್ಲ. ಕಾಯುವ ಕುರುಬನೇ ಕೊಲ್ಲುವ ಕಟುಕನಾದರೂ ಅವನ ಮಚ್ಚಿನ ಹೊಳಪಿಗೆ ಮಾರುಹೋಗಿ ಅದನ್ನು ನೆಕ್ಕುವುದು ಈ ಕುರಿಗಳ ಸ್ಥಿತಿ. ಇದು ಇಂದಿಗೂ ನಮ್ಮರಾಜಕೀಯದ ಸಮರ್ಥ ವ್ಯಾಖ್ಯಾನವಾಗಿದೆ. ನಿಸಾರ್ ಅವರ ಕಾವ್ಯದ ತಾತ್ತಿ್ವಕತೆ ಕೂಡ ವಿಶಿಷ್ಟವಾಗಿದೆ. ‘ಕಂಡಷ್ಟೂ ಸತ್ಯವಿರಬಹುದು, ಆದರೆ ಕಂಡಷ್ಟೇ ಸತ್ಯವಲ್ಲ’ಎಂದು ಅವರು ತಿಳಿದಿದ್ದಾರೆ. ತೀರ ಹೊಸದಾದ ತಿಳಿವಳಿಕೆಯನ್ನು ಪಡೆಯುವುದೇ ಗುರಿ ಎಂದು ಅವರು ಭಾವಿಸಿಲ್ಲ. ಅತ್ಯುತ್ಸಾಹಿ ಕ್ರೀಡಾಕುಶಲಿಗೆ ಅವರು ‘ವಿಕೆಟ್ಟು ನೀಗದೆ’ ಬಲುಹೊತ್ತು ಕ್ರೀಡಾಂಗಣದಲ್ಲಿ ನೆಲೆನಿಲ್ಲುವುದೂ ಮುಖ್ಯವೆಂಬ ಬುದ್ಧಿವಾದವನ್ನು ಹೇಳುತ್ತಾರೆ.’ ಬದುಕು ಬರೀ ಬಿರುಸು, ರಭಸ, ವೇಗಗಳ ಕಣವಲ್ಲ, ಬಾಳಿನೆಲ್ಲ ಸಂದರ್ಭಗಳೂ ಅಸಾಮಾನ್ಯ, ಅತಿಶಯವನ್ನೇ ನೀಡುವುದಿಲ್ಲ. ಅಂಥ ಗಳಿಗೆಗಳು ಮರಳಿ ಘಟಿಸುವತನಕ ದುಡಿತದ ಉತ್ಸಾಹ ಸಡಿಲಗೊಳಿಸದೆ ಕಾಯಕದಲ್ಲಿ ತೊಡಗಿರಬೇಕು’ ಎಂಬುದು ಅವರ ‘ಬಾಳಿನ ಕ್ರೀಡಾಂಗಣ’ಕವಿತೆಯ ಧ್ವನಿ. ‘ಬದುಕಿನಲ್ಲಿ ಸಣ್ಣ ತಪ್ಪುಗಳನ್ನು ಅವುಗಳಷ್ಟಕ್ಕೆ ಬಿಟ್ಟುಬಿಡಿ. ಅವುಗಳನ್ನು ಸರಿಪಡಿಸಲು ಹೋಗಿ ಅವಾಂತರ ಮಾಡಿಕೊಳ್ಳುವುದು ಬೇಡ. ಆದ ತಪ್ಪು ಮರುಕಳಿಸದಿದ್ದರೆ ಸಾಕು’ ಎಂದು ಹೇಳುವ ಅವರ ‘ಸಣ್ಣತಪ್ಪು’ ಕವಿತೆಯೂ, ‘ಕಳೆದದ್ದಕ್ಕೆ ಕೊರಗಬೇಡ’ ಎಂಬ ಇನ್ನೊಂದು ಕವಿತೆಯೂ ಅಸಾಮಾನ್ಯ ಲೋಕವಿವೇಕವನ್ನು ಪ್ರಕಟಿಸುತ್ತವೆ. ಮುಸ್ಲಿಂ ಧರ್ಮದ ಮೂಲದಿಂದ ಬಂದ ಈ ಕವಿ ಸಂಸ್ಕೃತಿಗಳ ವೈರುದ್ಧ್ಯ, ಸಹಬಾಳ್ವೆಗಳ ಕುರಿತು ಮನೋಹರ ಅಭಿವ್ಯಕ್ತಿಗಳನ್ನು ನೀಡಿದ್ದಾರೆ. ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’, ‘ರಂಗೋಲಿ ಮತ್ತು ಮಗ’, ‘ಅಮ್ಮ, ಆಚಾರ, ನಾನು’, ‘ಸವತಿ ಮಕ್ಕಳ ಹಾಗೆ’ ಮುಂತಾದ ಪದ್ಯಗಳು ಈ ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸುತ್ತವೆ. ರಂಗೋಲಿ ಅವರ ಕಣ್ಣಿಗೆ ‘ಯಾವುದೋ ಆರ್ಷ ಮಂತ್ರಕ್ಕೆ ಒಡಮೂಡಿದ ಕಲೆಗಾರಿಕೆಯ ರೆಕ್ಕೆ’ ಎಂಬಂತಿದೆ. ‘ನಮ್ಮ ಮನೆ ಮುಂದೆ ಏಕೆ ರಂಗೋಲಿ ಇಲ್ಲ?’ಎಂಬ ಮಗನ ಪ್ರಶ್ನೆಗೆ ಕವಿಯ ಉತ್ತರ: ‘ಖುರಾನ್​ನಲ್ಲಿ ಹೇಳಿಲ್ಲ’. ‘ಖುರಾನ್​ನಲ್ಲಿ ಹೇಳಿರದ ಸಂಗತಿಗಳನ್ನು ನೀನು ಮಾಡುತ್ತಲೇ ಇರುವಿಯಲ್ಲ!’ ಎಂದು ಕವಿಯ ಮಗ, ಮನೆಯ ಮುಂದೆ ಹೆಸರು ಹಾಗೂ ಇಸವಿಯನ್ನು ಬರೆಸಿದ್ದು ಜ್ಞಾಪಿಸುತ್ತಾನೆ. ಕವಿಯ ಬಳಿ ಉತ್ತರವಿಲ್ಲ!

ಕನ್ನಡ ನವ್ಯಕಾವ್ಯದ ವಿಭಿನ್ನ ಮತ್ತು ಜನಪ್ರಿಯ ಮಾದರಿಯೊಂದನ್ನು ನಿರ್ವಿುಸಿದ ನಿಸಾರರು ಅಷ್ಟೇ ವಿಶಿಷ್ಟ ಗೀತರಚನಕಾರರೂ ಆಗಿ ಮನ್ನಣೆಯನ್ನು ಗಳಿಸಿದ್ದಾರೆ. ಭಾರತೀಯ ಭಾಷೆಗಳಲ್ಲೇ ಮೊಟ್ಟ ಮೊದಲನೆಯ ಭಾವಗೀತೆಗಳ ಧ್ವನಿಸುರುಳಿ ಅವರ ’ನಿತ್ಯೋತ್ಸವ’.

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ.... ಕನ್ನಡ ತಾಯಿಗೆ ನಿತ್ಯವೂ ಉತ್ಸವ ನಡೆಯುತ್ತಿರುವುದೆಂಬ ಈ ಕಲ್ಪನೆಯೇ ನವನವೀನ. ಈ ಭಾವಗೀತೆ ನಿಸಾರರ ಹೆಸರನ್ನು ನಾಡಿನ ಉದ್ದಗಲಕ್ಕೂ ಚಿರಸ್ಥಾಯಿಯಾಗಿಸಿದೆ. ಅಷ್ಟೇ ಮಹತ್ವದ ಇನ್ನೊಂದು ಭಾವಗೀತೆ ಕನ್ನಡ.

ಕನ್ನಡವೆಂದರೆ ಬರಿ ನುಡಿಯಲ್ಲ, / ಹಿರಿದಿದೆ ಅದರರ್ಥ;

ಜಲವೆಂದರೆ ಕೇವಲ ನೀರಲ್ಲ,/ ಅದು ಪಾವನ ತೀರ್ಥ / ಆಯ್ದ ಕವಿತೆಗಳು, ಸಮಗ್ರ ಕಾವ್ಯವನ್ನೂ ಒಳಗೊಂಡಂತೆ ಅವರು ಇಪ್ಪತ್ತು ಕವನ ಸಂಗ್ರಹಗಳನ್ನೂ, ಹತ್ತು ಗದ್ಯ ಸಂಗ್ರಹಗಳನ್ನೂ, ನಾಲ್ಕು ಅನುವಾದಗಳನ್ನೂ ಪ್ರಕಟಿಸಿದ್ದಾರೆ. ಮಕ್ಕಳ ಸಾಹಿತ್ಯದಲ್ಲೂ ಕೃಷಿಗೈದಿದ್ದಾರೆ. ಶಿವಮೊಗ್ಗೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರಿಗೆ ಸಂದ ಅತ್ಯುಚ್ಚ ಗೌರವವೆನ್ನಬೇಕು. ಅಲ್ಲ, ಅದಲ್ಲ, ಒಂದು ಸಂಜೆ ನಿಸಾರರೊಡನೆ ಸಾಕಷ್ಟು ಸಮಯ ಓಡಾಡುವ ಅವಕಾಶ ದೊರೆತಿತ್ತು. ಬನಶಂಕರಿಯ ರಸ್ತೆಯೊಂದರಲ್ಲಿ ನಡೆಯುತ್ತಿದ್ದೆವು. ರಸ್ತೆಯಲ್ಲಿ ಸಿಕ್ಕ ಅನೇಕರು ಈ ಕವಿಗೆ ವಂದನೆ ಸಲ್ಲಿಸುತ್ತಿದ್ದುದು, ಇವರೂ ಪ್ರತಿವಂದನೆ ಸಲ್ಲಿಸುತ್ತಿದ್ದುದು ಮಾಮೂಲಾಗಿತ್ತು. ಹೀಗೇ ನಡೆಯುತ್ತಿದ್ದಾಗ ಅವರೊಬ್ಬರು ಹಿರಿಯರು ನಿಸಾರರನ್ನು ಕಂಡು ಅವಾಕ್ಕಾಗಿ ನಿಂತರು. ಅವರು ಸಾಮಾನ್ಯ ಜನ ಓಡಾಡುವ ಆ ರಸ್ತೆಯಲ್ಲಿ ಕವಿಯನ್ನು ನಿರೀಕ್ಷಿಸಿರಲಾರರು ಅಥವಾ ಅವರಿಗೆ ಇವರಾರೆಂದು ತಕ್ಷಣಕ್ಕೆ ಹೊಳೆದಿರಲಾರದು. ದಾಟಿ ಮುಂದೆಹೋದವರು ಅರೆಕ್ಷಣದಲ್ಲೇ ಓಡೋಡಿ ಬಂದರು. ‘ನೀವು ನಿತ್ಯೋತ್ಸವ ಬರೆದ ಕವಿಯಲ್ಲವೆ?.’ ಆ ಹಿರಿಯರನ್ನು ನೋಡಿದರೆ ಸ್ವರ್ಗ ಅವರ ಕೈಯಳತೆಗೆ ಸಿಕ್ಕಿದಂತಿತ್ತು. ನಿಸಾರರ ಕೈಹಿಡಿದು ಎದೆಗೊತ್ತಿಕೊಂಡರು. ನಿತ್ಯೋತ್ಸವ ಬರೆದ ಕೈಯನ್ನು ಮುಟ್ಟಿದೆ, ಧನ್ಯನಾದೆ ಎಂದು ನುಡಿದು ಆ ಜನಸಾಗರದಲ್ಲಿ ಓಡೋಡಿ ಮರೆಯಾಗಿಹೋದರು. ವಿಸ್ಮಯದಿಂದ ಎಲ್ಲವನ್ನೂ ನೋಡುತ್ತಿದ್ದ ನಾನು ‘ಸರ್, ನಿಮಗೆ ಸಿಕ್ಕ ಗೌರವಗಳಲ್ಲೆಲ್ಲ ಇದೇ ದೊಡ್ಡದಲ್ಲವೆ?’ ಎಂದೆ. ಈಗಲೂ ನನಗನಿಸುತ್ತಿರುವುದು ಅದೇ. ನನ್ನಂಥ ಕಿರಿಯನ ಕುರಿತು ಅವರು ತೋರಿದ ಪ್ರೀತಿ, ಅಭಿಮಾನವು ಎಂದಿಗೂ ಮರೆಯುವಂಥದಲ್ಲ. ಇಂಥ ಹಿರಿಯರ ಸ್ಮರಣೆಯಿಂದ ಕಣ್ಣುಗಳು ತುಂಬಿಬರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net