

ಗಿರಿ ಕಣಿವೆಗಳ ಗಣಿಸಿ ರೋಷಗೊಳ್ಳುವೆಯೇಂ?||
ಸುರೆ ಗರಲ ಸುಧೆಗಳ್ ಅಬ್ಧಿಯಲಿ ಸೋದರರಲ್ತೆ?|
ಅರಿತೊಗ್ಗು ಸಾಜಕ್ಕೆ ಮಂಕುತಿಮ್ಮ ||287||
ಮನುಷ್ಯರ ಸ್ವಭಾವದಲ್ಲಿರುವ ವಕ್ರತೆಯನ್ನು ಗಮನಿಸುವು ದೇಕೆ? ಭೂಮಿಯಲ್ಲಿರುವ ಬೆಟ್ಟ ಮತ್ತು ಕಣಿವೆಗಳನ್ನು ನೋಡಿ ಕೋಪಿಸಿಕೊಳ್ಳುತ್ತೀಯಾ? ಮದ್ಯ, ವಿಷ, ಅಮೃತಗಳು ಸಮುದ್ರದ ತಳದಲ್ಲಿ ಸಹೋದರರಂತೆಯೇ ಇಲ್ಲವೇ? ಹಾಗಾಗಿ ಸಹಜತೆಯನ್ನು ಅರ್ಥ ಮಾಡಿಕೊಂಡು ಹೊಂದಿಕೊಳ್ಳಬೇಕು ಎನ್ನುತ್ತದೆ ಈ ಕಗ್ಗ.
ಲೋಕದೊಳಗೆ ಪರಸ್ಪರ ಬೆರೆತು ಬಾಳುವುದನ್ನು ಎಲ್ಲರೂ ಬಯಸುತ್ತಾರೆ. ಯಾರು ಕೂಡಾ ಒಂಟಿಯಾಗಿರಲು ಬಯಸುವುದಿಲ್ಲ. ಹಾಗಾಗಿಯೇ ಕುಟುಂಬ, ಸಂಘ-ಸಂಸ್ಥೆಗಳು. ಇಂಥ ಸಂದರ್ಭದಲ್ಲಿ ಸ್ವಕೇಂದ್ರಿತವಾಗಿ ಯೋಚಿಸುವುದು, ಪ್ರಾಮುಖ್ಯ ತೆಯ ಚಡಪಡಿಕೆ, ಅಭಿಪ್ರಾಯ ವ್ಯತ್ಯಾಸ, ಪ್ರತಿಕೂಲ ಸಂದರ್ಭ ಗಳು ಸರ್ವೆಸಾಮಾನ್ಯ. ಇವುಗಳಿಂದಾಗಿ ವ್ಯಕ್ತಿಯು ಜೀವನ ಶಿಕ್ಷಣವನ್ನು ಪಡೆಯುತ್ತಾನೆ. ವ್ಯಕ್ತಿಯಲ್ಲಿರುವ ದೌರ್ಬಲ್ಯಗಳು ಕಳಚಿಹೋಗಿ ಹದವಾಗುತ್ತಾನೆ. ವ್ಯಕ್ತಿಯಲ್ಲಿ ವಿವಿಧ ಗುಣ-ಸ್ವಭಾವ ಗಳಿರುತ್ತವೆ. ಸಾತ್ತಿ್ವಕ, ರಾಜಸ ಮತ್ತು ತಮೋ ಗುಣಗಳಿಂದ ಪ್ರೇರಿತನಾದ, ಭಾವಾವೇಶಕ್ಕೆ ಒಳಗಾಗುವ ವ್ಯಕ್ತಿಯ ಜೀವನ ದೃಷ್ಟಿಯೂ ಸದಾ ಬದಲಾಗುತ್ತಿರುತ್ತದೆ. ಸನ್ನಿವೇಶಕ್ಕೆ ಅನುಗುಣ ವಾಗಿ ವರ್ತನೆಯು ವ್ಯತ್ಯಾಸವಾಗುತ್ತದೆ. ಎಷ್ಟೋ ಸಲ ಸ್ವಯಂ ತನಗೆ ತಾನೆ ಪ್ರಶ್ನೆಯಾಗುವುದು, ತಾನು ಹೀಗೇಕೆ ಮಾಡಿದೆ ಎಂದು ವಿಷಾದಿಸುವುದೂ ಇದೆ. ಹಾಗಾಗಿ ಪ್ರತಿಕೂಲ ಸಂದರ್ಭಗಳು ವ್ಯಕ್ತಿಯನ್ನು ಸ್ಪಷ್ಟವಾಗಿ ಪರಿಚಯಿಸುತ್ತದೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಬಗೆಗೆ ಒಳ್ಳೆಯವನೆಂದೋ, ಕೆಟ್ಟವನೆಂದೋ ನಮ್ಮಷ್ಟಕ್ಕೆ ನಾವೆ ನಿರ್ಧರಿಸಿರುತ್ತೇವೆ. ನಮ್ಮ ಕಲ್ಪನೆಯಂತೆ ಆ ವ್ಯಕ್ತಿಯು ಇಲ್ಲವೆಂದಾಗ ಸಿಟ್ಟಾಗುವುದು, ಕೊರಗುವುದು, ಬಾಂಧವ್ಯವನ್ನು ಕಡಿದುಕೊಳ್ಳುವುದುಂಟು.ಆದರೆ ನಾವು ಕಲ್ಪಿಸಿದಂತೆ ಆತನಿರಬೇಕೆಂದೇನಿಲ್ಲ, ಬಹಳಷ್ಟು ಜಗಳಗಳು ಇಂಥ ಭ್ರಮೆಯಿಂದಲೇ ಉಂಟಾಗುತ್ತವೆ.
ಪರಸ್ಪರ ಸಹಕಾರ, ಅರ್ಥೈಸಿಕೊಳ್ಳುವುದೆಲ್ಲವೂ ವ್ಯಕ್ತಿಯು ಬಾಂಧವ್ಯಗಳಿಗೆ ಕೊಡುವ ಮಹತ್ತ್ವದ ಮೇಲೆ ನಿರ್ಧರಿತವಾಗುತ್ತದೆ. ಹಾಗಾಗಿಯೇ ಸಜ್ಜನ, ಸಹೃದಯನೆಂದು ಗುರುತಿಸಿಕೊಂಡವನು ಇನ್ಯಾರದೋ ದೃಷ್ಟಿಯಲ್ಲಿ ಭ್ರಷ್ಟನಾಗಿರುತ್ತಾನೆ. ಅಹಂಕಾರಿ ಎಂದು ಗುರುತಿಸಿಕೊಂಡವನು ಇನ್ನೆಲ್ಲೋ ನಯ-ವಿನಯದ ಪ್ರತಿಮೂರ್ತಿಯಾಗಿರುತ್ತಾನೆ. ಒಬ್ಬ ವ್ಯಕ್ತಿಯ ಬಗೆಗೆ ಧನಾತ್ಮಕ ಮತ್ತು ಋಣಾತ್ಮಕ ಅಭಿಪ್ರಾಯಗಳೆರಡೂ ಇರುತ್ತವೆ. ಹಾಗೆಯೇ ವ್ಯಕ್ತಿಯಲ್ಲೂ ಅಂಥ ಇಬ್ಬಗೆಯ ಸ್ವಭಾವವಿರುತ್ತದೆ. ನಿಷ್ಕಾರಣವಾಗಿ ಯಾರನ್ನೋ ದ್ವೇಷಿಸುವುದು ಅಥವಾ ಪ್ರೀತಿಸುವುದು, ಸಮಯಾವ ಕಾಶವನ್ನು ನೋಡಿಕೊಂಡು ಸ್ವಾರ್ಥವನ್ನು ಸಾಧಿಸುವುದು ಅಥವಾ ಸ್ವ-ಹಿತವನ್ನು ತ್ಯಾಗ ಮಾಡುವುದು ಲೋಕ ಸ್ವಭಾವ. ಹಾಗಾಗಿ ವ್ಯಕ್ತಿಯಲ್ಲಿರುವ ವಕ್ರತೆಗಳನ್ನು ಮಾತ್ರ ಗಮನಿಸುವುದು ಸರಿಯಲ್ಲ.
ಪ್ರಕೃತಿಯಲ್ಲೇ ಅವೆಷ್ಟು ವೈರುಧ್ಯಗಳು ಜೊತೆಯಾಗಿಲ್ಲ. ಬಯಲಿನ ವಿಸ್ತಾರದಂಚಿನಲ್ಲಿ ಎತ್ತರದ ಬೆಟ್ಟವಿದೆ. ಬೆಟ್ಟದ ಬದಿಯಲ್ಲಿ ಆಳ ಕಣಿವೆಗಳಿವೆ. ಹಸಿರು ಕಾಡಿನ ಆಚೆ ಬರಡು ನೆಲವಿದೆ. ಇದೆಲ್ಲವನ್ನೂ ನೋಡಿ ನಾವು ಅಸಹನೆಯನ್ನು ವ್ಯಕ್ತ ಪಡಿಸುತ್ತೇವೆಯೇ? ಆ ವಿಭಿನ್ನತೆಯು ಸೃಷ್ಟಿಯ ಲೀಲೆಯೆಂದೋ, ಸೊಬಗು ಎಂದೋ ಮೈಮರೆತು ವರ್ಣಿಸುತ್ತೇವೆ.
ದೇವ-ದಾನವರು ಜೊತೆಯಾಗಿ ಸಮುದ್ರವನ್ನು ಮಥಿಸಿದಾಗ ಸುರೆ, ವಿಷ ಮತ್ತು ಅಮೃತವು ಲಭಿಸಿದವು. ಅವು ಮೂರೂ ಅದುವರೆಗೂ ಸಾಗರದಾಳದಲ್ಲಿ ಸಹೋದರರಂತೆ ಇದ್ದವಲ್ಲವೇ?. ಹಾಗೆಯೇ ಒಬ್ಬ ವ್ಯಕ್ತಿಯೊಳಗೆ ಹಲವು ತರಹದ ಸ್ವಭಾವಗಳಿವೆ. ದ್ವಂದ್ವ,ಸ್ವಾರ್ಥ, ಹಿಂಸೆ, ಕ್ರೌರ್ಯಗಳ ಜೊತೆಜೊತೆಗೆ ಕರುಣೆ, ವಾತ್ಸಲ್ಯ, ಸಂಯಮಗಳಂತಹ ಸಾತ್ತಿ್ವಕ ಗುಣಗಳೂ ಇರುತ್ತವೆ. ವ್ಯಾವಹಾರಿಕ ಬದುಕಿನಲ್ಲಂತೂ ವ್ಯಕ್ತಿಯು ಒಂದಕ್ಕೊಂದು ವಿರುದ್ಧವಾದ, ಒಬ್ಬೊಬ್ಬರಿಗೂ ಒಂದೊಂದು ರೀತಿಯಿಂದ ಗೋಚರವಾಗುವ ಮುಖವಾಡಗಳನ್ನು ಧರಿಸುತ್ತಾನೆ. ಹಾಗೆಯೇ ಎಲ್ಲರನ್ನೂ ಪ್ರೇಮದಿಂದ ಕಾಣುವ ಸ್ವಸಂತೋಷವನ್ನು ಮರೆತು ಇತರರಿಗೆ ಹೆಗಲಾಗುವ ಉದಾರ ಚರಿತರೂ ಇರುತ್ತಾರೆ. ಹೇಗೆ ಪ್ರಕೃತಿಯ ವಿಭಿನ್ನತೆಯನ್ನು ಒಪ್ಪಿಕೊಂಡೆವೋ ಹಾಗೆಯೇ ಮನುಷ್ಯರಲ್ಲಿರುವ ಗುಣಾವಗುಣಗಳನ್ನೂ ಸ್ವೀಕರಿಸಬೇಕು. ಹಾಗೆಯೇ ಯಾರನ್ನೂ ತಿರಸ್ಕರಿಸದೇ ಅವರ ಸಹಜತೆಯನ್ನು ಒಪ್ಪಿಕೊಂಡಾಗ ಮನಸ್ಸು ಭಾರವಾಗುವುದಿಲ್ಲ.
ಆದರೆ ಕೆಟ್ಟ ಮನಸ್ಸುಗಳಿಂದಾಗಬಹುದಾದ ಹಾನಿಯನ್ನು ತಡೆಯುವುದೆಂತು? ನಮ್ಮ ಪಯಣದಲ್ಲಿ ಆಳಕಣಿವೆ ಕಂಡರೆ, ಎತ್ತರವಾದ ಬೆಟ್ಟ ಎದುರಾದರೆ, ದಟ್ಟ ಕಾಡು ಸಿಕ್ಕರೆ ಕೊನೆಗೆ ಕೆಸರು ತುಂಬಿದ ದಾರಿಯಾಗಿದ್ದರೆ ಹೇಗೆ ಸಿದ್ದತೆಯೊಂದಿಗೆ ಮುಂದು ವರಿಯುತ್ತೇವೆಯೋ ಹಾಗೆಯೇ ಎಚ್ಚರಿಕೆಯಿಂದ ನಡೆಯಬೇಕು. ದುಷ್ಟರನ್ನು ಕಂಡರೆ ದೂರವಿರು ಎನ್ನುವ ಮಾತನ್ನು ಪಾಲಿಸುವ ಮೊದಲು ವ್ಯಕ್ತಿಯು ತಾನು ದುಷ್ಟನಾಗದಿರಲು ಯತ್ನಿಸಬೇಕು ಮತ್ತು ದುಷ್ಟರ ಮೋಸವನ್ನು ಗಮನಿಸುವ ಜಾಣ್ಮೆಯೂ ಅವನಲ್ಲಿರ ಬೇಕು. ಯಾವುದೇ ವಕ್ರತೆ, ಕೆಟ್ಟತನವಾದರೂ ನಿರ್ವ್ಯಾಜ ಪ್ರೀತಿಗೆ ಸೋಲುತ್ತದೆ. ವೈಮನಸ್ಸು, ಕೆಟ್ಟ ಮಾತು, ನಡವಳಿಕೆಯಿಂದ ಯಾರೂ ಏನನ್ನೂ ಸಾಧಿಸಲಾರರು. ಎಲ್ಲವನ್ನೂ ಅನುಭವ ಎಂದು ಸ್ವೀಕರಿಸಿದರೆ ಅರಿವಿನ ಬೆಳಕಲ್ಲಿ ಜೀವೋತ್ಕರ್ಷವು ಸಾಧ್ಯವಾಗುತ್ತದೆ.