ಜಂಗಲ್​ರಾಜ್​​ VS ಸುಶಾಸನ

untitled-design-4-6890fb4424939
Published on

ಬಿಹಾರ ವಿಧಾನಸಭೆ ಚುನಾವಣೆ ಈ ವರ್ಷದ ಅಕ್ಟೋಬರ್​ನಲ್ಲಿ ನಡೆಯುವ ಸಾಧ್ಯತೆ ಇದ್ದರೂ, ಮೂರು ತಿಂಗಳು ಮೊದಲೇ ಅಖಾಡ ರಂಗೇರಿದೆ ಮತ್ತು ಸ್ಪರ್ಧೆಯು ಅಷ್ಟೇ ಜಿದ್ದಾಜಿದ್ದಿಯಿಂದ ಕೂಡಿದೆ. ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿರುವ ಚುನಾವಣೆಯಲ್ಲಿ ಹೊಸ ಪಕ್ಷಗಳ ಎಂಟ್ರಿ ಮತ್ತಷ್ಟು ಕುತೂಹಲ ಮೂಡಿಸಿದೆ. ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಲೇ ರಾಜಕಾರಣಿಗಳು ಜನರ ಮತಗಳನ್ನು ಜಾತಿ ಸಮೀಕರಣದ ಮೂಲಕ ಸೆಳೆಯಲು ಯತ್ನಿಸುತ್ತಿದ್ದಾರೆ. ಎನ್​ಡಿಎ ಮತ್ತು ಐಎನ್​ಡಿಐಎ ಮೈತ್ರಿಕೂಟದ ನಡುವಿನ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಲು ಎರಡೂ ಒಕ್ಕೂಟಗಳು ಭಾರಿ ಪ್ರಯತ್ನ ಮಾಡುತ್ತಿವೆ.

| ರವೀಂದ್ರ ಎಸ್.ದೇಶಮುಖ್

ಬಿಹಾರದ ಈ ಬಾರಿಯ ಚುನಾವಣೆಯು ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ‘ಜಬ್ ತಕ್ ರಹೇಗಾ ಸಮೋಸೆ ಮೇ ಆಲೂ, ತಬ್ ತಕ್ ರಹೇಗಾ ಬಿಹಾರ ಮೇ ಲಾಲು’ (ಎಲ್ಲಿಯವರೆಗೆ ಸಮೋಸಾದಲ್ಲಿ ಆಲೂ ಇರುತ್ತದೋ, ಅಲ್ಲಿವರೆಗೆ ಬಿಹಾರದಲ್ಲಿ ಲಾಲು ವರ್ಚಸ್ಸು ಇರುತ್ತದೆ) ಎಂಬುದು ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ಪ್ರಸಿದ್ಧ ಘೋಷವಾಕ್ಯ. 1990ರಿಂದ 1997ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದ, ಬಳಿಕ ಕೇಂದ್ರ ಸಚಿವರೂ ಆಗಿದ್ದ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಈಗ 77 ವರ್ಷ. ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಲಾಲು ಅವರಿಗೆ ಇದೇ ಕೊನೆಯ ವಿಧಾನಸಭೆ ಚುನಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳುತ್ತ ಆರ್​ಜೆಡಿ ಕಾರ್ಯಕರ್ತರು ಅನುಕಂಪದ ಮತ ಸೆಳೆಯಲು ಯತ್ನಿಸುತ್ತಿದ್ದಾರೆ.

ಸಂಯುಕ್ತ ಜನತಾದಳದಲ್ಲೂ ಪರಿಸ್ಥಿತಿ ಭಿನ್ನವೇನಿಲ್ಲ. ಒಮ್ಮೆ ಎನ್​ಡಿಎ, ಮಗದೊಮ್ಮೆ ಐಎನ್​ಡಿಐಎ ಪಾಳಯ ಬದಲಿಸುತ್ತ ಮತ್ತೆ ಎನ್​ಡಿಎದಲ್ಲಿರುವ ನಿತೀಶ್​ಕುಮಾರ್ ಒಟ್ಟಾರೆ ಮುಖ್ಯಮಂತ್ರಿ ಹುದ್ದೆ ತಮ್ಮ ಬಳಿಯೇ ಇರುವಂತೆ ನೋಡಿಕೊಂಡಿದ್ದಾರೆ. ನಿತೀಶ್​ಕುಮಾರ್ ಅವರಿಗೂ ಈಗ 74 ವರ್ಷ. ಅಲ್ಲದೆ, ನಿತೀಶ್ ವಯೋವೃದ್ಧರಾಗಿರುವುದು ಅವರ ನಡವಳಿಕೆ, ಮಾತುಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಹಾಗಾಗಿ, ಜೆಡಿಯು ಕಾರ್ಯಕರ್ತರು ಕೂಡ ‘ವಯಸ್ಸಿನ ಕಾರಣದಿಂದ ಇದು ನಿತೀಶ್​ಕುಮಾರ್ ಅವರಿಗೆ ಕೊನೆಯ ಚುನಾವಣೆಯಾಗಬಹುದು’ ಎಂದು ಹೇಳುತ್ತ, ಅನುಕಂಪದ ಆಧಾರದಲ್ಲಿ ಮತಬುಟ್ಟಿಗೆ ಕೈಹಾಕಿದ್ದಾರೆ. ಮತ್ತೊಂದೆಡೆ, ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆ ಸ್ಥಾನಕ್ಕೆ ನಿತೀಶ್​ಕುಮಾರ್ ಹೆಸರೂ ಕೇಳಿಬರುತ್ತಿದೆ. ನಿತೀಶ್​ರಿಗೆ ಸಾಂವಿಧಾನಿಕ ಹುದ್ದೆ ನೀಡಿದರೆ ಬಿಹಾರದಲ್ಲಿ ಹೊಸ ಮುಖವನ್ನು ಸಿಎಂ ಅಭ್ಯರ್ಥಿಯಾಗಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಆದರೆ, ನಿತೀಶ್ ಸಿಎಂ ಆಗಿಯೇ ಮುಂದುವರಿಯಲು ಹೆಚ್ಚು ಇಷ್ಟಪಡುತ್ತಾರೆ ಎಂದು ಜೆಡಿಯು ಮೂಲಗಳೇ ಹೇಳುತ್ತಿವೆ.

ಇಡೀ ರಾಜ್ಯದ ಚಿತ್ರಣ ಅವಲೋಕಿಸುವುದಾದರೆ ಎರಡು ದಶಕದ ಹಿಂದಿದ್ದ ಭಯಾನಕ ಬಿಹಾರದ ಚಿತ್ರಣ ಈಗಿಲ್ಲ ಎಂಬುದನ್ನು ಪಕ್ಷಾತೀತವಾಗಿ ಎಲ್ಲರೂ ಒಪು್ಪತ್ತಾರೆ. ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ, ಆರ್ಥಿಕ ಅಭಿವೃದ್ಧಿ ಹೆಚ್ಚಳಗೊಂಡು ಜಿಡಿಪಿ ಏರಿಕೆಯಾಗುತ್ತಿದೆ, ಮೂಲಸೌಕರ್ಯಗಳು ವಿಸ್ತಾರಗೊಳ್ಳುತ್ತಿವೆ, ಕಾನೂನು ಸುವ್ಯವಸ್ಥೆ ಸಮಾಧಾನಕರವಾಗಿದೆ. ರಾಜ್ಯಕ್ಕೆ ಹೂಡಿಕೆಯೂ ಬರುತ್ತಿದೆ. ಕೇಂದ್ರದಲ್ಲೂ ಎನ್​ಡಿಎ ಸರ್ಕಾರ ಇರುವುದರಿಂದ ‘ಡಬಲ್ ಇಂಜಿನ್ ಸರ್ಕಾರ’ದ ಬಲ ಹೆಚ್ಚಿದೆ. ಕೇಂದ್ರದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆ.

ಆದರೂ, ಬಿಹಾರದಲ್ಲಿ ನಿರುದ್ಯೋಗ ಪ್ರಮಾಣ ಚಿಂತೆಯ ಪ್ರಮಾಣದಲ್ಲಿದೆ. ಕಾರ್ವಿುಕರ ವಲಸೆ ಮುಂದುವರಿದಿದೆ. ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಬೇಕಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಬೇಕಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಬೇಕಿದೆ. ಅಂದರೆ, ಮಾಡುವ ಕೆಲಸಗಳು ಬೆಟ್ಟದಷ್ಟಿವೆ. ಅಲ್ಲದೆ, ಸಾರಾಯಿ ನಿಷೇಧ ಮಾಡಿರುವ ಅಡ್ಡಪರಿಣಾಮವಾಗಿ ರಾಜ್ಯದಲ್ಲಿ ನಕಲಿ ಸಾರಾಯಿ ದಂಧೆ ಹೆಚ್ಚಿದ್ದು, ಈ ಪಿಡುಗಿಗೆ ಹಲವರು ಬಲಿಯಾಗಿದ್ದಾರೆ. ಚುನಾವಣೆಗೆ ಇವೆಲ್ಲ ಮುಖ್ಯ ವಿಷಯಗಳೇ ಆದರೂ, ಪ್ರಮುಖವಾಗಿ ಚರ್ಚೆಯಾಗುತ್ತಿರುವುದು ಜಂಗಲ್​ರಾಜ್ ವರ್ಸಸ್ ಸುಶಾಸನ! ಹಿಂದಿನ ಆರ್​ಜೆಡಿ ಆಡಳಿತದಲ್ಲಿ ಬಿಹಾರ ಜಂಗಲ್​ರಾಜ್ ಆಗಿತ್ತು, ಅಪರಾಧ ಚಟುವಟಿಕೆಗಳು ತಲ್ಲಣ ಮೂಡಿಸಿದ್ದವು ಎಂದು ಎನ್​ಡಿಎ ಆರೋಪಿಸುತ್ತ ತಮ್ಮ ಸರ್ಕಾರ ಬಂದ ಮೇಲೆ ಆದ ಬದಲಾವಣೆಗಳನ್ನು ಉಲ್ಲೇಖಿಸುತ್ತ ಸುಶಾಸನದ ಮಂತ್ರ ಜಪಿಸುತ್ತಿದೆ. ಆರ್​ಜೆಡಿ ಮತ್ತು ಕಾಂಗ್ರೆಸ್ ಸೇರಿ ಎನ್​ಡಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿವೆ.

ಮೋದಿ ರಾಹುಲ್ ಪ್ರವಾಸ

ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಗಾಗ ಬಿಹಾರಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಇದೇ ವರ್ಷದ ಫೆಬ್ರವರಿಯಿಂದ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಹೊಸ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಹೀಗೆ ವಿವಿಧ ಕಾರಣಗಳಿಗಾಗಿ ಐದು ಬಾರಿ ಬಿಹಾರಕ್ಕೆ ಬಂದಿದ್ದು, ಪ್ರತಿ ರ್ಯಾಲಿಯ ಸಂದರ್ಭದಲ್ಲೂ ‘ಬಿಹಾರ ಈಗ ಎಷ್ಟು ಬದಲಾಗಿದೆ ನೋಡಿ’ ಎಂಬ ಸಕಾರಾತ್ಮಕ ಚಿತ್ರಣ ನೀಡಲು ಯತ್ನಿಸಿದ್ದಾರೆ. ಈ ತಿಂಗಳು ಮತ್ತೆ ಮೋದಿ ಪ್ರವಾಸವಿದೆ. ನಿತೀಶ್​ಕುಮಾರ್ ರಾಜ್ಯದ ವಿವಿಧ ಜಿಲ್ಲೆಗಳಿಗೆ ನಿರಂತರ ಪ್ರವಾಸ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ಎಲ್​ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಯಾತ್ರೆ ಆರಂಭಿಸಿದ್ದು, ಅವರ ರ್ಯಾಲಿಗಳಿಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಿತನ್​ರಾಮ್ ಮಾಂಜಿ ಕೇಂದ್ರ ಕ್ಯಾಬಿನೆಟ್​ನಲ್ಲಿ ಸ್ಥಾನ ಪಡೆದಿರುವುದರಿಂದ, ಅವರೂ ಎನ್​ಡಿಎ ಪರವಾಗಿ ಬಿಹಾರದಲ್ಲಿ ಮತ ಯಾಚಿಸಲಿದ್ದಾರೆ. ಕಾಂಗ್ರೆಸ್ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಬಿಹಾರದಲ್ಲಿ ಸಾಕಷ್ಟು ರ್ಯಾಲಿಗಳನ್ನು ನಡೆಸಿದ್ದರು. ಈ ಬಾರಿಯೂ ಅದೇ ಹುಮ್ಮಸ್ಸು, ಉತ್ಸಾಹ ಮುಂದುವರಿದಿದೆ. ಈ ವರ್ಷದ ಆರಂಭದಿಂದ ಈವರೆಗೆ ರಾಹುಲ್ ಗಾಂಧಿ ಕೂಡ ಐದು ಬಾರಿ ಬಿಹಾರಕ್ಕೆ ಬಂದುಹೋಗಿದ್ದಾರೆ. ಆಗಸ್ಟ್​ನಲ್ಲಿ ಮತ್ತೆ ಯಾತ್ರೆ ನಡೆಸಲಿದ್ದಾರೆ. ಇದು ತೇಜಸ್ವಿ ಯಾದವ್ ಉತ್ಸಾಹ ಹೆಚ್ಚಿಸಿದ್ದು, ಅವರು ಕೂಡ ಪ್ರವಾಸದ ಯೋಜನೆಯನ್ನು ಹಾಕಿಕೊಂಡಿದ್ದಾರೆ. ರಾಹುಲ್-ತೇಜಸ್ವಿ ಜಂಟಿ ರ್ಯಾಲಿಗಳನ್ನು ನಡೆಸಲಿದ್ದು, ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಟ್ಟಿರುವ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಗಾಂಧಿ ಸೇರಿದಂತೆ ಒಬಿಸಿ ನಾಯಕರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಪ್ರಮುಖ ವಿಷಯಗಳು

ಐಎನ್​ಡಿಐಎ ಪಾಳಯ

ಮೀಸಲಾತಿ ವ್ಯಾಪ್ತಿ ಹೆಚ್ಚಿಸುವುದು, ಸಾಮಾಜಿಕ ನ್ಯಾಯ ದೊರಕಿಸುವುದು, ನಿತೀಶ್​ಕುಮಾರ್ ಅನಾರೋಗ್ಯ, ಹದೆಗೆಟ್ಟ ಕಾನೂನು ಸುವ್ಯವಸ್ಥೆ ವಿಷಯದ ಬಗ್ಗೆ ರಾಷ್ಟ್ರೀಯ ಜನತಾ ದಳದ ನೇತೃತ್ವದಲ್ಲಿ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ದನಿಎತ್ತಿದ್ದು, ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಿವೆ. ಅಲ್ಲದೆ, ಜಾತಿ ಜನಗಣತಿ ನಿರ್ಧಾರದ ಶ್ರೇಯ ತಮ್ಮದ್ದು ಎಂದು ಹೇಳಿಕೊಳ್ಳುತ್ತಿದ್ದು, ಮೀಸಲಾತಿ ಪ್ರಮಾಣ ಶೇಕಡ 50 ಇದ್ದದ್ದು, ಇದನ್ನು ಹೆಚ್ಚಿಸಬೇಕು ಎಂದು ಆಗ್ರಹಿಸುತ್ತಿವೆ. ತೇಜಸ್ವಿ ಯಾದವ್ ತಾವು ಉಪಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ ನೌಕರಿಗಳ ಬಗ್ಗೆ ಪ್ರಚಾರಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪ ಮಾಡುತ್ತ, ರಾಜ್ಯದಲ್ಲಿ ಈಗ ನಿರುದ್ಯೋಗ ಹೆಚ್ಚಿದೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಬದಲಾವಣೆ ವಿಷಯವನ್ನು ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದ ಐನ್​ಡಿಐಎ ಈ ಬಾರಿ ಅದನ್ನು ಸ್ವಲ್ಪ ಬದಲಾಯಿಸಿ, ‘ಸಂವಿಧಾನದಲ್ಲಿ ಜಾತ್ಯತೀತ ಮತ್ತು ಸಮಾಜವಾದ ಪದವನ್ನು ತೆಗೆಯಲು ಯತ್ನಿಸುವ ಮೂಲಕ ಬಿಜೆಪಿ ಸಂವಿಧಾನದ ಮೇಲೆ ಪ್ರಹಾರ ಮಾಡುತ್ತಿದೆ’ ಎಂದು ಆರೋಪಿಸುತ್ತಿದೆ. ಇದು ಮುಂದೆ ನಷ್ಟ ಉಂಟು ಮಾಡಬಾರದೆಂದು ಬಿಜೆಪಿ ತಕ್ಷಣ ಸ್ಪಷ್ಟನೆ ನೀಡಿ, ‘ಇಂಥ ಯಾವುದೇ ಉದ್ದೇಶ ಇಲ್ಲ’ ಎಂದು ಹೇಳಿದೆ.

ಎನ್​ಡಿಎ ಪಾಳಯ

ಬಿಜೆಪಿ, ಸಂಯುಕ್ತ ಜನತಾ ದಳ, ಲೋಕ ಜನಶಕ್ತಿ ಪಕ್ಷ (ಆರ್), ಹಿಂದುಸ್ತಾನಿ ಆವಾಮ್ ಮೋರ್ಚಾ (ಹಮ್ ಮತ್ತು ರಾಷ್ಟ್ರೀಯ ಲೋಕ್ ಮೋರ್ಚಾ ಪಕ್ಷಗಳು ಸೇರಿ ಕೇಂದ್ರ ಮತ್ತು ರಾಜ್ಯ ಎನ್​ಡಿಎ ಸರ್ಕಾರದ ಸಾಧನೆ, ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಲುಪಿಸಲು ಮುಂದಾಗಿವೆ. ಸುಶಾಸನ ಮತ್ತು ರಾಷ್ಟ್ರವಾದದ ನೀತಿಯನ್ನು ಪ್ರತಿಪಾದಿಸುತ್ತ ಮತ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್​ಕುಮಾರ್ ವರ್ಚಸ್ಸನ್ನು ಅವಲಂಬಿಸಿವೆ. ಲಾಲು ಪ್ರಸಾದ್ ಯಾದವ್ ಕುಟುಂಬದ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಜಂಗಲ್​ರಾಜ್​ನ್ನು ಪ್ರಮುಖ ವಿಷಯವನ್ನಾಗಿಸಿಕೊಂಡಿವೆ. ಅಲ್ಲದೆ, ಬಿಜೆಪಿ ‘ಆಪರೇಷನ್ ಸಿಂಧೂರ’ದ ಯಶಸ್ಸು, ಪಹಲ್ಗಾಮ್ ದಾಳಿಯಲ್ಲಿ ಪಾಲ್ಗೊಂಡ ಭಯೋತ್ಪಾದಕರ ಸಂಹಾರದಂಥ ವಿಷಯಗಳನ್ನು ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸುತ್ತ, ಕೇಸರಿ ಭಯೋತ್ಪಾದನೆ ಸಂಕಥನಕ್ಕೆ ಸೋಲಾದ ಬಳಿಕ ಕಾಂಗ್ರೆಸ್, ಆರ್​ಜೆಡಿ ವಿರುದ್ಧ ತೀಕ ್ಷ್ಣ ಟೀಕೆಗಳನ್ನು ಮಾಡುತ್ತಿದೆ.

ಎಸ್​ಐಆರ್ ವಿವಾದ

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ಯು (ಎಸ್​ಐಆರ್) ಭಾರಿ ವಿವಾದವನ್ನು ಸೃಷ್ಟಿಸಿದೆ. ಮತದಾರರ ಪಟ್ಟಿಯಿಂದ 65.63 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಎಸ್​ಐಆರ್ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಗಾಂಧಿ ಆಗ್ರಹಿಸಿದ್ದಾರೆ. ಬಡ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ, ಈ ಮೂಲಕ ಅವರಿಂದ ಪಡಿತರದಿಂದ ಹಿಡಿದು ಮೀಸಲಾತಿಯ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎಂದು ಆರ್​ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ. ‘ಬಾಂಗ್ಲಾದೇಶಿ ನುಸುಳುಕೋರರನ್ನು ಮತ್ತು ರೋಹಿಂಗ್ಯಾ ಮುಸಲ್ಮಾನರನ್ನು ಮತದಾರರನ್ನಾಗಿ ಮುಂದುವರಿಸಲು ವಿಪಕ್ಷಗಳು ಸಂಚು ಹೂಡಿವೆ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ. ಮೃತಪಟ್ಟ ವ್ಯಕ್ತಿಗಳ ಮತ್ತು ಅನರ್ಹ ಮತದಾರರ ಹೆಸರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದರೂ, ಈ ವಿಷಯದ ಬಗ್ಗೆ ರಾಜಕೀಯ ಸಮರ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್ ಅಂಗಳಕ್ಕೂ ತಲುಪಿದ್ದು, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ನ್ಯಾಯಾಲಯ ತಡೆವೊಡ್ಡಿಲ್ಲ. ಈ ನಡುವೆ, ಮಾಜಿ ಉಪಮುಖ್ಯಮಂತ್ರಿ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಬಳಿ ಮತದಾರರ ಎರಡು ಗುರುತಿನ ಚೀಟಿ ಸಿಕ್ಕಿರುವುದು, ಆಡಳಿತ ಪಕ್ಷಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಅದೇನಿದ್ದರೂ, ಎಸ್​ಐಆರ್ ವಿವಾದದ ಕಾರಣದಿಂದಲೇ ಚುನಾವಣಾ ಕಣ ಮೂರು ತಿಂಗಳು ಮೊದಲೇ ರಂಗೇರಿದೆ.

ಮುಖ್ಯಾಂಶಗಳು

1.ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22ಕ್ಕೆ ಕೊನೆಗೊಳ್ಳಲಿದೆ. ಈ ಅವಧಿಯೊಳಗೆ ಹೊಸ ಸರ್ಕಾರ ಸ್ಥಾಪನೆಯಾಗಬೇಕಿರುವುದರಿಂದ ಅಕ್ಟೋಬರ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

2.ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ರಣತಂತ್ರ ರೂಪಿಸಿ ಕೊಡುತ್ತಿದ್ದ ಮತ್ತು ಹಿಂದೊಮ್ಮೆ ನಿತೀಶ್ ಆತ್ಮೀಯರಾಗಿ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನೂ ಗಳಿಸಿದ್ದ ಪ್ರಶಾಂತ್ ಕಿಶೋರ್ ಈ ಬಾರಿ ತಮ್ಮದೇ ಆದ ‘ಜನಸುರಾಜ್’ ಪಕ್ಷದೊಂದಿಗೆ ಚುನಾವಣಾ ಮೈದಾನ ದಲ್ಲಿದ್ದಾರೆ. ಚುನಾವಣಾ ತಂತ್ರಗಾರ ಪಿಕೆ ತಮ್ಮ ಪಕ್ಷಕ್ಕೆ ಯಶಸ್ಸು ಕೊಡಿಸುವಲ್ಲಿ ಸಫಲರಾಗುತ್ತಾರಾ ಎಂಬ ಕುತೂಹಲ ರಾಜಕೀಯ ಪಂಡಿತರಲ್ಲೂ ಇದೆ.

3.ಹಿರಿಯ ಐಪಿಎಸ್ ಅಧಿಕಾರಿ ಶಿವದೀಪ್ ಲಾಂಡೆ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಧುಮಕಿದ್ದಾರೆ. ಈ ನಡುವೆ ಲಾಲು ಹಿರಿಯ ಪುತ್ರ ತೇಜಪ್ರತಾಪ್ ಅವರನ್ನು ಪಕ್ಷ ಮತ್ತು ಕುಟುಂಬದಿಂದ ಹೊರದಬ್ಬಲಾಗಿದೆ. ತಮ್ಮದೇ ಹೊಸ ಪಕ್ಷ ಸ್ಥಾಪಿಸುವುದಾಗಿ ತೇಜಪ್ರತಾಪ್ ಘೋಷಿಸಿದ್ದು, ಚುನಾವಣೆ ಹೊತ್ತಿನಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.

ಸಭೆ, ರ್ಯಾಲಿಗಳ ಅಬ್ಬರ

ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಜೂನ್​ನಿಂದಲೇ ಸಭೆ, ರ್ಯಾಲಿಗಳ ಸರಣಿ ಆರಂಭಿಸಿವೆ. ಸ್ಪರ್ಧೆಗೆ ಬಿದ್ದವರಂತೆ ಜಾತಿ ಸಮ್ಮೇಳನಗಳನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲೇ ಬಿಜೆಪಿ, ಜೆಡಿಯು ಮತ್ತು ಆರ್​ಜೆಡಿಯಂಥ ಪಕ್ಷಗಳು 30ಕ್ಕೂ ಅಧಿಕ ಜಾತಿ ಸಮ್ಮೇಳನಗಳನ್ನು ನಡೆಸಿದ್ದು, ಚುನಾವಣೆ ಸಮೀಪಿಸಿದಂತೆಲ್ಲ ಇವುಗಳ ಸಂಖ್ಯೆ ಹೆಚ್ಚಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net