ಈ ಕಾಲೇಜಿನಲ್ಲಿ ಓದಿದವರಿಗೆಲ್ಲ ಕೆಲಸ!; ವಿಶ್ವಗುರು ಅಂಕಣ

Column F
Published on
ಜಗತ್ತಿನ ದಿ ಬೆಸ್ಟ್ ಯುನಿವರ್ಸಿಟಿ ಯಾವುದಿರಬಹುದು? ಹಾರ್ವರ್ಡ್?

ಆಕ್ಸ್​ಫರ್ಡ್? ಎಮ್​ಟಿ? ಊಹ್ಞೂಂ. ಯಾವುದೂ ಅಲ್ಲ. ದಾರುಲ್ ಉಲುಮ್ ಹಕ್ಕಾನಿ ಎಂಬ ಮದರಸಾ ನಿಜಕ್ಕೂ ಸದ್ಯದಮಟ್ಟಿಗೆ ಜಗತ್ತಿನ ಶ್ರೇಷ್ಠ ಕಾಲೇಜು, ಯುನಿವರ್ಸಿಟಿಗಳ ಪಟ್ಟಿಯಲಿ ನಿಂತರೆ ಅಚ್ಚರಿ ಪಡಬೇಕಿಲ್ಲ. ಇಷ್ಟಕ್ಕೂ ಒಂದು ವಿದ್ಯಾಸಂಸ್ಥೆಯ ಶ್ರೇಷ್ಠತೆ ಅಳೆಯುವುದು ಹೇಗೆ ಹೇಳಿ? ಅಲ್ಲಿ ಕಲಿತ ವಿದ್ಯಾರ್ಥಿಗಳು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂಬುದರ ಆಧಾರದ ಮೇಲೆ ತಾನೇ? ಹಾಗಿದ್ದರೆ ಲೆಕ್ಕ ಹಾಕಿಕೊಳ್ಳಿ. ಮುಲ್ಲಾ ಅಖ್ತರ್ ಮನ್ಸೂರ್ ತಾಲಿಬಾನಿನ ಸಹಸಂಸ್ಥಾಪಕ. ಆತ ಈ ಮದರಸಾದ ಹಳೆಯ ವಿದ್ಯಾರ್ಥಿ. ಜಗತ್ತಿನಲ್ಲೆಲ್ಲ ಭಯೋತ್ಪಾದನೆಯ ರಾಕ್ಷಸೀ ನೃತ್ಯ ನಡೆಸಿದ ಮುಲ್ಲಾ ಒಮರ್ ಈ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದವನು. ಹಕ್ಕಾನಿ ನೆಟ್ವರ್ಕ್ ಸೃಷ್ಟಿಸಿ, ಆ ಮೂಲಕ ಜಗತ್ತಿನಲ್ಲೆಲ್ಲ ಭಯದ ವಾತಾವರಣ ನಿರ್ವಿುಸಿರುವ ಜಲಾಲುದ್ದೀನ್ ಹಕ್ಕಾನಿ ಮತ್ತು ಅವನ ಮಗ ಸಿರಾಜುದ್ದೀನ್ ಹಕ್ಕಾನಿ ಇಲ್ಲಿಯೇ ಓದಿದವರು. ಸದ್ಯದ ಅಫ್ಘಾನಿಸ್ತಾನದ ತಾಲಿಬಾನಿ ಸರ್ಕಾರದಲ್ಲಿ ಜಲ ಸಚಿವನಾಗಿರುವ ಮುಲ್ಲಾ ಅಬ್ದುಲ್ ಲತೀಫ್, ದೂರಸಂಪರ್ಕ ಇಲಾಖೆಯ ಮಂತ್ರಿ ನಜ್ಬುಲ್ಲಾ ಹಕ್ಕಾನಿ ಮತ್ತು ನಿರಾಶ್ರಿತರ ಸಚಿವ ಖಲೀಲ್ ಉರ್ ರೆಹಮಾನ್ ಹಕ್ಕಾನಿ ಇವರೆಲ್ಲ ಈ ವಿದ್ಯಾಸಂಸ್ಥೆಯ ಉತ್ಪನ್ನಗಳೇ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಈ ಮದರಸಾದಿಂದ ಬಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೈಯ್ಯಲ್ಲಿ ಗನ್ನು ಹಿಡಿದು ಒಬ್ಬನನ್ನಾದರೂ ಕೊಂದು ಸ್ವರ್ಗಕ್ಕೇರುವ ಸಾಹಸ ಮಾಡಿಯೇ ಇರುತ್ತಾನೆ. ಹಾಗೆ ನೋಡಿದರೆ ಈ ಮದರಸಾದ್ದು 100% ರಿಸಲ್ಟು

ಮತ್ತು 100% ಪ್ಲೇಸ್​ವೆುಂಟು. ಅಚ್ಚರಿ ಎಂದರೆ ಇಲ್ಲಿ ಸೀಟು ಗಿಟ್ಟಿಸಲಿಕ್ಕೆ ಸಾಹಸವೇನೂ ಮಾಡಬೇಕಿಲ್ಲ. ‘ಅಫ್ಘಾನಿಸ್ತಾನದಿಂದ ಬಂದ ನಿರಾಶ್ರಿತ’ ಎಂದು ಹೇಳಿಕೊಂಡರೆ ಸಾಕು. ಮುಖ್ಯ ಮೌಲ್ವಿಗಳು ಕೆಂಪುಹಾಸನ್ನು ಹಾಸಿ ನಿಮ್ಮನ್ನೊಯ್ದು ಜಗತ್ತಿನ ಶ್ರೇಷ್ಠ ಮೌಲ್ವಿಗಳಿಂದ ಪಾಠ ಮಾಡಿಸುತ್ತಾರೆ. ಆಮೇಲೇನು? ಪ್ರಯೋಗ ಶಾಲೆಗಳಲ್ಲಿ ನಿರಂತರ ಪ್ರಯೋಗಗಳನ್ನು ಮಾಡುತ್ತ ವಿದ್ಯಾಲಯದಿಂದ ಹೊರಬರುವಾಗ ಅತ್ಯಾಧುನಿಕ ಅಸ್ತ್ರವೊಂದನ್ನು ಕೈಯ್ಯಲ್ಲಿ ಹಿಡಿದು ಗುರುಮೌಲ್ವಿ ಹೇಳಿದ ವ್ಯಕ್ತಿಯೆಡೆಗೆ ಗುಂಡು ಹಾರಿಸಿದರಾಯ್ತು. ಒಂದು ತಾಲಿಬಾನ್ ಸರ್ಕಾರ ನಿರ್ವಣಗೊಂಡಿರುವುದರಿಂದ ಇನ್ನು ಮುಂದೆ ಇನ್ನೊಂದಷ್ಟು ರಾಷ್ಟ್ರಗಳಲ್ಲಿ ಇವರ ಸರ್ಕಾರ ನಿರ್ವಣವಾದರೆ ಯಾರ್ಯಾರು ಎಷ್ಟೆಷ್ಟು ಜನರನ್ನು ಕೊಂದಿದ್ದಾರೋ ಅದರ ಆಧಾರದ ಮೇಲೆ ಪ್ರಮುಖ ಮಂತ್ರಿಗಿರಿ ಅವರದ್ದೇ.

ಈಗ ಹೇಳಿ, ದಾರುಲ್ ಉಲೂಮ್ ಹಕ್ಕಾನಿ ಜಗತ್ತಿನ ಶ್ರೇಷ್ಠ ಯುನಿವರ್ಸಿಟಿ ತಾನೇ? ನಾವಿಲ್ಲಿ ಐಐಟಿಗಳಲ್ಲಿ ಮಕ್ಕಳನ್ನು ಓದಿಸಿ, ಅವರು ಸಂಸ್ಕಾರವಂತರಾಗಿ ಜಗತ್ತಿನ ಯಾವ ಮೂಲೆಯಲ್ಲಾದರೂ ಕೆಲಸ ಮಾಡುತ್ತ ಆಯಾ ರಾಷ್ಟ್ರಗಳ ಗೌರವ ಹೆಚ್ಚಿಸುವಲ್ಲಿ ನಿರತರಾಗಿರಲಿ ಎಂದು ಭಾವಿಸಿದರೆ ಈ ಮದರಸಾಗಳು ಜಗತ್ತಿನ ನಾಶಕ್ಕೆ ಶಿಷ್ಯರನ್ನು ತಯಾರು ಮಾಡುವ ಪರಿ ಇದೆಯಲ್ಲ ಅದು ಅಚ್ಚರಿ ಮತ್ತು ಅಸಹ್ಯ ಎರಡನ್ನೂ ಏಕಕಾಲಕ್ಕೆ ಉಂಟುಮಾಡುವಂಥದ್ದು. ಇನ್ನೂ ಅಚ್ಚರಿಯ ಮತ್ತು ದುರದೃಷ್ಟಕರವಾದ ಸಂಗತಿ ಏನು ಗೊತ್ತೇ? ಇವೆಲ್ಲಕ್ಕೂ ಪಾಕಿಸ್ತಾನಕ್ಕೆ ಮಾರ್ಗದರ್ಶನ, ಹಣ ವ್ಯವಸ್ಥೆಯಾಗಿದ್ದು ಅಮೆರಿಕದಿಂದಲೇ. ಅದೊಂದು ದೊಡ್ಡ ಕಥೆ. ಭಾರತದೊಂದಿಗೆ ನಿರಂತರ ಯುದ್ಧಮಾಡಿ ಸೋತು ಬಸವಳಿದಿದ್ದ ಪಾಕಿಸ್ತಾನಕ್ಕೆ 1971ರ ಬಾಂಗ್ಲಾ ಕದನದ ನಂತರ ಹೆಚ್ಚು ಆಘಾತವಾಗಿತ್ತು. ಪ್ರತ್ಯಕ್ಷ ಯುದ್ಧದಲ್ಲಿ ತಿಪ್ಪರಲಾಗ ಹೊಡೆದರೂ ಭಾರತವನ್ನು ಸೋಲಿಸಲಾಗದು ಎಂದು ಅರಿತ ಪಾಕಿಸ್ತಾನ ಛದ್ಮಯುದ್ಧಕ್ಕೆ ತಯಾರಿ ಆರಂಭಿಸಿತು. ಈ ರೀತಿಯ ಯುದ್ಧಕ್ಕೆ ಹೆಚ್ಚಿನ ತಯಾರಿ ಮತ್ತು ಸೈದ್ಧಾಂತಿಕ ನೆಲೆಗಟ್ಟನ್ನು ಬಲಗೊಳಿಸುವ ಅವಶ್ಯಕತೆ ಬೇಕಾಗುತ್ತದೆ. ಇಸ್ಲಾಮಿನ ಸಿದ್ಧಾಂತ ಬಲಗೊಳಿಸಿ ಅದರ ಆಧಾರದ ಮೇಲೆ ಭಾರತದ ವಿರುದ್ಧ ಏರಿಹೋಗುವ ಜನರನ್ನು ತಯಾರು ಮಾಡಲು ಪಾಕಿಸ್ತಾನ ಆರಿಸಿಕೊಂಡಿದ್ದು ಮದರಸಾ ಶಿಕ್ಷಣವನ್ನು. ಈ ಮದರಸಾಗಳಿಗೆ ಬರುತ್ತಿದ್ದ ಸಾಮಾನ್ಯ ಜನರಿಗೆ ಮತೀಯ ಅಫೀಮು ಕುಡಿಸಿ ಅವರನ್ನು ಭಾರತವಿರೋಧಿ ಚಟುವಟಿಕೆಗಳಿಗೆ ತಯಾರು ಮಾಡುವ ಪ್ರಯತ್ನ ಆರಂಭವಾಯ್ತು. ಯಾವಾಗ ಮತದ ಅಡಿಪಾಯ ಬಲಗೊಳಿಸುವ ಪ್ರಯತ್ನ ಪಾಕಿಸ್ತಾನ ಮಾಡಿತೋ ಭಾರತೀಯ ಮುಸಲ್ಮಾನರು ಬಲಿಯಾಗಲಾರಂಭಿಸಿದರು.

1965ರಲ್ಲಿ ಪಾಕಿಸ್ತಾನದ ದಾಳಿಯ ಮುನ್ಸೂಚನೆ ಕೊಟ್ಟವರು ಸ್ಥಳೀಯ ಮುಸಲ್ಮಾನರೇ. ಭಾರತ ಆರಂಭದಲ್ಲಿ ಈ ಯುದ್ಧವನ್ನೆದುರಿಸುವಲ್ಲಿ ಹೆಣಗಾಡಿತಾದರೂ ಆನಂತರದ ದಿನಗಳಲ್ಲಿ ಅದರ ಮೇಲೊಂದು ಹಿಡಿತ ತಂದುಕೊಳ್ಳುವ ಪ್ರಯತ್ನ ಆರಂಭಿಸಿಬಿಟ್ಟಿತು. ಈಗ ಪಾಕಿಸ್ತಾನಕ್ಕೆ ಹೆಚ್ಚಿನ ಹಣ ಮತ್ತು ಆಧುನಿಕ ಶಸ್ತ್ರಾಸ್ತ್ರ ಬೇಕಾಗಿದ್ದವು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ರಷ್ಯನ್ನರ ವಿರುದ್ಧ ಶೀತಲಸಮರದಲ್ಲಿ ಜಯಗಳಿಸುವ ಧಾವಂತದಲ್ಲಿದ್ದ ಅಮೆರಿಕ ಅಫ್ಘಾನಿಸ್ತಾನದ ಮೇಲಿನ ರಷ್ಯನ್ನರ ಹಿಡಿತ ನಷ್ಟಗೊಳಿಸುವ ಪ್ರಯತ್ನಕ್ಕೆ ಪಾಕಿಸ್ತಾನವನ್ನು ಬಳಸಿಕೊಂಡಿತು. ಅಫ್ಘಾನಿಸ್ತಾನದಿಂದ 30-40 ಮೈಲುಗಳಷ್ಟು ಅಂತರದಲ್ಲಿರುವ ಪಷ್ತೂನ್ ಪ್ರದೇಶದಲ್ಲಿ ಮದರಸಾಗಳನ್ನು ಆರಂಭಿಸಿತು. ಈ ಮದರಸಾದಲ್ಲಿ ನೀಡುವ ಶಿಕ್ಷಣದಿಂದ ಅಫ್ಘಾನಿಸ್ತಾನದ ಜನರಿಗೆ ಆಕ್ರಮಣಕಾರಿ ರಷ್ಯನ್ನರನ್ನು ಎದುರಿಸುವ ಜ್ಞಾನ ನೀಡಲಾಗುತ್ತದೆ ಎಂಬಂತೆ ಮೇಲ್ನೋಟಕ್ಕೆ ಕಂಡರೂ, ಇದರಿಂದ ಲಾಭ ಪಡೆಯುವುದು ಅಮೆರಿಕ ಎಂಬುದು ಕಂಡುಬಂದರೂ, ವಾಸ್ತವವಾಗಿ ಬಲುದೊಡ್ಡ ಲಾಭವಾಗುತ್ತಿದ್ದುದು ಪಾಕಿಸ್ತಾನಕ್ಕೇನೇ! ಮೊದಲನೆಯದಾಗಿ ಅಪಾರ ಪ್ರಮಾಣದ ಡಾಲರು ಪಾಕಿಸ್ತಾನಕ್ಕೆ ಹರಿದು ಬರುತ್ತಿತ್ತು, ಜೊತೆಗೆ ಆಧುನಿಕ ಶಸ್ತ್ರಾಸ್ತ್ರಗಳೂ. ಎರಡನೆಯದ್ದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿರುವ ಪಷ್ತೂನಿಗಳನ್ನು ಸೇರಿಸಿಕೊಂಡು ಪ್ರತ್ಯೇಕ ಪಷ್ತೂನಿಸ್ತಾನ ನಿರ್ವಿುಸುವ ಈ ಮಂದಿಯ ಕನಸು ಶಾಶ್ವತವಾಗಿ ಇಲ್ಲವಾಗುವಂತೆ ಮಾಡುವ ಸಾಧ್ಯತೆಯೂ ಅಲ್ಲಿತ್ತು. ಸಹಜವೇ. ಪಷ್ತೂನೀ ಅಸ್ಮಿತೆಗಿಂತ ಇಸ್ಲಾಮೀ ಅಸ್ಮಿತೆ ದೊಡ್ಡದೆಂಬ ಪಾಠವನ್ನು ಮದರಸಾಗಳಲ್ಲಲ್ಲದೆ ಮತ್ತೆಲ್ಲಿ ಕೊಡಲು ಸಾಧ್ಯ? ರಷ್ಯನ್ನರು ತಮ್ಮ ಶಕ್ತಿ ಕಳೆದುಕೊಂಡು, ಈ ತರಬೇತಿ ಪಡೆದ ಭಯೋತ್ಪಾದಕರ ವಿರುದ್ಧ ಕಾದಾಡಲಾರದೆ ಅಫ್ಘಾನಿಸ್ತಾನ ಬಿಟ್ಟಮೇಲೆ, ಅಮೆರಿಕ ವಿಜಯೋತ್ಸವ ಆಚರಿಸಿತು. ವಾಸ್ತವವಾಗಿ ಗೆದ್ದಿದ್ದು ಪಾಕಿಸ್ತಾನ.

ಮುಂದೆ ಲಾಡೆನ್ ಅಮೆರಿಕ ಮೇಲೆ ದಾಳಿಮಾಡಿ ವರ್ಲ್ಡ್ ಟ್ರೇಡ್ ಸೆಂಟರ್​ನ ಕಟ್ಟಡವನ್ನು ಉರುಳಿಸಿದಾಗ ಅಮೆರಿಕ ಪತರಗುಟ್ಟಿಹೋಗಿತ್ತು. ತನ್ನದ್ದೇ ಹಣ, ತಾನೇ ಕೊಡಿಸಿದ ಶಿಕ್ಷಣ, ತನ್ನದ್ದೇ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ತನ್ನ ವಿರುದ್ಧವೇ ತಿರುಗಿಬಿದ್ದಿದ್ದ ಪರಿಯನ್ನು ಕಂಡು ಅಮೆರಿಕ ಕೆಂಡ-ಕೆಂಡವಾಗಿತ್ತು. ಹಾಗಂತ ಹೀಗಾಯ್ತೆಂದು ಯಾರಿಗೂ ಹೇಳುವಂತೆಯೂ ಇರಲಿಲ್ಲ. ಅಮೆರಿಕ ತನ್ನ ಸಾಮರ್ಥ್ಯ ಪ್ರದರ್ಶಿಸುವ ಹೊತ್ತು ಬಂದೇಬಿಡ್ತು. ಲಾಡೆನ್ ಶರಣಾಗದಿದ್ದರೆ ದಾಳಿ ಮಾಡುವುದಾಗಿ ಎಚ್ಚರಿಸಿದಾಗ್ಯೂ ಅಲ್​ಖೈದಾ ಬಗ್ಗಲಿಲ್ಲ. ಸಿಐಎ ಮತ್ತು ಸ್ಪೆಷಲ್ ಆಪರೇಶನ್ ತಂಡ ಗೈಡೆಡ್ ಬಾಂಬುಗಳ ಮೂಲಕ ಅಮೆರಿಕ ಕರಾರುವಾಕ್ಕು ದಾಳಿ ನಡೆಸಿತು. ಒಸಾಮಾ ಮತ್ತವನ ಭಯೋತ್ಪಾದಕ ಮಿತ್ರರು ತೊರಾಬೋರಾ ಬೆಟ್ಟಗಳ ಹಿಂದೆ ಬಚ್ಚಿಟ್ಟುಕೊಂಡುಬಿಟ್ಟರು. ಉರುಳನ್ನು ಇನ್ನು ಸ್ವಲ್ಪ ಬಿಗಿಗೊಳಿಸಿದ್ದರೆ ಭಯೋತ್ಪಾದನೆ ವಿರುದ್ಧ ಕದನ ಮುಗಿದೇಹೋಗುತ್ತಿತ್ತೇನೋ. ಆದರೆ ಅಮೆರಿಕ ಸ್ವಲ್ಪ ಹಿಂದೇಟು ಹಾಕಿತು. ಲಾಡೆನ್ ಅದಾಗಲೇ ತನ್ನನ್ನೂ ತನ್ನ ಮಿತ್ರರನ್ನೂ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದ. ಸಿಐಎ ಅಧಿಕಾರಿ ತನ್ನ ಕೃತಿ ‘ಜಾ ಬ್ರೇಕರ್: ದ ಅಟ್ಯಾಕ್ ಆನ್ ಬಿನ್​ಲಾಡೆನ್ ಅಂಡ್ ಅಲ್​ಖೈದಾ’ ಕೃತಿಯಲ್ಲಿ ಇದನ್ನು ವರ್ಣಿಸುತ್ತ ಬಿನ್​ಲಾಡೆನ್​ನ ಕ್ಷಮಾಪಣೆ ವಿವರ ರೇಡಿಯೊದಲ್ಲಿ ಬರುತ್ತಿದ್ದಂತೆ ಈ ಮರಿಯನ್ನು ಈಗಲೇ ಚಿವುಟುವುದು ಒಳ್ಳೇದು ಎಂದು ಹೇಳಿದ್ದನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅಮೆರಿಕ ಸಂಕಲ್ಪ ಮಾಡಲಿಲ್ಲ. ಪರಿಣಾಮ ಅಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸುವಲ್ಲಿ ಸೋತಿತು. ಗಮನವನ್ನು ಇರಾಕಿನತ್ತ ಹೊರಳಿಸಿತು. ಈ ಅವಕಾಶವನ್ನು ಬಳಸಿಕೊಂಡ ಲಾಡೆನ್ ಪರಾರಿಯಾಗಿದ್ದು ಪಾಕಿಸ್ತಾನಕ್ಕೆ. ಅಚ್ಚರಿಯಲ್ಲವೇ?

ಅಮೆರಿಕದ ಬಲುಮಿತ್ರ ರಾಷ್ಟ್ರ ಎಂದು ಗುರುತಿಸಿಕೊಂಡ ಪಾಕಿಸ್ತಾನವೇ ಲಾಡೆನ್​ಗೆ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದು. ಅತ್ತ ಅಮೆರಿಕದ ವಿರುದ್ಧ ಸಮಸಮಕ್ಕೆ ಸೆಣೆಸಿದ ಇರಾಕಿನ ಪಡೆ ತಾಲಿಬಾನಿಗಳಿಗೆ ಹೊಸ ಉತ್ಸಾಹ ತಂದಿತು. ಇದೇ ಮಾದರಿಯಲ್ಲಿ ಅಫ್ಘಾನಿಸ್ತಾನದಲ್ಲೂ ಸೆಣಸಾಟ ನಡೆಸಬಹುದೆಂದು ಅವರು ಭಾವಿಸಿದ್ದಲ್ಲದೆ ಅದಕ್ಕೆ ಸಿದ್ಧತೆ ಆರಂಭಿಸಿದರು. ಒಂದೆಡೆ ಲಾಡೆನ್ ಸುರಕ್ಷಿತವಾಗಿ ಪಾಕಿಸ್ತಾನದಲ್ಲಿದ್ದರೆ ಮತ್ತೊಂದೆಡೆ ಹೊಸದಾಗಿ ರೂಪುಗೊಂಡಿದ್ದ ತಾಲಿಬಾನಿಗಳು ಅಮೆರಿಕ ವಿರುದ್ಧ ಸೆಣಸಾಟಕ್ಕೆ ಶಕ್ತಿ ಕ್ರೋಡೀಕರಿಸಲಾರಂಭಿಸಿದರು. ಅವರು ಬಳಸಿದ ಗೆರಿಲ್ಲಾ ಮಾದರಿ ಯುದ್ಧ ಅಮೆರಿಕನ್ನರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತು. ಅಮೆರಿಕದ ನಾಲ್ವರು ಅಧ್ಯಕ್ಷರು ಅಫ್ಘಾನಿಸ್ತಾನದ ಕಪಿಮುಷ್ಟಿಯಿಂದ ಬಿಡಿಸಿಕೊಂಡರೆ ಸಾಕು ಎಂಬ ಒತ್ತಡಕ್ಕೆ ಸಿಲುಕಿದವರೇ. ಆದರೆ, ಜೊ ಬೈಡೆನ್ ಈ ಭಯೋತ್ಪಾದಕರ ಮುಂದೆ ಪೂರ್ಣ ಶರಣಾಗಿಬಿಟ್ಟರು. ಕೊನೆಗೊಂದು ದಿನ ಆಗಸ್ಟ್ 31ರ ಬೆಳಗ್ಗೆ ‘ಅಮೆರಿಕನ್ನರು ಅಫ್ಘಾನಿಸ್ತಾನ ಬಿಟ್ಟು ತೊಲಗಲಿಲ್ಲವೆಂದರೆ ಅವರ ಸಾವಿಗೆ ನಾವು ಜವಾಬ್ದಾರರಲ್ಲ’ ಎಂದೂ ತಾಲಿಬಾನ್ ಹೇಳಿಕೆ ಕೊಟ್ಟಿತು. ಅಲ್ಲಿಗೆ ಅಮೆರಿಕದ ಸಾರ್ವಭೌಮತೆ ಸತ್ತಂತಾಯ್ತು. ಮತ್ತೆ ಲಾಭವಾದದ್ದು ಪಾಕಿಸ್ತಾನಕ್ಕೆ.

ಪಾಕಿಸ್ತಾನ ಮುಂಚಿನಿಂದಲೂ ಅಫ್ಘಾನಿಸ್ತಾನ ವಿಚಾರದಲ್ಲಿ ಕೈಯ್ಯಾಡಿಸುತ್ತಲೇ ಬಂದಿದೆ. ತೊಂಬತ್ತರ ದಶಕದಲ್ಲಿ ತಾಲಿಬಾನ್ ಸರ್ಕಾರ ರಚಿಸಿದಾಗ ಅಲ್ಲಿನ ರಸ್ತೆನಿರ್ವಣ, ಭಯೋತ್ಪಾದಕರಿಗೆ ಬೇಕಾದ ವೈರ್​ಲೆಸ್ ನೆಟ್​ವರ್ಕ್​ಗಳ ಜೋಡಿಸುವಿಕೆ, ರೇಡಿಯೋ ಸ್ಟೇಷನ್ ಆರಂಭಿಸುವುದರಲ್ಲಿ, ಮತ್ತಿತರ ಅನೇಕ ಚಟುವಟಿಕೆಗಳಲ್ಲಿ ಸಹಕಾರ ಕೊಟ್ಟಿದ್ದು ಪಾಕಿಸ್ತಾನವೇ. ಶೇಕಡ 40ರಷ್ಟು ತಾಲಿಬಾನಿ ಹೋರಾಟಗಾರರು ಪಾಕಿಸ್ತಾನದವರೇ. ಅಂದರೆ ಮೇಲ್ನೋಟಕ್ಕೆ ಹೋರಾಟ ತಾಲಿಬಾನಿಗಳದ್ದೇ ಎನ್ನುವುದಾದರೂ ನಿಜಾರ್ಥದಲ್ಲಿ ಅದರ ಹಿಂದೆ ಶಕ್ತಿಯಾಗಿರುವುದು ಪಾಕಿಸ್ತಾನವೇ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಯಾಗುವುದು ಪಾಕಿಸ್ತಾನಕ್ಕೆ ಸುತರಾಂ ಇಷ್ಟವಿಲ್ಲ. ಹೀಗಾಗಿ ಹಿಂದೊಮ್ಮೆ ಅಬ್ದುಲ್ ಗನಿಯೊಂದಿಗೆ ಮಾತುಕತೆ ನಡೆಸಿದ ಅಬ್ದುಲ್ ಬರಾದಾರ್​ನನ್ನು ಎಂಟು ವರ್ಷಗಳ ಕಾಲ ಜೈಲಿಗಟ್ಟಿತ್ತು ಪಾಕಿಸ್ತಾನ.

ಅಮೆರಿಕದ ದಾಳಿಗೆ ಭಯೋತ್ಪಾದಕರು ಮೂಲೆಗುಂಪಾಗಿದ್ದಾಗಲೂ ಅವರಿಗೆ ಶಕ್ತಿ ತುಂಬುತ್ತಿದ್ದುದು ಪಾಕಿಸ್ತಾನವೇ. ಈಗಂತೂ ಸರ್ಕಾರ ರಚನೆ, ಗೂಢಚರ ನಿರ್ವಹಣೆಯಲ್ಲಿ ಪಾಕಿಸ್ತಾನದ ಐಎಸ್​ಐ ನಿರ್ವಹಿಸುತ್ತಿರುವ ಪಾತ್ರವನ್ನು ಇಡಿಯ ಜಗತ್ತು ಮಾತನಾಡಿಕೊಳ್ಳುತ್ತಿದೆ. ಪಂಜಶಿರ್​ನಲ್ಲಿ ತಾಲಿಬಾನಿಗಳನ್ನು ತಡೆಯುವ ಅಮರುಲ್ಲಾ ಸಾಲೆಹ್​ಯು ಹೋರಾಟ ತೀವ್ರವಾಗಿ ನಡೆಯುತ್ತಿದೆಯಲ್ಲ, ಅಲ್ಲೆಲ್ಲ ತಾಲಿಬಾನಿಗಳ ಪರವಾಗಿ ನಿಂತು ಪಾಕಿಸ್ತಾನಿ ಸೈನಿಕರು ಕಾದಾಡುತ್ತಿರುವುದಲ್ಲದೆ ಪಾಕಿಸ್ತಾನದ ಹೆಲಿಕಾಪ್ಟರ್​ಗಳು ಆ ಭಾಗದಲ್ಲಿ ಹಾರಾಡುತ್ತಿವೆ. ಪಾಕಿಸ್ತಾನಕ್ಕೆ ಶತಾಯ-ಗತಾಯ ಅಫ್ಘಾನಿಸ್ತಾನವನ್ನು ತನ್ನ ಅಂಗವಾಗಿ ಮಾಡಿಕೊಳ್ಳಬೇಕೆಂಬ ಬಯಕೆ ಇದೆ. ಅದಕ್ಕೀಗ ಚೀನಾದ ಸಹಕಾರ ಅದರ ಬೆನ್ನಿಗಿದೆ. ನಶೆ ಏರಿಸಿಕೊಂಡ ಭಯೋತ್ಪಾದಕರು ದೊರೆಗಳ ಮಾತನ್ನು ಕೇಳುತ್ತಾರೆಂಬ ವಿಶ್ವಾಸವಿಲ್ಲ.

ಮುಂದೊಂದು ದಿನ ಪಾಕಿಸ್ತಾನವನ್ನೇ ಒಡೆದು ಪಷ್ತೂನ್​ಗಳನ್ನು ಸೇರಿಸಿಕೊಂಡು ವಿಸõತ ಅಫ್ಘಾನಿಸ್ತಾನ ನಿರ್ವಿುಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಬ್ರಿಟಿಷರು ಎಳೆದ ಗಡಿರೇಖೆಯನ್ನು ನಾವು ಹೇಗೆ ಒಪು್ಪವುದಿಲ್ಲವೋ ಹಾಗೆಯೇ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಡ್ಯುರಾಂಡ್ ಲೈನನ್ನು ಆ ಎರಡೂ ರಾಷ್ಟ್ರಗಳು ಒಪ್ಪುವುದಿಲ್ಲ. ಅದಕ್ಕೆ ಕದನ ಇಲ್ಲಿಗೆ ಮುಗಿಯುವಂತೆ ಕಾಣುವುದಿಲ್ಲ. ಜಗತ್ತಿನ ನಾಶವನ್ನು ಬಯಸಿದ ಪ್ರತಿಯೊಬ್ಬ ತಾನೂ ನಾಶವಾಗಲೇಬೇಕು ಎಂಬುದು ಇತಿಹಾಸದುದ್ದಕ್ಕೂ ಕಂಡು ಬಂದಿರುವ ಅಂಶ. ಈ ಹಿನ್ನೆಲೆಯಲ್ಲಿ ನೋಡಿದಾಗ ಪಾಕಿಸ್ತಾನ ತನ್ನ ತಾನು ನಾಶಮಾಡಿಕೊಳ್ಳುವ ಹೊಸ್ತಿಲಲ್ಲಿ ನಿಂತಿದೆ ಎಂಬುದಂತೂ ಕಣ್ಣಿಗೆ ರಾಚುತ್ತಿದೆ!

ಈ ಹೊತ್ತಲ್ಲಿ ಭಾರತ ಏನು ಮಾಡುತ್ತಿದೆ? ಅದಾಗಲೇ ರಷ್ಯನ್ನರ ಜೊತೆ ಮಾತುಕತೆ ಮುಗಿಸಿದೆ. ಈ ಮಾತುಕತೆ ಪ್ರಭಾವವೇ ಎಂದು ಹೇಳಲು ಬರುವುದಿಲ್ಲವಾದರೂ ರಷ್ಯಾ ತಾಲಿಬಾನಿಗಳ ಸರ್ಕಾರ ನಿರ್ವಣವಾದಾಗ ತಾನು ಅಲ್ಲಿಗೆ ಹೋಗುವುದಿಲ್ಲ ಎಂದಿದ್ದು ಕಾಕತಾಳೀಯವಂತೂ ಆಗಿತ್ತು. ಆಸ್ಟ್ರೇಲಿಯಾದೊಂದಿಗೆ ಇತ್ತೀಚೆಗಷ್ಟೇ 2+2 ಮಾತುಕತೆ ನಡೆದಿದೆ. ಅದೂ ಇಂಥದ್ದೇ ಪ್ರಬಲವಾದ ಸಂದೇಶವನ್ನು ಹೊರಹಾಕಿದೆ. ದುರ್ಬಲವಾಗಿರುವ ಅಮೆರಿಕದೆದುರಿಗೆ, ದುಷ್ಟವಾಗಿರುವ ಚೀನಾದೆದುರಿಗೆ ಸಜ್ಜನರ ಶಕ್ತಿಯನ್ನು ಕ್ರೋಡೀಕರಿಸುವ ಭಾರತದ ಪ್ರಯತ್ನ ಯಶಸ್ವಿಯಾಗುತ್ತಿದೆ. ಹಾಗಂತ ನಾವು ದುರ್ಬಲರಾಗಿ ಈ ಪ್ರಯತ್ನ ಮಾಡುತ್ತಿಲ್ಲ. ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾಕ್ಕೆ ತಿರುಗೇಟು ನೀಡಿದ ನಂತರ ಚೀನಾ ಒಂದು ಪ್ರಾಪಗ್ಯಾಂಡಾ ವಿಡಿಯೋ ಬಿಡುಗಡೆ ಮಾಡಿತು. ಮಂಜಿನ ಬೆಟ್ಟಗಳ ಮೇಲಿರುವ ತನ್ನ ಸೈನಿಕರಿಗೆ ಡ್ರೋನ್​ಗಳಲ್ಲಿ ಆಹಾರ, ಮದ್ದುಗುಂಡು ತಲುಪಿಸುವ ವಿಡಿಯೋ ಅದು. ಭಾರತಕ್ಕೆ ಈ ಅವಕಾಶವಿಲ್ಲವಲ್ಲ ಎಂದು ಮೂದಲಿಸುವ ಪ್ರಯತ್ನವೂ ಹೌದು. ಅದಕ್ಕೆ ನಾವು ಉತ್ತರಿಸಿರುವುದು ಹೇಗೆ ಗೊತ್ತೇ? ಭಾರತವೇ ನಿರ್ಮಾಣ ಮಾಡಿರುವ 48 ಕಾರ್ಗೆ ಡ್ರೋನ್​ಗಳನ್ನು ಕೊಂಡುಕೊಳ್ಳುವ ಮೂಲಕ. ಹೌದು. ರ್ಯಾಫೆ ಎನ್ನುವ ಕಂಪನಿ ಅಭಿವೃದ್ಧಿಪಡಿಸಿರುವ ಎಮ್​ರ್ 20 ಡ್ರೋನ್​ಗಳು ಎತ್ತರದ ಪ್ರದೇಶಗಳಲ್ಲಿ ಇತ್ತೀಚೆಗಷ್ಟೇ ಪರೀಕ್ಷೆ ನಡೆಸಿವೆ. ಒಮ್ಮೆ ಈ ತಂತ್ರಜ್ಞಾನದಲ್ಲಿ ನಾವು ಪರಿಣಿತಿ ಪಡೆದಮೇಲೆ ಚೀನಾ ಸಲೀಸಾಗಿ ನಮ್ಮನ್ನು ತಡೆಯುವುದು ಕಷ್ಟ. ಏನೇ ಹೇಳಿ, ಕೇಂದ್ರದಲ್ಲಿ ಮೋದಿಯೊಬ್ಬರಿರುವುದಕ್ಕೆ ಮನಸ್ಸಿಗೊಂದು ಅವ್ಯಕ್ತವಾದ ಧೈರ್ಯ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net