

| ಉಮೇಶ್ ಕುಮಾರ್ ಶಿಮ್ಲಡ್ಕ ಬೆಂಗಳೂರು
ಕೋವಿಡ್ 19 ಸೋಂಕಿನ ಸಂಕಷ್ಟದ ಕಾರಣ ಕಳೆದ ಎರಡು ವರ್ಷಗಳ ಅವಧಿ ಯುವ ಸಮೂಹದ ಪಾಲಿಗೆ ಅತ್ಯಂತ ಸಂಕಷ್ಟಮಯವಾದುದಾಗಿತ್ತು. ಅನೇಕರು ಉದ್ಯೋಗ ಕಳೆದುಕೊಂಡಿದ್ದರು, ಆರ್ಥಿಕ ಸಂಕಷ್ಟ ಎದುರಿಸಿದ್ದರು ಮತ್ತು ಎದುರಿಸುತ್ತಿದ್ದಾರೆ. ಕೋವಿಡ್ ಸಂಕಷ್ಟದ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಭಾಸವಾಗುತ್ತಿದೆ. ಹೀಗಾಗಿ, ಒಂದು ಸಲ ನಿಂತೇ ಹೋಗಿದ್ದ ಬಹುತೇಕ ವಾಣಿಜ್ಯ ಚಟುವಟಿಕೆಗಳು ಮತ್ತೆ ನಿಧಾನವಾಗಿ ಗರಿಗೆದರಿವೆ. ಕಳೆದ ಮೇ ತಿಂಗಳಿಂದೀಚೆಗೆ ಹಂತ ಹಂತವಾಗಿ ಪ್ರಗತಿ ಪಥದಲ್ಲಿ ಮುಂದುವರಿಯತೊಡಗಿವೆ. ಕೋವಿಡ್ ಬಂದ ನಂತರದಲ್ಲಿ ಕೈಗಾರಿಕೆ, ವಹಿವಾಟುಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಉದ್ಯೋಗ ನೇಮಕಕ್ಕೆ ಸಂಬಂಧಿಸಿದ ಹಲವು ವೇದಿಕೆಗಳು ಪ್ರಕಟಿಸಿರುವ ವರದಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಸಾಫ್ಟ್ವೇರ್, ಹಾರ್ಡ್ ವೇರ್, ಟೆಲಿಕಾಂ ಮುಂತಾದ ಕ್ಷೇತ್ರಗಳಲ್ಲಿ ಶೇಕಡ 35ರಷ್ಟು ಹೆಚ್ಚು ಉದ್ಯೋಗ ಸೃಷ್ಟಿಯಾಗಿವೆ. ಅಲ್ಲದೆ ಈ ವಲಯದಲ್ಲಿ ಉದ್ಯೋಗ ಸೃಜನೆ ನಿರಂತರವಾಗಿ ಸಾಗಿದೆ. ಜೂನ್ ತಿಂಗಳಿಗಿಂತ ಜುಲೈನಲ್ಲಿ ಶೇಕಡ 11ರ ಪ್ರಮಾಣದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಕಳೆದ ತಿಂಗಳು ಪ್ರವಾಸೋದ್ಯಮ ವಲಯದಲ್ಲಿ ಶೇಕಡ 35 ಹೆಚ್ಚು ಉದ್ಯೋಗ ಸೃಷ್ಟಿಯಾಗಿದ್ದು, ಯುವಜನರ ನೆರವಿಗೆ ಬಂದಿದೆ. ಈ ವಲಯದಲ್ಲಿ ಉದ್ಯೋಗ ಸೃಜನೆ ಪ್ರಮಾಣ ಮೇ ತಿಂಗಳಿಗೆ ಹೋಲಿಸಿದರೆ ಜೂನ್ನಲ್ಲಿ ಶೇಕಡ 3 ಬೆಳವಣಿಗೆ ಕಂಡಿತ್ತು. ಹಾಗೆಂದು ಎಲ್ಲ ವಲಯಗಳಲ್ಲೂ ಉದ್ಯೋಗ ಸೃಜನೆಯಾಗುತ್ತಿದೆ ಎಂದರ್ಥವಲ್ಲ. ಜುಲೈ ತಿಂಗಳಲ್ಲಿ ಫಾರ್ವ, ಬಯೋಟೆಕ್, ಕ್ಲಿನಿಕಲ್ ರಿಸರ್ಚ್ ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗ ಸೃಜನೆ ಪ್ರಮಾಣ ಶೇಕಡ 5, ಮಾಧ್ಯಮ, ಡಾಟ್ಕಾಮ್ ಮನರಂಜನಾ ವಲಯದಲ್ಲಿ ಶೇಕಡ 15ರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಶೇಕಡ 24ರಷ್ಟು ನೇಮಕಾತಿ ಇಳಿಕೆಯಾಗಿದೆ.
ಮಹಾನಗರಗಳಲ್ಲಿ ಉದ್ಯೋಗ...: ಮಹಾನಗರ ಪ್ರದೇಶಗಳಲ್ಲಿ ಉದ್ಯೋಗ ಸೃಜನೆ ಪ್ರಮಾಣ ಕಳೆದ ವರ್ಷದ ಜೂನ್ಗೆ ಹೋಲಿಸಿದರೆ ಈ ವರ್ಷ ಜೂನ್ನಲ್ಲಿ ಶೇಕಡ 50 ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇಕಡ 50ಕ್ಕಿಂತ ಹೆಚ್ಚಿದೆ. ಪುಣೆ, ಹೈದರಾಬಾದ್, ಚೆನ್ನೈನಂತಹ ಮಹಾನಗರಗಳಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಶೇಕಡ 20ಕ್ಕಿಂತ ಹೆಚ್ಚು ಏರಿಕೆಯಾಗಿವೆ. ನೌಕ್ರಿ ಡಾಟ್ ಕಾಮ್ ವರದಿ ಪ್ರಕಾರ, ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಶೇಕಡ 11 ಉದ್ಯೋಗ ಸೃಷ್ಟಿಯಾಗಿದ್ದು, ಯುವಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕರೊನಾ ಪೂರ್ವದ ಅವಧಿಯ ಅಂಕಿ ಅಂಶ ಗಮನಿಸಿದರೂ ಇದು ಈ ವರೆಗಿನ ಗರಿಷ್ಠ ಮಟ್ಟದ ಉದ್ಯೋಗ ಸೃಜನೆ ಎನ್ನುತ್ತಿವೆ ವಿಶ್ಲೇಷಣೆಗಳು. ಮಾನ್ಸ್ಟರ್ ಡಾಟ್ ಕಾಮ್ ಇತ್ತೀಚಿನ ಮಾಹಿತಿ ಪ್ರಕಾರ, ಕಳೆದ ಆರು ತಿಂಗಳಲ್ಲಿ 6 ಶೇಕಡಾ ಹೆಚ್ಚು ನೇಮಕಾತಿ ನಡೆದಿದೆ. ಅಲ್ಲದೆ, ಕಳೆದ ವರ್ಷದ ಜೂನ್ಗೆ ಹೋಲಿಸಿದರೆ ಈ ವರ್ಷದ ಜೂನ್ನಲ್ಲಿ ಶೇಕಡ 7ಕ್ಕಿಂತ ಹೆಚ್ಚು ಯುವಜನರು ಉದ್ಯೋಗ ಪಡೆದುಕೊಂಡಿದ್ದಾರೆ.
ನಿರುದ್ಯೋಗ ಪ್ರಮಾಣ: ಸಿಎಂಐಇ ವರದಿ ಪ್ರಕಾರ, ಮೇ ತಿಂಗಳಲ್ಲಿ ಶೇಕಡ 12 ಇದ್ದ ನಿರುದ್ಯೋಗ ಪ್ರಮಾಣ, ಜುಲೈನಲ್ಲಿ ಶೇಕಡ 7ಕ್ಕೆ ಇಳಿದಿದೆ. ಕೋವಿಡ್ ಸಾಂಕ್ರಾಮಿಕದ ಪರಿಣಾಮ ಕಳೆದ ವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ಶೇಕಡ 20ಕ್ಕಿಂತ ಹೆಚ್ಚು ನಿರುದ್ಯೋಗ ದಾಖಲಾಗಿತ್ತು. ಈ ಅವಧಿಯಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದರು. ಬಹಳಷ್ಟು ಕಿರು ಉದ್ಯಮಗಳು ಮುಚ್ಚಿಹೋಗಿದ್ದವು.
ಏರುಗತಿಯಲ್ಲಿ ಉದ್ಯೋಗ ಮಾರುಕಟ್ಟೆ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತೀವ್ರ ಕುಸಿತ ಕಂಡಿದ್ದ ಭಾರತದ ಉದ್ಯೋಗ ಮಾರುಕಟ್ಟೆ ಸತತ ಎರಡನೇ ತಿಂಗಳು ಕೂಡ ಏರಿಕೆ ದಾಖಲಿಸಿದೆ. ಎಲ್ಲ ಸೆಕ್ಟರ್ಗಳ ನೇಮಕ ಪ್ರಮಾಣ ಸರಾಸರಿ ಶೇಕಡ 11ರಷ್ಟಿದೆ. ಜೂನ್ ತಿಂಗಳಲ್ಲಿ ಇದು ಶೇಕಡ 15 ದಾಖಲಾಗಿತ್ತು. ನೌಕ್ರಿ ಡಾಟ್ ಕಾಮ್ ಜಾಬ್ ಸ್ಪೀಕ್ ವರದಿ ಪ್ರಕಾರ, ಐಟಿ ಮತ್ತು ಐಟಿಇಎಸ್ ಕ್ಷೇತ್ರಗಳ ಉದ್ಯೋಗ ನೇಮಕಾತಿ ಜುಲೈನಲ್ಲಿ ಶೇಕಡ 18 ದಾಖಲಾಗಿತ್ತು. ದೇಶದ ಪ್ರೀಮೀಯರ್ ಇಂಡೆಕ್ಸ್ನಲ್ಲಿ ಹೈರಿಂಗ್ ಟ್ರೆಂಡ್ ಶೇಕಡ 11 ಪ್ರಗತಿ ದಾಖಲಿಸಿ 2,625 ಅಂಶ ತಲುಪಿದೆ. ಇದು ಸಾರ್ವ ಕಾಲಿಕ ಎತ್ತರದ ದಾಖಲೆಯೂ ಹೌದು.
ಕಳೆದ ವರ್ಷಕ್ಕೆ ಹೋಲಿಸಿದರೆ ನೇಮಕಾತಿಯಲ್ಲಿ ಶೇ.8 ಏರಿಕೆ: ಮಾನ್ಸ್ಟರ್ ಉದ್ಯೋಗ ಸೂಚ್ಯಂಕ (ಎಂಇಐ)ದ ಡೇಟಾ ಪ್ರಕಾರ, ಜೂನ್ಗೆ ಹೋಲಿಸಿದರೆ ಜುಲೈನಲ್ಲಿ ಉದ್ಯೋಗ ನೇಮಕ ಪ್ರಕ್ರಿಯೆ ಶೇಕಡ 4 ಏರಿಕೆ ಆಗಿದೆ. ಇದೇ ರೀತಿ ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷ ಜುಲೈನಲ್ಲಿ ಉದ್ಯೋಗ ನೇಮಕದಲ್ಲಿ ಶೇಕಡ 8 ಪ್ರಗತಿ ಕಂಡುಬಂದಿದೆ. ಐಟಿ ಹಾರ್ಡ್ ವೇರ್, ಸಾಫ್ಟ್ ವೇರ್ ಕೈಗಾರಿಕೆ ಕ್ಷೇತ್ರದಲ್ಲಿ ವೃತ್ತಿಪರರ ನೇಮಕ ದಲ್ಲಿ ಶೇಕಡ 39 ಏರಿಕೆ ದಾಖಲಾಗಿದೆ.
ಸಾರ್ವಕಾಲಿಕ ಎತ್ತರದಲ್ಲಿದೆ ಐಟಿ ಹೈರಿಂಗ್: ಇನ್ಫಾಮೇಶನ್ ಟೆಕ್ನಾಲಜಿ (ಐಟಿ) ಮತ್ತು ಇನ್ಫಾಮೇಶನ್ ಟೆಕ್ನಾಲಜಿ ಎನೇಬಲ್ಡ್ ಸರ್ವೀಸಸ್ (ಐಟಿಇಎಸ್) ಕ್ಷೇತ್ರದಲ್ಲಿ ಸದ್ಯ ಉದ್ಯೋಗ ನೇಮಕಾತಿ ಸಾರ್ವಕಾಲಿಕ ಎತ್ತರದ ಸ್ತರದಲ್ಲಿದೆ.