

ಕನ್ನಡ ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸಿದ ಪಂಪ, ಜನ್ನ, ರನ್ನ, ನಾಗಚಂದ್ರ ಮುಂತಾದ ಕವಿಗಳಿಗೆ ಪ್ರೇರಣೆ ನೀಡಿದ ಕೃತಿ ಜಿನಸೇನಾಚಾರ್ಯರ ‘ಮಹಾಪುರಾಣ’. ಇದನ್ನು ಇಪ್ಪತ್ತು ವಿದ್ವಾಂಸರೊಂದಿಗೆ ಶಿಕ್ಷಣತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ನಾಳೆ (ಮಾ. 6) ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ‘ಮಹಾಪುರಾಣ’ದ ಪರಿಚಯಾತ್ಮಕ ಬರಹ ಇಲ್ಲಿದೆ.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿಪುಂಗವರಿಗೆ ಪ್ರಭಾವ ಬೀರಿದ್ದು ಜಿನಸೇನಾಚಾರ್ಯರ ‘ಜೈನ ಮಹಾಪುರಾಣ’ ಕೃತಿ ಎಂಬ ಮಾತಿದೆ. ಹತ್ತರಿಂದ ಹನ್ನೆರಡನೇ ಶತಮಾನದವರೆಗೆ ಸಾಹಿತ್ಯಕ್ಷೇತ್ರವನ್ನು ಆಳಿಹೋದ ಪಂಪ, ಪೊನ್ನ, ಜನ್ನ, ರನ್ನ, ನಾಗಚಂದ್ರ, ಇಮ್ಮಡಿ ನಾಗವರ್ಮ - ಹೀಗೆ ಹತ್ತಾರು ಕವಿಗಳಿಗೆ ಈ ಕೃತಿಯೇ ಪ್ರೇರಣೆ ಎಂಬ ಅಭಿಪ್ರಾಯ ನಾಡಿನ ಸಂಶೋಧಕರಲ್ಲಿದೆ. ಅದಕ್ಕೆ ಒಂದಷ್ಟು ಪುಷ್ಟಿ ನೀಡುವ ಕಾರಣಗಳನ್ನೂ ನೀಡುತ್ತಾರೆ.
ಎಂಟನೇ ಶತಮಾನದಲ್ಲಿ ನಿರ್ವಣಗೊಂಡ ಎಲ್ಲೋರಾದ ಕೈಲಾಸನಾಥ ದೇವಸ್ಥಾನ ಬೆಳಕಿಗೆ ಬಾರದಿದ್ದರೆ ಹಾಗೂ ಸಂಸ್ಕೃತದಲ್ಲಿ ರಚನೆಗೊಂಡ ಮಹಾಪುರಾಣ ಮತ್ತು ಶ್ರೀವಿಜಯ ರಚಿಸಿದ ಕಾವ್ಯಗಳು ಪ್ರಕಾಶಮಾನಗೊಳ್ಳದಿದ್ದರೆ ಭಾರತದ ಸಾಂಸ್ಕೃತಿಕ ಸಾಹಿತ್ಯ ಚರಿತ್ರೆಯಲ್ಲಿ ರಾಷ್ಟ್ರಕೂಟರ ಆಳ್ವಿಕೆ ಮಹತ್ವ ಪಡೆಯುತ್ತಿರಲಿಲ್ಲ ಎಂದು ಘನ ವಿದ್ವಾಂಸ ಪ್ರೊ. ಷ. ಶೆಟ್ಟರ್ ಅವರೇ ಅಭಿಪ್ರಾಯಪಟ್ಟಿದ್ದುಂಟು.
ಹೀಗೆ ಕರ್ನಾಟಕದ ಇತಿಹಾಸದಲ್ಲಿ ಜೈನ ಮಹಾಪುರಾಣ ಮಹತ್ವದ ಪಾತ್ರ ವಹಿಸಿದೆ. ಇನ್ನು ಈ ಕೃತಿಯ ಬಗ್ಗೆ ಒಂದು ಸುತ್ತುಬಂದರೆ, ಬೃಹತ್ ಜ್ಞಾನಭಂಡಾರದ ಆಗರವಿದು. ಮೇರುಕೃತಿ ‘ಮಹಾಪುರಾಣ’ವನ್ನು ಒಂಬತ್ತನೇ ಶತಮಾನದಲ್ಲಿ ರಾಷ್ಟ್ರಕೂಟರ ಆಳ್ವಿಕೆಯ ಸಮಯದಲ್ಲಿ ಶ್ರೀ ಭಗವಜ್ಜನಸೇನ - ಗುಣಭದ್ರಾಚಾರ್ಯರು ಸಂಸ್ಕೃತದಲ್ಲಿ ರಚಿಸಿದ್ದರು. 42 ವರ್ಷಗಳ ಪೂರ್ವಪುರಾಣದ ಪೂರ್ವಭಾಗವನ್ನು ಜಿನಸೇನಾಚಾರ್ಯರೂ, ಅವರ ಕಾಲಾನಂತರ ಶಿಷ್ಯರಾದ ಗುಣಭದ್ರಾಚಾರ್ಯರು ಪೂರ್ವಪುರಾಣದ ಇನ್ನುಳಿದ ಐದು ಪರ್ವಗಳ ಉತ್ತರಭಾಗವನ್ನು ಹಾಗೂ ಉತ್ತರಪುರಾಣದ ಇನ್ನುಳಿದ ಪರ್ವವನ್ನು ರಚಿಸಿ ಮಹಾಪುರಾಣವನ್ನು ಪೂರೈಸಿದರು.
ಇದು ಮಹಾಸಾಗರದಂತೆ ಗಾತ್ರದಲ್ಲಿ ವಿಶಾಲವಾಗಿದೆ. ಮಹಾಸಾಗರದಲ್ಲಿ ಅಮೂಲ್ಯ ಮುತ್ತು ರತ್ನಗಳಿರುವಂತೆ ಮಹಾಪುರಾಣದಲ್ಲಿಯೂ ರತ್ನತ್ರಯಗಳ ವರ್ಣನೆ ಹಾಗೂ ನುಡಿಮುತ್ತುಗಳಿವೆ. ವಿಚಾರದಲ್ಲಿ ಅಗಾಧವಾಗಿದೆ. ಇದರಲ್ಲಿ ಎಲ್ಲವೂ ಇವೆ. ಸ್ವರ್ಗ-ನರಕ, ಮಂತ್ರ-ತಂತ್ರದಿಂದ ಹಿಡಿದು ಸಂನ್ಯಾಸ, ತಪಸ್ಸಿನವರೆಗೆ, ವ್ಯಾಕರಣ, ಛಂದಸ್ಸು, ಕಾವ್ಯ, ತರ್ಕ, ನ್ಯಾಯ, ನೀತಿ, ಜ್ಞಾನ ಮೀಮಾಂಸೆ, ರಾಜ ನೀತಿ, ಯುದ್ಧನೀತಿಯ ಬಗ್ಗೆಯೂ ಇಲ್ಲುಂಟು. ವ್ಯಾಪಾರ, ವಿದೇಶ ನೀತಿ, ಭೂಗೋಳ, ನಗರರಚನೆ, ಗ್ರಹ, ನಕ್ಷತ್ರ, ಜೋತಿಷ್ಯ, ವಿಜ್ಞಾನ, ಗಣಿತದ ಬಗ್ಗೆಯೂ ವಿಸ್ತ್ರತ ಮಾಹಿತಿ ಅಡಗಿದೆ. ಕೃಷಿ, ಸಮುದ್ರ, ನೃತ್ಯ, ವಾಸ್ತು, ಕಲೆ, ಸಂಗೀತ, ವಾದ್ಯದಿಂದ ಹಿಡಿದು ಸ್ತ್ರೀ ವಸ್ತ್ರವಿನ್ಯಾಸ, ಕೇಶವಿನ್ಯಾಸ, ಶರೀರದ ಲಕ್ಷಣದ ಬಗ್ಗೆಯೂ ಗಮನಾರ್ಹ ಮಾಹಿತಿ ಇದೆ. ಕುಟುಂಬನೀತಿ, ಸಮಾಜನೀತಿ, ಕಾಮಶಾಸ್ತ್ರ, ಮಾತೃವಾತ್ಸಲ್ಯ, ಪಿತೃಭಕ್ತಿ, ಗುರುಭಕ್ತಿ ಬಗ್ಗೆಯೂ ಉಲ್ಲೇಖವಿದ್ದು, ಏನುಂಟು ಏನಿಲ್ಲ ಎಂಬಂತಿದೆ. ಈ ವಿಷಯಗಳನ್ನು ಪ್ರತ್ಯೇಕವಾಗಿ ಅಧ್ಯಯನ, ಸಂಶೋಧನೆ ಮಾಡುವವರಿಗೆ ಇದೊಂದು ಮಾರ್ಗದರ್ಶಿಯೂ ಹೌದೆನ್ನಬಹುದು.
ವೈಜ್ಞಾನಿಕ ಸತ್ಯ ಸಂಗತಿಗಳೊಂದಿಗೆ ಇಂದಿನ ಜ್ವಲಂತ ಸಮಸ್ಯೆಗಳಾದ ವಿಶ್ವಶಾಂತಿ, ಪರಿಸರ ಸಂರಕ್ಷಣೆ, ವಿಶ್ವಭ್ರಾತೃತ್ವ, ಅಹಿಂದೆ, ನಿಶ್ಶಸ್ತ್ರೀಕರಣಗಳಿಗೆ ಮಹಾಪುರಾಣವು ಮಾರ್ಗದರ್ಶನವೀಯಬಲ್ಲದೇ ಎಂಬುದನ್ನು ಪ್ರಯೋಗಾತ್ಮಕವಾಗಿ ಸಂಶೋಧನೆ ಮಾಡಲು ಸಾಧ್ಯವಿದೆ ಎನ್ನುತ್ತಾರೆ ಈ ಕೃತಿಯನ್ನು ಅರಗಿಸಿಕೊಂಡಿರುವ ಲೇಖಕ ಪ್ರೊ. ಕೆ.ಇ. ರಾಧಾಕೃಷ್ಣ.
‘ಭಾರತೀಯ ಭಾಷಾಸಾಹಿತ್ಯಗಳ ಅಕ್ಷಯ ಭಂಡಾರವಿದು. ಅದರಿಂದ ನಿರಂತರ ಸ್ಪೂರ್ತಿ, ಪ್ರೇರಣೆ, ಸತ್ವಗಳನ್ನು ಪಡೆಯದ ದೇಶಭಾಷೆಯೇ ಇಲ್ಲ. ಭಾರತೀಯ ಸಂಸ್ಕೃತಿಯ ವಿಕಾಸದಲ್ಲಿ, ಅದರ ಶ್ರೀಮಂತಿಕೆಯ ಮತ್ತು ವೈಭವೋನ್ನತಿಯ ಸಾಧನೆಯಲ್ಲಿ ಈ ಅಮರ ಕೃತಿಯ ಪಾತ್ರ ಅಸಾಮಾನ್ಯವಾದದ್ದು’ ಎಂದು ವಿಶ್ಲೇಷಿಸುವ ಅವರು, ‘ಮಹಾಪುರಾಣ ಕನ್ನಡ ಜೈನ ಕವಿಗಳಿಗೆ ತಾಯಿಬೇರು. ಪಂಪ, ಪೊನ್ನ, ರನ್ನ, ಜನ್ನರಾದಿಯಾಗಿ ಉಳಿದ ಕನ್ನಡ ಕವಿಗಳು ಇದರಲ್ಲಿ ಕ್ರೀಡಿಸಿದ್ದಾರೆ. ಈ ಕನ್ನಡ ಕವಿಗಳ ಋಣಭಾರದಿಂದ ಮಹಾಪುರಾಣ ಜಗ್ಗಿಲ್ಲ. ಅದು ಮೊಗೆದಷ್ಟೂ ಮುಗಿಯದ ಅಕ್ಷಯ ಕಾವ್ಯ’ ಎಂದು ಅಭಿಪ್ರಾಯಪಡುತ್ತಾರೆ.
ಕವಿಗಳಿಗೆಲ್ಲ ಅದು ಬತ್ತಲಾರದ ಮೂಲ. ಇಪ್ಪತ್ತನಾಲ್ಕೂ ಮಂದಿ ತೀರ್ಥಂಕರರು, ಹನ್ನೆರಡು ಚಕ್ರವರ್ತಿಗಳು, ಒಂಬತ್ತು ಮಂದಿ ಪ್ರತಿ ನಾರಾಯಣರು - ಒಟ್ಟು 63 ಮಂದಿ ಜೈನ ಪುರಾಣಪುರುಷರ ಚರಿತ್ರೆ ಇದರಲ್ಲಿದೆ. ಇದು ಗಾತ್ರದಲ್ಲಿಯೂ ವಸ್ತುವಿನಲ್ಲಿಯೂ ಮಹಾಪುರಾಣ. ಇದರಲ್ಲಿ ವ್ಯಕ್ತಗೊಳ್ಳುವ ಧಾರ್ವಿುಕ ಸಂಗತಿಗಳೂ, ಸಾಹಿತ್ಯಗುಣಗಳೂ ಇದನ್ನೊಂದು ಅನನ್ಯ ಗ್ರಂಥವನ್ನಾಗಿಸಿವೆ. ಪ್ರಾಚೀನ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇದು ಆಕರವನ್ನಾಗಿಸಿವೆ.
ಸುಮಾರು ಹನ್ನೊಂದು ಶತಮಾನಗಳಿಂದಲೂ ಇದು ಮಹಾಪುರಾಣ ಎಂಬ ಹೆಸರಿನಲ್ಲಿ ನಮ್ಮ ದೇಶದ ಧಾರ್ವಿುಕ ಸಂಪತ್ತನ್ನು ಬೆಳೆಸಿದೆ. ಇಂಥ ಗ್ರಂಥವನ್ನು ಕನ್ನಡಕ್ಕೆ ತರುವ ಕೆಲವು ಪ್ರಯತ್ನಗಳು ಈ ಶತಮಾನದ ಆರಂಭದಲ್ಲಿ ನಡೆದವು. ಪೂರ್ವಪುರಾಣದ ಮೊದಲ 42 ಪರ್ವಗಳು 1925ರಲ್ಲಿಯೂ, ಮಿಕ್ಕ ಐದು ವರ್ಷಗಳು 1933ರಲ್ಲಿಯೂ ಪ್ರಕಟವಾದವು. ಮೂವತ್ತು ಪರ್ವಗಳ ಉತ್ತರಪುರಾಣ 1940ರಲ್ಲಿ ಪ್ರಕಟವಾಯಿತು. ಇದೊಂದು ಅಪರೂಪದ ಕೆಲಸ. ಮೂಲ ಸಂಸ್ಕೃತ ಮಹಾಪುರಾಣವನ್ನು ಪಾಠಾಂತರಗಳೊಂದಿಗೆ ಸಂಪಾದಿಸಿ, ಅದನ್ನು ಸರಳವಾದ ಕನ್ನಡಕ್ಕೆ ಅನುವಾದಿಸುವ ಕೆಲಸಕ್ಕೆ ಹೆಚ್ಚುಕಡಿಮೆ ಕಾಲು ಶತಮಾನವೇ ಹಿಡಿಯಿತು.
ಈ ದೈತ್ಯ ಕೆಲಸವನ್ನು ನಿರ್ವಹಿಸಿದವರು ಎರ್ತರು ಶಾಂತಿರಾಜ ಶಾಸ್ತ್ರಿಗಳು (1999-1952). ದಕ್ಷಿಣಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ತರಿನವರಾದ ಶಾಸ್ತ್ರಿಗಳು ಮೂಡುಬಿದಿರೆ, ಶ್ರವಣಬೆಳಗೊಳ, ಮೈಸೂರು, ಗ್ವಾಲಿಯರ್ ಮತ್ತು ಕೊಲ್ಕತಗಳಲ್ಲಿ ಶಿಕ್ಷಣ ಪಡೆದು ನ್ಯಾಯತೀರ್ಥರೆನಿಸಿದರು. ಕನ್ನಡ, ತುಳು, ಸಂಸ್ಕೃತ, ಪ್ರಾಕೃತ ಮತ್ತು ಹಿಂದಿ ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಅವರು 1925ರಲ್ಲಿ ಮೈಸೂರು ಅರಮನೆಯ ಆಸ್ಥಾನ ವಿದ್ವಾನ್ ಆದರು.
ಈ ಮಹಾನ್ ಗ್ರಂಥದ ನಾಲ್ಕು ಕನ್ನಡ ಆವೃತ್ತಿಗಳು ಮುದ್ರಣಗೊಂಡಿವೆ. ಈಗ ದೇಶದಲ್ಲೇ ಮೊದಲ ಸಲ ಅದರ ಇಂಗ್ಲಿಷ್ ಅವತರಣಿಕೆ ಲೋಕಾರ್ಪಣೆಯಾಗುತ್ತಿದೆ. ಇದನ್ನು ಪ್ರಕಟಿಸುವುದಕ್ಕೂ ಸಮರ್ಪಣಾಭಾವದ ಅಸೀಮ ಸಾಹಸ ಬೇಕು. ಶಾಂತಿರಾಜ ಶಾಸ್ತ್ರಿಗಳ ಮಕ್ಕಳು ತಮ್ಮ ತಂದೆಯವರ ಈ ಅಪ್ರತಿಮ ಸಾಹಿತ್ಯಸೇವೆಯನ್ನು ಐತಿಹಾಸಿಕವಾಗಿ ದಾಖಲಿಸುವುದರ ಜತೆಗೆ ಭಾರತೀಯ ಮತ್ತು ಕರ್ನಾಟಕದ ಸಂಸ್ಕೃತಿಕೆ ಬೆಲೆ ಕಟ್ಟಲಾಗದ ಕೊಡುಗೆ ನೀಡಿದ್ದಾರೆ. ಈ ಟ್ರಸ್ಟಿನ ಅಧ್ಯಕ್ಷರು ಶಾಂತಿರಾಜ ಶಾಸ್ತ್ರಿಗಳ ಮಗ ಹಿರಿಯ ಭೂವಿಜ್ಞಾನಿ ಜಿತೇಂದ್ರ ಕುಮಾರ್.
ಶಾಂತಿರಾಜ ಶಾಸ್ತ್ರಿಗಳು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಇಪ್ಪತ್ತು ಸಾವಿರ ಶ್ಲೋಕಗಳುಳ್ಳ ಈ ಬೃಹತ್ ಗ್ರಂಥವನ್ನು ಈಗ ಬಹುಭಾಷಾ ವಿದ್ವಾಂಸ, ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಕೆ.ಇ. ರಾಧಾಕೃಷ್ಣ ಇಂಗ್ಲಿಷ್ಗೆ ಭಾಷಾಂತರಿಸಿದ್ದಾರೆ. ಈ ಕೃತಿ ಆರು ಸಂಪುಟಗಳಲ್ಲಿ ಪ್ರಕಟವಾಗಿದೆ. ಏಳನೆಯ ಸಂಪುಟದಲ್ಲಿ ವಿಸõತವಾದ ವಿಷಯಸೂಚಿ ಮತ್ತು ಟಿಪ್ಪಣಿಗಳಿವೆ. ಈ ಗ್ರಂಥದ 72 ಕಥಾನಕಗಳ ಸಾರಾಂಶವಲ್ಲದೆ ಜೈನಧರ್ಮದ ಮುಖ್ಯ ಆಶಯಗಳ ಟಿಪ್ಪಣಿಗಳೂ ಇವೆ. ಹೀಗೆ ಈ ಏಳನೇ ಸಂಪುಟವು ಜೈನ ಮಹಾಪುರಾಣದ ಪ್ರವೇಶಕ್ಕೆ ಒಂದು ಕೈಪಿಡಿಯಂತಿದೆ. ಇಂಗ್ಲಿಷ್ ಭಾಷಾಂತರಕ್ಕೆ ನಮ್ಮ ದೇಶದ ಖ್ಯಾತ ವಿದ್ವಾಂಸ ಪ್ರೊ. ಷ. ಶೆಟ್ಟರ್ ವಿದ್ವತ್ಪೂರ್ಣ ಮುನ್ನುಡಿ ಬರೆದಿದ್ದಾರೆ. ಹೆಸರಾಂತ ಕವಿ ಡಾ. ಎಚ್.ಎಸ್. ಶಿವಪ್ರಕಾಶ್ ಮುನ್ ಲೇಖನ ಬರೆದಿದ್ದಾರೆ. ಪ್ರೊ. ರಾಧಾಕೃಷ್ಣ ಹೆಸರಾಂತ ಶಿಕ್ಷಣತಜ್ಞರು ಮತ್ತು ಸಾಹಿತಿಗಳು. ಶೇಷಾದ್ರಿಪುರಂ ಮತ್ತು ಆ ಬಳಿಕ ಸುರಾನಾ ಕಾಲೇಜುಗಳಲ್ಲಿ ದೀರ್ಘಕಾಲ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ಶಿಕ್ಷಣಕ್ಷೇತ್ರದ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದರು. ಮೂವತ್ತಕ್ಕಿಂತಲೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ ಇವರು ತುಳು, ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡ ಭಾಷಾವಿದ್ವಾಂಸರು. ರಾಜಕೀಯದಲ್ಲೂ ಸಹಭಾಗಿಗಳಾಗಿರುವ ಇವರು ಸಮಾಜಮುಖಿ ಕ್ರಿಯಾಶೀಲರು.
ಪ್ರೊ. ಕೆ. ಇ. ರಾಧಾಕೃಷ್ಣ ಅವರು ಸುಮಾರು ಮೂರು ವರ್ಷಗಳ ಕಾಲ ಇಪ್ಪತ್ತು ವಿದ್ವಾಂಸರ ತಂಡದ ನೆರವಿನೊಂದಿಗೆ ಅಸಾಮಾನ್ಯ ಕೆಲಸವನ್ನು ಮತ್ತು ಒಂದು ಸಂಸ್ಥೆ ಮಾಡುವ ಕೆಲಸವನ್ನು ನಿರ್ವಹಿಸಿದ್ದಾರೆ. 5500 ಪುಟಗಳ ಗ್ರಂಥರಚನೆ ಮತ್ತು ಅನುವಾದ
ಕ್ರಿಯೆ ಅದ್ವಿತೀಯ ಸಾಹಿತ್ಯಸಾಹಸ. ಜೈನ ಮಹಾಪುರಾಣವು ಮೊದಲ ಬಾರಿ ಇಂಗ್ಲಿಷಿಗೆ ಭಾಷಾಂತರಗೊಳ್ಳುವ ಮೂಲಕ ಜಾಗತಿಕ ವಿದ್ವತ್ ಪ್ರಪಂಚಕ್ಕೆ ಲಭಿಸಿದ ಮಹತ್ತರ ಕೊಡುಗೆಯೂ ಆಗಲಿದೆ.
| ಶ್ರೀಕಾಂತ ಶೇಷಾದ್ರಿ, ಬೆಂಗಳೂರು