

| ಹೀರಾನಾಯ್ಕ ಟಿ. ಬಳ್ಳಾರಿ
ಬಿಸಿಲೂರು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿ ಗಣಿ ಸದ್ದು ಮಾಡುವುದುಂಟು. ಆದರೀಗ ಇಲ್ಲಿ ಮಲ್ಲಿಗೆ ಘಮಲು ಸೂಸುತ್ತಿದೆ. ಕರೊನಾ ಮಹಾಮಾರಿಯಿಂದಾಗಿ ಪುಷ್ಪೋದ್ಯಮ ನೆಲಕಚ್ಚಿತ್ತು. ಇದೀಗ ಮತ್ತೆ ಚೇತರಿಕೆಗೊಂಡಿದ್ದು, ಮಲ್ಲಿಗೆ ಕೃಷಿಯಲ್ಲಿ ಜನರು ಖುಷಿ ಕಾಣುತ್ತಿದ್ದಾರೆ. ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಪುಷ್ಪ ಕೃಷಿ ಗಣಿನಾಡಿಗೂ ವಿಸ್ತರಿಸಿದ್ದು, ಕೃಷಿಕರು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕುಟುಂಬ ನಿರ್ವಹಣೆಗೆ ಉತ್ತಮ ಸೂತ್ರ ಕಂಡುಕೊಂಡಿದ್ದಾರೆ. ಇಲ್ಲಿನ ಮಲ್ಲಿಗೆ ಹೂವು ಸ್ಥಳೀಯ ಮಾರುಕಟ್ಟೆ ಅಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣಕ್ಕೂ ರಫ್ತಾಗುತ್ತದೆ. ಅಖಂಡ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕಂಪ್ಲಿ, ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿ ಮಲ್ಲಿಗೆ ಕೃಷಿ ಮಾಡುತ್ತಿದ್ದಾರೆ.
ಕಡಿಮೆ ಖರ್ಚು ಅಧಿಕ ಲಾಭ: ಮಲ್ಲಿಗೆ ಕೃಷಿಯಿಂದ ಕಡಿಮೆ ಖರ್ಚು ಅಧಿಕ ಲಾಭವಾಗಿದೆ. ಮಲ್ಲಿಗೆ ಕೃಷಿ ಕಾಯಕ ಮಾಡುವ ಒಂದು ಕುಟುಂಬ ನಿರ್ವಹಣೆಗೆ ಯಾವುದೇ ಸಮಸ್ಯೆಯಿಲ್ಲ. ಬಳ್ಳಾರಿ ತಾಲೂಕಿನ ವೈ.ಕಗ್ಗಲ್, ಯಾಳ್ಪಿ, ಲಿಂಗದೇವನಹಳ್ಳಿ, ಕುಂಟನಾಳ ಸೇರಿದಂತೆ ಅನೇಕ ಗ್ರಾಮದ ಜನರು ಮಲ್ಲಿಗೆ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ವೈ.ಕಗ್ಗಲ್ನಲ್ಲಿ 700 ಮನೆಗಳಿದ್ದು, 500 ಮನೆಗಳು ಇದೇ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮಲ್ಲಿಗೆಗೆ 160 ರೂ.ನಿಂದ 200 ರೂ. ವರೆಗೆ ದರ ಸಿಗುತ್ತಿದೆ. ಅರ್ಧ ಎಕರೆ, ಒಂದು ಎಕರೆ ಪ್ರದೇಶದಲ್ಲಿ ಒಮ್ಮೆ ಮಲ್ಲಿಗೆ ಗಿಡ ನಾಟಿ ಮಾಡಿದರೆ ಒಂದು ದಶಕಗಳ ಕಾಲ ಆ ಗಿಡ ಕುಟುಂಬವೊಂದನ್ನು ಸಾಕುತ್ತದೆ. ಮನೆ ಖರ್ಚಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆಲ್ಲ ಮಲ್ಲಿಗೆ ಕೃಷಿ ಆಸರೆಯಾಗುತ್ತಿದೆ.
ಹೆಚ್ಚುತ್ತಿದೆ ಮಲ್ಲಿಗೆ ಕ್ಷೇತ್ರ: ಆದಾಯ ತಂದುಕೊಡುವ ಪುಷ್ಪಕೃಷಿಯಲ್ಲಿ ಮಲ್ಲಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಮಲ್ಲಿಗೆ ಕೃಷಿ ಕ್ಷೇತ್ರ ಹೆಚ್ಚುತ್ತಿದೆ. ಕಳೆದ 2020-21ನೇ ಸಾಲಿನಲ್ಲಿ 444.67 ಹೆಕ್ಟೇರ್ ಪ್ರದೇಶದಲ್ಲಿ 3938.18 ಟನ್ ಮಲ್ಲಿಗೆ ಹೂ ಉತ್ಪಾದಿಸಲಾಗಿತ್ತು. 2021-22ನೇ ಸಾಲಿನಲ್ಲಿ ಕ್ಷೇತ್ರ ಹೆಚ್ಚಾಗಿದೆ. ಒಟ್ಟು 498.39 ಹೆಕ್ಟೇರ್ನಲ್ಲಿ ಮಲ್ಲಿಗೆ ಕೃಷಿ ಮಾಡಲಾಗುತ್ತಿದ್ದು, 3573.73 ಟನ್ ಹೂ ಉತ್ಪಾದಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಪ್ರತಿ ವರ್ಷವೂ ಮಲ್ಲಿಗೆ ಕ್ಷೇತ್ರ ವಿಸ್ತರಣೆಗೊಳ್ಳುವ ಸಾಧ್ಯತೆ ಹೆಚ್ಚಿದೆ.
ವೃದ್ಧೆಗೆ ಆಸರೆ ನೀಡಿದ ಮಲ್ಲಿಗೆ: ಕಳೆದ ಎರಡು ದಶಕದಿಂದ ವೃದ್ಧೆ ರಾಮಲಿಂಗಮ್ಮಗೆ ಮಲ್ಲಿಗೆ ಕೃಷಿಯೇ ಆಸರೆ. ಪತಿ ಅಗಲಿದ ನಂತರ ಮಕ್ಕಳು ಕೂಡ ಕೈ ಹಿಡಿಯಲಿಲ್ಲ. ಇಬ್ಬರು ಮಕ್ಕಳಿದ್ದರೂ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಜೀವನ ನಿರ್ವಹಣೆಗೆ 75 ವರ್ಷದ ವೃದ್ಧೆ ಕಂಡುಕೊಂಡ ಜೀವನದ ಮಾರ್ಗ ಅದು ಮಲ್ಲಿಗೆ ಕೃಷಿ. ವೈ.ಕಗ್ಗಲ್ ಗ್ರಾಮದ ರಾಮಲಿಂಗಮ್ಮ ಅರ್ಧ ಎಕರೆ ಜಮೀನಿನಲ್ಲಿ ಮಲ್ಲಿಗೆ ಕೃಷಿ ಮಾಡುತ್ತ ಜೀವನದಲ್ಲಿ ಖುಷಿಯನ್ನು ಕಾಣುತ್ತಿದ್ದಾರೆ. ಪ್ರತಿದಿನ ನಾಲ್ಕರಿಂದ ಐದು ಕೆಜಿಯಷ್ಟು ಮಲ್ಲಿಗೆ ಹೂ ಪಡೆಯುತ್ತಿದ್ದಾರೆ. ದಿನಕ್ಕೆ 500 ರೂ. ನಿಂದ 800 ರೂ. ವರೆಗೆ ಹೂವಿನಿಂದಲೇ ಆದಾಯ ಬರುತ್ತಿದೆ. ಅದೇ ವೃದ್ಧೆಗೆ ಜೀವಾಳವಾಗಿದೆ.
ಅಕ್ಕ-ತಂಗಿಯರ ಪುಷ್ಪ ಕೃಷಿ: ಒಂದೇ ಮನೆಯಲ್ಲಿ ಇಬ್ಬರು ಅಕ್ಕ-ತಂಗಿ ಪುಷ್ಪ ಕೃಷಿಯಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ವೈ,ಕಗ್ಗಲ್ ಗ್ರಾಮದ ಪಾರ್ವತಿ ಮತ್ತು ಶರಣಮ್ಮ ಪುಷ್ಪ ಕೃಷಿ ಕಾಯಕದಿಂದ ಖುಷಿಯಿಂದ ಇದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಸಹೋದರರನ್ನು ಮದುವೆ ಮಾಡುಕೊಂಡಿರುವ ಪಾರ್ವತಿ ಮತ್ತು ಶರಣಮ್ಮ ತವರೂರು ಬೇರೆ-ಬೇರೆಯಾದರೂ ಒಂದೇ ತಾಯಿಯ ಮಕ್ಕಳಂತೆ ಅಕ್ಕ-ತಂಗಿ ಇಬ್ಬರು ಪ್ರತಿ ದಿನ ಬೆಳಗ್ಗೆ ಹೊಲಕ್ಕೆ ಬಂದು ಮಲ್ಲಿಗೆ ಹೂವು ಬಿಡಿಸಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಮೂರು ಎಕರೆ ಜಮೀನು ಹೋಮದಿರುವ ಇವರು, ಅರ್ಧ ಎಕರೆಯಲ್ಲಿ ಮಲ್ಲಿಗೆ ಕೃಷಿ ಮಾಡಿದ್ದಾರೆ. ಪ್ರತಿ ದಿನ ಇಬ್ಬರು 5 ಕೆ.ಜಿ.ಯಿಂದ 10 ಕೆ.ಜಿ.ವರೆಗೆ ಮಲ್ಲಿಗೆ ಹೂವು ಬಿಡಿಸಿಕೊಂಡು ಹೋಗುತ್ತಾರೆ. ಯಾವುದೇ ಕೂಲಿಯಾಳುಗಳನ್ನು ಹಾಕದೆ ಇಬ್ಬರೇ ಈ ಕಾಯಕ ಮಾಡುತ್ತಿದ್ದು, ಕುಟುಂಬಕ್ಕೆ ಹೆಚ್ಚಿನ ಆದಾಯ ಲಭಿಸುತ್ತಿದೆ.