

ಕರುಣೆಯ ದೊಡ್ಡ ಕಡಲು ನಮ್ಮ ಕೃಷ್ಣ!
ಆತ ಮಾತನಾಡಿದ, ನಲಿದಾಡಿದ, ಸಂಭ್ರಮಿಸಿದ, ಲೋಕದ ಕಣ್ಣು ತೆರೆಸಿದ, ಅಂತರಂಗದ ಲೋಕವನ್ನೂ ಪ್ರವೇಶಿಸಿದ. ಕಲಿಯುಗದಲ್ಲೂ ಒಂದಿಷ್ಟು ವರ್ಷ ಇದ್ದಿದ್ದರಿಂದ ನಮಗೆಲ್ಲ ಇನ್ನೂ ಹತ್ತಿರವಾದ. ‘ಕೃಷ್ಣ’ ಎಂದರೆ ಸೆಳೆಯುವವನು, ಉಜ್ಜುವವನು. ತೊಳೆಯುವವನು, ನಿದ್ದೆ(ಜಡ)ಯಿಂದ ಎಬ್ಬಿಸುವವನು ಎಂದರ್ಥ. ಅದಕ್ಕೆ ತಾನೇ ಆತ ನಮಗೆಲ್ಲ ಪ್ರಿಯ. ಕೃಷ್ಣ ಎಂದರೆ ಹೃದಯದ ತುಂಬೆಲ್ಲ ಅದೆಷ್ಟು ಸಂಭ್ರಮ, ಸಡಗರ... ಗೆಳೆಯನಾಗಿ ಜತೆಗೆ ನಡೆಯುವ ಆತ್ಮೀಯ ಕೃಷ್ಣ ದೇವರ ದೇವನೂ ಹೌದು. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬೆರೆತು ಗೊಲ್ಲನಾಗಿ ಹಸುಗಳನ್ನು ಮೇಯಿಸಿದ ಕೃಷ್ಣ ಕುರುಕ್ಷೇತ್ರದಲ್ಲಿ ನಿಂತು ಜೀವನದ ಅತೀ ದೊಡ್ಡ ತತ್ತ್ವ ಭಗವದ್ಗೀತೆಯನ್ನು ಬೋಧಿಸಿದ. ಪ್ರೇಮಕ್ಕೆ ಪಲ್ಲವಿ ಬರೆದ, ಭಕ್ತಿಗೆ ಹೊಸ ಭಾಷ್ಯ ಬರೆದ. ಕೃಷ್ಣ ಎಂದರೆ ನೂರೆಂಟು ಭಾವಗಳು, ನೂರೆಂಟು ರೂಪಗಳು... ಬೆಣ್ಣೆಯ ಮೃದತ್ವ, ಕೊಳಲಿನ ನಿನಾದ, ವಾತ್ಸಲ್ಯಮಯಿ ಗೋವುಗಳು, ಗೋಪಿಕೆಯರು, ಗೋಕುಲ, ಕುರುಕ್ಷೇತ್ರದ ಯುದ್ಧ ಎಲ್ಲೆಲ್ಲೂ ಕೃಷ್ಣನೇ! ಆತ ಮುಗ್ಧನೂ ಹೌದು ಭಾರಿ ತಂತ್ರಗಾರನೂ ಹೌದು. ಸಕ್ಕರೆಯ ಪಾಕದಂಥ ಸಿಹಿಪ್ರೀತಿಯೂ ಹೌದು, ದುಷ್ಟರನ್ನು ಸಂಹರಿಸುವ ಬಲಶಾಲಿಯೂ ಹೌದು... ಅವನ ಬಾಲ್ಯದ ತುಂಟಾಟ ಜೀವನಪ್ರೀತಿಗೆ ಪರಮೋಚ್ಚ ಮಾದರಿ. ಗೋಪಿಕೆಯರೊಂದಿಗಿನ ರಾಸಲೀಲೆ ಪ್ರೀತಿಯ ಮಹಾಸಾಗರ.
ಅವನನ್ನು ಎಷ್ಟು ಹೆಸರುಗಳಿಂದ ಕರೆದರೂ ಹೆಚ್ಚೆಚ್ಚು ಆಪ್ತನೇ. ಶ್ಯಾಮ್ ಮನಮೋಹನ, ಮೋಹನ, ಕಾನ್ಹಾ, ಗೋಪಾಲ, ಮುರಳೀಧರ, ವಿಹಾರೀ, ಮುಕುಂದ, ನಂದನವನ, ಯದುನಂದನ, ಯಶೋದಾನಂದನ, ಗಿರಿಧರ, ಮುರಾರಿ... ಅಬ್ಬಬ್ಬಾ ಹೇಗೆ ಕರೆದರೂ ಅದು ಕೊಳಲನಾದದಂತೆ ಮನೋಹರವೇ!
ಹಿಡಿ ಅವಲಕ್ಕಿ ನೀಡಿದ ಪ್ರಾಣಸ್ನೇಹಿತ ಸುಧಾಮನಿಗೆ ಕೃಷ್ಣ ಮುಗುಳ್ನಗುತ್ತಲೇ ಅಷ್ಟೈಶ್ವರ್ಯಗಳನ್ನು ನೀಡಿದ. ವಿದುರನಿಗೆ ಕ್ಷಣಮಾತ್ರದಲ್ಲಿ ಸಹಾಯ ಮಾಡಿದ. ಅಧರ್ಮದ ಪರ ನಿಂತ ಕಂಸನನ್ನೇ ಸಂಹರಿಸಿ, ಮಹೋನ್ನತ ಸಂದೇಶ ನೀಡಿದ. ಹಸುಗೂಸು ಆಗಿದ್ದಾಗಲೇ ಪೂತನಿಯನ್ನು ಕೊಂದು, ನಲಿದಾಡಿದ. ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದ ಸರ್ಪವನ್ನು ಮರ್ದಿಸಿ ಅಭಯ ನೀಡಿದ. ಕೊಳಲುನಾದದಿಂದ ಅಮಂಗಳವನ್ನೆಲ್ಲ ದೂರ ಮಾಡಿದ. ಗೋವರ್ಧನಗಿರಿ ಎತ್ತಿ ಗೋಪಿಕೆಯರ ಸಮೇತ ಅಲ್ಲಿನ ಜನರನ್ನು ರಕ್ಷಿಸಿದ. ಸತ್ಯಭಾಮೆಗಾಗಿ ಇಂದ್ರನ ಅಂಗಳದಿಂದ ಪಾರಿಜಾತವನ್ನೇ ತಂದಿಟ್ಟ. ಕುರುಕ್ಷೇತ್ರದಲ್ಲಿ ತೋರಿದ ಲೀಲೆಗಳಂತೂ ಅಸಾಧಾರಣ.
ಅಷ್ಟೇ ಅಲ್ಲ, ಶ್ರೀಕೃಷ್ಣ ಹುಟ್ಟುಹಾಕಿದ ಭಕ್ತಿಯ ಪ್ರವಾಹ ಅಂತಿಂಥದ್ದಲ್ಲ. ಆ ಭಕ್ತಿ ಪ್ರವಾಹದಲ್ಲಿ ಎಷ್ಟೊಂದು ಕವಿಗಳು, ತತ್ತ್ವಜ್ಞಾನಿಗಳು, ಪಂಡಿತರು-ಪಾಮರರು ಕೃಷ್ಣನನ್ನು ಹಾಡಿ ಹೊಗಳಿದ್ದಾರೆ ಎಂದರೆ ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲಿ, ಎಲ್ಲ ಭಾಗಗಳಲ್ಲಿ ಕೃಷ್ಣನ ಕುರಿತಾದ ಸಾಹಿತ್ಯ ಸಿಕ್ಕೇ ಸಿಗುತ್ತದೆ. ಆದರೂ, ಕೃಷ್ಣನನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಎನಿಸುವ ಭಾವ ನಿರಂತರವಾಗಿ ಕಾಡುತ್ತದೆ. ಅವನ ಶ್ಯಾಮವರ್ಣವನ್ನು ಹೇಗೆಂದು ವರ್ಣಿಸುವುದು, ಅವನ ಲೀಲಾವಿನೋದಗಳನ್ನು ಶಬ್ದಗಳ ತೋರಣದಲ್ಲಿ ಹೇಗೆ ಕಟ್ಟುವುದು? ಕೃಷ್ಣ ಎಂದರೆ ದೊಡ್ಡ ಭಾವಪ್ರಪಂಚ ಅನ್ನಿಸುವುದು ಇದೇ ಕಾರಣಕ್ಕೆ.
ಡಿವಿಜಿ ಕೃಷ್ಣನ ಬಗ್ಗೆ ಹೇಳುತ್ತ: ‘ಶ್ರೀಕೃಷ್ಣನು ನಮ್ಮೊಡನೆ ಬೀದಿಗಳಲ್ಲಿ ತಿರುಗುವ ಸ್ನೇಹಿತ. ಆತ ನಮ್ಮ ಕೊಂಕು ಕುರಳಗಳನ್ನೂ ಹುಬ್ಬುಹಾರುಗಳನ್ನೂ ನೋಡಿ ಮುಗುಳ್ನಗೆ ನಗುತ್ತ ಛೀಮಾರಿ ಹಾಕುತ್ತಾನೆ. ಅವನ ಛೀಮಾರಿಯೂ ನಮಗೆ ಇಷ್ಟವಾಗು ತ್ತದೆ-ಅದು ಸಲಿಗೆಯಿಂದ ಬರುವ ಕಾರಣ. ಹೆಚ್ಚು ಸಲಿಗೆಯನ್ನು ನಾವು ಅವನೊಡನೆ ತೆಗೆದುಕೊಳ್ಳೆವು-ಏಕೆಂದರೆ ಅವನು ಶಕ್ತಿವಂತನೆಂಬುದೂ ನೇಮಿಷ್ಠನೆಂಬುದೂ ನಮಗೆ ಗೊತ್ತಿದೆ. ಒಟ್ಟಿನಲ್ಲಿ ಕೃಷ್ಣನೆಂಬುದು ಒಂದು ದೃಷ್ಟಿಯಿಂದ ಒಬ್ಬಾನೊಬ್ಬ ಮನುಷ್ಯನ ಹೆಸರು;ಇನ್ನೊಂದು ದೃಷ್ಟಿಯಿಂದ ಒಂದು ರಹಸ್ಯದ ಹೆಸರು. ಒಂದು ದೃಷ್ಟಿಯಿಂದ ಲೋಕಸಾಮಾನ್ಯ; ಇನ್ನೊಂದು ದೃಷ್ಟಿಯಿಂದ ಲೋಕಾತೀತವಾದ ಅದ್ಭುತ’.
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ (ರಚನೆ: ಕನಕದಾಸರು)
ಹೀಗೆ ಮಥುರೆಯ ಮುದ್ದುಕೃಷ್ಣ ನಮ್ಮ ಮಧ್ವರಿಗೊಲಿದು ಉಡುಪಿಗೆ ಬಂದು ನಿಂತು ಶತಮಾನಗಳೇ ಸಂದಿವೆ. ಉಡುಪಿ ಚೈತನ್ಯದ ಭೂಮಿ. ಅಲ್ಲಿನ ಕಣಕಣದಲ್ಲೂ ಕೃಷ್ಣನಾಮ ಬೆರೆತುಕೊಂಡಿದೆ, ಹಾಗಾಗಿಯೇ ಅಲ್ಲಿ ಒದಗುವ ದಿವ್ಯಾನುಭೂತಿಯೇ ವಿಶಿಷ್ಟ. ಸ್ವತಃ ಆಂಜನೇಯನ ಅವತಾರವಾದ ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿರುವ ಕೃಷ್ಣ ಪ್ರತಿಮೆ ಎಷ್ಟು ನಯನಮನೋಹರವೆಂದರೆ ಆ ರೂಪ ಕಂಡು ಬೆರಗಾಗದವರೇ ಇಲ್ಲ. ಎಲ್ಲ ಕಡೆ ಕೃಷ್ಣಪೂಜೆ ನಡೆಯುತ್ತದೆ. ಆದರೆ, ಉಡುಪಿಯಲ್ಲಿನ ಕೃಷ್ಣಪೂಜೆಗೆ ಅದರದ್ದೇ ಸೊಬಗು ಉಂಟು, ಕ್ರಮ ಉಂಟು! ಅಷ್ಟ ಮಠಗಳ ಮಠಾಧೀಶರೇ ಕ್ರಮವಾಗಿ ಎರಡೆರಡು ವರ್ಷ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವ ಮಹಾಪರ್ವವೇ ‘ಪರ್ಯಾಯ ಕಾಲ’ ಎನಿಸಿಕೊಳ್ಳುತ್ತದೆ. ಪರ್ಯಾಯ ಎಂದರೆ ಬರೀ ಕೃಷ್ಣಪೂಜೆ ಮಾಡುವ ಅಧಿಕಾರ ಅಲ್ಲ. ಕೃಷ್ಣನನ್ನು ಹೇಗೆ ಇನ್ನು ಹೆಚ್ಚೆಚ್ಚು ಪ್ರೀತಿಸಬೇಕು, ಇಷ್ಟೆಲ್ಲ ಕರುಣೆ ಹರಿಸುವ ಆ ಕರುಣಾಸಾಗರನಿಗೆ ಏನೆಲ್ಲ ಮಾಡಬಹುದು, ಸಾಮಾನ್ಯ ಜನರ ಹೃದಯಗಳಲ್ಲೂ ಕೃಷ್ಣನನ್ನು, ಕೃಷ್ಣತತ್ತ್ವವನ್ನು ಪ್ರತಿಷ್ಠಾಪಿಸುವುದು ಹೇಗೆ ಎಂದೆಲ್ಲ ಯತಿಗಳು ಯೋಚಿಸುತ್ತ ಕೃಷ್ಣಮಯರಾಗಿಯೇ ಎಷ್ಟೆಲ್ಲ ಅದ್ಭುತಗಳನ್ನು ನಿರ್ವಿುಸುತ್ತಿದ್ದಾರೆ. ಅದಕ್ಕೆಂದೇ, ಪರ್ಯಾಯ ಇಡೀ ರಾಷ್ಟ್ರದ ಉತ್ಸವದಂತೆ ದೊಡ್ಡ ಸಂಭ್ರಮವಾಗಿ ಬೆಳೆದು ಬಂದಿದೆ. ಪರ್ಯಾಯಕ್ಕೆ ಒಂದು ವರ್ಷ ಇರುವಾಗಲೇ ನಡೆಯುವ ಬಾಳೆ ಮುಹೂರ್ತ (ಶ್ರೀಮಠದ ತೋಟಗಳಲ್ಲಿ ಬಾಳೆ ಗಿಡ, ತುಳಸಿ ಗಿಡ ನೆಡುವ ಕ್ರಮ), ಬಾಳೆ ಮುಹೂರ್ತದ ಎರಡೇ ತಿಂಗಳ ಬಳಿಕ ನಡೆಯುವ ಅಕ್ಕಿ ಮುಹೂರ್ತ (ಅನ್ನಸಂತರ್ಪಣೆಗಾಗಿ ಅಕ್ಕಿ ಸಂಗ್ರಹ), ಪರ್ಯಾಯಕ್ಕೆ ಆರೇಳು ತಿಂಗಳಿರುವಾಗ ನಡೆಯುವ ಕಟ್ಟಿಗೆ ಮುಹೂರ್ತ (ಉರುವಲನ್ನು ಸಂಗ್ರಹಿಸಿಡುವ ವಿಧಾನ), ಪರ್ಯಾಯಕ್ಕೆ ಏಳೆಂಟು ವಾರಗಳಿರುವಾಗ ನಡೆಯುವ ಭತ್ತ ಮುಹೂರ್ತ (ಮುಂದಿನ ವರ್ಷದ ಅಕ್ಕಿಗಾಗಿ ಭತ್ತದ ಸಂಗ್ರಹ) ಈ ಕ್ಷೇತ್ರದ ಸೊಗಡನ್ನು ಹೆಚ್ಚಿಸಿವೆ.
ಪರ್ಯಾಯ ಏರಲಿರುವ ಯತಿಗಳು ಆರೇಳು ತಿಂಗಳ ಮುಂಚೆಯೇ ದೇಶಾದ್ಯಂತ ಸಂಚಾರ ಮಾಡಿ, ತೀರ್ಥಕ್ಷೇತ್ರಗಳ ಯಾತ್ರೆ ಮಾಡುತ್ತಾರೆ. ಪರ್ಯಾಯಕ್ಕೆ ಬರುವಂತೆ ಭಕ್ತಾದಿಗಳಿಗೆ, ಇತರೆ ಮಠಾಧೀಶರಿಗೆ ಆಹ್ವಾನ ನೀಡುತ್ತಾರೆ. ಅಲ್ಲಿಂದ ಬಂದ ಬಳಿಕ ಉಡುಪಿ ಜಿಲ್ಲೆಯ ಪುಣ್ಯಕ್ಷೇತ್ರಗಳನ್ನೂ ಸಂದರ್ಶಿಸುತ್ತಾರೆ. ಪರ್ಯಾಯಕ್ಕೆ ಇನ್ನೇನು ಹತ್ತು-ಹದಿನೈದು ದಿನಗಳಿರುವಾಗ ಯತಿಗಳ ಪುರಪ್ರವೇಶವಾಗಿ, ಇಡೀ ಉಡುಪಿ ಸಂಭ್ರಮದಿಂದ ಅವರನ್ನು ಬರಮಾಡಿಕೊಳ್ಳುತ್ತದೆ. ಮೊನ್ನೆ ವಾರಾಂತ್ಯದಲ್ಲಿ ಉಡುಪಿಗೆ ಹೋದಾಗ ಈ ಎಲ್ಲ ಸಿದ್ಧತೆಗಳನ್ನು, ಈ ಭವ್ಯ ಪರಂಪರೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂತು. ಅಷ್ಟಮಠಗಳು ಈ ಪರಂಪರೆಯನ್ನು ಕಾಪಾಡಿಕೊಂಡು, ಮುನ್ನಡೆಸುತ್ತಿರುವ ಪರಿ ಕೃಷ್ಣಭಕ್ತಿಯ ಅತ್ಯುನ್ನತ ಆದರ್ಶಕ್ಕೆ ಸಾಕ್ಷಿ. ಕೃಷ್ಣಸೇವೆ ಜತೆಗೆ ಜನಸೇವೆಯಲ್ಲೂ ಪರ್ಯಾಯ ಅವಧಿ ಹೊಸ ವಿಕ್ರಮಗಳನ್ನು ದಾಖಲಿಸುತ್ತದೆ. ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ನೊಂದವರಿಗೆ ನೆರವು ನೀಡುವುದು ಕೃಷ್ಣಕಾರ್ಯವೆಂದೇ ಭಾವಿಸಿ ಸಾರ್ಥಕವಾಗಿ ಮಾಡಲಾಗುತ್ತಿದೆ. ಇಲ್ಲಿ ಸತತವಾಗಿ ನಡೆಯುವ ಅನ್ನಸಂತರ್ಪಣೆಯಂತೂ ಅಸಂಖ್ಯ ಜೀವಗಳಿಗೆ ನೆಮ್ಮದಿ ಒದಗಿಸಿದೆ, ಹಾಗಾಗಿಯೇ ಉಡುಪಿ ಕೃಷ್ಣನಿಗೆ ಅನ್ನಬ್ರಹ್ಮನೆಂದು ಹೆಸರು.
ಇನ್ನೇನು ಪರ್ಯಾಯ ಅವಧಿ ಪೂರ್ಣಗೊಳಿಸಲಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, 2018 ಜನವರಿ 18ರಿಂದ ಶ್ರೀಕೃಷ್ಣನಿಗೆ ಪ್ರತಿ ನಿತ್ಯ ಲಕ್ಷ ತುಳಸಿ ಅರ್ಪಿಸುವುದನ್ನು ಆರಂಭಿಸಿ, 721 ದಿನಗಳು ಪೂರ್ಣಗೊಂಡಿವೆ! (ಆ ತುಳಸಿ ಬಳಿಕ ಔಷಧ ತಯಾರಿಕೆಗೆ ಬಳಕೆಯಾಗುತ್ತ ಮನುಷ್ಯನ ದೈಹಿಕ-ಮನೋ ಕಾಯಿಲೆಗಳನ್ನು ದೂರ ಮಾಡುತ್ತಿದೆ). ಲಕ್ಷನಾಮ ಅರ್ಚನೆ ವಿಷ್ಣುಸಹಸ್ರನಾಮದ ಮೂಲಕ ನಡೆಯುತ್ತಿರುವುದು ವಿಶೇಷ. ಅಲ್ಲದೆ, ಕನಕನ ಕಿಂಡಿ ಬಳಿ 24 ಗಂಟೆ ನಿರಂತರವಾಗಿ ಹರಿನಾಮ ಸ್ಮರಣೆಯು ಭಜನೆ ಮುಖಾಂತರ ನಡೆಯುತ್ತಿರುವುದು ಹೊಸ ದಾಖಲೆಯೇ. ಕೃಷ್ಣ ದೇವಸ್ಥಾನದ ಛಾವಣಿಗೆ ಇವರ ಅವಧಿಯಲ್ಲೇ ಚಿನ್ನದ ಹೊದಿಕೆ ಹೊದಿಸಲಾಗಿದೆ (ಕೃಷ್ಣನ ದ್ವಾರಕಾ ನಗರಿ ಸಂಪೂರ್ಣ ಸ್ವರ್ಣಮಯವೇ ಆಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ). ಮೊನ್ನೆ ಜನವರಿ 5ರಂದು ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಸ್ವರ್ಣ ತುಲಾಭಾರ ಮಹೋತ್ಸವ ನಡೆಯಿತು. ‘ತುಂಬ ಜನರಿಗೆ ಜೀವನ ಭಾರ ಎನಿಸುತ್ತಿರುವ ಸಂದರ್ಭದಲ್ಲಿ ಆ ಭಾರವನ್ನೆಲ್ಲ ಜಗದೊಡೆಯ ಕೃಷ್ಣನ ಮೇಲೆ ಹಾಕಿ, ಶರಣಾಗಿ’ ಎಂಬ ಶ್ರೀಗಳ ಸಂದೇಶ ಸಕಾಲಿಕವಾಗಿತ್ತು. ಇದೇ ಪರ್ಯಾಯ ಅವಧಿಯಲ್ಲಿ ಶ್ರೀ ವಿದ್ಯಾಧೀಶ ತೀರ್ಥರು ಪಲಿಮಾರು ಮಠದ ಉತ್ತರಾಧಿಕಾರಿಯನ್ನೂ ನೇಮಿಸಿದ್ದು, ಹತ್ತೊಂಬತ್ತು ವರ್ಷದ ವಿದ್ಯಾರಾಜೇಶ್ವರ ಸ್ವಾಮೀಜಿ ಅವರನ್ನು ಗುರುಕಾರುಣ್ಯ, ವಾತ್ಸಲ್ಯದಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಭಕ್ತಿ ಮತ್ತದರ ಶಕ್ತಿಯೇ ವಿಶಿಷ್ಟಗಳನ್ನು ಸೃಷ್ಟಿಸುತ್ತಿದೆ ಎಂಬುದು ನಿಜವೇ. ಪೇಜಾವರ ಅಧೋಕ್ಷಜ ಮಠದ ಮಠಾಧೀಶ ಶ್ರೀ ವಿಶ್ವೇಶ ತೀರ್ಥರು ಈ ಬಾರಿಯ ಪರ್ಯಾಯಕ್ಕಿಲ್ಲ ಎಂಬ ಕೊರಗು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಆದರೂ, ಹರಿಚಿತ್ತ ಸತ್ಯ ಎಂಬಂತೆ ಕೃಷ್ಣಸೇವೆಗೆ ಮುಂದಡಿ ಇಡುತ್ತ, ಅದಮಾರು ಮಠ ಈ ಬಾರಿಯ ಪರ್ಯಾಯಕ್ಕೆ ಸಿದ್ಧವಾಗಿದೆ. ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮುಂದಿನ ಎರಡು ವರ್ಷ ಕೃಷ್ಣಸೇವೆಯ ಕೈಂಕರ್ಯ ನೇರವೇರಿಸಲಿದ್ದಾರೆ. ಸರ್ವಜ್ಞ ಪೀಠ ಅಲಂಕರಿಸಲಿದ್ದಾರೆ.
ಭಕ್ತಿ ಎಂಬುದು ಪರಮೋಚ್ಚ ಮೌಲ್ಯ. ಅದು ಶರಣಾಗತಿಯನ್ನು ಕಲಿಸುತ್ತದೆ, ಅಹಂನ್ನು ದೂರ ಮಾಡಿ, ಮನುಷ್ಯ ತನ್ನ ಅಂತರಂಗವನ್ನು ನೋಡುವಂತೆ ಮಾಡುತ್ತದೆ. ಹೃದಯದ ತುಂಬೆಲ್ಲ ತುಂಬಿಕೊಂಡಿರುವ ಕಲ್ಮಶ, ವಿಷಯವಾಸನೆಗಳನ್ನು ಹೋಗಲಾಡಿಸಿ ಬದುಕು ಸಾರ್ಥಕತೆಯತ್ತ ಸಾಗುವಂತೆ ಮಾಡುತ್ತದೆ, ಇಂಥ ಭಕ್ತಿಮೌಲ್ಯವನ್ನು ಆ ಕೃಷ್ಣ ಎಂದೆಂದಿಗೂ ಕರುಣಿಸುತ್ತ
ಬಂದಿದ್ದಾನೆ. ಉಡುಪಿ ಸದ್ಯದಲ್ಲೇ ಮತ್ತೊಂದು ಪರ್ಯಾಯಕ್ಕೆ (ಜ.18) ಸಾಕ್ಷಿಯಾಗಲಿದೆ. ಇಂಥ ಭಕ್ತಿ ಉತ್ಸವಗಳು ನಮ್ಮೆಲ್ಲರ ಒಳಗಣ್ಣು ತೆರೆಸಲಿ. ಆ ಕೃಷ್ಣನ ನವಿಲುಗರಿಯ ಮೃದುತ್ವ ನಮ್ಮ ಮನಸ್ಸುಗಳನ್ನು ಆವರಿಸಲಿ, ಕೃಷ್ಣನ ಕೊಳಲು ನಾದದ ಮಂಗಳಮಯ ತರಂಗ ನಮ್ಮೆಲ್ಲರ ಜೀವನ ವ್ಯಾಪಿಸಲಿ, ಕೃಷ್ಣನ ಗೋವಿನನಂಟು ಕಾಮಧೇನು ರಕ್ಷಣೆಗೆ ಪ್ರೇರಣೆ ನೀಡಲಿ, ಕೃಷ್ಣನ ಬೆಣ್ಣೆಯ ಬಿಳುಪಿನಂತೆ ನಮ್ಮಗಳ ಜೀವನವೂ ಶುಭ್ರವಾಗಿರಲಿ, ನಿಷ್ಕಲ್ಮಶವಾಗಿರಲಿ, ಕೃಷ್ಣನ ತುಂಟಾಟ ಜೀವನಪ್ರೀತಿಯನ್ನು ಹೆಚ್ಚಿಸಲಿ. ಮುಖ್ಯವಾಗಿ, ಎಲ್ಲ ಸಜ್ಜನರ ರಕ್ಷಣೆಗೆ ಧಾವಿಸಿ ಬಂದ/ಬರುವ ಕೃಷ್ಣನ ಗುಣ ನಮ್ಮ ಸ್ವಾರ್ಥಗಳನ್ನು ಕಳೆದು ಸಮಾಜಮುಖಿಯಾಗಿಸಲಿ.
ಕೃಷ್ಣ ಎನಬಾರದೆ, ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ನರಜನ್ಮ ಬಂದಾಗ ನಾಲಿಗೆ ಇರುವಾಗ,
ಕೃಷ್ಣ ಎನಬಾರದೆ...!