ನಾನು ಎನ್ನುವುದು ಭವಬಂಧ; ನಾನಲ್ಲ ಎನ್ನುವುದೇ ಮೋಕ್ಷ!

Jaroor Maatu 11 Feb 20
Published on
‘ಸೊಕ್ಕ ಮಾಡಬ್ಯಾಡೋ ಮಾರಾಯ; ಇವತ್ತ ಇದ್ದಾಂಗ ನಾಳೆ ಇರಂಗಿಲ್ಲ. ತಗ್ಗಿ-ಬಗ್ಗಿ ನಡ್ಕೊಂಡ್ರರ ಬಾಳಲಿಕ್ ಆಗ್ತದ್. ಈ ಜೀವನ ನೀರ್ ಮ್ಯಾಲಿನ ಗುಳ್ಳಿ ಇದ್ದಾಂಗ. ಇದನ್ನು ಅರ್ಥ ಮಾಡ್ಕೊಂಡ್ರ ಛಲೋ. ತಲಿ ಗಟ್ಟಿ ಅದ ಅಂತ ಯಾರಾದರೂ ಹೋಗಿ ಬಂಡೆಗಲ್ಲಿಗೆ ಹೊಡ್ಕೊತಾರೇನ್...’

ಮೊನ್ನೆ ಬಸ್ ಪ್ರಯಾಣ ಮಾಡುತ್ತಿದ್ದಾಗ ಹಿರಿಯಜೀವವೊಂದು ತನ್ನ ಜತೆಗಿದ್ದ ವ್ಯಕ್ತಿಗೆ ಜೀವನತತ್ತ್ವವನ್ನು ಇಷ್ಟು ಸರಳವಾಗಿ ಬೋಧಿಸಿದ್ದು ಕಿವಿಗೆ ಬಿತ್ತು. ಇತಿಹಾಸ, ವರ್ತಮಾನ ಪಾಠ ಕಲಿಸುತ್ತಲೇ ಇರುತ್ತವೆ. ಪಾಠ ಕಲಿತವರು ನಾಳೆಗಳನ್ನು ಸುಂದರವಾಗಿಸಿಕೊಳ್ಳುತ್ತಾರೆ; ಕಲಿಯದಿದ್ದವರಿಗೆ ಮುಂದೆ ಪಶ್ಚಾತ್ತಾಪಪಡುವ ಅವಕಾಶವನ್ನೂ ಬದುಕು ಕೊಡುವುದಿಲ್ಲ. ಅಹಂಕಾರ ತುಂಬ ಕೆಟ್ಟದ್ದು; ಅದು ನಮ್ಮನ್ನೇ ಸುಡುತ್ತದೆ ಎಂದು ಹಿಂದಿನಿಂದ ಹೇಳಿಕೊಂಡು ಬರಲಾಗಿದ್ದರೂ, ಅಹಂನ ತೆಕ್ಕೆಯಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಮಾತಿದೆ. ಆದರೆ, ಈ ಅಹಂನ ವಶಕ್ಕೆ ಬಿದ್ದವರು ಅರ್ಧ ತುಂಬಿದ ಕೊಡಗಳೇ! ಕೆಲವರಿಗೆ ರೂಪದ ಅಹಂಕಾರ, ಮತ್ತೆ ಕೆಲವರಿಗೆ ಅಧಿಕಾರದ ಅಹಂಕಾರ, ಧನಿಕರ ಅಹಂ ಅಂತೂ ಇನ್ನೂ ಎತ್ತರ! ಜೀವನ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದ್ದರೂ ಏಕೆ ಹಿಂಗೆ ಕಿವುಡರಾಗುತ್ತೇವೆ ಎಂಬುದೇ ಬಗೆಹರಿಯದ ಪ್ರಶ್ನೆ. ಎಷ್ಟೇ ಬುದ್ಧಿವಾದ ಹೇಳಿದರೂ ರಾವಣ ಯಾರ ಮಾತನ್ನೂ ಕೇಳದೆ ಅಹಂಕಾರದಿಂದಲೇ ಧರೆಗುರುಳಿದ! ಸಾಕ್ಷಾತ್ ಕೃಷ್ಣನ ಮಾತನ್ನೂ ತಿರಸ್ಕರಿಸಿದ ಕೌರವರು ಅಹಂನ ಬೇಗೆಯಲ್ಲೇ ಬೇಯುತ್ತ ರಣರಂಗದಲ್ಲಿ ಹತರಾದರು. ಕಂಸನಿಗೆ ಏನು ಗತಿಯಾಯಿತು ಎಂದು ಗೊತ್ತೇ ಇದೆ. ಪೂತನಿ ಪ್ರಾಣ ಕಳೆದುಕೊಂಡಳು. ಅಸುರರು ಸೋಲು ಅನುಭವಿಸಿದರು. ಹಿರಣ್ಯಕಶಿಪು ‘ದೇವರಿಗಲ್ಲ, ನನ್ನನ್ನು ಪೂಜಿಸಿ’ ಎಂದು ಹೇಳಿದವನೇ ವಧಿಸಲ್ಪಟ್ಟ. ಅದಕ್ಕೆಂದೇ, ನಮ್ಮ ಚರಿತ್ರೆ ಭಕ್ತ ಪ್ರಲ್ಹಾದನನ್ನು ನೆನಪು ಮಾಡಿಕೊಳ್ಳುತ್ತದೆಯೇ ಹೊರತು, ಹಿರಣ್ಯಕಶಿಪುವನ್ನಲ್ಲ.

ಚರಿತ್ರೆ, ಪುರಾಣಗಳಲ್ಲಿ ಇಂಥ ನೂರೆಂಟು ಉದಾಹರಣೆಗಳಿವೆ. ಆದರೆ ಕಣ್ಣು ತೆರೆದು ನೋಡುವ ಮನಸ್ಸು, ಒಳದೃಷ್ಟಿ ಬೇಕಲ್ಲ. ಹೊರಗಡೆಯ ಹಪಹಪಿ ಹೆಚ್ಚಾದಾಗ, ಅಂತರಂಗದ ಕಣ್ಣು ತಾನಾಗಿಯೇ ಮುಚ್ಚಿಕೊಳ್ಳುತ್ತದೆ. ಆಂತರ್ಯದ ಅಂಗಳದಲ್ಲಿ ಅಂಧಕಾರವೇ ಆವರಿಸಿಕೊಂಡಾಗ ಅಲ್ಲಿ ಅಹಂಕಾರ ಕೇಕೆ ಹಾಕಿ ಕುಣಿಯುತ್ತದೆ. ಮತ್ತೆ ಬೆಳಕು ಬೇಕಾದರೆ ‘ನಾನಲ್ಲ ನೀನು’ ಎಂಬುದೇ ಜೀವನಧರ್ಮವಾಗಬೇಕು.

ಅಷ್ಟಕ್ಕೂ, ಎಲ್ಲರ ಹಿತಕ್ಕಾಗಿ ಬದುಕುವ ಜೀವನಸಂಸ್ಕೃತಿ ನಮ್ಮದು. ಆನಂದದ ಅನ್ವೇಷಣೆಯೂ ಇದರಿಂದ ಸುಲಭದಲ್ಲಿ ಸಾಕಾರವಾಗುತ್ತಿತ್ತು. ಇತ್ತೀಚಿನ ಕೆಲ ದಶಕಗಳಲ್ಲಿ ‘ನನಗಾಗಿ ಬದುಕಬೇಕು, ನಾನು ಮಾತ್ರ ಬದುಕಬೇಕು...’ ಎಂಬ ಹುಚ್ಚುಸ್ವಾರ್ಥದ ಅಟ್ಟಹಾಸ ಮಾನವೀಯ ಸಮಸ್ಯೆಗಳನ್ನು, ಅದರೊಂದಿಗೆ ಕೌಟುಂಬಿಕ ಕಲಹಗಳನ್ನು, ವ್ಯಾಜ್ಯಗಳನ್ನು ಹೆಚ್ಚು ಮಾಡುತ್ತಿದೆ.

ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಬೇಕು; ಅದಕ್ಕಿಂತ ಹೆಚ್ಚಾಗಿ ನಾವು ನೆಮ್ಮದಿಯಿಂದ ಬದುಕಬೇಕು ಎಂದರೆ ಈ ಅಹಂ ಎಂಬ ಅಗ್ನಿಯಿಂದ ತುಂಬ ಅಂತರ ಕಾಯ್ದುಕೊಳ್ಳಲೇಬೇಕು. ಹಿರಿಯ ವಿದ್ವಾಂಸ, ನಾಡೋಜ ಎಸ್.ಆರ್.ರಾಮಸ್ವಾಮಿ ತಮ್ಮ ಸೂಕ್ತಿ-ಸಂಚಯ ಸುಭಾಷಿತ ಸಂಗ್ರಹ (ಪ್ರಕಟಣೆ: ರಾಷ್ಟ್ರೆೊತ್ಥಾನ ಸಾಹಿತ್ಯ, ಬೆಂಗಳೂರು) ಕೃತಿಯಲ್ಲಿ ಕೆಲ ವಿಶಿಷ್ಟ ದೃಷ್ಟಾಂತಗಳನ್ನು ನೀಡಿದ್ದಾರೆ.

ಒಮ್ಮೆ ಬೇರೆಬೇರೆ ಎಲೆಗಳ ನಡುವೆ ಸ್ಪರ್ಧೆಯುಂಟಾಗಿ ಒಂದೊಂದೂ ತಾನೇ ಶ್ರೇಷ್ಠವೆಂದು ಬೀಗತೊಡಗಿತು. ‘ನಾನು ನಿಮ್ಮೆಲ್ಲರಿಗಿಂತ ಮಂಗಳಕರ’ ಎಂದಿತು ಮಾವಿನೆಲೆ. ಆ ಅಹಂಕಾರದ ಫಲವಾಗಿ ಅದು ಬಾಗಿಲ ಮೇಲೆ ತಲೆ ಕೆಳಗಾಗಿ ನೇತಾಡಬೇಕಾಯಿತು. ‘ನಾನು ಎಲ್ಲರಿಗೂ ಅಜೀರ್ಣ ನಿವಾರಿಸಿ ಆರೋಗ್ಯ ಉಂಟುಮಾಡುತ್ತೇನೆ’ ಎಂದಿತು ವೀಳ್ಯದೆಲೆ. ಅದರ ಅಹಂಕಾರ ನೋಡಿ ಎಲ್ಲರೂ ಅದನ್ನು ಅಗಿದು ತುಪುಕ್ಕೆಂದು ಹೊರಗೆ ಉಗುಳಿದರು. ‘ನಾನು ಸುವಾಸನಾಭರಿತ’ ಎಂದು ಕೊಚ್ಚಿಕೊಂಡಿತು ಕರಿಬೇವಿನ ಎಲೆ. ಬಡಿಸಿದ ಎಲೆಯಿಂದ ಅದನ್ನು ಆಚೆ ತೆಗೆದಿರಿಸಿದರು. ಅದು ಬಾಯನ್ನು ಪ್ರವೇಶಿಸಲೇ ಇಲ್ಲ. ‘ನಾನು ನಿಮ್ಮೆಲ್ಲರಿಗಿಂತ ಪರಿಶುಭ್ರ’ ಎಂದ ಬಾಳೆಯೆಲೆ ಊಟವಾದ ಮೇಲೆ ತಿಪ್ಪೆಗುಂಡಿ ಸೇರಿತು. ಉಳಿದವರಂತೆ ಬಡಾಯಿ ಕೊಚ್ಚದೆ ವಿನೀತವಾಗಿದ್ದ ತುಲಸೀ ಎಲೆಯು ಅದರ ನಮ್ರಗುಣದಿಂದಾಗಿ ಮೆಚ್ಚುಗೆ ಗಳಿಸಿ, ಸಾಕ್ಷಾತ್ ಮಹಾವಿಷ್ಣುವಿನ ಕೊರಳಿಗೇ ಏರಿತು. ಎಲ್ಲರೂ ಅದನ್ನು ಪೂಜಿಸತೊಡಗಿದರು. ಮಾನವರ ಉತ್ಕ್ರಮಣಕಾಲದಲ್ಲಿ ಅದು ನೀರಿನೊಡನೆ ಬಾಯಳಹೊಕ್ಕು ಸದ್ಗತಿಕಾರಕವೆಂದೂ ಎನಿಸಿತು.

ಅದೇ ಕೃತಿಯಲ್ಲಿ ಇನ್ನೊಂದು ವಿವರಣೆ: ದರ್ಪಃ ಕಸ್ಯ ನ ಪಾತಾಯ ನೋನ್ನತ್ಯೈ ಕಸ್ಯ ನಮ್ರತಾ

-ಕ್ಷೇಮೇಂದ್ರ ‘ದುರಂಹಕಾರವು ಯಾರನ್ನು ತಾನೆ ಕೆಳಕ್ಕೆ ಉರುಳಿಸುವುದಿಲ್ಲ? ನಮ್ರಗುಣವು ಯಾರನ್ನು ತಾನೆ ಉನ್ನತಿಗೆ ಏರಿಸುವುದಿಲ್ಲ?’

ಅಹಂಕಾರ ಹೆಚ್ಚಿದಷ್ಟೂ ಮನಸ್ಸಿನ ಸ್ತಿಮಿತತೆ ಕುಗ್ಗುತ್ತ ಹೋಗುತ್ತದೆ. ಅತಿಶಯ ಸಾಮರ್ಥ್ಯಶಾಲಿಗಳಾದರೂ ರ್ದಪಿಷ್ಠರಾಗಿದ್ದಲ್ಲಿ ಆದರಣೀಯರೆನಿಸುವುದಿಲ್ಲ. ಪ್ರತಿಯಾಗಿ ಮೃದುಸ್ವಭಾವವೂ ನಮ್ರತೆಯೂ ಜನಾನುರಾಗವನ್ನು ಗಳಿಸಿಕೊಳ್ಳುತ್ತವೆ. ಉನ್ನತ ಸಾಧನೆ ಮಾಡಿದವರಲ್ಲಿಯೂ ದುರಂಹಕಾರ ಸಲ್ಲುವುದಿಲ್ಲ. ಇನ್ನು ಅಂಥ ಸಾಧನೆಯೂ ಇಲ್ಲದೆ ಸ್ಥಾನಕಾರಣದಿಂದಲೋ ಅಧಿಕಾರಕಾರಣದಿಂದಲೋ ದರ್ಪವನ್ನು ಮೆರೆಯುವುದಂತೂ ಸೂಕ್ತ ಅಲ್ಲವೇ ಅಲ್ಲ. ‘ಅಹಂ ಕರೋಮೀತಿ ವೃಥಾಭಿಮಾನಃ’ (ನಾನು ಮಾಡುತ್ತೇನೆ ಎನ್ನುವುದು ವ್ಯರ್ಥವಾದ ಅಭಿಮಾನ) ಎಂದಿದೆ ಅಧ್ಯಾತ್ಮರಾಮಾಯಣ. ಅಹಂಭಾವದಿಂದ ಮುಕ್ತರಾಗುವುದೇ ಮೋಕ್ಷ. ನಾನು ಎನ್ನುವುದು ಭವಬಂಧ; ನಾನಲ್ಲ ಎನ್ನುವುದೇ ಮೋಕ್ಷ.

ಶ್ರೇಷ್ಠ ಸಂತ ಶ್ರೀರಾಮಕೃಷ್ಣ ಪರಮಹಂಸರು ಕೂಡ ದುರಂಹಕಾರ ಹಾನಿಕರ ಎಂಬುದನ್ನು ಹಲವು ದೃಷ್ಟಾಂತಗಳ ಮೂಲಕ ಹೇಳಿದ್ದಾರೆ. ಗುರುವಿನಲ್ಲಿ ಅಗಾಧ ಭಕ್ತಿಯಿದ್ದ ಶಿಷ್ಯನೊಬ್ಬ ಗುರುವಿನ ನಾಮಸ್ಮರಣೆಯ ಸಹಾಯದಿಂದಲೇ ನದಿಯ ಮೇಲೆ ನಡೆದುಕೊಂಡು ಹೋದ. ಗುರು ಇದನ್ನು ನೋಡಿ, ‘ಏನು ನನ್ನ ಹೆಸರಿನಲ್ಲಿ ಇಷ್ಟೊಂದು ಶಕ್ತಿ ಇದೆಯೇ? ಹಾಗಾದರೆ ನನ್ನ ಮಹಿಮೆ ಎಷ್ಟು, ನಾನೆಷ್ಟು ಬಲಶಾಲಿ’ ಎಂದು ಭಾವಿಸಿದ. ಮಾರನೇ ದಿನ ಗುರು ಕೂಡ ‘ನಾನು ನಾನು’ ಎನ್ನುತ್ತ ನದಿಯ ಮೇಲೆ ಹೋಗಲು ಯತ್ನಿಸಿದ. ಕಾಲಿಟ್ಟ ತತ್​ಕ್ಷಣವೇ ನೀರಿನಲ್ಲಿ ಮುಳುಗಿದ. ಪಾಪ, ಅವನಿಗೆ ಈಜುವುದಕ್ಕೂ ಬರುತ್ತಿರಲಿಲ್ಲ. ನಂಬಿಕೆಯಿಂದ ಅದ್ಭುತವನ್ನು ಸಾಧಿಸಬಹುದು. ಆದರೆ, ದುರಹಂಕಾರದಿಂದ ನಾಶ ಖಚಿತ. ಅಹಂಕಾರದ ಭಾರ ಸಂಸಾರದ ನೀರಿನಲ್ಲಿ ಮುಳುಗುವಂತೆ ಮಾಡುತ್ತದೆ.

‘ಕಥೆಗಾರ ಶ್ರೀರಾಮಕೃಷ್ಣ’ (ಪ್ರಕಟಣೆ ಮೈಸೂರು ರಾಮಕೃಷ್ಣ ಆಶ್ರಮ) ಪುಸ್ತಕದಲ್ಲಿ ಇನ್ನೊಂದು ದೃಷ್ಟಾಂತವಿದೆ. ಶಿವನ ಮಹಿಮೆಯನ್ನು ರಚಿಸಿದ ಒಬ್ಬ ಕವಿ ತುಂಬ ಶ್ರೇಷ್ಠವಾದುದನ್ನು ರಚಿಸಿರುವೆನು ಎಂದು ಅಹಂಕಾರಪಟ್ಟ. ಆದರೆ, ಶಿವನ ನಂದಿ ತನ್ನ ಹಲ್ಲುಗಳನ್ನು ತೋರಿಸಿದಾಗ ಅವನ ಅಹಂಕಾರ ತಗ್ಗಿತು. ನಂದಿಯ ಬಾಯಲ್ಲಿ ಇದ್ದ ಪ್ರತಿಯೊಂದು ಹಲ್ಲೂ ಅವನು ರಚಿಸಿದ ಸ್ತೋತ್ರದ ಶಬ್ದವಾಗಿತ್ತು. ಅನಾದಿ ಕಾಲದಿಂದ ಆ ಶಬ್ದಗಳಿದ್ದವು. ಲೇಖಕನು ಅವನ್ನು ಕಂಡುಹಿಡಿದನು ಅಷ್ಟೆ. ದೇವರೊಬ್ಬನೇ ಎಲ್ಲವನ್ನು ಮಾಡುವವನು. ನಾವುಗಳೆಲ್ಲ ಅವನ ನಿಮಿತ್ತ. ಜ್ಞಾನಿಗೂ ಕೂಡ ಅಹಂಕಾರಪಡಲು ಆಸ್ಪದವಿಲ್ಲ.

ಸಂತ ಜ್ಞಾನೇಶ್ವರರು ಭಕ್ತಪಂಥದ ದೊಡ್ಡ ಸಾಧಕರು. ಅಂಥ ಸಾತ್ವಿಕರ ಎದುರು, ಮಹಾನ್ ತಪಸ್ವಿಗಳ ಎದುರು ಸಾಮಾನ್ಯರೆನಿಸಿಕೊಂಡವರು ಅಹಂಕಾರ ತೋರಿದ್ದಿದೆ. ‘ಎಲ್ಲರಲ್ಲಿ ಭಗವಂತನ ಅಂಶ ನೆಲೆಸಿದೆ ಅಂತ ಹೇಳುತ್ತೀರಲ್ಲ? ನಿಮ್ಮ ಹೆಸರು ಜ್ಞಾನೇಶ್ವರ; ಈ ಎಮ್ಮೆಯ ಹೆಸರೂ ಜ್ಞಾನೇಶ್ವರ. ಇದರ ಬಾಯಿಂದ ವೇದಮಂತ್ರಗಳನ್ನು ಕೇಳಿಸಿ ತೋರಿಸಿ, ಆಗ ಮಾತ್ರ ನಿಮ್ಮ ಮಾತನ್ನು ನಂಬುತ್ತೇನೆ’ ಎಂದ ಒಬ್ಬ ಮೂಢ. ಅಲ್ಲಿ ಸೇರಿದ್ದ ಜನ ಆ ವ್ಯಕ್ತಿಯ ಅಜ್ಞಾನವನ್ನು ಹಳಿಯತೊಡಗಿದರು. ಜ್ಞಾನೇಶ್ವರರು ಏನೂ ಮಾತನಾಡದೆ ನಸುನಕ್ಕರು. ಆ ಎಮ್ಮೆಯ ಬೆನ್ನಿನ ಮೇಲೆ ಪ್ರೇಮಸ್ಪರ್ಶ ಮಾಡಿ ತಲೆ ಮೇಲೂ ಕೈಯಾಡಿಸಿದರು. ಕಣ್ಣು ಮುಚ್ಚಿಕೊಂಡು ಎಮ್ಮೆಗೆ ವೇದಮಂತ್ರ ಹೇಳತೊಡಗಿದರು. ಏನಾಶ್ಚರ್ಯ! ಸ್ಪಷ್ಟ ದನಿಯಲ್ಲಿ ಆ ಎಮ್ಮೆ ಯೋಗಮಂತ್ರಗಳನ್ನು ಹೇಳಿತು. ಅಲ್ಲಿದ್ದ ಜನ ಇದನ್ನು ಕಂಡು ನಿಬ್ಬೆರಗಾದರು. ಮಂತ್ರ ಹೇಳಿ ಎಮ್ಮೆ ಶಾಂತವಾದ ಬಳಿಕ ಅದರ ಮಾಲೀಕ ಜ್ಞಾನೇಶ್ವರರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. ಈ ಘಟನೆ ನಡೆದದ್ದು ಮಹಾರಾಷ್ಟ್ರದ ಪೈಠಣ್ (ಔರಂಗಾಬಾದ್ ಸಮೀಪ)ನಲ್ಲಿ. ಈಗಲೂ ಪೈಠಣದಲ್ಲಿ ಎಮ್ಮೆಗೆ ವೇದಮಂತ್ರ ಪಠಿಸಿದ ಸ್ಥಳ ಮತ್ತು ಆ ಎಮ್ಮೆಯ ಚಿತ್ರ ಗೋಡೆಯಲ್ಲಿ ಕೆತ್ತನೆ ಮಾಡಿರುವುದನ್ನು ನೋಡಬಹುದು.

ಅಜ್ಞಾನ, ಸ್ವಾರ್ಥ, ಲೋಭ, ಮತ್ಸರ ತುಂಬಿಕೊಂಡಷ್ಟು ಅಹಂಕಾರ ಬೆಳೆಯುತ್ತಲೇ ಹೋಗುತ್ತದೆ. ಬದಲಾಗಿ, ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ಸುನೀತಿ, ದಯೆ, ಸೇವೆಯ ಮೌಲ್ಯ ಅಳವಡಿಸಿಕೊಳ್ಳುತ್ತ ಸಾಗಿದಂತೆ ಅಹಂಕಾರ ದೂರವಾಗಿ, ನಾವು ನಿಮಿತ್ತ ಮಾತ್ರ ಎಂಬ ನಿಜದ ಅರಿವು ಮೂಡುತ್ತದೆ.

‘ವಿನಯವೇ ಯಾರಿಗೆ ರತ್ನಕಿರೀಟವೋ, ಜ್ಞಾನವೇ ಯಾರಿಗೆ ಮಣಿ ಕುಂಡಲಗಳೋ, ಯಾರಿಗೆ ತ್ಯಾಗಬುದ್ಧಿಯೇ ಕಂಕಣವೋ, ಅವರಿಗೆ ಜಡವಾದ ಒಡವೆ-ಅಲಂಕರಣಗಳಿಂದ ಏನು ಪ್ರಯೋಜನ?’ ಎಂದಿದೆ ಸುಭಾಷಿತ. ‘ಯಾರಿಗೆ ತನ್ನದೆಂಬುದಾವುದೂ ಇಲ್ಲವೋ, ಯಾರು ಸಂಯಮಿಯೂ ಶಾಂತನೂ ಸಮಚಿತ್ತನೂ ಸದಾ ಸಂತೃಪ್ತಮನಸ್ಕನೂ ಆಗಿರುತ್ತಾನೋ ಅವನಿಗೆ ಎಲ್ಲ ದಿಕ್ಕುಗಳೂ ಸುಖಮಯವಾಗಿರುತ್ತವೆ’ ಎಂದಿದೆ ಇನ್ನೊಂದು ಸುಭಾಷಿತ.

ಅತಿಯಾದ ಸ್ವಾರ್ಥ ಎಲ್ಲ ಸಮಸ್ಯೆಗಳಿಗೂ ಮೂಲ. ಬದುಕು ನಾಲ್ಕು ದಿನದ ಯಾತ್ರೆ ಎಂಬುದು ಗೊತ್ತಿದ್ದರೂ ಅತಿಯಾದ ವ್ಯಾಮೋಹ. ‘ನನಗೆ ಸಿಕ್ಕರೆ ಸಾಕು’ ಎಂಬ ಸಂಕುಚಿತ ಬುದ್ಧಿ. ಭಗವಾನ್ ರಮಣ ಮಹರ್ಷಿಗಳ ಬಳಿ ಬಡೌದೆಯ ಮಹಾರಾಣಿ ಬಂದು ಅವರಿಗೆ ಬೆಳ್ಳಿ ತಟ್ಟೆ, ಲೋಟ ಅರ್ಪಿಸಲು ಮುಂದಾದಳು. ಆಗ ರಮಣರು-‘ಈ ಆಶ್ರಮದಲ್ಲಿ ನನ್ನೊಡನೆ ಇರುವ ಸಹಾಯಕರಿಗೆಲ್ಲ ತಾವು ಇಂತಹ ತಟ್ಟೆ-ಲೋಟಗಳನ್ನು ದಾನವಾಗಿ ಇತ್ತಲ್ಲಿ ನಾನು ಅವನ್ನು ಬಳಸಲು ಅಭ್ಯಂತರವಿಲ್ಲ. ನಾನು ಮಾತ್ರ ದೊಡ್ಡವನೆಂದೂ ಉಳಿದವರೂ ಸಣ್ಣವರೆಂದೂ ಯಾರೂ ಭಾವಿಸಬಾರದು. ನಮ್ಮೆಲ್ಲರಲ್ಲಿ ಇರುವ ಪರಮಾತ್ಮ ಒಬ್ಬನೇ’ ಎಂದರು. ಮಹಾರಾಣಿ ಇವರ ದೊಡ್ಡಗುಣ ನೋಡಿ ಮರುಮಾತಾಡದೆ ಮರಳಿದಳು.

ನಮ್ಮೊಳಗೇ ನಾವು ಹೊಕ್ಕಿ ನೋಡದಿದ್ದರೆ, ಆಂತರ್ಯದ ಜತೆ ಸಣ್ಣ ಸಂವಾದವನ್ನೂ ಸಾಧಿಸದಿದ್ದರೆ ಅಲ್ಲಿರುವ ಪರಮಾತ್ಮನನ್ನು ಕಾಣುವುದೆಂತು? ಅದಕ್ಕೆಂದೆ, ಆ ಪರಮಾತ್ಮ ಒಳ್ಳೆಯ ಹೃದಯಗಳನ್ನು ಹುಡುಕಿ ಹೊರಟಿದ್ದಾನೆ. ಖಾಲಿಯಾಗಿರುವ ಹೃದಯಗಳ ಸ್ಥಾನದಲ್ಲೇ ಅಹಂಕಾರ ಬಂದು ಕೂತಿದೆ. ಇದನ್ನು ಹೋಗಲಾಡಿಸುವ ತನಕ ಜೀವನ ಅರ್ಥವಾಗದು, ಅದರ ಸೊಗಸು ಅರಿವಿಗೆ ಬಾರದು.

ಈ ಬದುಕಿನ ಜಾತ್ರೆಯಲ್ಲಿ ಒಳ್ಳೆಯದನ್ನು ಮೆರೆಸೋಣ, ಅಹಂಕಾರವನ್ನಲ್ಲ! ಏನಂತೀರಿ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net