

ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಟಾಲಿವುಡ್ನ ದೊಡ್ಡ ನಿರ್ಮಾಪಕರ ನಡುವೆ ಪೈಪೋಟಿಯೇ ನಡೆಯುತ್ತಿದೆ. ತೆಲುಗಿನ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳು ಜಾಹ್ನವಿಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದು, ಈ ಪೈಕಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ತೆಲುಗು ಚಿತ್ರರಂಗಕ್ಕೆ ಜಾಹ್ನವಿಯನ್ನು ಪರಿಚಯಿಸುವ ಪ್ರಯತ್ನ ಕಳೆದ ವರ್ಷವೇ ನಡೆದಿತ್ತು. ನಿರ್ಮಾಪಕ ಅಶ್ವಿನಿ ದತ್, ತಮ್ಮ "ಜಗದೇಕವೀರುಡು ಅತಿಲೋಕ ಸುಂದರಿ' ಚಿತ್ರದ ರೀಮೇಕ್ಗೆ ರಾಮ್ಚರಣ್ ತೇಜಗೆ ನಾಯಕಿತಾಗಿ ಜಾಹ್ನವಿಯನ್ನು ಕರೆತರಬೇಕು ಎಂದು ಪ್ರಯತ್ನ ನಡೆಸಿದ್ದರು. ಆದರೆ, ಆ ಚಿತ್ರವೇ ಸೆಟ್ಟೇರಲಿಲ್ಲ. ಸದ್ಯಕ್ಕೆ ಹಾರಿಕಾ ಹಾಸಿನಿ ಕ್ರಿಯೇಷನ್ಸ್, ಮೈತ್ರಿ ಮೂವಿ ಮೇಕರ್ಸ್ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆಗಳು ಜಾಹ್ನವಿಯನ್ನು ತೆಲುಗಿಗೆ ಕರೆತರಲು ಪೈಪೋಟಿ ನಡೆಸಿವೆ.
ಈ ಪೈಕಿ, ಹಾರಿಕಾ ಹಾಸಿನಿ ಕ್ರಿಯೇಷನ್ಸ್ ಸಂಸ್ಥೆಯು ಮಹೇಶ್ ಬಾಬು ಅಭಿನಯದ ಚಿತ್ರವನ್ನು ನಿರ್ಮಿಸುತ್ತಿದೆ. ಇನ್ನು, ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆಯು ರಾಮ್ಚರಣ್ ತೇಜ ಅಭಿನಯದಲ್ಲಿ ಹೊಸ ಚಿತ್ರ ನಿರ್ಮಾಣ ಮಾಡುತ್ತಿದೆ. ಇದಲ್ಲದೆ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಜ್ಯೂನಿಯರ್ ಎನ್ಟಿಆರ್ ಜತೆಗೆ ಚಿತ್ರ ನಿರ್ಮಿಸುತ್ತಿದ್ದು, ಈ ಮೂರೂ ಚಿತ್ರಗಳಿಗೆ ನಾಯಕಿಯಾಗಿ ಜಾಹ್ನವಿ ಮೊದಲ ಆಯ್ಕೆ ಆಗಿದ್ದಾರೆ.
ಆದರೆ, ಜಾಹ್ನವಿ ಆಯ್ಕೆ ಯಾವುದು? ಸದ್ಯದಲ್ಲೇ ಉತ್ತರ ಸಿಗಲಿದೆ.