ಜಾನಪದ ಲೋಕಕ್ಕೆ ಬೆಳ್ಳಿಹಬ್ಬ ಸಂಭ್ರಮ: ಗ್ರಾಮ್ಯ ವೈಭವದ ರಮ್ಯತಾಣ

DSC_0110
Published on
ಬೆಂಗಳೂರು ಸಮೀಪದ ರಾಮನಗರ ಬಳಿ ಇರುವ ‘ಜಾನಪದ ಲೋಕ’ ಇಡೀ ಕನ್ನಡ ನಾಡಿನ ಗ್ರಾಮೀಣ ಗತವೈಭವವನ್ನು ತನ್ನೊಳಗೆ ತುಂಬಿಕೊಂಡಿರುವ ಅಪರೂಪದ ತಾಣ. ಅದು ಸ್ಥಾಪನೆಯಾಗಿ ಈಗ 25 ವರ್ಷ. ಈ ಹಿನ್ನೆಲೆಯಲ್ಲಿ ಫೆ. 16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮತ್ತು 17, 18ರಂದು ‘ಜಾನಪದ ಲೋಕ’ದಲ್ಲಿ ಕಾರ್ಯಕ್ರಮಗಳು ಆಯೋಜನೆಯಾಗಿವೆ.

ಇದು ಸುಮಾರು ಮೂರು ದಶಕಗಳ ಹಿಂದಿನ ಚಿತ್ರಣ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿ ಮಧ್ಯದಲ್ಲಿ ರಾಮನಗರದಿಂದ ಎರಡು ಕಿಮೀ ಸಾಗಿ ಬಲಕ್ಕೆ ನೋಡಿದವರಿಗೆ ಬರೀ ಕುರುಚಲು ಕಾಡು ಕಾಣುತ್ತಿತ್ತು. ಆದರೆ, ಇದೇ ಜಾಗ ಜನಪದರ ಸಂಪೂರ್ಣ ಚಿತ್ರಣವನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಈಗ ಇಡೀ ವಿಶ್ವವನ್ನೇ ತನ್ನತ್ತ ನೋಡುವಂತೆ ಬದಲಾಗಿದೆ.

ಹೌದು, ನಾವು ಹೇಳಲು ಹೊರಟಿರುವುದು ರೇಷ್ಮೆನಗರಿ ರಾಮನಗರ ಬಳಿ ಇರುವ ಜಾನಪದ ಲೋಕದ ಬಗ್ಗೆ. ನಾಡೋಜ ಎಚ್.ಎಲ್. ನಾಗೇಗೌಡರು, ಇದೇ ಕುರುಚಲು ಕಾಡಿನಲ್ಲಿ

ನೆಟ್ಟು ನೀರೆರೆದ ‘ಜಾನಪದ ಲೋಕ’ ಎನ್ನುವ ಗಿಡವೊಂದು ಹೆಮ್ಮರವಾಗಿ ಬೆಳೆದಿದ್ದು, ಅದಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ.

ಜಾನಪದ ಎಂದರೆ ಕೇವಲ ಹಳ್ಳಿಗೆ ಸೀಮಿತವಾಗಿದ್ದ ಕಾಲವದು. ಐಎಎಸ್ ಅಧಿಕಾರಿಯಾಗಿ ನಾಡು ಸುತ್ತಿದ್ದ ನಾಗೇಗೌಡರು ಜಾನಪದವನ್ನು ಉಳಿಸಿ, ಬೆಳೆಸಿ ಎಲ್ಲೆಡೆ ಪಸರಿಸುವ ಕನಸು ಕಂಡರು. ಇದಕ್ಕಾಗಿ ಎಲೆಮರೆ ಕಾಯಿಯಂತೆ ಲೋಕದ ಕಣ್ಣಿಗೆ ಬೀಳದ ಜಾನಪದ ಕಲಾವಿದರನ್ನು ಹುಡುಕುತ್ತಾ ಹೊರಟರು. ಹೀಗೆ ನಾಡನ್ನು ಸುತ್ತಿ ಸುತ್ತಿ ಸಾವಿರಾರು ಕಲಾವಿದರನ್ನು ಮತ್ತು ಕಲೆಯ ಮಾಹಿತಿಯನ್ನು ಕಲೆಹಾಕಿದರು. ಇದರೊಟ್ಟಿಗೆ ಯಾರಿಗೂ ಬೇಡವಾಗಿ ಮಣ್ಣಾಗುತ್ತಿದ್ದ, ಜನಪದರ ನಿತ್ಯ ಬಳಕೆಯ ವಸ್ತುಗಳನ್ನು ಸಂಗ್ರಹಿಸಿದರು.

ಜಾನಪದ ಕಲೆ, ಕಲಾವಿದರು ಮತ್ತು ವಸ್ತುಗಳಿಗೆ ನೆಲೆ ಕೊಡುವ ಸಲುವಾಗಿ ಜಾಗ ಹುಡುಕುತ್ತಾ ಬಂದವರಿಗೆ ಕಂಡಿದ್ದು ಕುರುಚಲು ಕಾಡು. ಆದರೆ, 1994ರಲ್ಲಿ ಲೋಕಾರ್ಪಣೆಗೊಂಡ ಜಾನಪದ ಲೋಕ, ಅಚ್ಚ ಹಸಿರಿನ ನೆಲೆ. ಜನಪದರ ಕಲಾ ಪ್ರಕಾರಗಳೆಲ್ಲವನ್ನೂ ಒಳಗೊಂಡಿರುವ 15 ಎಕರೆ ವಿಸ್ತಾರವಾದ ಸುಂದರ ಲೋಕವಾಗಿದೆ.

ಮಹಾ ಸಂಗ್ರಹಾಗಾರ: ಬೀದರ್​ನಿಂದ ಚಾಮರಾಜನಗರವರೆಗೆ, ಕಾರವಾರದಿಂದ - ರಾಯಚೂರುವರೆಗೆ ರಾಜ್ಯದ ನಾಲ್ಕೂ ದಿಕ್ಕುಗಳಿಂದ, ಮಲೆನಾಡು, ಬಯಲು ಸೀಮೆ, ಅರೆಮಲೆನಾಡಿನಿಂದ ಹೆಕ್ಕಿ ತೆಗೆದ ಜನಪದರ ಬಳಕೆಯ ವಸ್ತುಗಳ ಸಾಲುಗಳು ಜಾನಪದ ಲೋಕದ ಸಿರಿವಂತಿಕೆಯನ್ನು ಹೆಚ್ಚಿಸಿದೆ. ಅಡುಗೆ ಮನೆಯ ವಸ್ತುಗಳಿಂದ ಹಿಡಿದು, ತೋಟ ತುಡಿಕೆಗಳಲ್ಲಿ ಬಳಕೆ ಮಾಡುತ್ತಿದ್ದ ಕೃಷಿ ಉಪಕರಣಗಳು, ಹಿರಿಯರು ಬಳಸುತ್ತಿದ್ದ ಕುಟಾಣಿ, ಅಳತೆಗೆ ಬಳಸಲಾಗುತ್ತಿದ್ದ ಸೇರು-ಪಾವು, ಸಂಗೀತದ ಚರ್ಮವಾದ್ಯಗಳು ಹೀಗೆ ಸುಮಾರು 6 ಸಾವಿರ ಜನಪದ ವಸ್ತುಗಳ ಸಂಗ್ರಹ ಜಾನಪದ ಲೋಕದಲ್ಲಿ ಇದೆ.

ಇದರ ಜತೆಗೆ, ಸುಮಾರು 1200 ವರ್ಷಗಳ ಹಳೆಯದು ಎನ್ನಲಾದ ತುಮಕೂರು ಜಿಲ್ಲೆ ಚೇಳೂರಿನ ವೀರಗಲ್ಲು, ಶತಮಾನದ ಇತಿಹಾಸ ಹೊಂದಿರುವ ಹಲಸೂರು ಸೋಮೇಶ್ವರ ಸ್ವಾಮಿ ರಥ ಹೀಗೆ ಎಲ್ಲವೂ ಜಾನಪದ ಲೋಕದ ಸೌಂದರ್ಯವನ್ನು ಮತ್ತು ಮಹತ್ವವನ್ನು ಹೆಚ್ಚಿಸಿವೆ. ಜಾನಪದ ಲೋಕದ ‘ಲೋಕಮಹಲ್’ನಲ್ಲಿ ಜಾನಪದ ನೃತ್ಯ, ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳ ಬಗ್ಗೆ ಬೆಳಕು ಚೆಲ್ಲುವ ಸಂಗ್ರಹ ಇದೆ.

ಹಳೇ ಬೇರು, ಹೊಸ ಚಿಗುರು: ನಾಗೇಗೌಡರು ಮತ್ತು ನಾಡೋಜ ಜಿ. ನಾರಾಯಣ ಅವರ ಪರಿಶ್ರಮದ ಫಲವಾಗಿ ಬೆಳೆದು ನಿಂತಿರುವ ‘ಜಾನಪದ ಲೋಕ’ ಕಲಾವಿದರಿಗೆ ನೆರಳಾಗಿಯೂ ಕಾರ್ಯನಿರ್ವಹಿಸುತ್ತಿದೆ. ಹಳೇ ಕಾಲದ ಅಪರೂಪದ ವಸ್ತು ವಿಷಯ ವೈವಿಧ್ಯವನ್ನು ಒಂದೆಡೆ ಕಲೆ ಹಾಕಿದ್ದಲ್ಲದೆ, ಹೊಸತನಕ್ಕೂ ತೆರೆದುಕೊಂಡು ಮತ್ತಷ್ಟು ಜನರಿಗೆ ಹತ್ತಿರವಾಗಿದೆ. ಆಕರ್ಷಕ ಸಿಮೆಂಟ್ ಕಲಾಕೃತಿಗಳು ಇದಕ್ಕೊಂದು ಉದಾಹರಣೆ.

ಜಾನಪದ ಲೋಕದ ಯಾವ ಮೂಲೆಗೆ ಹೋದರೂ ಗ್ರಾಮೀಣ ಬದುಕನ್ನು ಕಟ್ಟಿ ಕೊಡುವ ಸಿಮೆಂಟ್ ಕಲಾಕೃತಿಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಹಸುವಿನ ಹಾಲು ಕರೆಯುತ್ತಿರುವ ಮಹಿಳೆ, ಬಿತ್ತನೆ ಮಾಡುತ್ತಿರುವ ರೈತದಂಪತಿ, ಗಾಣದಲ್ಲಿ ಕೆಲಸ ಮಾಡುತ್ತಿರುವ ಪತಿ-ಪತ್ನಿ, ಹಳ್ಳಿಯ ಪಂಚಾಯಿತಿ ಕಟ್ಟೆ, ಕುಟುಂಬದ ಎಲ್ಲಾ ಸದಸ್ಯರೂ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿರುವ ಕಲಾಕೃತಿಗಳು ಆಕರ್ಷಿಸುತ್ತವೆ.

ಪ್ರಾಣಿಗಳಿಗೂ ಜಾನಪದ ಲೋಕದ ಕಾಡಿನಲ್ಲಿ ಜಾಗ ಇದೆ. ಜೀವಂತ ಬಾತುಕೋಳಿಗಳು, ಮಂಗ, ಮೊಲಗಳ ಓಡಾಟ ಪ್ರವಾಸಿಗರಿಗೆ ಮುದ ನೀಡುತ್ತದೆ. ಜತೆಗೆ, ಕಲಾಕೃತಿ ರೂಪದಲ್ಲಿ ಜಿಂಕೆ, ಕರಡಿ, ಸಿಂಹ, ಕಾಡೆಮ್ಮೆ ಮುಂತಾದವುಗಳನ್ನೂ ಕಾಣಬಹುದು.

ನಿರಂತರ ಚಟುವಟಿಕೆ ತಾಣ: ಜಾನಪದ ಲೋಕವು ಕಲಾ ಪ್ರದರ್ಶನ ಮತ್ತು ಆಚರಣೆಗಳ ನಿರಂತರ ಚಟುವಟಿಕೆಯ ತಾಣವೂ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ಎತ್ತುಗಳ ಓಟ ಸ್ಪರ್ಧೆ, ಕಿಚ್ಚು ಹಾಯಿಸುವ ಆಚರಣೆ ನಡೆಯುತ್ತದೆ. ದಸರಾ ಸಂದರ್ಭದಲ್ಲಿ ಬೊಂಬೆಗಳು ಮತ್ತು ಸಾಹಸ ಕಲೆಗಳ ಪ್ರದರ್ಶನ, ಬನ್ನಿ ಕೊಡುವ ಸಂಪ್ರದಾಯ ರೂಢಿಯಲ್ಲಿದೆ. ಪ್ರತಿ ವರ್ಷ ರಾಜ್ಯ, ಹೊರ ರಾಜ್ಯಗಳ ಜಾನಪದ ಕಲಾವಿದರನ್ನು ಕರೆದು ಗೌರವಿಸುವ ಕೆಲಸವನ್ನೂ ತಪ್ಪದೆ ಮಾಡುತ್ತಿದೆ. ಪ್ರತಿ ತಿಂಗಳ ಎರಡನೇ ಶನಿವಾರ ಒಬ್ಬ ಜಾನಪದ ಕಲಾವಿದರನ್ನು ಕರೆಸಿ ಅವರ ಬದುಕಿನ ಅನುಭವಗಳನ್ನು ಅವರಿಂದಲೇ ಹೇಳಿಸುವ ಮತ್ತು ಸಂವಾದಕ್ಕೆ ಅವಕಾಶ ಮಾಡಿಕೊಡುವ ‘ಲೋಕ ಸಿರಿ’ ಕಾರ್ಯಕ್ರಮ ಈಗಾಗಲೇ 61 ತಿಂಗಳುಗಳನ್ನು ಪೂರೈಸಿದೆ.

ಗಣ್ಯಾತಿಗಣ್ಯರ ಭೇಟಿ: ವೀರೇಂದ್ರ ಪಾಟೀಲರಿಂದ ಹಿಡಿದು ಬಿ.ಎಸ್. ಯಡಿಯೂರಪ್ಪ ಅವರವರೆಗೆ ಬಹುತೇಕ ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ, ಕೇಂದ್ರ ಸಚಿವೆಯಾಗಿದ್ದ ಮೇನಕಾ ಗಾಂಧಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೀಗೆ ಹಲವಾರು ಗಣ್ಯರು ಭೇಟಿ ನೀಡಿ ಜಾನಪದ ಲೋಕದ ಸಾಂಸ್ಕೃತಿಕ ಸಂಪತ್ತನ್ನು ಕಂಡು ಮನಸೋತಿದ್ದಾರೆ. ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ವಿದೇಶಿ ಪ್ರವಾಸಿಗರ ಸಂಖ್ಯೆಯೂ ಕಡಿಮೇಯೇನಿಲ್ಲ.

ಚುಂಚನಗಿರಿ ಶ್ರೀಗಳ ಕೊಡುಗೆ: ಆರಂಭಿಕ ದಿನಗಳಲ್ಲಿ ಜಾನಪದ ಲೋಕ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿತ್ತು. ಸರ್ಕಾರದ ಅನುದಾನವೂ ಸರಿಯಾಗಿ ದೊರೆಯದೆ ನೌಕರರು ಸಂಬಳವಿಲ್ಲದೆ ದುಡಿಯುವ ಪರಿಸ್ಥಿತಿ ನಿರ್ವಣವಾಗಿತ್ತು. ಈ ವೇಳೆ ಎಚ್.ಎಲ್. ನಾಗೇಗೌಡರ ನೆರವು ಪಡೆದು ಜಾನಪದ ಲೋಕವನ್ನು ಉಳಿಸಿ ಬೆಳೆಸಿದವರು ಆದಿಚುಂಚನಗಿರಿ ಕ್ಷೇತ್ರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ. ಇದೇ ಬೆಂಬಲ ಮತ್ತು ಸಹಕಾರ ಇಂದಿಗೂ ಶ್ರೀ ಮಠದಿಂದ ಮುಂದುವರಿಯುತ್ತಿದೆ.
ನಾಡೋಜ ಎಚ್.ಎಲ್. ನಾಗೇಗೌಡರ ಪರಿಶ್ರಮದ ಫಲ ಜಾನಪದ ಲೋಕ. ನಂತರ ಜಿ. ನಾರಾಯಣ ಅವರು ಇದರ ಏಳ್ಗೆಗೆ ಶ್ರಮಿಸಿದ್ದಾರೆ. ಇತ್ತೀಚೆಗೆ ಒಂದಿಷ್ಟು ಹೊಸತನವನ್ನು ನೀಡಿ ಜನಾಕರ್ಷಣೀಯ ಗೊಳಿಸಲಾಗಿದೆ. ಜಾನಪದ ಲೋಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಜನಪದ ಸಂಸ್ಕೃತಿಯ ಕೇಂದ್ರವಾಗಬೇಕು. ಇದನ್ನು ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು.| ಟಿ. ತಿಮ್ಮೇಗೌಡ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net