

ಅಂದು ಸ್ವಾತಂತ್ರ್ಯಪ್ರಾಪ್ತಿಗಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಹಮ್ಮಿಕೊಂಡಿದ್ದರು. ಅದೇ ರೀತಿ ಇಂದು ಮನುಕುಲಕ್ಕೆ ಕಂಟಕವಾಗಿರುವ ಕರೊನಾ ವೈರಸ್ ತಡೆ ಜನರ ಅಸಹಕಾರ ಚಳವಳಿಯಿಂದ ಮಾತ್ರ ಸಾಧ್ಯ. ಇಲ್ಲಿ ಅಸಹಕಾರ ಎಂದರೆ ಕರೊನಾ ಹರಡಲು ಸಾಧ್ಯವಾಗದಂತೆ ನಾವುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜನರು ಗುಂಪಾಗುವುದನ್ನು ನಿಲ್ಲಿಸಬೇಕು, ಬೇಕಾಬಿಟ್ಟಿ ಊರು ಸುತ್ತುವುದು, ಹರಟೆ ಹೊಡೆಯುವುದು, ಜಾತ್ರೆ, ಮದುವೆ, ಮುಂಜಿ ಎಂದು ಜನರು ಸೇರುವುದನ್ನು ಕಡಿಮೆ ಮಾಡಿದಾಗಲೇ ಕರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸರಪಳಿ ತುಂಡು ಮಾಡಲು ಸಾಧ್ಯ.
ಜನರು ವಿನಾಕಾರಣ ಮನೆಯಿಂದ ಹೊರಬರದೆ ತುರ್ತು ಅಗತ್ಯಗಳಿಗಾಗಿ ಮಾತ್ರ ಹೊರಬರಲಿ. ಮನೆಯಲ್ಲೇ ಇದ್ದು ಕರೊನಾ ಹರಡದಂತೆ ತಡೆಯೋಣ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಮಾಧ್ಯಮದವರು, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಸಮಾಜಸೇವಕರು ಮತ್ತು ಸೈನಿಕರಿಗೂ ಧನ್ಯವಾದಗಳು.
| ಡಾ.ಜಿ.ಜೆ.ಮೆಹೆಂದಳೆ
ಜನತಾ ಕರ್ಫ್ಯೂ ವಿಸ್ತರಿಸಿ
ಕರೊನಾ ವೈರಸ್ ತಡೆಗಟ್ಟುವ ಸಂಬಂಧ ದೇಶದ ಪ್ರಧಾನಮಂತ್ರಿಗಳ ಕರೆಯಂತೆ ಭಾನುವಾರ 14 ಗಂಟೆಗಳ ಜನತಾ ಕರ್ಫ್ಯೂ ಪರಿಣಾಮ ಒಂದು ದಿನ ಬಂದ್ ರೀತಿ ಆಚರಿಸಲಾಯಿತು. ಆದರೆ ಇದು ಒಂದೇ ದಿನಕ್ಕೆ ಸೀಮಿತವಾಗಬಾರದು. ಇದು ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಪ್ರಮುಖ ಕ್ರಮವಾದರೂ ಜನತಾ ಕರ್ಫ್ಯೂವನ್ನು ಕನಿಷ್ಠ 5ರಿಂದ 7 ದಿನಗಳವರೆಗೆ ವಿಸ್ತರಿಸಬೇಕು. ಆಗಲೇ, ಕರೊನಾ ವೈರಸ್ ತಡೆಗಟ್ಟುವುದರಲ್ಲಿ ಯಶಸ್ವಿಯಾಗಬಹುದು. ಆದ್ದರಿಂದ ಸರ್ಕಾರ ಕೂಡಲೇ ಜನತಾ ಕರ್ಫ್ಯೂ ವಿಸ್ತರಣೆಗೆ ಆದೇಶಿಸಬೇಕು. ಇಲ್ಲವೆ ಖಾಸಗಿ ಮತ್ತು ಸರ್ಕಾರದ ಎಲ್ಲ ಕಚೇರಿ, ಉದ್ಯಮ, ಕೈಗಾರಿಕೆಗಳಿಗೆ ರಜೆ ಘೊಷಿಸಿದರೂ ಕರೊನಾ ಹಾವಳಿ ತಡೆಯಬಹುದು.
| ರಾಜು ಕಾಂಬಳೆ ಧಾರವಾಡ