

ಯುಗಾದಿ ಎಂದರೆ ಎಲ್ಲೆಲ್ಲೂ ಹಸಿರಿನ ರಂಗು. ಮೈದಳೆದು ನಿಂತ ಗಿಡ-ಮರಗಳು. ಹಳೆ ಬೇರು, ಹೊಸ ಚಿಗುರು ಎಂಬಂತೆ ಎತ್ತ ನೋಡಿದರತ್ತ ಸಸಿಗಳು, ಬಳ್ಳಿಗಳು ಚಿಗುರುವುದನ್ನು ಕಾಣುತ್ತೇವೆ. ಪ್ರಕೃತಿ ಹಸಿರಿನ ಹೊಸ ಸೀರೆ ಉಟ್ಟ ಹಾಗೆ ಕಾಣುತ್ತದೆ. ಈ ವಸಂತಕಾಲದಲ್ಲಿ ಎಲ್ಲವೂ ಹೊಸತು ಹೊಸತಾಗಿರುತ್ತದೆ. ವಸಂತ ಕಾಲದ ಈ ಪ್ರಕೃತಿ ಬದಲಾವಣೆ ಬಹಳ ವಿಶೇಷವಾದುದು. ರೆಕ್ಕೆ ಬಿಚ್ಚಿ ಹಾರಾಡುವ ಪಕ್ಷಿಗಳು, ಮನದಿಚ್ಛೆಯಂತೆ ಕುಣಿದಾಡುವ ನವಿಲು ಎಲ್ಲವೂ ಯುಗಾದಿಯ ನವಯುಗಕ್ಕೆ ನಾಂದಿ ಎಂಬಂತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಸೊಬಗು ಕಾಣಸಿಗುವುದು ಹೆಚ್ಚಾಗಿ ಪಶ್ಚಿಮ ಘಟ್ಟಗಳಲ್ಲಿ. ಸದಾ ಹಚ್ಚು ಹಸಿರಿನಿಂದ ಕೂಡಿರುವ ಪಶ್ಚಿಮ ಘಟ್ಟ ಯುಗಾದಿ ಸಮಯದಲ್ಲಿ ತನ್ನ ಅಂದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತದೆ. ಯುಗಾದಿ ನಮ್ಮನ್ನು ಹೊಸತನಕ್ಕೆ ಸ್ವಾಗತಿಸುತ್ತದೆ. ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿಯೊಡನೆ ಸೇರಿ ಹೊಸ ವರುಷಕ್ಕೆ ಹೆಜ್ಜೆ ಹಾಕುವ ಬದಲು ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಪ್ರಕೃತಿಯೊಡನೆ ನಡೆಯಬೇಕಾದ ನಾವು ಅದನ್ನು ಹಾಳು ಮಾಡುತ್ತಿದ್ದೇವೆ. ಅದರ ಸರ್ವನಾಶಕ್ಕೆ ಪಣತೊಟ್ಟ ಹಾಗೆ ವರ್ತಿಸುತ್ತಿದ್ದೇವೆ, ಇದೆ ರೀತಿಯಾಗಿ ಮುಂದುವರಿದರೆ ಮುಂದಿನ ಪೀಳಿಗೆ ಯುಗಾದಿ ಹಬ್ಬ ಆಚರಿಸುವುದಿರಲಿ, ಹಾಗಂದರೆ ಏನು ಎಂಬ ಪ್ರಶ್ನೆ ಕೇಳುವ ಸ್ಥಿತಿ ಬರಬಹುದು.
ಇದು ಬಹಳ ಆತಂಕಕಾರಿ ಸಂಗತಿ. ಹೀಗೇ ಪ್ರಕೃತಿನಾಶ ಮುಂದುವರಿದರೆ, ಪ್ರಕೃತಿ ನಮಗೆ ತಕ್ಕ ಪಾಠ ಕಲಿಸುತ್ತೆ, ಇದು ಕಟ್ಟಿಟ್ಟ ಬುತ್ತಿ. ಪ್ರಕೃತಿಯನ್ನು ಉಳಿಸೋಣ ಮತ್ತು ಈ ಹಬ್ಬ ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗೋಣ. ಅದಕ್ಕೆ ಈ ಯುಗಾದಿ ಹಬ್ಬಕ್ಕೆ ಸಸಿ ನೆಟ್ಟು, ಪ್ರಕೃತಿಯನ್ನು ಕಾಪಾಡುವ ಸಂಕಲ್ಪ ನಮ್ಮದಾಗಲಿ.
| ವಿವೇಕ್ ಬಿರಾದಾರ್ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ