

ನಮ್ಮ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಕರೊನಾ ಕಾರಣದಿಂದಾಗಿ ಎಲ್ಲ ರಂಗಗಳ ಮೇಲೆ ತೀವ್ರ ತರಹದ ಹೊಡೆತವುಂಟಾಗಿ ಜನಸಾಮಾನ್ಯರ ಆರ್ಥಿಕ ಸ್ಥಿತಿ ಕೆಳಮಟ್ಟಕ್ಕೆ ಕುಸಿದಿದೆ. ಪರಿಣಾಮ, ಬದುಕು ನಡೆಸುವುದೇ ದುಸ್ತರವೆನಿಸಿದೆ. ದೈನಂದಿನ ಅಗತ್ಯವಸ್ತುಗಳಾದ ಬೇಳೆಕಾಳುಗಳು, ಅಡುಗೆಎಣ್ಣೆ, ತರಕಾರಿಗಳ ಬೆಲೆ ನಿರಂತರವಾಗಿ ಏರುತ್ತಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ವಿದ್ಯುತ್ ದರ ಏರಿಕೆ ಮಾಡಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನುಂಗಲಾರದ ಬಿಸಿತುಪ್ಪವಾದಂತಾಗಿದೆ. ಪ್ರತಿಯೊಂದಕ್ಕೂ ಲೆಕ್ಕಾಚಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಜನರು ಸರ್ಕಾರದ ತಪು್ಪ ಆರ್ಥಿಕ ನೀತಿಯಿಂದಾಗಿ ಬವಣೆ ಪಡುವಂತಾಗಿದೆ. ಈಗಾಗಲೇ ಉದ್ಯೋಗನಷ್ಟವನ್ನು ಹೊಂದಿ ಹೊಸದಾಗಿ ಉದ್ಯೋಗವನ್ನು ಹುಡುಕುತ್ತಿರುವ ಜನಸಾಮಾನ್ಯರು ದೈನಂದಿನ ಅವಶ್ಯಕ ವಸ್ತುಗಳನ್ನುಕೊಳ್ಳಲು ಹಣವನ್ನು ಹೊಂದಿಸುವುದಾದರೂ ಎಲ್ಲಿಂದ? ಈ ರೀತಿಯಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತ ಹೋದರೆ ಜನಸಾಮಾನ್ಯರು ಜೀವನನಿರ್ವಹಣೆ ಮಾಡುವುದಾದರೂ ಹೇಗೆ? ಅವರ ಗತಿಯೇನು? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗುತ್ತಲಿದೆ. ಆದರೆ ಅದರ ಲಾಭವನ್ನು ಗ್ರಾಹಕರಿಗೆ ತಲುಪಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ. ವಿರೋಧ ಪಕ್ಷದವರೂ ಬೆಲೆಯೇರಿಕೆ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಬಿಟ್ಟು ಮೌನವಹಿಸಿದ್ದಾರೆ. ‘ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಿ, ಇಲ್ಲವೇ ತೆರಿಗೆಯನ್ನು ಕಡಿಮೆ ಮಾಡಿ’ ಎಂದು ರಿಸರ್ವ್ ಬ್ಯಾಂಕ್ನ ಗವರ್ನರ್ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ಆ ನಿಟ್ಟಿನಲ್ಲಿ ಅಗತ್ಯ ಹೆಜ್ಜೆ ಇರಿಸಬೇಕು.
| ಎನ್. ರಾಜೇಶ್ ಅಡಿಗ ಮಂಗಳೂರು
ಕರ್ನಾಟಕದ ಹೆಮ್ಮೆಯ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವುದು ಸರಿಯಷ್ಟೆ. ಅದಕ್ಕಾಗಿ ಅರ್ಜಿ ಸಲ್ಲಿಸಬೇಕೆಂಬ ನಿಯಮ ಸರಿಯಲ್ಲ. ಕೆಲ ಸಾಧಕರು ತುಂಬ ಸ್ವಾಭಿಮಾನಿಗಳಾಗಿರುತ್ತಾರೆ. ಸರ್ಕಾರವೇ ಅವರ ಸೇವೆ ಗುರುತಿಸಲಿ ಎಂಬ ಆಶಯ ಹೊಂದಿರುತ್ತಾರೆ. ಅದು ಸತ್ಯ ಕೂಡ. ನಿಜವಾದ ಸಾಧಕರು ಸಮಾಜದಲ್ಲಿ ದೊಡ್ಡಸಂಖ್ಯೆಯಲ್ಲಿದ್ದಾರೆ. ತಮ್ಮನ್ನು ಗುರುತಿಸಲಿಲ್ಲ ಎಂಬ ನೋವು ಹಲವರಲ್ಲಿದೆ. ಅರ್ಜಿ ಸಲ್ಲಿಸಿ ಅಲ್ಲಿನ ಸಮಿತಿ ಮೇಲೆ ರಾಜಕಾರಣಿಗಳ, ಸ್ವಾಮೀಜಿ ಅಥವಾ ಬಲಾಢ್ಯರ ಶಿಫಾರಸ್ಸು ಮಾಡಿ ಪ್ರಶಸ್ತಿ ಪಡೆಯುವುದು ನಿಲ್ಲಲಿ. ಆ ಸಮಿತಿಯೇ ಎಲ್ಲ ಜಿಲ್ಲೆಗಳಿಂದ ಬೇರೆ ಬೇರೆ ಮೂಲಗಳ ಮುಖೇನ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡುವಂತಾಗಲಿ. ಆ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಲಿ.
| ಡಾ.ಎಚ್.ತುಕಾರಾಂ ಬೆಂಗಳೂರು
ವಿಧಾನಮಂಡಲ ಅಧಿವೇಶನದ ಆರಂಭವಾದ ಹೊಸ್ತಿಲಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ ಘೊಷಣೆ ಮಾಡಿರುವುದು ಸ್ವಾಗತಾರ್ಹ. ಶಾಸಕರು ಅಧಿವೇಶನದಲ್ಲಿ ನಿರಂತರವಾಗಿ ಹಾಜರಾಗಿ ಅಧಿಕ ಪ್ರಶ್ನೆಗಳನ್ನು ಕೇಳುವ ಮೂಲಕ ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಂಡು ಜನರ ಬೇಕು ಬೇಡಿಕೆ, ಮೂಲ ಅವಶ್ಯಕತೆ ಈಡೇರಿಸಲು, ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಬೇಕು. ಹಳಬರು ಸೇರಿದಂತೆ ಮೊದಲಬಾರಿ ಆಯ್ಕೆಯಾದ ಶಾಸಕರಿಗೂ ಈ ಪ್ರಶಸ್ತಿ ಮಹತ್ವದ್ದಾಗಿದ್ದು, ಪ್ರತಿಯೊಬ್ಬರಲ್ಲೂ ಕ್ರಿಯಾಶೀಲತೆ ಮೈಗೂಡಲಿ. 2023 ರ ಚುನಾವಣೆ ಹಿನ್ನೆಲೆಯಲ್ಲಿ ನೂತನ ಮುಖ್ಯಮಂತ್ರಿಯವರಿಗೂ ಪ್ರತಿ ಹೆಜ್ಜೆ ಸವಾಲಾಗಿದೆ. ಈ ನಿಟ್ಟಿನಲ್ಲಿ ರೂಪಿಸಿರುವ ಈ ಹೊಸ ಕ್ರಮ ಯಶಸ್ಸು ಕಾಣಲಿ. ಆದರೆ, ಹಾಲಿ ರಾಜಕೀಯ ವ್ಯವಸ್ಥೆಯಲ್ಲಿ, ವಾತಾವರಣದಲ್ಲಿ ಈ ಪರಿಕಲ್ಪನೆ ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
| ದೀಪಶ್ರೀ ಎಸ್. ಕೂಡ್ಲಿಗಿ
ಕಾರ್ಖಾನೆಗೆ ಕಳಿಸಿದ ಕಬ್ಬಿಗೆ ಸರಿಯಾದ ಬೆಲೆ ಕೊಡುತ್ತಿಲ್ಲ ಮತ್ತು ಕಬ್ಬಿನ ಬಾಕಿ ಉಳಿಸಿಕೊಂಡು ಕಾರ್ಖಾನೆಗಳ ಆಡಳಿತ ಮಂಡಳಿಗಳು ಸತಾಯಿಸುತ್ತಿವೆ ಎಂದು ರಾಜ್ಯದ ಹಲವಾರು ಕಡೆ ರೈತರು ದನಿಯೆತ್ತಿದ್ದರೂ ಸರ್ಕಾರ ಯಾವುದೆ ಕ್ರಮಕ್ಕೆ ಮುಂದಾಗದೆ ಉದಾಸೀನತೆ ತೋರುತ್ತಿರುವುದರಿಂದ ರಾಜ್ಯದ ಕಬ್ಬು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ರಾಜಕೀಯವಾಗಿ ಪ್ರಭಾವಿಗಳಾಗಿರುವುದರಿಂದ ಕ್ರಮಕ್ಕೆ ಮುಂದಾಗಲು ಸರ್ಕಾರಗಳಿಗೆ ಮುಜುಗರವಾಗಬಹುದು. ಆದರೆ ಕೃಷಿ ಹಾಗು ರೈತರ ಉಳಿವಿಗೆ ನಿರ್ದಾಕ್ಷಿಣ್ಯ ಕ್ರಮ ಅವಶ್ಯ ಎಂಬುದನ್ನು ಮನಗಾಣಬೇಕು. ಇಲ್ಲದಿದ್ದರೆ ನೀವು ಘೊಷಿಸುವ ಯಾವ ಬೆಂಬಲ ಬೆಲೆಯೂ ರೈತರ ನೆರವಿಗೆ ಬಾರದು. ಇದರ ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಬ್ಬು ಸಾಗಾಣಿಕೆ ಮತ್ತು ಬಿಲ್ ಪಾವತಿಗೆ ಒಂದು ರಾಷ್ಟೀಯ ನೀತಿ ರೂಪಿಸುವುದು ಅವಶ್ಯ.
| ವಿ.ಜಿ.ಇನಾಮದಾರ ಸಾರವಾಡ