ಕನ್ನಡ ಅಂಕಿ ಬಳಸಿದ ಕಾರಣಕ್ಕಾಗಿ ಅಮಾನತ್ತು: ಕನ್ನಡಿಗನಿಗೆ ನ್ಯಾಯ ದೊರಕಿಸಿ ಕೊಡಿ

Kannada Kalakali
Published on
ಕರ್ನಾಟಕದ ಜನರು ಕನ್ನಡದ ಅಂಕಿಗಳನ್ನು ಮರೆತಾಗ ಅಂಥ ಅಂಕಿಗಳನ್ನು ಬಳಸಿದವರಿಗೆ ಬಹುಮಾನ ನೀಡಬೇಕಾಗಿತ್ತು. ಆದರೆ ಶಿಕ್ಷೆ ನೀಡಿದ್ದು ಕನ್ನಡಿಗರಿಗೆ ಅಪಮಾನದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಇಂಥ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅನ್ಯಾಯವಾದ ಕನ್ನಡಿಗನಿಗೆ ನ್ಯಾಯ ದೊರಕಿಸಿಕೊಡಬೇಕಾಗಿತ್ತು.

1984ರಲ್ಲಿ ಹಾಸನದಲ್ಲಿ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದ ದೇಶಹಳ್ಳಿ ರಾಮಚಂದ್ರಾಚಾರಿ ಅವರನ್ನು ಆಡಳಿತದಲ್ಲಿ ಕನ್ನಡ ಅಂಕಿ ಬಳಸಿದ ಕಾರಣಕ್ಕಾಗಿ ಅಮಾನತ್ತು ಮಾಡಿದ್ದಲ್ಲದೆ ಸಲ್ಲದ ಆರೋಪದ ಮೇಲೆ 1993ರಲ್ಲಿ ಸೇವೆಯಿಂದ ವಜಾ ಮಾಡಲಾಯಿತು. ಸಾಲದೆ 2005ರಲ್ಲಿ ಕ್ರಿಮಿನಲ್ ಮೊಕದ್ದಮೆ ಹಾಕಿದ್ದು 2017ರಲ್ಲಿ ದೇಶಹಳ್ಳಿ ಆರೋಪದಿಂದ ಮುಕ್ತರಾಗಿದ್ದಾರೆ. ಮೇಲ್ಮನವಿಗೆ ಯೋಗ್ಯವಲ್ಲದ ಪ್ರಕರಣ ಎಂದು 2017ರಲ್ಲೇ ಅಭಿಯೋಗ ಇಲಾಖೆ ಅಭಿಪ್ರಾಯಪಟ್ಟಿದೆ. ಆದರೂ ಸರ್ಕಾರ ಅನಗತ್ಯ ಪತ್ರ ವ್ಯವಹಾರದಲ್ಲಿ ತೊಡಗಿದೆ. ದೇಶಹಳ್ಳಿ ರಾಮಚಂದ್ರಾಚಾರಿ ನಿರಪರಾಧಿ ಎಂದು ಸಾಬೀತಾದ ಮೇಲೆ ವಜಾ ನಂತರದ ಸಕಲ ಸೌಲಭ್ಯಗಳನ್ನು ನೀಡಿ ನಿವೃತ್ತಿಯ ನಂತರವಾದರೂ ಅವರನ್ನು ಅವರ ಪಾಡಿಗೆ ನೆಮ್ಮದಿಯಿಂದ ಬದುಕಲು ಬಿಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ 2014ರಲ್ಲಿ ಸರ್ಕಾರಕ್ಕೆ ಪತ್ರ ಬರೆದು ದೇಶಹಳ್ಳಿ ಪ್ರಕರಣ ಗಮನಕ್ಕೆ ತಂದಿದೆ. ಅಷ್ಟಕ್ಕೇ ನಿಲ್ಲದೆ ಕನ್ನಡದ ಪ್ರಮುಖರ ನೆರವು ಪಡೆದಾದರೂ ನ್ಯಾಯ ಕೊಡಿಸಲೇಬೇಕು.

| ಅಲ್ಲಮಪ್ರಭು ಬೆಟ್ಟದೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net