ಜನಮತ: ಚೀನಾದಿಂದ ಅನವಶ್ಯಕ ಕ್ಯಾತೆ

india-china border
Published on
ಚೀನಾ ಅನವಶ್ಯಕವಾಗಿ ಭಾರತದೊಂದಿಗೆ ಕಾಲುಕೆದರಿ ವಿವಾದ ಸೃಷ್ಟಿಸುವ ಚಾಳಿ ಬೆಳೆಸಿಕೊಂಡಿದೆ. ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದು, ಭಯೋತ್ಪಾದನೆ ವಿರೋಧಿ ಹೋರಾಟ ಹಿನ್ನಡೆ ಆಗುವಂತೆ ಮಾಡುವುದು ಅದರ ನೀತಿಯೆಂಬಂತೆ ಆಗಿಬಿಟ್ಟಿದೆ.

ಗೃಹ ಸಚಿವ ಅಮಿತ್ ಷಾ ಅರುಣಾಚಲ ಪ್ರದೇಶಕ್ಕೆ ನೀಡಿದ ಭೇಟಿಯನ್ನು ಚೀನಾ ವಿರೋಧಿಸಿದ್ದು, ಗಡಿವಿವಾದವನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದೆ. ಚೀನಾದ ಆಕ್ಷೇಪಕ್ಕೆ ಭಾರತದ ವಿದೇಶಾಂಗ ಇಲಾಖೆ ತಕ್ಕ ಉತ್ತರವನ್ನು ನೀಡಿದ್ದು, ‘ಭಾರತದ ನಾಯಕರೊಬ್ಬರು ತನ್ನ ದೇಶದ ಯಾವುದೇ ರಾಜ್ಯಕ್ಕೆ ಭೇಟಿ ನೀಡುವುದನ್ನು ಟೀಕಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದಿದೆ. ಚೀನಾದ ಕ್ಯಾತೆ ಇದೇ ಮೊದಲೇನಲ್ಲ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗಲೂ, ಇದೇ ಬಗೆಯ ವಿರೋಧ ತೋರಿತ್ತು. ಆದರೆ, ಭಾರತ ಮುಂಚಿನಂತಿಲ್ಲ. ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ತನ್ನ ಗಡಿ ಮತ್ತು ಹಿತದ ವಿಷಯ ಬಂದಾಗ

ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ ಎಂಬ ವಾಸ್ತವವನ್ನು ಚೀನಾ ಮನಗಾಣಬೇಕು.

| ರವಿ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net