

‘ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು’ ಎಂದು ರಾಷ್ಟ್ರಕವಿ ಕುವೆಂಪು ತಾಯ್ನುಡಿಯ ಭಾವನಾತ್ಮಕ ಮಹತ್ವವನ್ನು ಸುಂದರವಾಗಿ ವರ್ಣಿಸಿದ್ದಾರೆ. ತಾಯ್ನಾಡಿನಿಂದ ದೂರವಿರುವವರಲ್ಲಿ ಸಹಜವಾಗಿಯೇ ಭಾಷಾಭಿಮಾನ ಗುಪ್ತಗಾಮಿನಿಯಾಗಿ ಹರಿಯುತ್ತಿರುತ್ತದೆ. ಕರ್ನಾಟಕದ ಹೊರಗೆ ವಿದೇಶಗಳಲ್ಲಿ ಕನ್ನಡಿಗರು ಹೆಚ್ಚು ಸಂಘಟಿತರಾಗುತ್ತಿದ್ದಾರೆ. ಕನ್ನಡ ಸಂಘ-ಸಮ್ಮೇಳನಗಳು ವಿದೇಶಗಳಲ್ಲೂ ನಡೆಯುತ್ತಿವೆ. ಜಾಗತೀಕರಣದ ಇಂದಿನ ಯುಗದಲ್ಲಿ ಒಂದೆಡೆ ಕನ್ನಡದ ಪತಾಕೆ ವಿಶ್ವದಾದ್ಯಂತ ಮೊಳಗುತ್ತಿದ್ದರೂ ಇನ್ನೊಂದೆಡೆ ಕರ್ನಾಟಕದಲ್ಲೇ ಕನ್ನಡ ತನ್ನ ಕಸುವು ಕಳೆದುಕೊಳ್ಳುತ್ತಿದೆಯೇನೋ ಎನ್ನುವ ಕಳವಳ ಕನ್ನಡಾಭಿಮಾನಿಗಳನ್ನು ಕಾಡುತ್ತಿದೆ.
ಬದುಕಿನ ಹೋರಾಟದ ವಿವಿಧ ಮಜಲುಗಳಲ್ಲಿ, ಯಶಸ್ಸು ಮತ್ತು ಸಾಧನೆಗಾಗಿ ವಿವಿಧ ಭಾಷೆಗಳನ್ನು ಕಲಿಯಬೇಕಾಗುತ್ತದೆ ನಿಜ. ಪರ-ಭಾಷೆ, ಪರ-ದೇಶ ದುಡಿಯುವ ಕೈಗೆ ಕೆಲಸ ಕೊಟ್ಟಿರಬಹುದು. ಹೊಟ್ಟೆಗೆ ಹಿಟ್ಟು ಕೊಟ್ಟಿರಬಹುದು. ಯಾವ ರೀತಿಯಲ್ಲಿ ಹೆತ್ತ ತಾಯಿಯನ್ನು ಮರೆಯಲು ಸಾಧ್ಯವಿಲ್ಲವೋ, ಅದೇ ರೀತಿ ಈ ನೆಲದಲ್ಲಿ ಜನಿಸಿದವರು ಹೃದಯದ ಭಾಷೆಯಾದ ಕನ್ನಡವನ್ನು ಕೊನೆಯುಸಿರಿನ ತನಕವೂ ಮರೆಯಲು ಸಾಧ್ಯವಿಲ್ಲ. ಕನ್ನಡವನ್ನು ಮರೆತರೆ ತಮ್ಮತನವನ್ನು ಮರೆತಂತೆಯೇ ಸರಿ.
ವಿನಯಪೂರ್ವಕವಾಗಿಯೇ ಸರಿ ನೆಲದ ಭಾಷೆಯನ್ನು ಗೌರವಿಸುವಂತೆ ಅಗ್ರಹಿಸುವುದು ಕನ್ನಡದ ಉಳಿವಿಗೆ ಅನಿವಾರ್ಯ. ಹಿಂದಿ, ಇಂಗ್ಲಿಷ್ ಸಹಿತ ಅನ್ಯ ಸಂಪರ್ಕ ಭಾಷೆಗಳನ್ನು ಗೌರವಿಸೋಣ, ಜತೆಯಲ್ಲಿ ಕನ್ನಡದ ಬಾವುಟವನ್ನು ಎತ್ತಿ ಹಿಡಿಯೋಣ. ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡಿಗರಾದ ನಾವೇ ಮಾತೃಭಾಷೆಯನ್ನು ಬಳಸದಿದ್ದರೆ ಹೇಗೆ? ನಮ್ಮ ಕನ್ನಡಪ್ರೇಮ ನವೆಂಬರ್ಗೆ ಮಾತ್ರ ಸೀಮಿತವಾಗದಿರಲಿ. ದೈನಂದಿನ ವ್ಯವಹಾರ-ಕಚೇರಿಗಳಲ್ಲಿ ನಮ್ಮ ಸಂಪರ್ಕದಲ್ಲಿರುವ ಅನ್ಯಭಾಷೆಯವರಿಗೆ ಕನ್ನಡ ಕಲಿಸೋಣ, ಕನ್ನಡ ಬಳಸುವಂತೆ ಪ್ರೋತ್ಸಾಹಿಸೋಣ. ನಮ್ಮ ಮಕ್ಕಳಲ್ಲಿ ಕನ್ನಡಪ್ರೇಮದ ಎರಕ ಹೊಯ್ಯೋಣ. ಕನ್ನಡ ಸಾಹಿತ್ಯದ ಸೊಬಗನ್ನು ಆಸ್ವಾದಿಸುವ, ಸಂಗೀತದ ಸುಧೆಯನ್ನು ಸವಿಯುವರ ಸಂಖ್ಯೆ ವೃದ್ಧಿಸಲಿ. ಕನ್ನಡದ ಪುಸ್ತಕ-ಪತ್ರಿಕೆಗಳನ್ನು ಓದುವ ಹವ್ಯಾಸಕ್ಕೆ ನೀರೆರೆಯೋಣ.
| ಚಂದ್ರಶೇಖರ ನಾವಡ, ಮಾಜಿ ಸೈನಿಕರು, ಬೈಂದೂರು