

ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದ್ದಂತೆ ಸಂವಿಧಾನಾತ್ಮಕವಾಗಿ ಅಂಗೀಕೃತಗೊಂಡಿರುವ ಇಪ್ಪತ್ತೆರಡು ಪ್ರಾದೇಶಿಕ ಭಾಷೆಗಳಿಗೂ ಭಾಷಾ ಅಭಿವೃದ್ಧಿಗಾಗಿ ಆಯಾ ರಾಜ್ಯ ಭಾಷೆಯ ರಾಜ್ಯ ಸರ್ಕಾರಗಳೇ ಪ್ರಾಧಿಕಾರಗಳನ್ನು ಸ್ಥಾಪಿಸುವುದು ಆಯಾ ರಾಜ್ಯ ಸರ್ಕಾರಗಳ ನೈತಿಕ ಜವಾಬ್ದಾರಿ. ಅದು ಬಿಟ್ಟು ಬೇರೊಂದು ರಾಜ್ಯದ ರಾಜ್ಯ ಭಾಷೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಪ್ರಾಧಿಕಾರ ರಚಿಸಲು ಹೊರಟಿರುವುದು ತನ್ನ ಮಕ್ಕಳಿಗೆ ಅನ್ನ ಹಾಕಲಾರದವ ನೆರಮನೆಯ ಮಕ್ಕಳಿಗೆ ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಿದಂತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡಬೇಕಾಗಿದ್ದ ವಾರ್ಷಿಕ ಅನುದಾನವನ್ನು ಕಡಿತಗೊಳಿಸಿತು. ಅಷ್ಟೇ ಅಲ್ಲ ಕಡಿತಗೊಳಿಸಿದ ಮೊತ್ತವನ್ನು ಬಿಟ್ಟು ಉಳಿಕೆ ಹಣವನ್ನು ಕೊಡದೆ ವಿಳಂಬ ನೀತಿ ಅನುಸರಿಸಿತು. ಆಗ ರಾಜ್ಯದ ಕನ್ನಡಪರ ಸಂಘಟನೆಗಳು, ಹೋರಾಟಗಾರರು, ಸಾಹಿತಿಗಳು, ಕಲಾವಿದರು ಒಕ್ಕೂಟಗಳೆಲ್ಲ ದನಿ ಎತ್ತಿದ ಮೇಲೆ ಸ್ವಲ್ಪ ಹಣ ಬಿಡುಗಡೆಗೊಳಿಸಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಾರಂಭವಾದಾಗಿನಿಂದ ಇಲ್ಲಿವರೆಗೆ ಐವತ್ತು ಕೋಟಿಯ ಅನುದಾನವನ್ನು ಒಮ್ಮೆಯೂ ನೀಡಿಲ್ಲ. ಅದು ಹೋಗಲಿ ಇಡೀ ಪ್ರಾಧಿಕಾರದ ಈವರೆಗಿನ ಅನುದಾನವನ್ನು ಲೆಕ್ಕ ಹಾಕಿದರೆ ಅದರ ಮುಕ್ಕಾಲು ಪಾಲು ಹಣವನ್ನು ಒಮ್ಮೆಗೆ ಮರಾಠಾ ಭಾಷೆಗೆ ನೀಡ ಹೊರಟಿರುವುದು ಯಾವ ಮಾನದಂಡದ ವಿವೇಕ ಪೂರ್ಣ ತೀರ್ಮಾನ ಎಂಬುದನ್ನು ಕನ್ನಡಿಗರು ಹಕ್ಕಿನಿಂದ ಕೇಳಬೇಕಿದೆ. ಇದಕ್ಕೆ ಉತ್ತರ ನೀಡಬೇಕಾದ ನೈತಿಕ ಹೊಣೆ ಸರ್ಕಾರದ್ದಾಗಿದೆ.
ತತ್ಕಾಲದ ಚುನಾವಣೆಯ ಲಾಭಕ್ಕಾಗಿ ಇಡೀ ಒಕ್ಕೂಟ ನೀತಿಯ ಸೌಹಾರ್ದತೆಗೆ ಭಂಗ ಬರುವ ಭಾವನಾತ್ಮಕತೆಯನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡಬಾರದು. ಕರ್ನಾಟಕದ ಜನತೆ ನಾಡು-ನುಡಿಯ ಬಗ್ಗೆ ಈ ಬಗೆಯ ಹಗಲ ದ್ರೋಹವನ್ನು ಕಣ್ಣುಮುಚ್ಚಿಕೊಂಡು ಸಹಿಸುವುದಿಲ್ಲ. ಈ ಅರಿವು ಯಾವುದೇ ಜವಾಬ್ದಾರಿಯುತ ಸರ್ಕಾರಗಳಿಗೆ ತಿಳಿಯಬೇಕಾದ ಸತ್ಯ. ಕರೊನಾದ ಈ ಅಸಹಾಯಕ ವಾತಾವರಣದಲ್ಲಿ ಜನತೆಯ ಮೌನವನ್ನು ದುರಾಡಳಿತಕ್ಕೆ ಸಮ್ಮತಿ ಎಂದು ಭಾವಿಸಿದರೆ ಅದು ನಾಡು-ನುಡಿಗೆ ಗೈದ ಮಹಾಪರಾಧವೇ ಸರಿ. ಪ್ರಸ್ತುತ ಸರ್ಕಾರ ಈ ತೀರ್ಮಾನವನ್ನು ಹಿಂಪಡೆದು ರಾಜ್ಯ ಭಾಷೆಗೆ ಉತ್ತರದಾಯಿತ್ವವುಳ್ಳ ಸರ್ಕಾರವಾಗಿ ನಡೆದುಕೊಳ್ಳಲಿ.
| ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನಿಕಟಪೂರ್ವ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
| ಡಾ. ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರು, ಕನ್ನಡ ನುಡಿ- ಕನ್ನಡ ಗಡಿ ಜಾಗೃತಿ ಸಮಿತಿ, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ