ಕಾರ್ವಿುಕರ ಸಂಕಷ್ಟಕ್ಕೆ ಸ್ಪಂದಿಸಿ, ಲಸಿಕೆ ಸಮಸ್ಯೆ ಬಗೆಹರಿಸಿ: ಜನಮತ

Janamatha1
Published on

ಕಾರ್ವಿುಕರ ಸಂಕಷ್ಟಕ್ಕೆ ಸ್ಪಂದಿಸಿ

ಸದ್ಯ ಜಗತ್ತನ್ನು ತಲ್ಲಣಗೊಳಿಸಿರುವ ಕೋವಿಡ್-19 ಸಾಂಕ್ರಾಮಿಕ ನಮ್ಮ ದೇಶ ಹಾಗೂ ರಾಜ್ಯದಲ್ಲಿ ವಿಪರೀತ ಆತಂಕ ಸೃಷ್ಟಿಸಿದೆ. ಈ ನಡುವೆ ಕರ್ನಾಟಕದಲ್ಲಿ ಮೇ 10ರಿಂದ 14 ದಿನಗಳ ಲಾಕ್​ಡೌನ್ ಜಾರಿಯಾಗಿದೆ. ಇದರಿಂದ ಹೆಚ್ಚು ತೊಂದರೆಗೆ ಒಳಗಾಗುವವರು ಶ್ರೀಸಾಮಾನ್ಯರಾದ ಬಡರೈತರು ಮತ್ತು ಕಾರ್ವಿುಕರು! ಬೆಂಗಳೂರಂಥ ಮಹಾನಗರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಜೀವನ ಕಟ್ಟಿಕೊಳ್ಳಲು ಬಂದ ಸಾವಿರಾರು ಮಂದಿ ಕಾರ್ವಿುಕರು, ಬಡವರು ಇದ್ದಾರೆ. ಲಾಕ್​ಡೌನ್ ವೇಳೆ ಇವರ ಹೊಟ್ಟೆಪಾಡು ಹೇಗೆ? ಗಾರ್ವೆಂಟ್ಸ್ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವಂಥ ಬಡ ಕಾರ್ವಿುಕರ ಹಿತದ ಬಗ್ಗೆಯೂ ಯೋಚಿಸಬೇಕು. ಆದ್ದರಿಂದ ಲಾಕ್​ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕುವ ರಾಜ್ಯದ ಬಡ ರೈತ, ಕಾರ್ವಿುಕರಿಗೆ ಪ್ಯಾಕೇಜ್​ನ್ನು ರಾಜ್ಯ ಸರ್ಕಾರ ಘೊಷಣೆ ಮಾಡಬೇಕು.

| ಶ್ರೀಧರ್ ಡಿ. ರಾಮಚಂದ್ರಪ್ಪ ತುರುವನೂರು

ಲಸಿಕೆ ಸಮಸ್ಯೆ ಬಗೆಹರಿಸಿ

ರಾಜ್ಯದಲ್ಲಿ ವ್ಯಾಕ್ಸಿನ್ ಸಂಗ್ರಹ ಇಲ್ಲದೆ ಲಸಿಕಾ ಅಭಿಯಾನ ಆರಂಭಿಸುವ ಅಗತ್ಯ ಏನಿತ್ತು? ಗುಜರಾತ್, ಉತ್ತರ ಪ್ರದೇಶ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಬರಬೇಕಾದ ಅಗತ್ಯ ಲಸಿಕೆ ಬಂದಿಲ್ಲ. ಇದು ಕೇಂದ್ರ ಸರ್ಕಾರದ ತಾರತಮ್ಯವೋ ಅಥವಾ ರಾಜ್ಯ ಸರ್ಕಾರದ ನಿರ್ಲಕ್ಷ್ಯವೋ ಅರ್ಥವಾಗದ ಯಕ್ಷಪ್ರಶ್ನೆ. ಮೂರನೇ ಅಲೆ ಆರಂಭವಾಗುವ ಮುನ್ನವೇ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ರಾಜ್ಯದ ಜನತೆಗೆ ಸಂಪೂರ್ಣ ಲಸಿಕೆ ನೀಡುವುದು ತುಂಬ ಅನಿವಾರ್ಯವಾಗಿದೆ. ನೋಂದಣಿ ಮಾಡಿದವರಿಗೂ ಲಸಿಕೆಯ ಬರ ಉಂಟಾದ ಇಂಥ ಸಂದರ್ಭದಲ್ಲಿ ನೋಂದಣಿ ಮಾಡದೇ ಇರುವ ಅನಕ್ಷರಸ್ಥ, ಕೂಲಿಕಾರರಿಗೆ ಲಸಿಕೆ ಇನ್ನೆಂದು ಸಿಗಬಹುದು? ನಿಗದಿತ ಅವಧಿಗೆ ಎರಡು ಡೋಸ್ ಕರೊನಾ ಲಸಿಕೆ ಪಡೆದವರಿಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಅಷ್ಟೇ ಅಲ್ಲ, ಕರೊನಾ ವೈರಸ್ ಎದುರಿಸುವಲ್ಲಿ ‘ವ್ಯಾಕ್ಸಿನ್’ ‘ರಾಮಬಾಣ’ ಎಂಬುದು ಈಗಾಗಲೇ ಹಲವು ದೇಶಗಳಲ್ಲಿ ಸಾಬೀತಾಗಿದೆ. ಹೀಗಾಗಿ ಸರ್ಕಾರ ತುರ್ತಾಗಿ ಜನರಿಗೆ ಮೊದಲು ವ್ಯಾಕ್ಸಿನ್ ನೀಡಲು ಮುಂದಾಗಬೇಕು ಹಾಗೂ ಲಸಿಕೆಗಾಗಿ ನೋಂದಣಿ ಕಡ್ಡಾಯಗೊಳಿಸದೆ ಎಲ್ಲರಿಗೂ ಮುಕ್ತವಾಗಿ ನೀಡಬೇಕು.

| ಬಾಲಾಜಿ ಕುಂಬಾರ ಚಟ್ನಾಳ (ಔರಾದ್ ತಾಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net