ಜನಮತ | ಶೈಕ್ಷಣಿಕ ದಾರಿದೀಪವಾದ ವಿದ್ಯಾಗಮ

Janamatha1
Published on

ವಿದ್ಯಾಗಮ ಕಾರ್ಯಕ್ರಮವನ್ನು 6 ರಿಂದ 8ನೇ ತರಗತಿಗೆ ದಿನ ಬಿಟ್ಟು ದಿನ ಮುಂದುವರಿಸಲು ಸರ್ಕಾರ ನಿರ್ಧರಿಸಿರುವುದು ಸೂಕ್ತವಾಗಿದೆ. ಕೋವಿಡ್​ಹಿನ್ನೆಲೆಯಲ್ಲಿ ರೂಪುಗೊಂಡ ಈ ಕಾರ್ಯಕ್ರಮವು ಶಾಲಾಶಿಕ್ಷಣದ ಕಲಿಕಾ ಪ್ರಕ್ರಿಯೆಗೆ ಪೂರಕವಾದ ಶೈಕ್ಷಣಿಕ ವ್ಯವಸ್ಥೆಯಾಗಿದೆ. ಈ ಕಾರ್ಯಕ್ರಮದ ದೂರದೃಷ್ಟಿ ‘ಪ್ರತಿ ಮಗುವಿನ ಭವಿಷ್ಯದ ಕನಸನ್ನು ಯಾವುದೇ ನೈಸರ್ಗಿಕ ವಿಕೋಪ, ಮಹಾಮಾರಿ ಇನ್ನಾವುದೇ ಅಡಚಣೆಗಳು ಅಡ್ಡಿಯಾಗದಂತೆ ನನಸಾಗಿಸುವುದಾಗಿದೆ’. 2020-21ನೇ ಸಾಲಿನಲ್ಲಿ ‘ವಿದ್ಯಾಗಮ’ ಆಗಸ್ಟ್ ನಿಂದ ಪ್ರಾರಂಭವಾಗಿ ಅಕ್ಟೋಬರ್ 10ರವರೆಗೂ ಯಶಸ್ವಿಯಾಗಿ ನಡೆದಿದೆ. ವಿದ್ಯಾಗಮ 2.0 ಕಾರ್ಯಕ್ರಮ 01-01-2021ರಿಂದ ಕೆಲ ಮಾರ್ಪಾಡಿನೊಂದಿಗೆ ಪ್ರಾರಂಭಗೊಂಡಿದ್ದು, ಮತ್ತೆ ವಿಸ್ತರಣೆಯಾಗಿದೆ.

ಶಾಲೆ ಮುಚ್ಚಿರುವ ಸಮಯದಲ್ಲಿ ಮಕ್ಕಳ ನಿರಂತರ ಕಲಿಕಾ ಪ್ರಕ್ರಿಯೆಗೆ ವಿದ್ಯಾಗಮ ಸಹಕಾರಿಯಾಗಿದೆ. ಶಿಕ್ಷಕರು ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಆಹಾರ ಭದ್ರತೆ ಕಾಯ್ದೆಯಂತೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಮಧ್ಯಾಹ್ನ ಉಪಾಹಾರ ಮತ್ತು ಕ್ಷೀರಭಾಗ್ಯ ಯೋಜನೆಯ ಸಾಮಗ್ರಿಗಳನ್ನು ಮಕ್ಕಳ ಮನೆಗೆ ತಲುಪಿಸುವುದರಿಂದ ಮಕ್ಕಳ ವಿಕಾಸ ಮತ್ತು ಬೆಳವಣಿಗೆಗೆ ಉಪಯುಕ್ತವೆನಿಸಿದೆ. ಬಾಲಕಾರ್ವಿುಕ, ಬಾಲ್ಯವಿವಾಹ ಇತ್ಯಾದಿ ಸಾಮಾಜಿಕ ಪಿಡುಗುಗಳಿಗೆ ಮಕ್ಕಳು ಒಳಗಾಗುವುದನ್ನು ಈ ಕಾರ್ಯಕ್ರಮ ತಡೆಗಟ್ಟುತ್ತದೆ. ಅಲ್ಲದೆ, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ತಡೆಯುವುದರಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ವಿದ್ಯಾಗಮದಲ್ಲಿ 54,90,024 ಮಕ್ಕಳು ದಾಖಲಾಗಿದ್ದಾರೆ. ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂಸೇವಕರು, ಪಾಲಕರು ಹಾಗೂ ಸಮುದಾಯದ ಎಲ್ಲ ಭಾಗೀದಾರರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ವಿದ್ಯಾಗಮ ಕಾರ್ಯಕ್ರಮವು ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಶಿಕ್ಷಣದ ಪರ್ಯಾಯ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

| ಗಿರೀಶ ಬಿ.ಆರ್. ಶಿಕ್ಷಕರು, ಚಿಕ್ಕಹಳ್ಳಿ (ಮಾಗಡಿ ತಾಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net