

ಕರೊನಾದ ರುದ್ರನರ್ತನ ಪ್ರಪಂಚವನ್ನು ನಡುಗಿಸಿದೆ. ಈ ಕರೊನಾ ಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರನ್ನು ನಮ್ಮ ರಾಜ್ಯದಲ್ಲಿ ಕಳೆದುಕೊಂಡಿದ್ದೇವೆ. ಈಗ ಇದರ ಎರಡನೇ ಅಲೆಯ ತುತ್ತತುದಿಯಲ್ಲಿ ಇದ್ದೇವೆ. ಜುಲೈನಲ್ಲಿ ತಗ್ಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದು ತಗ್ಗಿದ ಬಳಿಕ ಶಾಲಾ-ಕಾಲೇಜುಗಳ ಪ್ರಾರಂಭದ ಬಗ್ಗೆ ಚರ್ಚೆಗಳು ಆರಂಭವಾಗಬಹುದು. ಈ ಹಿನ್ನೆಲೆಯಲ್ಲಿ ತಕ್ಷಣವೇ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಕರೊನಾ ವ್ಯಾಕ್ಸಿನ್ ನೀಡಬೇಕು. ಏಕೆಂದರೆ, ಅವರಿಗೆ ಈಗ ಮೊದಲಿನ ಡೋಸ್ ಕೊಟ್ಟರೂ, ಎರಡೂ ಡೋಸ್ ಮುಗಿಯುವ ವೇಳೆಗೆ ಮೂರು ತಿಂಗಳು ಬೇಕಾಗುತ್ತದೆ. ಸಮಾಜವನ್ನು ನಿರ್ಮಾಣ ಮಾಡುವ ಶಿಕ್ಷಕರನ್ನು ಉಳಿಸಿಕೊಳ್ಳೋಣ. ಮುಂದೆ ಆಗಬಹುದಾದ ಭಾರಿ ಅನಾಹುತವನ್ನು ತಪ್ಪಿಸಲು ಇಂದೇ ಮುಂದಡಿ ಇಡಬೇಕಾಗಿದೆ.
| ಗಿರೀಶ್ ಮತ್ತೇರ ಹನುಮಂತ ದೇವರ ಕಣಿವೆ, ಹೊಳಲ್ಕೆರೆ ತಾಲ್ಲೂಕು
ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಭಾಷೆಯನ್ನು ಕಡೆಗಣಿಸಿ ಕರ್ನಾಟಕದಲ್ಲಿರುವ 400 ಕ್ಲರ್ಕ್ (ಜೂನಿಯರ್ ಅಸೋಸಿಯೇಟ್ಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪರೀಕ್ಷೆ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾಥಮಿಕ ಮತ್ತು ಮುಖ್ಯ ಹಂತದಲ್ಲಿ ನಡೆಯಲಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಈಗಾಗಲೇ ಕನ್ನಡ ಬಾರದ ಸಾವಿರಾರು ಉದ್ಯೋಗಿಗಳು ನೇಮಕಗೊಂಡಿದ್ದು, ಇದಕ್ಕೆಲ್ಲ ಐಬಿಪಿಎಸ್ನ ನೇಮಕಾತಿ ನಿಯಮಗಳೇ ನೇರ ಕಾರಣ. ಕ್ಲರ್ಕ್ ಮಟ್ಟದ ಹುದ್ದೆಗಳಿಗೆ ಸ್ಥಳೀಯ ಭಾಷೆ ಬಾರದವರನ್ನು ನೇಮಕ ಮಾಡುವುದರಿಂದ, ಗ್ರಾಹಕರು ಸಮರ್ಪಕ ಸೇವೆ ಸಿಗದೇ ಪರದಾಡುವಂತಾಗುತ್ತದೆ. ಕೇಂದ್ರ ಸರ್ಕಾರಿ ಮತ್ತು ಐಬಿಪಿಎಸ್ನ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಬ್ಯಾಂಕ್ ಹುದ್ದೆಗಳಿಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದೇ, ಈ ಸಮಸ್ಯೆಗೆ ಪರಿಹಾರವಾಗಬಲ್ಲದು.
| ಸರ್ದಾರ್. ಎಂ. ತನಾಝರ್ ಅರಸೀಕೆರೆ