ನಾಟಿ ವೈದ್ಯ ಪದ್ಧತಿಯಲ್ಲುಂಟು ಲಿಂಬೆ ರಸದ ಬಳಕೆ: ಜನಮತ

Janamatha1-6
Published on

ಲಿಂಬೆ ರಸದ ಬಳಕೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಲಿಂಬೆ ರಸದಿಂದ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡಬಹುದು ಎಂಬ ವಾದ ಒಂದು ಕಡೆಯಾದರೆ, ಲಿಂಬೆ ರಸ ಬಳಕೆ ಸೂಕ್ತವಲ್ಲ ಎನ್ನುವ ವಾದ ಮತ್ತೊಂದೆೆಡೆ. ವೈದ್ಯ ವೃತ್ತಿಯನ್ನು ‘ಸೇವೆ’ ಎನ್ನುವ ಬದಲು ‘ಪ್ರಾಕ್ಟೀಸ್’ ಎನ್ನುವಲ್ಲಿಯೇ ಯಾವುದೂ ಪರಿಪೂರ್ಣ ಅಲ್ಲ ಎನ್ನುವುದನ್ನು ನಾವು ಒಪ್ಪಿಕೊಂಡಂತಾಗಿದೆ. ಅದಕ್ಕೆ ‘ಜ್ಞಾನ ಎನ್ನುವುದು ಸಂಶೋಧನೆಯೇ ಹೊರತು, ಅದು ವಾಸ್ತವವಲ್ಲ’ ಎನ್ನುವುದು. ನಾಟಿ ವೈದ್ಯ ಪದ್ಧತಿಯು ಹಲವು ಸಂದರ್ಭಗಳಲ್ಲಿ ವೈದ್ಯಕೀಯ ಲೋಕಕ್ಕೂ ಸವಾಲಾಗಿ ನಿಂತಿದೆ. ಕೆಲ ಅಲೋಪಥಿ ವೈದ್ಯರೇ ತಮ್ಮ ಕಾಯಿಲೆಯ ಚಿಕಿತ್ಸೆಗೆ ನಾಟಿ ವೈದ್ಯರ ಮೊರೆ ಹೋದ ಸಾಕಷ್ಟು ಉದಾಹರಣೆಗಳಿವೆ.

‘ಅನುಭವ ವಾಸ್ತವದ ಹತ್ತಿರ’ ಎಂಬ ಮಾತನ್ನು ಒಪ್ಪಿಕೊಳ್ಳಲೇ ಬೇಕು. ನಿರಕ್ಷರಕುಕ್ಷಿಗಳಾದ ಅನೇಕ ಸೂಲಗಿತ್ತಿಯರು ಹಳ್ಳಿಗಳಲ್ಲಿ ನೂರಾರು ಹೆರಿಗೆಯನ್ನು ಸುಸೂತ್ರವಾಗಿ ಮಾಡಿದ ಉದಾಹರಣೆಗಳು ನಮ್ಮ ಮುಂದಿದ್ದು, ಅಂಥವರನ್ನು ಸಂಘ, ಸಂಸ್ಥೆಗಳು ಗುರುತಿಸಿ ಗೌರವಿಸಿದ್ದಕ್ಕೆ ನಿದರ್ಶನಗಳಿವೆ. ಇವೆಲ್ಲ ಅನುಭವ ಹಳ್ಳಿಗಳಲ್ಲಿ ವಾಸಿಸುವ ನಾಗರಿಕರಿಗಿದೆ. ನಾಗರಹಾವಿನ ವಿಷ ಇಳಿಸುವ, ಅರ್ಧಾಂಗವಾಯುವನ್ನು ಗುಣಪಡಿಸುವ, ಕಿವಿ ನೋವು ಇಲ್ಲವಾಗಿಸುವ, ಮಕ್ಕಳ ಅನೇಕ ಕಾಯಿಲೆಗಳನ್ನು ಗುಣಪಡಿಸುವ ನಾಟಿ ವೈದ್ಯರನ್ನು ಹಳ್ಳಿಗಳಲ್ಲಿ ಕಂಡಿದ್ದೇವೆ. ಬಹುತೇಕವಾಗಿ ವಂಶಪಾರಂಪರಿಕ ನೆಲೆಗಟ್ಟಿನ ಮೇಲೇ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುವ ನಾಟಿ ಔಷಧ ಪದ್ಧತಿ ಅವಸಾನದ ಅಂಚಿನಲ್ಲಿರುವುದು ದುರದೃಷ್ಟಕರ!

ಅಂತೆಯೇ, ಅನೇಕ ನಾಟಿವೈದ್ಯರು ಕೆಲವು ಕಾಯಿಲೆಗಳಿಗೆ ಲಿಂಬೆ ಹಣ್ಣಿನ ರಸವನ್ನು ವಿವಿಧ ರೀತಿಯಲ್ಲಿ ಬಳಸುತ್ತಿದ್ದರು. ಅದರಲ್ಲಿ ಒಂದು, ಮೂಗಿನ ಹೊಳ್ಳೆಗಳಿಗೆ ಲಿಂಬೆ ರಸದ ಹನಿಗಳನ್ನು ಬಿಡುವುದು. ಬಹಳ ಹಿಂದಿನಿಂದಲೂ ಲಿಂಬೆ ರಸವನ್ನು ಮೂಗಿನಲ್ಲಿ ಬಿಟ್ಟು ಕೆಲ ಕಾಯಿಲೆಗಳನ್ನು ಗುಣಪಡಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಈ ಬಗ್ಗೆ ವಾದ-ವಿವಾದಕ್ಕಿಂತ ವಾಸ್ತವದ ಕಡೆ ಬೆಳಕು ಚೆಲ್ಲಬೇಕಿದೆ.

| ಬೀರಣ್ಣ ನಾಯಕ ಮೊಗಟಾ ವಿಶ್ರಾಂತ ಪ್ರಾಂಶುಪಾಲರು, ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net