

ಘಟನೆ ಎರಡು: ಹಳ್ಳಿಗನೊಬ್ಬ ನಗರಪಾಲಿಕೆಗೆ ಬಂದಿದ್ದ. ಯಾರೋ ಒಬ್ಬರು ಅವನ ಕೆಲಸವಾಗಬೇಕಾದರೆ ‘ಮೇಯರ್’ ಅವರನ್ನು ಭೇಟಿಯಾಗಿ ನಿವೇದಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಕಷ್ಟಪಟ್ಟು ಪಾಲಿಕೆ ಕಚೇರಿಗೆ ತಲುಪಿದವನು ಎದುರಿಗೆ ಸಿಕ್ಕ ವ್ಯಕ್ತಿಯ ಬಳಿ, ‘ಸ್ವಾಮಿ, ಇಲ್ಲಿ ಮೇಯೋರು (ಮೇಯರ್ ಎಂದು ಸ್ಪಷ್ಟವಾಗಿ ಹೇಳಲು ಬಾರದೆ) ಎಲ್ಲಿದ್ದಾರೆ’ ಎಂದು ಕೇಳಿದನಂತೆ. ಆ ವ್ಯಕ್ತಿ ಪಾಲಿಕೆಯಲ್ಲಿ ಕಡತಗಳ ಹಿಂದೆ ಓಡಾಡಿ ಮಾಡಿಸಿ ಕೊಡುವ ಮಧ್ಯವರ್ತಿಯಾಗಿದ್ದ. ಆತನ ಉತ್ತರ ಹೀಗಿತ್ತು: ‘ಇಲ್ಲಿರುವ ಎಲ್ಲರೂ ಮೇಯೋರೇ, ಏನಾಗಬೇಕು ಹೇಳು’. ಪಾಪ, ಹಳ್ಳಿಮುಗ್ಧ ವಿಷಯ ತಿಳಿಸಿದ. ಅವನಿಂದ ಒಂದಿಷ್ಟು ವಸೂಲಿ ಮಾಡಿ ಏನೋ ಹೇಳಿ ಕಳುಹಿಸಿದನಂತೆ. ಕೆಲಸ ಆಯಿತೋ ಇಲ್ಲವೋ, ಅದು ಬೇರೆ ವಿಷಯ.
ಇಂದಿನ ಕಾಲಘಟ್ಟದಲ್ಲಿ ಜನರು ಮತ್ತು ಸರ್ಕಾರಿ ನೌಕರರ ನಡುವೆ ಸಂವಹನದ ಕೊರತೆ ಹೆಚ್ಚಿದೆ. ಇದಕ್ಕೇನು ಕಾರಣ?
ಸರ್ಕಾರಿ ಹುದ್ದೆ ನೇಮಕಾತಿಗಳನ್ನು ಈ ರೀತಿಯಲ್ಲಿ ಮಾಡಲಾಗುತ್ತದೆ. ಒಂದು: ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ. ಎರಡು: ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ಮೃತಪಟ್ಟರೆ ಅವರ ಅವಲಂಬಿತರಿಗೆ ಸಿಗುವ ನೇರ ನೇಮಕಾತಿ. ಮೂರು: ಒಂದು ವರ್ಗದ ಹುದ್ದೆಗೆ ನೇಮಕಗೊಂಡು ಬೇರೊಂದು ಹುದ್ದೆಗೆ ಬದಲಾವಣೆ ಮಾಡಿಕೊಳ್ಳುವವರು. ನಾಲ್ಕು: ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕವಾಗುವವರು. ಇವರ ಪೈಕಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೇಮಕಾತಿ ಆಗುವವರಿಗೆ ಇರುವಷ್ಟು ಬದ್ಧತೆ ಬೇರೆಯವರಿಗೆ ಇರುವುದಿಲ್ಲ. ನಾಲ್ಕನೇ ವರ್ಗದಡಿ ಬರುವ ಗುತ್ತಿಗೆ ಆಧಾರದ ನೌಕರರಿಗೆ ಯಾವ ಸೇವಾನಿಯಮಗಳೂ ಅನ್ವಯಿಸದೇ ಇರುವುದರಿಂದ ಅವರು ಕೆಲಸ ಮಾಡಿದರೂ-ಮಾಡದಿದ್ದರೂ, ಮಧ್ಯವರ್ತಿಗಳಾಗಿ ಕೆಲಸ ಮಾಡಿದರೂ ಕೇಳುವವರಿಲ್ಲ.
ಮೇಲೆ ಹೇಳಿದ ನಿದರ್ಶನಗಳಲ್ಲಿ ಮೊದಲಿನದು ಸರ್ಕಾರಿ ಕೆಲಸವನ್ನು ಬಾಧ್ಯತೆ ಇಲ್ಲದವರ ಕೈಯಲ್ಲಿ ಕೊಟ್ಟರೆ ತೆರಿಗೆದಾರರ ಹಣ ಹೇಗೆ ಪೋಲಾಗುತ್ತದೆ ಎನ್ನುವುದಕ್ಕೆ ಉದಾಹರಣೆ. ಅಂಥವರು ತಮಗೆ ವಹಿಸಿದ ಕೆಲಸದ ಫಲಿತಾಂಶ ಅಥವಾ ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎರಡನೇಯದು, ಸರ್ಕಾರದ ಯಾವುದೇ ಯೋಜನೆಯಿರಲಿ, ನಿಜವಾದ ಫಲಾನುಭವಿಗೆ ತಲುಪುವಲ್ಲಿ ಮದ್ಯವರ್ತಿಗಳು ಹೇಗೆಲ್ಲ ಅಡ್ಡಿಯಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ.
ಮೊದಲಿನವರಿಗಿಂತ ಎರಡನೇ ವರ್ಗದವರು ಹೆಚ್ಚು ಅಪಾಯಕಾರಿ. ಹೆಚ್ಚಿನ ಸರ್ಕಾರಿ ಕಚೇರಿಗಳಲ್ಲಿ ಇಂತಹ ಮಧ್ಯವರ್ತಿಗಳ ಹಾವಳಿ ಇದೆ. ಆಗಿಂದಾಗ್ಗೆ ರಾಜಕಾರಣಿಗಳು ನಡೆಸುವ ಸಾರ್ವಜನಿಕ ಸಂಪರ್ಕ ಸಭೆ, ಪ್ರತಿಭಟನಾ ಸಭೆಗಳಲ್ಲಿ ಜನರ ಎದುರು ಅಧಿಕಾರಿಗಳನ್ನು ಏಕವಚನದಲ್ಲಿ ಗದರಿಸುವುದು, ಜನರನ್ನು ಆಕರ್ಷಿಸಲು ಕಾನೂನಿನಲ್ಲಿ ಇಲ್ಲದಿದ್ದರೂ ಅಪರಿಪಕ್ವ ಆದೇಶಗಳು ಇರುವುದಾಗಿ ಬಿಂಬಿಸುವುದು, ಇದನ್ನು ನಂಬಿದ ಕೆಲವರು ನಾಯಕರು ಹೇಳಿದ್ದು ಸರಿಯಿದೆ, ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಾರೆಂದು ಭಾವಿಸುವುದು, ನಡೆಯುತ್ತಿರುತ್ತದೆ.
ಹಿಂದೊಮ್ಮೆ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಸ್ವಲ್ಪ ಮೊತ್ತವನ್ನು ಜಿಲ್ಲಾ ವೈದ್ಯಾಧಿಕಾರಿಯವರ ಅಧೀನದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿಗೆ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಶಾಸಕರು ತಮ್ಮ ವ್ಯಾಪ್ತಿಗೆ ಬರುವವರು ಸಲ್ಲಿಸಿದ ಅರ್ಜಿಗಳನ್ನು ಶಿಫಾರಸಿನೊಂದಿಗೆ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸುವುದು ವಾಡಿಕೆ. ಅಲ್ಲಿಂದ ಮಂಜೂರಾದ ಚೆಕ್ ಆಯಾ ತಾಲೂಕಿನ ತಹಸೀಲ್ದಾರರಿಗೆ ಬರುತ್ತದೆ, ಮಂಜೂರಾದ ಬಗ್ಗೆ ಮಾಹಿತಿ ಶಿಫಾರಸು ಮಾಡಿದ ಶಾಸಕರಿಗೆ ಬರುತ್ತದೆ. ಇಂತಹ ಕೋರಿಕೆ ಅರ್ಜಿಗಳನ್ನು ಒಬ್ಬರಿಗಿಂತ ಹೆಚ್ಚು ಕಡೆ ಕೊಡಬಾರದೆಂದು ನಿಯಮವಿದ್ದರೂ, ಓರ್ವ ವ್ಯಕ್ತಿ ಜಿಲ್ಲೆ ಮತ್ತು ರಾಜ್ಯ ಎರಡೂ ಕಡೆ ಅರ್ಜಿ ಕೊಟ್ಟಿದ್ದ. ಜಿಲ್ಲಾ ಮಟ್ಟದಲ್ಲಿ ಐದು ಸಾವಿರ, ರಾಜ್ಯ ಮಟ್ಟದಲ್ಲಿ, ಶಾಸಕರ ಶಿಫಾರಸಿನ ಮೇಲೆ 25 ಸಾವಿರ ಏಕಕಾಲದಲ್ಲಿ ಮಂಜೂರಾಯಿತು. ಜಿಲ್ಲಾ ಕಚೇರಿಯಿಂದ ಐದು ಸಾವಿರ ಮಂಜೂರಾದ ಪತ್ರ ತಲುಪಿದ ದಿನದಂದೇ ಶಾಸಕರ ಪ್ರಕಟಣೆ ಪತ್ರಿಕೆಗಳಲ್ಲಿ ಪ್ರಕಟವಾಯ್ತು. ತಮಾಷೆ ನೋಡಿ, ಆ ವ್ಯಕ್ತಿ, ಆಸ್ಪತ್ರೆಯ ಪತ್ರ ಮತ್ತು ಪತ್ರಿಕಾ ಪ್ರಕಟಣೆ ಪ್ರತಿಯೊಂದಿಗೆ ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದೇ ಮಾಡಿದ್ದು, ‘ಶಾಸಕರು 25 ಸಾವಿರ ಮಂಜೂರಾಗಿರುವ ಹೇಳಿಕೆ ಕೊಟ್ಟಿದ್ದಾರೆ, ನೀವು ಐದು ಸಾವಿರ ಎನ್ನುತ್ತೀರಿ, ಇಪ್ಪತ್ತು ಸಾವಿರ ನೀವು ತಿಂದು ಹಾಕಿದ್ದೀರಿ’ ಇತ್ಯಾದಿ. ಇದನ್ನು ವಿವರಿಸಿ ಹೇಳುವಷ್ಟರಲ್ಲಿ ಸುಸ್ತಾಗಿ ಹೋಯಿತು. ಜನರ ದೃಷ್ಟಿಯಲ್ಲಿ ಎಲ್ಲರೂ ಲಂಚಕೋರರು. ತಾಳ್ಮೆಯಿಂದ ಕೇಳುವ ವ್ಯವಧಾನವಿಲ್ಲ.
ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಕ್ಕಳ ಜನನ ಪ್ರಮಾಣಪತ್ರವನ್ನು ಒಂದು ವರ್ಷದವರೆಗೆ ಆಯಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ನಿಯಮವಿದೆ. ಜನನದ ಹದಿನಾಲ್ಕು ದಿನದೊಳಗೆ ಅರ್ಜಿ ಸಲ್ಲಿಸಿದರೆ ಪ್ರಮಾಣಪತ್ರ ನೀಡುವುದು ಸುಲಭವಾಗುವ ಕಾರಣ, ಆಸ್ಪತ್ರೆಯಿಂದ ಬಿಡುಗಡೆಯಾಗುವಾಗಲೇ ಎಲ್ಲ ವಿವರಗಳನ್ನು ಒಳಗೊಂಡ ಅರ್ಜಿಯನ್ನು ತಾಯಿಯ ಸಹಿ ಪಡೆದು ಕಳುಹಿಸಲಾಗುತ್ತಿತ್ತು. ಮಗುವಿನ ಹೆಸರು ಸೇರಿದಂತೆ, ಮಗುವಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸುವ ಮೊದಲ ಅಧಿಕಾರವಿರುವುದು ತಾಯಿಗೆ. ಬದಲಾವಣೆಗೆ ಅವಕಾಶವಿದ್ದರೂ ಅದಕ್ಕೆ ಕಠಿಣ ನಿಯಮಗಳಿರುವುದರಿಂದ, ಆರಂಭದಲ್ಲೇ ಸರಿಯಾಗಿ ಪರಿಶೀಲಿಸಿ ಪ್ರಮಾಣಪತ್ರ ನೀಡಲಾಗುತ್ತಿತ್ತು. ಒಂದುದಿನ ಓರ್ವ ಮಹಾನುಭಾವ ಆಸ್ಪತ್ರೆ ಕಚೇರಿಗೆ ಬಂದು ದೊಡ್ಡ ಸ್ವರದಲ್ಲಿ ಕೂಗಾಡಿದ. ಅವನ ಮಾತಿನ ಮುಖ್ಯಾಂಶ ಇಷ್ಟೇ. ಆತ ಕಳೆದ ಕೆಲ ಸಮಯದಿಂದ ಕೊಲ್ಲಿ ರಾಷ್ಟದಲ್ಲಿದ್ದನಂತೆ, ಮಗುವಿನ ಜನನವಾಗುವಾಗ ವಿದೇಶದಲ್ಲಿ ಇದ್ದವನ ಒಪ್ಪಿಗೆ ಇಲ್ಲದೆ ಹೆಸರು ಇಟ್ಟದ್ದು ತಾಯಿಯ ತಪ್ಪಂತೆ, ಪ್ರಮಾಣಪತ್ರ ಕೊಟ್ಟದ್ದು ಆಸ್ಪತ್ರೆಯ ತಪ್ಪಂತೆ. ಅವನ ಆಯ್ಕೆಯ ಹೆಸರು ನಮೂದಿಸಿ ಹೊಸದಾಗಿ ಪ್ರಮಾಣಪತ್ರ ನೀಡಬೇಕಂತೆ! ಆತನ ಬೆಂಬಲಕ್ಕೆ ಕೆಲವು ಮರಿ ಪುಢಾರಿಗಳು ಬೇರೆ ಬಂದಿದ್ದರು.
ಬರೀ ಸಾರ್ವಜನಿಕರ ತಪ್ಪಲ್ಲ, ನೌಕರರ ವಲಯದಲ್ಲಿರುವ ಕಪ್ಪುಕುರಿಗಳ ಕಥೆಗಳನ್ನೂ ಕೇಳಿ:
ಆಸ್ಪತ್ರೆಯ ಪ್ರಯೋಗಶಾಲೆಯ ನೌಕರನೊಬ್ಬ ದಿನಾ ತಡವಾಗಿ ಬರುತ್ತಿದ್ದ. ಸದ್ರಿ ವಿಭಾಗದಲ್ಲಿ ಪರೀಕ್ಷೆ ನಡೆಸಿದ ವರದಿಯನ್ನು ಪಡೆಯಲು ಒಬ್ಬರು ಕಾದುಕುಳಿತಿದ್ದರು. ಬಹಳ ಹೊತ್ತು ಕಾದ ಬಳಿಕ ಆತನ ಆಗಮನವಾಯ್ತು. ಆತನಿಗಾಗಿ ಕಾದು ಕುಳಿತವರು ಸಲಿಗೆಯಿಂದ ಕೇಳಿದರು, ‘ತಡವಾಯಿತೇ? ವೈದ್ಯರು ನೀವು ಬಂದಿದ್ದೀರಾ ಎಂಬುದನ್ನು ನೋಡಲು ಹಲವು ಬಾರಿ ಬಂದು ಹೋದರು’ ಅದಕ್ಕೆ ಆತನ ಉತ್ತರ ಹೀಗಿತ್ತು, ‘ನನಗೆ ಸಂಬಳ ಕೊಡುವುದು ಅವರಲ್ಲ, ಸರ್ಕಾರ, ಅವರೇನು ಕೇಳುವುದು, ಸರ್ಕಾರ ಕೇಳಲಿ, ಹೇಳುತ್ತೇನೆ..’ ವರದಿಗಾಗಿ ಕಾದುಕುಳಿತವರಿಗೆ ಈ ಉತ್ತರ ಸಹಿಸಲಾಗದೆ ಕೇಳಿಯೇ ಬಿಟ್ಟರು: ‘ಓ, ಹೌದಲ್ವಾ, ಸರ್ಕಾರ ಎಂದರೆ ಯಾರು ಗೊತ್ತಾ? ತೆರಿಗೆ ಕೊಡುವ ನಾವು, ನಾನು ಕೇಳುತ್ತಿದ್ದೇನೆ, ಏಕೆ ತಡವಾಯಿತು?’ ಹೀಗೆ ತರ್ಕಬದ್ಧವಾಗಿ ಪ್ರಶ್ನೆ ಮಾಡುವ ನಾಗರಿಕರಿದ್ದರೆ, ಉದ್ಧಟತನಕ್ಕೆ ಸ್ವಲ್ಪ ಲಗಾಮು ಹಾಕಬಹುದು.
ಸದಾ ಏನಾದರೂ ಅಪೇಕ್ಷಿಸುವ ನೌಕರರು ಕಡತಗಳನ್ನು ಇತ್ಯರ್ಥಗೊಳಿಸಲು ಇನ್ನಿಲ್ಲದ ತಪು್ಪಗಳನ್ನು ಹುಡುಕುತ್ತಾರೆ, ಪಕ್ಕದ ಮೇಜಿನ ಕಡತ ಎತ್ತಿ ವಿಲೇ ಮಾಡುವ ಬದಲು, ಕಡತ ಬಂದಿಲ್ಲವೆನ್ನುವವರೂ ಇದ್ದಾರೆ. ಊಹಾತ್ಮಕ ಆಕ್ಷೇಪಣೆಯೊಂದಿಗೆ ಆಟವಾಡುವವರೂ ಇದ್ದಾರೆ. ಒಂದೆರಡು ಉದಾಹರಣೆ: ದೇವಸ್ಥಾನಕ್ಕೆ ಸಂಬಂಧಿಸಿ ಅರ್ಜಿ ಕೊಟ್ಟರೆ, ಆಸ್ತಿ ಯಾರ ಹೆಸರಿನಲ್ಲಿ ಇದೆಯೋ ಅವರೇ (ದೇವರೇ) ಸಹಿ ಮಾಡಬೇಕಂತೆ! ದಕ್ಷಿಣೆ ಕೊಟ್ಟರೆ ಯಾವ ಶರತ್ತೂ ಇಲ್ಲ. ಉದ್ದೇಶಪೂರ್ವಕ ತಪ್ಪಾಗಿರಲಿ, ಆಕಸ್ಮಿಕ ತಪ್ಪಾಗಿರಲಿ, ಪೊಲೀಸರು ಆರೋಪಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಯ್ಯುವುದು, ಹೊಡೆಯುವುದೂ ತಪ್ಪೇ ತಾನೆ? ಸರ್ಕಾರಿ ಕಚೇರಿಯಲ್ಲಿ ಕಡತಗಳನ್ನು ಮಂಜೂರು ಮಾಡಿಸಿಕೊಳ್ಳಲು ಲಂಚ ಕೊಡುವವರು, ಒಂದೋ ಅವರ ಕಡತ ಕಾನೂನುಬಾಹಿರವಿರಬೇಕು ಅಥವಾ ಸರದಿಗಾಗಿ ಕಾಯುವಷ್ಟು ತಾಳ್ಮೆಯಿಲ್ಲದಿರಬೇಕು. ತಪು್ಪ ತಮ್ಮದೇ ಆಗಿರುವಾಗ ಲಂಚ ಕೊಟ್ಟು ಹಿಂದಿನಿಂದ ದೂಷಿಸುವುದೇಕೆ?
ಮತ್ತೆ ಆಸ್ಪತ್ರೆಯ ವಿಚಾರಕ್ಕೆ ಬರುವುದಾದರೆ, ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಮೊತ್ತದ ಶುಲ್ಕ ಪಾವತಿಸಿ ದಿನವಿಡೀ ಕಾಯುವವರಿಗೆ, ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ, ಸೀಮಿತ ಸೌಲಭ್ಯಗಳ ನಡುವೆಯೂ ಗರಿಷ್ಠ ಸಾಧ್ಯ ಸೇವೆ ನೀಡಲು ಹೆಣಗಾಡುವವರ ಪರಿಶ್ರಮ ಅರ್ಥವಾಗುವುದಿಲ್ಲ. ಸಣ್ಣ ತಪ್ಪಾದರೂ ದೊಡ್ಡ ರಂಪಾಟ. ಇವೆಲ್ಲದಕ್ಕಿಂತ ವಿಭಿನ್ನ ಆಯಾಮದ ಒಂದು ಘಟನೆ. ಯಾವುದೋ ಖಾಸಗಿ ಕೆಲಸದ ಮೇಲೆ ಪೊಲೀಸ್ ಠಾಣೆಗೆ ಹೋಗಿದ್ದೆ. ಅಲ್ಲಿ ಓರ್ವ ಲಾರಿ ಚಾಲಕನ ವಿಚಾರಣೆ ನಡೆಯುತ್ತಿತ್ತು. ಆತ ದಂಡ ಸಂಹಿತೆಯ ನಿಯಮವೊಂದನ್ನು ಉಲ್ಲೇಖಿಸಿ ಅದರಂತೆ ಆರೋಪಪಟ್ಟಿ ದಾಖಲಿಸಲು ಪೊಲೀಸ್ ಇನ್ಸ್ಪೆಕ್ಟರಿಗೆ ಸಲಹೆ ನೀಡುತ್ತಿದ್ದ. ಕಾರಣವೇನೆಂದರೆ, ಆತ ಹೇಳಿದ ನಿಯಮದಡಿ ಕೇವಲ ದಂಡವಂತೆ, ಬೇರೆ ನಿಯಮದಡಿ ದಾಖಲಿಸಿದರೆ ದಂಡದ ಜತೆಗೆ ಜೈಲುಶಿಕ್ಷೆ ಇರುವುದಂತೆ. ಅಪರಾಧ ಮಾಡುವುದು ತಪ್ಪೆಂಬ ಕೀಳರಿಮೆ ಕೂಡ ಇಲ್ಲದೆ ಪೊಲೀಸರಿಗೇ ಸಲಹೆ ನೀಡುವ ಬುದ್ಧಿವಂತರಿದ್ದಾರೆ!
(ಲೇಖಕರು ಆರೋಗ್ಯ ಇಲಾಖೆಯ ನಿವೃತ್ತ ಕಚೇರಿ ಅಧೀಕ್ಷಕರು ಮತ್ತು ಹವ್ಯಾಸಿ ಬರಹಗಾರರು)