

ಇತ್ತೀಚಿನ ದಿನಗಳಲ್ಲಿ ಜಾತಿ ಆಧಾರದ ಮೇಲೆ ಮೀಸಲಾತಿ ಕೇಳುವ ಹೋರಾಟಗಳು ಹೆಚ್ಚಿವೆ. ಆದರೆ, ಯಾವುದೇ ನಾಯಕರು, ಸಮುದಾಯದ ಸ್ವಾಮೀಜಿಗಳು ನಮ್ಮ ಜನರಿಗೆ ಉದ್ಯೋಗ ಕೊಡಿ, ನಮ್ಮ ಜಿಲ್ಲೆಗೆ ನೀರಾವರಿ ಮಾಡಿ, ಕಾರ್ಖಾನೆಗಳನ್ನು ಕೊಡಿ, ರಸ್ತೆಗಳನ್ನು ಮಾಡಿಕೊಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಹೋರಾಟ, ಆಗ್ರಹ ಮಾಡುತ್ತಿಲ್ಲ. ರಾಜಕಾರಣಿಗಳು ಅವರ ಸಮುದಾಯಕ್ಕೆ ಸೀಮಿತವಾಗುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಸಮಾಜ ಕಟ್ಟುವುದೇ ಸ್ವಾಮೀಜಿಗಳ ಮತ್ತು ಪೀಠಾಧಿಪತಿಗಳ ಕರ್ತವ್ಯವಾದರೂ ಇತ್ತೀಚಿನ ದಿನಗಳಲ್ಲಿ ಜಾತಿಗೆ ಸೀಮಿತಗೊಳಿಸಿಕೊಂಡು ಹೋರಾಟಗಳ ಮುಂದಾಳತ್ವ ವಹಿಸಿಕೊಳ್ಳುತ್ತಿರುವುದು ಸರಿಯಲ್ಲ. ಒಂದೇ ಸಮುದಾಯಕ್ಕೆ ಸೀಮಿತವಾದರೆ ಇನ್ನೊಂದು ಸಮುದಾಯದ ದೃಷ್ಟಿಯಲ್ಲಿ ವಿರೋಧಿಗಳಾಗಬೇಕಾಗುತ್ತದೆ.
ಎಲ್ಲ ಸಮುದಾಯಗಳಲ್ಲೂ ಆರ್ಥಿಕವಾಗಿ ಹಿಂದುಳಿದ ಅಥವಾ ಆದಾಯದಿಂದ ಹಿಂದುಳಿದ ಜನರಿದ್ದಾರೆ. ಇವರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸ್ವಾತಂತ್ರ್ಯ ಪಾಪ್ತಿಯಾಗಿ ಏಳು ದಶಕಗಳು ಕಳೆದಿದ್ದರೂ, ಬಡತನ ದೊಡ್ಡ ಶಾಪವಾಗಿ ಕಾಡುತ್ತಿದೆ. ಆರ್ಥಿಕ ಸಂಕಷ್ಟದ ಪರಿಣಾಮ ಕನಿಷ್ಠ ಸವಲತ್ತುಗಳಿಂದಲೂ ಜನರು ವಂಚಿತರಾಗುತ್ತಿದ್ದಾರೆ. ರಾಜಕಾರಣಿಗಳಿಗೆ, ಸ್ವಾಮೀಜಿಗಳಿಗೆ ನಿಜಕ್ಕೂ ಸಮಾಜಕ್ಕೆ ನ್ಯಾಯ ಕೊಡಿಸುವ ಮನಸ್ಸಿದ್ದರೆ ಆರ್ಥಿಕತೆ ಆಧಾರಿತ ಮೀಸಲಾತಿಗಾಗಿ ಹೋರಾಟ ಮಾಡಲಿ. ಬಡತನಕ್ಕೆ ಜಾತಿ ಇಲ್ಲ, ಪಂಥ ಇಲ್ಲ. ಆರ್ಥಿಕತೆ ಆಧಾರಿತ ಮೀಸಲಾತಿ ಜಾರಿಯಾದರೆ ಬಡಕುಟುಂಬಗಳು ಉದ್ಧಾರವಾಗುವ ಜತೆಗೆ, ರಾಜ್ಯ, ದೇಶ ನಿಜಾರ್ಥದಲ್ಲಿ ಅಭಿವೃದ್ಧಿಯಾಗುತ್ತದೆ. ಈ ವಾಸ್ತವವನ್ನು ಹೋರಾಟಗಾರರು ಮತ್ತು ಆಡಳಿತದಲ್ಲಿ ಇರುವವರು ಮನಗಾಣಬೇಕು.
| ಅಪ್ಪು ಶಿರೋಳಮಠ ವಿಜಯಪುರ