

ಕೋವಿಡ್ ಲಾಕ್ಡೌನ್ ಸಂಕಷ್ಟದಲ್ಲಿರುವ ಕಲಾವಿದರಿಗೆ, ಅಸಂಘಟಿತ ಕಾರ್ವಿುಕರಿಗೆ ಸರ್ಕಾರ ಪರಿಹಾರ ಘೊಷಣೆ ಮಾಡಿದ್ದು ‘ಸೇವಾಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ಹೇಳಿದೆ. ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಪ್ರಮುಖವಾಗಿರುವ ಸೇವಾಸಿಂಧು ಪೋರ್ಟಲ್ ಮತ್ತು ಆಪ್ ಈಗ ಸಮಸ್ಯೆಗಳ ಆಗರವಾಗಿದೆ. ಪರಿಹಾರ ಪಡೆಯಲು ಕಾರ್ವಿುಕರು, ಕಲಾವಿದರು ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆದರೆ ಸೇವಾಸಿಂಧು ಪೋರ್ಟಲ್ ತೆರೆದು, ಅಗತ್ಯ ದಾಖಲಾತಿ ಲಗತ್ತಿಸಿ ಅರ್ಜಿ ಸಲ್ಲಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಹಲವು ತಾಂತ್ರಿಕ ದೋಷಗಳು ಎದುರಾಗುತ್ತಿವೆ. ಸರ್ವರ್ ಸ್ಲೋ ಆಗಿದ್ದು, ಅರ್ಜಿ ಸಲ್ಲಿಸಿದ ಬಳಿಕ 30 ಸೆಕೆಂಡುಗಳಲ್ಲಿ ಲಾಗ್ಔಟ್ ಆಗುತ್ತದೆ. ಹೀಗಾಗಿ ಮತ್ತೆ ವಿವರಗಳನ್ನು ನಮೂದಿಸಬೇಕಾಗುತ್ತದೆ. ಒಂದು ಅರ್ಜಿ ಸಲ್ಲಿಸಿದ ನಂತರ ಮುಂದಿನ ಅರ್ಜಿ ಸ್ವೀಕರಿಸಲು ಪೋರ್ಟಲ್ ನಲವತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಪಿನ್ ಕೋಡ್ ಹಾಕಿದರೆ, ತಪ್ಪಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಮ್ಮೆ ನಮೂದಿಸಿದರೆ ಸ್ವೀಕರಿಸುತ್ತದೆ. ಹಾಗಾಗಿ, ಸರ್ಕಾರ ಕೂಡಲೇ ಸೇವಾಸಿಂಧುವಿನ ದೋಷಗಳನ್ನು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಿ.
ಇನ್ನು ನೋಂದಣಿ ಕೇಂದ್ರಗಳಲ್ಲಿ ಎರಡು ಸೆಟ್ ದಾಖಲಾತಿಗಳನ್ನು ಕೇಳುತ್ತಿದ್ದಾರೆ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಬ್ಯಾಂಕ್, ಪಾಸ್ಪೋರ್ಟ್, ಗೆಜೆಟೆಡ್ ಅಧಿಕಾರಿಯೊಬ್ಬರು ಸಹಿ ಮಾಡಿದ ನೌಕರರ ಪ್ರಮಾಣಪತ್ರ ಕೇಳುತ್ತಿದ್ದಾರೆ. ಕೆಲ ಬಡವರ ಬಳಿ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕೂಡ ಇಲ್ಲದಿರುವುದು ಶೋಚನೀಯ. ನಿಜವಾದ ಫಲಾನುಭವಿಗಳು ಈ ಪರಿಹಾರದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಕಾಳಜಿಯನ್ನು ಸರ್ಕಾರಿ ಅಧಿಕಾರಿಗಳು ತೋರಬೇಕಿದೆ.
| ವಿಜಯಕುಮಾರ್ ಎಚ್.ಕೆ. ರಾಯಚೂರು