

‘ಎಟಿಎಂಗಳಲ್ಲಿ ಕನ್ನಡ ಮಾಯ’ (ವಿಜಯವಾಣಿ, ಡಿ. 28) ವರದಿ ಕನ್ನಡಿಗರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಬ್ಯಾಂಕ್ಗಳು ಕನ್ನಡ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ನಾಡಿನ ಎಲ್ಲಾ ರಂಗಗಳಲ್ಲೂ ಕನ್ನಡ ಭಾಷೆ ಕಡ್ಡಾಯವಾಗಿದ್ದರೂ ಬ್ಯಾಂಕ್ಗಳಲ್ಲಿ ಕನ್ನಡ ಜಾರಿ ಹೋಗುತ್ತಿದೆ. ಅಲ್ಲದೇ, ಎಟಿಎಂಗಳಲ್ಲಿಯೂ ಸದ್ದಿಲ್ಲದೆ ಕನ್ನಡ ಆಯ್ಕೆಯನ್ನು ಕೈ ಬಿಡುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಬ್ಯಾಂಕ್ಗಳಲ್ಲಿ ವ್ಯವಹರಿಸಲು ತೊಂದರೆಯಾಗುತ್ತಿದೆ. ಇಂಗ್ಲಿಷ್ ಭಾಷೆ ಬಾರದವರು ಇನ್ನೊಬ್ಬರ ಸಹಾಯಕ್ಕೆ ಮೊರೆ ಹೋಗುವಂತಾಗಿದೆ. ವಂಚಕರು ಇದೇ ಸೂಕ್ತ ಅವಕಾಶವೆಂದು ಗ್ರಾಹಕರನ್ನು ವಂಚಿಸುತ್ತಿದ್ದಾರೆ ಮತ್ತು ಮೋಸ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಇತರೆ ಭಾಷೆಗಳು ನಾಡಿನಲ್ಲಿ ಮೇಲುಗೈ ಸಾಸುವಂತಾಗಬಹುದು. ಹಾಗಾಗಿ ತ್ರಿಭಾಷಾ ಸೂತ್ರವನ್ನು ಬಿಗಿಯಾಗಿ ಜಾರಿಗೊಳಿಸಬೇಕು. ಬ್ಯಾಂಕ್ ನೌಕರರು ಕನ್ನಡ ಕಲಿಯುವುದನ್ನು ಕಡ್ಡಾಯ ಮಾಡಬೇಕು. ಕನ್ನಡ ಆಯ್ಕೆಗಳಿಲ್ಲದ ಎಟಿಎಂಗಳನ್ನು ಮುಚ್ಚಿಸಬೇಕು. ಕನ್ನಡದ ಅಗ್ರಸ್ಥಾನಕ್ಕೆ ಸರ್ಕಾರ ಹೊರಡಿಸಿದ ಎಲ್ಲಾ ಆದೇಶ, ಸುತ್ತೋಲೆಗಳಿಗೆ ಪ್ರಾಶಸ್ಱ ನೀಡಿ ಜಾರಿಗೆ ತರಬೇಕು. ಇದನ್ನು ಉಲ್ಲಂಸುವವರ ಮೇಲೆ ಕ್ರಮವಾಗಬೇಕು. ಅಂದಾಗ ಮಾತ್ರ ಕನ್ನಡವು ಸಾರ್ವಭೌಮ ಭಾಷೆಯಾಗಿ ಉಳಿಯಲು ಸಾಧ್ಯವಾಗುತ್ತದೆ.
-ನಾರಾಯಣ ಡಂಬಳಿ ಕೋಹಳ್ಳಿ, ಅಥಣಿ