

ಅಂಗೈಯಲ್ಲಿಯೇ ಜಗತ್ತನ್ನು ಕಾಣಬಹುದಾದ ಇಂದಿನ ಆಧುನಿಕ ಯುಗದಲ್ಲಿಯೂ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ, ಹಾಳಾದ ರಸ್ತೆಗಳು, ಅವ್ಯವಸ್ಥೆಯಿಂದ ಕೂಡಿರುವ ಶಾಲೆಗಳು ಈಗಲೂ ಕಾಣಸಿಗುತ್ತವೆ. ಇದಕ್ಕೆಲ್ಲಾ ಪಂಚಾಯತ ಸದಸ್ಯರ ನಿರ್ಲಕ್ಷ್ಯವೇ ಕಾರಣ. ಗ್ರಾಪಂ ಸದಸ್ಯರು ಮನಸ್ಸು ಮಾಡಿದರೆ 5 ವರ್ಷದಲ್ಲಿ ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಅದು ಈಡೇರುತ್ತಿಲ್ಲ. ಈಗ ಘೊಷಣೆಯಾಗಿರುವ ಗ್ರಾಪಂ ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಅಥವಾ ಸತ್ಪ್ರಜೆಯನ್ನು ಆಯ್ಕೆ ಮಾಡುವ ಅವಕಾಶ ಬಂದಿದೆ. 5 ವರ್ಷಕ್ಕೊಮ್ಮೆ ಬರುವ ಚುನಾವಣೆಗಳಲ್ಲಿ 5 ನಿಮಿಷದಲ್ಲಿ ಮತದಾನ ಮಾಡಿದರೆ ಮುಗಿಯಿತು ಎನ್ನುವ ಭಾವನೆಯನ್ನು ಮತದಾರರು ಬಿಡಬೇಕು. ಯುವಕರು ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡು ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಮೂಲಕ ಕುತಂತ್ರದ, ವೈಯಕ್ತಿಕ ಹಿತಾಸಕ್ತಿಗೆ ಒತ್ತು ನೀಡುವ ರಾಜಕಾರಣಕ್ಕೆ ತಿಲಾಂಜಲಿ ನೀಡಿ, ನೈಜ ಅಭಿವೃದ್ಧಿಗೆ ಮುಂದಾಗಬೇಕು. ಮತದಾರರು ಕೂಡ ಕೆಟ್ಟ ರಾಜಕಾರಣಕ್ಕೆ, ಚಿಲ್ಲರೆ ಕಾಸಿಗೆ, ಮುಲಾಜಿಗೆ ಅವಕಾಶ ಕೊಡದೆ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಗ್ರಾಮದ ಅಭಿವೃದ್ಧಿಯ ಕೀಲಿಕೈ ಮತದಾರರ ಕೈಲೇ ಇದೆ.
| ಅಪ್ಪು ಶಿರೋಳಮಠ ವಿಜಯಪುರ
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಚುನಾವಣೆ ಆಯೋಗ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿ ಎಂದರೆ, ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆ. ಹೀಗಾಗಿ ಪಂಚಾಯಿತಿ ಚುನಾವಣೆಗೆ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಿದರೆ ಉತ್ತಮ ಆಡಳಿತದ ಜೊತೆಗೆ ಗ್ರಾಮಗಳ ಅಭಿವೃದ್ಧಿಯಾಗಲೂ ಸಾಧ್ಯವಾಗುತ್ತದೆ. ಇಂಥ ನಿಯಮವನ್ನು ನಮ್ಮ ದೇಶದ ಕೆಲವು ರಾಜ್ಯಗಳು ಅಳವಡಿಸಿಕೊಂಡಿವೆ. ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಈ ಕುರಿತು ಆಲೋಚಿಸಲಿ.
| ಜನ್ನು ಕೆ. ದೊಡ್ಡಿ ಜಾಲವಾದ