

ಕೆಲವು ತರಗತಿಯ ಮಕ್ಕಳಿಗೆ ಮಾತ್ರ ಇಡೀ ದಿನದ ಮಾಮೂಲಿಯಂತೆ ಶಾಲೆ. ಕೆಲವರಿಗೆ ಅರ್ಧ ದಿನದ ದಿನ ಬಿಟ್ಟು ದಿನದ ವಿದ್ಯಾಗಮ ಶಾಲೆ. ಕೆಲವರಿಗೆ ಶಾಲೆಯೇ ಇಲ್ಲ... ಏಕೆ ಹೀಗೆ? ಜಗತ್ತಿನ ಮುಂದುವರಿದ ದೇಶಗಳು ಇನ್ನೂ ಕರೊನಾದಿಂದ ತಲ್ಲಣಿಸುತಿದ್ದರೆ ಭಾರತದಲ್ಲಿ ನಿಯಂತ್ರಣಕ್ಕೆ ಬಂದಿದೆ. ಅಸಂಬದ್ಧ ಲಾಕ್ಡೌನ್ (ಬೆಳಗ್ಗೆ 6-12ರ ತನಕ ಮುಕ್ತ), ಅರ್ಧಂಬದ್ಧ ಮಾಸ್ಕ್, ಅಸಾಧ್ಯದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಡುವೆಯೂ ಕೋವಿಡ್ ಕಾರಣದಿಂದ ಭಾರತೀಯರ ಆರ್ಥಿಕತೆ ಹದಗೆಟ್ಟಷ್ಟು ಆರೋಗ್ಯಕ್ಕೆ ಹಾನಿಯಾಗಿಲ್ಲ. ವೈಜ್ಞಾನಿಕವಾಗಿ ಇದಕ್ಕೆ ಕಾರಣ ಸಾಮುದಾಯಿಕ ರೋಗಪ್ರತಿನಿರೋಧ ಶಕ್ತಿ (Herd Immunity).
ನಮ್ಮ ದೇಶದ ಕರೊನಾ ಲಸಿಕೆಯೂ ಜಾಗತಿಕ ಮಾನ್ಯತೆಯತ್ತ ದಾಪುಗಾಲಿಡುತ್ತಿದೆ. ಇಂತಿರುವಾಗ ಹಾಸ್ಯಾಸ್ಪದ ನಿಯಮಾವಳಿಗಳಿಗೆ ಕೊನೆ ಹಾಡುವುದು ಸೂಕ್ತ. ಒಂದೋ ಎಲ್ಲರಿಗೂ ಶೂನ್ಯ ಶೈಕ್ಷಣಿಕ ವರ್ಷ ಎಂದು ಘೊಷಿಸಿ ಇಲ್ಲವೇ ಎಲ್ಲ ಮಕ್ಕಳಿಗೂ ಎಂದಿನಂತೆ ಬಿಸಿಯೂಟ ಸಹಿತ ಶಾಲೆ ಆರಂಭಿಸಿ ಸಂವಿಧಾನದ ಶೈಕ್ಷಣಿಕ ಸಮಾನತೆಯ ಆಶಯ ಉಳಿಸಿ.
| ಡಾ ರಾಮಚಂದ್ರ ಕೆ. ಕನ್ಯಾನ