ಸೂಕ್ತ ವ್ಯವಸ್ಥೆ ಅಗತ್ಯ; ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಲಾಖೆಯೇ ಗುರುತಿಸಿ ನೀಡಲಿ: ಜನಮತ

Janamatha1
Published on

ಸೂಕ್ತ ವ್ಯವಸ್ಥೆ ಅಗತ್ಯ

ಕರೊನಾ ಸೋಂಕಿನ 2ನೇ ಅಲೆ ನಿಯಂತ್ರಣಕ್ಕೆ ಬಂದಿದ್ದರೂ, ಆಗಸ್ಟ್ -ಸೆಪ್ಟೆಂಬರ್ ಹೊತ್ತಿಗೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ ಮತ್ತು ಲಸಿಕೆ ಅಭಿಯಾನಕ್ಕೆ ವೇಗ ನೀಡುವುದೇ ಪರಿಹಾರ ಎಂಬ ಸಲಹೆಯನ್ನೂ ನೀಡಿದ್ದಾರೆ. ರಾಜ್ಯಗಳಿಗೆ ಸೂಕ್ತ ಪ್ರಮಾಣದಲ್ಲಿ ಲಸಿಕೆ ಪೂರೈಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಜನರು ಮಾತ್ರ ಲಸಿಕೆ ಪಡೆಯಲು ಪರದಾಡುವಂತಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲಾಕೇಂದ್ರಗಳಲ್ಲಿ ಲಸಿಕೆ ಕೊರತೆ ಪ್ರಮಾಣ ತೀವ್ರವಾಗಿದೆ. ಜನರು ದೈನಂದಿನ ಕಾರ್ಯ ಬದಿಗೊತ್ತಿ, ಕೆಲ ಗಂಟೆಗಳ ಕಾಲ ಸರದಿಸಾಲಿನಲ್ಲಿ ನಿಂತರೂ, ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳಲ್ಲಿ

ಅವ್ಯವಸ್ಥೆಯ ಹಲವು ನಿದರ್ಶನಗಳು ಬೆಳಕಿಗೆ ಬಂದಿವೆ. ಕೆಲ ಕೇಂದ್ರಗಳಲ್ಲಂತೂ ಲಸಿಕೆ ಲಭ್ಯವಿದ್ದರೂ, ಸೂಕ್ತವಾಗಿ ವಿತರಿಸುವ ವ್ಯವಸ್ಥೆ ಆಗುತ್ತಿಲ್ಲ. ಮೊದಲು ಜನಸಾಮಾನ್ಯರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಈಗ ಸೂಕ್ತ ಅರಿವು ಮೂಡಿದ್ದು, ಲಸಿಕೆ ಪಡೆಯಲು ಮುಂದಾದರೂ, ಸಮಸ್ಯೆಗಳು ಕೊನೆಗಾಣುತ್ತಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು ಮತ್ತು ಸೂಕ್ತ ಪ್ರಮಾಣದಲ್ಲಿ ಲಸಿಕೆ ಸಿಗಲು ಪೂರಕ ವ್ಯವಸ್ಥೆ ನಿರ್ವಿುಸಬೇಕು. ಲಸಿಕೆ ಅಭಿಯಾನ ಕುಂಟುತ್ತ ಸಾಗಿದರೆ ಅದರಿಂದ ಅಪಾಯ ಎಂಬ ತಜ್ಞರ ಎಚ್ಚರಿಕೆ ಮರೆಯುವಂತಿಲ್ಲ.

| ವಿಶಾಲ್ ಬೆಂಗಳೂರು

ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಲಾಖೆಯೇ ಗುರುತಿಸಿ ನೀಡಲಿ

ಪ್ರತಿವರ್ಷ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಬೇಸರದ ಸಂಗತಿಯೆಂದರೆ ಶಿಕ್ಷಕರು ಪ್ರಶಸ್ತಿಗೆ ತಾವೇ ಅರ್ಜಿ ಸಲ್ಲಿಸಬೇಕು. ಸ್ವಾಭಿಮಾನಿಯಾಗಿರುವ ಶಿಕ್ಷಕ ತಾನೇ ಅರ್ಜಿ ಹಾಕಿ ಪ್ರಶಸ್ತಿ ಕೊಡಿ ಅಂತ ಕೇಳುವುದು ತರವಲ್ಲ. ಇಲಾಖೆಯ ಈ ಕ್ರಮ ಸಾಧುವಲ್ಲ. ಶಿಕ್ಷಕನ ಕಾರ್ಯದಕ್ಷತೆಯನ್ನು ಶಿಕ್ಷಣ ಇಲಾಖೆಯೇ ಗುರ್ತಿಸಿ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ. ಅಲ್ಲದೇ ಎಷ್ಟೋ

ಜನ ಶಿಕ್ಷಕರು ಪ್ರಶಸ್ತಿ ಪಡೆಯಲು ಅರ್ಹತೆ ಇಲ್ಲದಿದ್ದರೂ ಪ್ರಭಾವಿ ರಾಜಕಾರಣಿಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರಶಸ್ತಿ ಪಡೆಯುತ್ತಿರುವುದು ದುರ್ದೈವದ ಸಂಗತಿ. ಇದರಿಂದ ನಿಷ್ಠಾವಂತ, ಪ್ರಾಮಾಣಿಕ ಶಿಕ್ಷಕರಿಗೆ ಅನ್ಯಾಯವಾಗುತ್ತ್ತೆ. ಹೀಗಾಗಿ ಸರ್ಕಾರ ಪ್ರಶಸ್ತಿಯ ಆಯ್ಕೆಯ ಮಾನದಂಡವನ್ನು ಬದಲಿಸಿ ಯೋಗ್ಯರನ್ನಷ್ಟೇ ಆಯ್ಕೆ ಮಾಡಲಿ.

| ಹರಳಹಳ್ಳಿ ಪುಟ್ಟರಾಜು ಪಾಂಡವಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net