

ಇಡೀ ಜಗತ್ತೇ ಕರೊನ ಮಹಾಮಾರಿಯ ಹೊಡೆತಕ್ಕೆ ಬೆಚ್ಚಿಬಿದ್ದಿದೆ. ಸಾವು-ನೋವುಗಳ ಸೆಣಸಾಟ ಹೇಳತೀರದು. ಎಲ್ಲರಿಗೂ ಭಯ, ಮುಂದೇನಾಗಬಹುದು ಎಂಬ ಚಿಂತೆ ಕಾಡುತ್ತಿರುವುದು ಸಹಜ. ಮನೆಯಲ್ಲಿದ್ದರೂ ಭಯ ಕಾಡತೊಡಗಿರುವ ಇಂತಹ ಸಂದರ್ಭದಲ್ಲಿ ಒಂದಷ್ಟು ಪುಸ್ತಕ ಓದಿನ ಕಡೆ ಗಮನ ಹರಿಸುವುದು ಒಳ್ಳೆಯದು. ಇದರಿಂದ ನಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ. ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ. ಮನಸ್ಸಿನ ನಿಗ್ರಹ ಕೂಡ ಸಾಧ್ಯ. ಅಷ್ಟೇ ಏಕೆ, ಪುಸ್ತಕ ಓದುವುದರಿಂದ ಸಮಯದ ಸದುಪಯೋಗ ಸಾಧ್ಯ. ಅಧ್ಯಯನದಿಂದ ಒಳ್ಳೆಯ ವಿಚಾರಗಳನ್ನು ತಿಳಿಯಬಹುದು. ಮನಸ್ಸನ್ನು ತಿಳಿಯಾಗಿಟ್ಟುಕೊಳ್ಳಬಹುದು.
ಈ ಕ್ಲಿಷ್ಟಕರವಾದ ಕಾಲ ತೊಲಗಿ ಒಳ್ಳೆಯ ಕಾಲ ಬಂದೇ ಬರುತ್ತದೆ. ನಾವು ಈ ಸಮಯದಲ್ಲಿ ಧೃತಿಗೆಡದೆ ಧೈರ್ಯದಿಂದ ಈ ಸಂದರ್ಭವನ್ನು ಎದುರಿಸಬೇಕು. ಕೇವಲ ಸರ್ಕಾರವನ್ನು ನಿಂದಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ನಾವೇ ಜವಾಬ್ದಾರಿಯಿಂದ ವರ್ತಿಸಬೇಕು. ಕೇವಲ ಹಣ ಮುಖ್ಯವಲ್ಲ. ಜೀವ ಅತಿ ಮುಖ್ಯ ಎಂಬುದನ್ನು ಕರೊನಾ ದರ್ಶಿಸಿದೆ. ಆದರೆ ಇಂತಹ ಉತ್ತಮ ಯೋಚನೆಗಳಿಗಾಗಿ ಮಿದುಳಿಗೆ ಮೇವು ಮುಖ್ಯ. ಆ ಮೇವೆ ಪುಸ್ತಕಗಳು. ಸರ್ಕಾರ ಇ-ಕಾಮರ್ಸ್ಗೆ ಅವಕಾಶ ಕೊಟ್ಟಿದೆ. ಮನೆ ಬಾಗಿಲಿಗೆ ಪುಸ್ತಕಗಳನ್ನು ತರಿಸಿಕೊಳ್ಳುವ ಮೂಲಕ ಲಾಕ್ಡೌನ್ ದಿನಗಳು ಜ್ಞಾನವೃದ್ಧಿಗೆ ಸಹಕಾರಿಯಾಗಲಿ.
| ಆರ್. ದೊಡ್ಡೆಗೌಡ ಕಾರ್ಯದರ್ಶಿ ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘ