

ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಅಂದಿನ ಸರ್ಕಾರ ಬೆಳಗಾವಿಯಲ್ಲಿ ಒಂದು ವಿಧಾನಸೌಧ ಕಟ್ಟಿಸಿ ಅದಕ್ಕೆ ‘ಸುವರ್ಣಸೌಧ’ ಎಂದು ಹೆಸರಿಟ್ಟಿತು. ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಮತ್ತು ಈ ಭಾಗದ ಶಾಸಕರ ಅಹವಾಲುಗಳಿಗೆ ಆದ್ಯತೆ ಸಿಗಲಿ ಎಂಬ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುವರ್ಣಸೌಧ ನಿರ್ವಿುಸಲಾಗಿದೆ. ಆದರೆ
ಇಲ್ಲಿ ಅಧಿವೇಶನ ನಡೆಸದೆ ಸುವರ್ಣಸೌಧ ನಿರ್ವಣದ ಮೂಲ ಆಶಯಕ್ಕೆ ಸರ್ಕಾರ ಧಕ್ಕೆ ತರುತ್ತಿದೆ. ಪ್ರಾದೇಶಿಕ ಅಸಮಾನತೆ ಎಂಬುದು ಕೇವಲ ಕಾಗದದ ಮೇಲಿನ ಆದೇಶದಿಂದಲೋ ಅಥವಾ ಕಟ್ಟಡ ನಿರ್ವಿುಸುವುದರಿಂದಲೋ ನಿವಾರಣೆ ಆಗುವಂಥದ್ದಲ್ಲ. ಆ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಗಳು, ಅಭಿವೃದ್ಧಿ ಯೋಜನೆಗಳು, ರಾಜಕೀಯ ಇಚ್ಛಾಶಕ್ತಿ ಅಗತ್ಯ. ಈ ವಿಷಯದಲ್ಲಿ ಏನೋ ನೆಪ ಹೇಳಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವಂತಿಲ್ಲ. ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಬೇಕೆಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರು ಈಗಾಗಲೇ ವಿಧಾನಸಭಾ ಅಧ್ಯಕ್ಷರಿಗೆ ಪತ್ರ ಬರೆದು ವಿನಂತಿಸಿರುವುದು ಒಳ್ಳೆಯ ಬೆಳವಣಿಗೆ. ಅದರಂತೆ ಈ ಭಾಗದ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಒತ್ತಾಯಿಸಬೇಕು.
| ವಿ.ಜಿ.ಇನಾಮದಾರ ಸಾರವಾಡ
ಸದ್ಯದಲ್ಲಿಯೇ ನಾಗರಿಕರ ಉಪಯೋಗಕ್ಕೆ ಲಭ್ಯವಾಗಲಿರುವ ಶಿವಮೊಗ್ಗ ವಿಮಾನನಿಲ್ದಾಣಕ್ಕೆ ಗಣ್ಯವ್ಯಕ್ತಿಗಳ ಹೆಸರಿಡಬೇಕೆಂಬ ಆಗ್ರಹ ಕೇಳಲಾರಂಭಿಸಿದೆ. ಆದರೆ, ಈಗಾಗಲೇ ಕೆಲವು ಗಣ್ಯವ್ಯಕ್ತಿಗಳ ಹೆಸರನ್ನು ವಿಶ್ವವಿದ್ಯಾಲಯಕ್ಕೆ, ಬಡಾವಣೆಗಳಿಗೆ, ರಸ್ತೆಗಳಿಗೆ ಇಟ್ಟು ಅವರಿಗೆ ಗೌರವ ಸೂಚಿಸಲಾಗಿದೆ. ಈಗ ಅಂತಹ ಪ್ರಕ್ರಿಯೆಯನ್ನು ಪುನರಾವರ್ತಿಸುವುದಕ್ಕಿಂತ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಶಿವಮೊಗ್ಗ ಜಿಲ್ಲೆಯಲ್ಲಿನ ಕೆಲವು ಪ್ರಖ್ಯಾತ ನಿಸರ್ಗ ಸಿರಿಯ ಹೆಸರನ್ನು ವಿಮಾನನಿಲ್ದಾಣಕ್ಕೆ ಇಟ್ಟರೆ, ಜಿಲ್ಲೆಯ ವೈಶಿಷ್ಟ್ಯಕ್ಕೆ ಮೆರುಗು ಬರುತ್ತದೆ. ಅಂತೆಯೇ ಈ ಬಗ್ಗೆ ‘ಸಹ್ಯಾದ್ರಿ’, ’ಕೊಡಚಾದ್ರಿ’, ‘ವರದಪುರ’, ‘ಸಿಗಂದೂರು’, ‘ಸೋಗಾನೆ’ಯಂಥ ವಿಶಿಷ್ಟ ರಮಣೀಯ ತಾಣಗಳನ್ನು ಪರಿಗಣಿಸುವುದು ಸೂಕ್ತ. ಸರ್ಕಾರ ಈ ಬಗ್ಗೆ ಗಮನ ಹರಿಸಲಿ.
| ಅನಂತಪದ್ಮನಾಭ ಶಿವಮೊಗ್ಗ