

ಕೃಷಿ ಕ್ಷೇತ್ರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿ ಕೇಂದ್ರ ಸರ್ಕಾರ 2020ರ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಮೂರು ಹೊಸ ಕಾನೂನುಗಳನ್ನು ರೂಪಿಸಿದೆ. ಈ ಮೂರು ಕಾನೂನುಗಳ ವಿರುದ್ಧ ಕೇವಲ ಎರಡು ರಾಜ್ಯಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ, ವಿರೋಧ ತೋರುತ್ತಿರುವ ರಾಜ್ಯಗಳೇ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಅಂದರೆ, ಕೃಷಿ ಉತ್ಪಾದನಾ ವೆಚ್ಚವನ್ನು (ಎಂಎಸ್ಸಿ) ಒದಗಿಸುವುದು ಮತ್ತು ಕೃಷಿ ಸಾಲ ಮನ್ನಾ ಮಾಡುವುದು. ರಾಜ್ಯ ಸರ್ಕಾರಗಳೇ ಈ ಕ್ರಮ ಕೈಗೊಂಡರೆ ಕೇಂದ್ರದ ಮೇಲಿನ ಆರ್ಥಿಕ ಹೊರೆಯೂ ಕೊಂಚ ಕಡಿಮೆಯಾಗುತ್ತದೆ.
ಕೇರಳ ಮತ್ತು ಬಿಹಾರದಲ್ಲಿ ಎಪಿಎಂಸಿ ಕಾಯ್ದೆಯೇ ಇಲ್ಲ. 2005ರಲ್ಲಿ ಬಿಹಾರ ಎಪಿಎಂಸಿ ಕಾಯ್ದೆಯನ್ನು ತೆಗೆದು ಹಾಕಿದೆ. 2005ಕ್ಕಿಂತ ಮೊದಲು ಬಿಹಾರದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.5.3ರಷ್ಟಿತ್ತು ಮತ್ತು ಎಪಿಎಂಸಿ ಕಾಯ್ದೆಯನ್ನು ತೆಗೆದು ಹಾಕಿದ ನಂತರ ಅಲ್ಲಿನ ಆರ್ಥಿಕ ಅಭಿವೃದ್ಧಿ ದರ ಶೇ.11.7ಕ್ಕೆ ಏರಿಕೆಯಾಗಿದೆ.
2020ರವರೆಗೆ, ಅನೇಕ ರಾಜ್ಯಗಳು ಸಿಬಿಐ ಕಾರ್ಯಾಚರಣೆ ನಡೆಸಲು ತಮ್ಮ ‘ಸಾಮಾನ್ಯ ಸಮ್ಮತಿ’ಯನ್ನು ಹಿಂತೆಗೆದುಕೊಂಡಿವೆ ಮತ್ತು ಪ್ರಕರಣಗಳ ಆಧಾರದ ಮೇಲೆ ವಿಶೇಷ ಸಮ್ಮತಿಯನ್ನು ನೀಡಲಾಗುತ್ತದೆ. ಪ್ರಸ್ತುತ, ಪಶ್ಚಿಮ ಬಂಗಾಳ, ಛತ್ತೀಸ್ಗಢ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಜಾರ್ಖಂಡ್, ಪಂಜಾಬ್, ತ್ರಿಪುರಾ ಮತ್ತು ಮಿಜೋರಾಂಗಳಲ್ಲಿ ಸಿಬಿಐ ತನ್ನ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ತನಿಖೆ ನಡೆಸುವ ಮುನ್ನ ಪೂರ್ವಾನುಮತಿ ಪಡೆಯಬೇಕಾಗುತ್ತದೆ.
ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ, ಛತ್ತೀಸ್ಗಢ ರಾಜ್ಯಗಳನ್ನು ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಆಳುತ್ತಿವೆ. ಈ ರಾಜ್ಯಗಳು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ ಮತ್ತು ಎನ್ಆರ್ಸಿ) ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿವೆ.
ಸಿಎಎ, ಎನ್ಆರ್ಸಿ ಕಾಯ್ದೆಗಳ ಬಗ್ಗೆ ನಿರ್ಧಾರ ಕೈಗೊಂಡಿರುವಂತೆ, ಸಿಬಿಐಗೆ ‘ಸಾಮಾನ್ಯ ಸಮ್ಮತಿ’ ಹಿಂತೆಗೆದುಕೊಂಡಂತೆ, ಎಪಿಎಂಸಿ ಕಾಯ್ದೆಗೆ ಸಂಬಂಧಿಸಿ ರಾಜ್ಯ ಸರ್ಕಾರಗಳು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬಹುದಲ್ಲವೇ? ಈ ಮೂಲಕ ಅವರ ರಾಜ್ಯದ ರೈತರ ಸಮಸ್ಯೆಗಳನ್ನು ಪರಿಹರಿಸಬಹುದಲ್ಲವೇ? ಇದಕ್ಕಿರುವ ಅಡ್ಡಿಯಾದರೂ ಏನು? ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ರಾಜ್ಯಗಳು ಈ ಕುರಿತು ಚಿಂತನೆ ನಡೆಸಿ, ಸಮಸ್ಯೆ ಬಗೆಹರಿಸುವುದು ಕಷ್ಟವೇನಲ್ಲ. ಅದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಅಷ್ಟೇ.
| ಶ್ರೀಕಂಠ ಎನ್ ಬೆಂಗಳೂರು
ಕೊನೆಗೂ ದೇಶದ ಜನರಿಗೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ನೀಡುವ ಮುಹೂರ್ತ (ಜನವರಿ 16ರಿಂದ) ನಿಗದಿಯಾಗಿದೆ. ಆದರೆ ಲಸಿಕೆ ಪಡೆಯುವ ಪ್ರಥಮ ಪ್ರಾಶಸ್ತ್ಯದಲ್ಲಿ ಶಿಕ್ಷಕರಿಲ್ಲ! ಒಂದುವೇಳೆ ಪ್ರಥಮ ಪ್ರಾಶಸ್ತ್ಯದಲ್ಲೇ ಶಿಕ್ಷಕರಿಗೆ ಲಸಿಕೆ ನೀಡಿದ್ದೇ ಆದಲ್ಲಿ ಶಾಲೆಗಳು ಅಡ್ಡಿ ಆತಂಕವಿಲ್ಲದೇ ನಡೆಯಲು ಸಹಕಾರಿಯಾಗುತ್ತಿತ್ತು. ಈಗಾಗಲೇ ಶಿಕ್ಷಕರಿಗೆ ಕರೊನಾ ಬಂದು ಶಾಲೆಗಳಲ್ಲಿ ಆತಂಕದ ವಾತಾವರಣದಲ್ಲಿ ವಿದ್ಯಾರ್ಥಿ ಸಮೂಹ ಪಾಠ ಕಲಿಯುತ್ತಿರುವ ಪರಿಸ್ಥಿತಿ ಇದೆ. ಇಂಥ ವಿಷಮ ಪರಿಸ್ಥಿತಿಯನ್ನು ನಿಭಾಯಿಸಲು ನೆರವಾಗುವ ನಿಟ್ಟಿನಲ್ಲಿ ಪ್ರಾರಂಭದಲ್ಲೇ ದೇಶದ ಎಲ್ಲ ಶಿಕ್ಷಕರಿಗೂ ಲಸಿಕೆಯನ್ನು ನೀಡುವುದು ಸೂಕ್ತ.
| ಹರಳಹಳ್ಳಿ ಪುಟ್ಟರಾಜು ಪಾಂಡವಪುರ