

ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಂದಾಜು 2.4 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 2001ರಲ್ಲಿ ಎಸ್ಎಸ್ಎ ಯೋಜನೆ ಜಾರಿ ಆದಾಗಿನಿಂದ 80 ಸಾವಿರ ಶಿಕ್ಷಕರ ನೇಮಕಾತಿಯಾಗಿದೆ. ಶಿಕ್ಷಕರ ಸಂಬಳವನ್ನು ಯೋಜನೇತರ ಹಾಗೂ ಎಸ್ಎಸ್ಎ ಎಂದು ವರ್ಗೀಕರಿಸಲಾಗಿದೆ. ಯೋಜನೇತರ ಶಿಕ್ಷಕರ ಸಂಬಳ ಸಕಾಲಕ್ಕೆ ಪಾವತಿಯಾಗುತ್ತಿದೆ. ಆದರೆ ಎಸ್ಎಸ್ಎ ಶಿಕ್ಷಕರ ಸಂಬಳ ಪ್ರತಿ ತಿಂಗಳೂ ವಿಳಂಬವಾಗುತ್ತಿದೆ. ಶಿಕ್ಷಣ ಸಚಿವರು, ‘ವೇತನ ವಿಳಂಬವಾದರೆ ಅದು ಆರ್ಥಿಕ ಅಪರಾಧ’ ಎಂದು ಹೇಳಿಕೆ ನೀಡಿದ್ದರೂ ಡಿಡಿಪಿಐ ಹಾಗೂ ಬಿಇಒಗಳು ಎಚ್ಚೆತ್ತುಕೊಂಡಿಲ್ಲ. ಇನ್ನಾದರೂ, ಶಿಕ್ಷಕರ ವೇತನವನ್ನು ಸಕಾಲಕ್ಕೆ ಪಾವತಿಸಲು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
| ಮಹಾಂತೇಶ ಆರ್.ಬಿ, ಧಾರವಾಡ
ಇದು ಅಸಾಂವಿಧಾನಿಕವಲ್ಲವೇ?
ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯ ಅಂಗೀಕಾರ ಪಡೆದು, ರಾಷ್ಟ್ರಪತಿಗಳ ಅಂಕಿತ ಬಳಿಕ ಕಾಯ್ದೆ ಸ್ವರೂಪ ಪಡೆದುಕೊಂಡಿದೆ. ಆದರೆ, ಕೆಲ ರಾಜ್ಯಗಳು ‘ನಾವು ಸಿಎಎ ಅನುಷ್ಠಾನಗೊಳಿಸುವುದಿಲ್ಲ’ ಎಂದು ಹೇಳಿಕೊಳ್ಳುತ್ತಿವೆ. ಪ್ರತಿಭಟನೆಯನ್ನೂ ನಡೆಸುತ್ತಿವೆ. ಎನ್ಆರ್ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಸಾಂವಿಧಾನಿಕ ವಾಗಿದ್ದರೆ ಅದನ್ನು ಪ್ರಶ್ನಿಸಲು ನ್ಯಾಯಾಲಯ ಇದೆಯಲ್ಲವೇ? ಅದು ಬಿಟ್ಟು ಪ್ರತಿಭಟನೆ ಸೋಗಿನಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡಿ ಜನರನ್ನು ಪ್ರಚೋದಿಸಿ ಹಿಂಸೆಗಿಳಿಯುವುದು ತರವೇ? ಕೇರಳ ವಿಧಾನಸಭೆಯಲ್ಲಿ ಕಾಯ್ದೆ ಅನುಷ್ಠಾನದ ವಿರುದ್ಧ ನಿರ್ಣಯ ಮಂಡಿಸಿದ್ದು ತಪ್ಪಲ್ಲವೇ? ಇದು ಅಸಾಂವಿಧಾನಿಕವಲ್ಲವೇ? ಇಂಥ ಅಪಸವ್ಯಗಳನ್ನು ತಡೆಯಬೇಕಿದೆ. ಸಿಎಎ ವಿಷಯದಲ್ಲಿ ಕೆಲ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಈ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುತ್ತಿವೆ.
| ಎಂ.ಪರಮೇಶ್ವರ ಮದ್ದಿಹಳ್ಳಿ (ಹಿರಿಯೂರು ತಾಲೂಕು)