

ಚುನಾವಣೆ ಸಮಯದಲ್ಲಿ ಜಾತಿಯ ವಿಚಾರ ಪ್ರಸ್ತಾಪಿಸಿ ಗೆಲುವಿಗೆ ತಂತ್ರ ರೂಪಿಸುವುದು ಎಲ್ಲ ರಾಜಕೀಯ ಪಕ್ಷಗಳಿಗೂ ಅಭ್ಯಾಸವಾಗಿ ಬಿಟ್ಟಿದೆ. ಇಂಥ ಸಂದರ್ಭಗಳನ್ನು ಕೆಲ ಜಾತಿ ಮುಖಂಡರು ಉಪಯೋಗಿಸಿಕೊಂಡು ಲಾಭ ಮಾಡಿಕೊಳ್ಳುವುದು ಬಿಟ್ಟರೆ ಸಾಮಾನ್ಯ ಜನರ ಬವಣೆ ತಪ್ಪಿದ್ದಲ್ಲ. ಜನಪ್ರತಿನಿಧಿಗಳು ಈ ರೀತಿ ಜಾತಿ ಹೆಸರಿನಲ್ಲಿ ಜನರನ್ನು ಸಂಕುಚಿತರನ್ನಾಗಿಸುವುದು ಬಿಟ್ಟು ಸರ್ವ ಜನಾಂಗದ ಅಭಿವೃದ್ಧಿಗೆ ಪಣ ತೊಟ್ಟರೆ ಜನಸಾಮಾನ್ಯರ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಸಿಗಬಹುದು. ಸರ್ಕಾರಗಳು ಅಧಿಕಾರಕ್ಕಾಗಿ ಜಾತಿ ರಾಜಕೀಯ ಮಾಡುವುದು ಒಂದು ರೀತಿಯಲ್ಲಿ ನಮ್ಮನ್ನು ಒಡೆದು ಆಳುವ ನೀತಿಯೇ ಸರಿ. ಅದೇ ರೀತಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಜಾತಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ?
ಜಾತಿ ಓಲೈಕೆಯಿಂದ ಹಿಂದೂ ಸಮಾಜ ವನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಸರ್ಕಾರಗಳು ಜಾತಿ ಆಧಾರದಲ್ಲಿ ಸೌಲಭ್ಯ ನೀಡುತ್ತಿರುವುದರಿಂದ ಬಡವ ಬಡವನಾಗಿಯೇ ಉಳಿದಿದ್ದಾನೆ. ಸಮಸ್ಯೆ ಎಲ್ಲ ಜಾತಿಗಳಲ್ಲೂ ಇವೆ, ಎಲ್ಲ ಜಾತಿಗಳಲ್ಲೂ ಬಡವರಿದ್ದಾರೆ. ಎಲ್ಲ ಜಾತಿಗಳಲ್ಲೂ ನೀವು ಕೊಡುವ ಸೌಲಭ್ಯಕ್ಕೆ ಅರ್ಹರಾದವರಿದ್ದಾರೆ. ಜಾತಿ ಆಧಾರದ ಮೇಲೆ ಸೌಲಭ್ಯದ ಅನುಕಂಪ ಬೇಕಿಲ್ಲ. ಅದರ ಬದಲು ಬಡತನದಲ್ಲಿರುವ ಎಲ್ಲ ವರ್ಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶಿಕ್ಷಣ, ಉದ್ಯೋಗ ಕೊಡುವ ವ್ಯವಸ್ಥೆ ಮಾಡಿದರೆ ಜನ ನಿಮ್ಮನ್ನು ಮರೆಯುವುದಿಲ್ಲ. ಸರ್ಕಾರ ಇರುವುದು ರಾಜ್ಯದ ಅಭಿವೃದ್ಧಿಗಾಗಿ, ಯಾವೊಂದು ಜಾತಿಗೂ ಸೀಮಿತವಲ್ಲ.
| ರವಿರಾಜ್ ಬೈಂದೂರು