ಜನಮತ | ಜಾತಿಗೊಂದು ನಿಗಮ-ಪ್ರಾಧಿಕಾರ ಏಕೆ?

Janamatha 1
Published on

ಮರಾಠ ಅಭಿವೃದ್ಧಿ ನಿಗಮ ಆಯಿತು, ಈಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ. ಮುಂದೆ ಯಾವ ಜಾತಿ/ಧರ್ಮದ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಾರೋ ಕಾದು ನೋಡಬೇಕು. ಹೀಗೆ ಎಲ್ಲ ಜಾತಿಗಳಿಗೂ ನಿಗಮ ಮಾಡುತ್ತ ಹೊರಟರೆ ಇದಕ್ಕೆ ಕೊನೆ ಇದೆಯೇ? ರಾಜ್ಯದಲ್ಲಿ ಎಷ್ಟು ಜಾತಿ, ಉಪ ಜಾತಿಗಳಿವೆ? ಅವುಗಳಿಗೆಲ್ಲ ನಿಗಮ ಮಾಡಲು ಸಾಧ್ಯವೇ? ಪ್ರತಿಕ್ಷೇತ್ರದಲ್ಲೂ ವೋಟ್​ಬ್ಯಾಂಕ್ ರಾಜಕಾರಣ ಮಾಡುವುದು ಸರಿಯಲ್ಲ. ಮುಂದೆ ಇದರ ಪರಿಣಾಮ ಏನಾಗುತ್ತದೆ ಎಂಬ ಅರಿವು ನಮ್ಮ ನಾಯಕರಿಗಿಲ್ಲವೇ?

ಕೆಲ ಮಠಗಳು ನಿಗಮದ ಪರವಾಗಿವೆ. ಆದರೆ, ಸಿದ್ಧಗಂಗಾ ಮಠ ಈವತ್ತಿಗೂ ಜಾತ್ಯತೀತ ತತ್ತ್ವಕ್ಕೆ ಬದ್ಧವಾಗಿದೆ. ಈ ಕಾರಣಕ್ಕಾಗಿಯೇ ಎಲ್ಲ ಜಾತಿ, ಧರ್ಮದ ಜನರು ಸಿದ್ಧಗಂಗಾ ಮಠವನ್ನು ಭಕ್ತಿಯಿಂದ ಕಾಣುತ್ತಾರೆ. ಈ ಮಠ ಹಿಂದಿನಿಂದಲೂ ಬಡಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಅನ್ನದಾಸೋಹದ ಸವಲತ್ತನ್ನು ನೀಡಿ ಜನಮನ್ನಣೆ ಗಳಿಸಿದೆ. ಈ ತತ್ತ್ವಕ್ಕೆ ಬದ್ಧರಾಗಿಯೇ ಸಿದ್ಧಲಿಂಗ ಸ್ವಾಮೀಜಿಯವರು ‘ವೀರಶೈವ ಲಿಂಗಾಯತ ನಿಗಮ ರಚನೆ ಆಶ್ಚರ್ಯ ತಂದಿದೆ. ಒಂದು ಜಾತಿಯ ಪ್ರಾಧಿಕಾರ ಮಾಡಿದರೆ ಮುಂದೆ ಪ್ರತಿಯೊಬ್ಬರೂ ಕೇಳುತ್ತಾರೆ’ ಎಂದು ನೇರವಾಗಿ ಹೇಳಿರುವುದು ಸ್ತುತ್ಯರ್ಹ. ಬಡವರು, ದುರ್ಬಲರು, ತುಳಿತಕ್ಕೆ ಒಳಗಾದವರು ಎಲ್ಲ ಜಾತಿಗಳಲ್ಲಿಯೂ ಇದ್ದಾರೆ. ಆಯಾ ಜಾತಿ/ಧರ್ಮದವರೇ ಆಯಾ ಜಾತಿ/ ಧರ್ಮದವರನ್ನು ವಂಚಿಸುವುದನ್ನು ಕಾಣುತ್ತೇವೆ. ಇದಕ್ಕೆ ಐಎಂಎ ಹಗರಣವೇ ಸಾಕ್ಷಿ. ಹಾಗಾಗಿ, ಆರ್ಥಿಕವಾಗಿ ಹಿಂದುಳಿದಿರುವ ಎಲ್ಲ ಜಾತಿ/ಧರ್ಮದವರಿಗಾಗಿಯೇ ಒಂದು ಅಭಿವೃದ್ಧಿ ನಿಗಮ ಮಾಡಿ ಆ ಮೂಲಕ ಅವರನ್ನು ಮೇಲೆ ತರಲಿ. ಅಥವಾ ಒಂದು ಆಯೋಗವನ್ನೇ ನೇಮಿಸಿ ಬಡತನದಲ್ಲಿ ಇರುವವರನ್ನು ಗುರುತಿಸಿ ಅವರಿಗೆ ಪ್ರತ್ಯೇಕ ಮೀಸಲಾತಿಯನ್ನು ನೀಡಲಿ. ಆಗ ಯಾರನ್ನೂ ಓಲೈಸುವ ಸಂದರ್ಭವೇ ಬರುವುದಿಲ್ಲ.

| ಬಿ.ಜಿ.ರಂಗೇಗೌಡ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net