

ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಹಲವು ಯೋಜನೆ, ಸೌಲಭ್ಯಗಳನ್ನೇನೋ ಘೋಷಿಸಿವೆ. ಆದರೆ, ತಾಲೂಕು, ಗ್ರಾಮೀಣ ಮಟ್ಟದಲ್ಲಿ ಇವುಗಳ ಜಾರಿಗೆ ಹಲವು ಅಡ್ಡಿಆತಂಕಗಳಿವೆ. ಆ ಪೈಕಿ ಪ್ರಮುಖವಾದುದು ಲಂಚದ ಪಿಡುಗು. ಪ್ರತಿ ಇಲಾಖೆಯಲ್ಲಿಯೂ ಅವ್ಯವಹಾರ, ಭ್ರಷ್ಟಾಚಾರ ತಾಂಡವವಾಡುತ್ತಿವೆ. ಇವುಗಳಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆ ಮುಂಚೂಣಿಯಲ್ಲಿವೆ.
ಕಂದಾಯ ಇಲಾಖೆಯಲ್ಲಿ ಒಂದು ಸಣ್ಣ ನೋಂದಣಿಗೆ 1000 ರೂ., ಖರೀದಿ ಪತ್ರಕ್ಕೆ, 30,000 ರೂ. ಮೇಲ್ಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ರೈತರನ್ನು ಹೀಗೆ ವಂಚಿಸುತ್ತಿರುವುದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೆ ಅವರು ಸಬೂಬು ಹೇಳುತ್ತಾರೆ ಹೊರತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಇಂಥ ಅಪಸವ್ಯಗಳು ನಮ್ಮ ಜನಪ್ರತಿನಿಧಿಗಳ ಕಣ್ಣಿಗೆ ಕಾಣಿಸವುದಿಲ್ಲ. ಇಲ್ಲಿ ಬಲಿಪಶುವಾಗುತ್ತಿರುವವರು ರೈತರೇ. ವಿಜಯಪುರದ ತಹಸೀಲ್ದಾರ್ ಕಚೇರಿಯಲ್ಲಿ ‘ಏಜೆಂಟ್ರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್ ಹಾಕಿದ್ದಾರೆ. ಆದರೆ ಕಚೇರಿಯ ತುಂಬ ಅವರೇ ತುಂಬಿದ್ದಾರೆ. ರೈತರಿಗೆ ಇರುವ ಸವಲತ್ತುಗಳ ಸಹಾಯಧನವನ್ನು ಸಮರ್ಪಕವಾಗಿ ಬಿಡುಗಡೆ ಮಾಡದೆ ಗೋಳಾಡಿಸಲಾಗುತ್ತದೆ.
ನಮ್ಮ ಸುತ್ತಮುತ್ತಲಿನ ವಿದ್ಯಾವಂತ ಯುವಕರು ಸಿಡಿದೆದ್ದಾಗ ಮಾತ್ರ ಇವುಗಳಿಗೆ ಪರಿಹಾರ ಸಿಗಲು ಸಾಧ್ಯ. ಇಲ್ಲದಿದ್ದರೆ ನಾಲ್ಕು ದಿನ ಆದ ಮೇಲೆ ಅದೇ ಸ್ಥಿತಿ ಎನ್ನುವ ಹಾಗಾಗುತ್ತದೆ. ಸರ್ಕಾರ ಕೂಡ ಭ್ರಷ್ಟಾಚಾರ ಹಾವಳಿಯನ್ನು ತಡೆಗಟ್ಟಲು ಮೊದಲ ಆದ್ಯತೆ ನೀಡಬೇಕು. ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳು ಪಾರದರ್ಶಕವಾಗಿ ದೊರೆಯುವಂತೆ ಆಗಬೇಕು.
| ವಿಠಲ ಆರ್. ಯಂಕಂಚಿ