ಯಶಸ್ಸಿನ ಪಥ ತೋರಿದ ಲೇಖನ: ಜನಮತ

Janamatha1
Published on

ಯಶಸ್ಸಿನ ಪಥ ತೋರಿದ ಲೇಖನ

ವಿಜಯವಾಣಿಯಲ್ಲಿ ಭಾನುವಾರ (ಏಪ್ರಿಲ್ 18) ‘ಸೆಲೆಬ್ರಿಟಿ ಕಾರ್ನರ್’ನಲ್ಲಿ ಪ್ರಕಟಗೊಂಡ ಡಾ.ಸಿ.ಎನ್ ಮಂಜುನಾಥ್​ರವರ ‘ಜೀವನದಲ್ಲಿ ಯಶಸ್ವಿಯಾಗಲು ನಾಲ್ಕು ಸರಳ ಸೂತ್ರ’ ಲೇಖನ ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಬದುಕು ಕಟ್ಟಿಕೊಳ್ಳಲು, ಸಾಧನೆಯ ಪಥದಲ್ಲಿ ಮೇಲೇರಲು ದಿಕ್ಸೂಚಕ ಸೂತ್ರದಂತಿದೆ. ಬದ್ಧತೆ, ಸಹಾನುಭೂತಿ, ನಿರಂತರತೆ ಮತ್ತು ಸಂವಹನ ಎಂಬ ನಾಲ್ಕು ಕೌಶಲಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು, ನಿಗದಿತ ಗುರಿಯನ್ನು ಒತ್ತಡರಹಿತವಾಗಿ ತಲುಪಲು ಪ್ರೇರಣಾಶಕ್ತಿಯಂತೆ ಲೇಖನ ಮೂಡಿಬಂದಿದೆ. ಕರೊನಾದ ಸಂದಿಗ್ಧತೆಯಲ್ಲಿ ಪರೀಕ್ಷೆಗಳೇ ಗೊಂದಲದ ಗೂಡಾಗಿರುವಾಗ ‘ವ್ಯಕ್ತಿಯ ಸಾಧನೆಗೆ ಅಂಕಗಳಷ್ಟೇ ಮಾನದಂಡವಲ್ಲ. ಕಡಿಮೆ ಅಂಕ ಗಳಿಸಿದರೂ ಜೀವನದಲ್ಲಿ ಶ್ರದ್ಧೆಯಿಂದ ಸಾಗಿದರೆ, ಉತ್ತಮ ಸಾಧನೆ ಮಾಡಬಹುದು’ ಎಂಬುದನ್ನು ವ್ಯಕ್ತಿತ್ವ ರೂಪಿಸುವ ಸಾಧನವನ್ನಾಗಿ ಸಾದರಪಡಿಸಿದ್ದಾರೆ. ಕೇವಲ ಅಂತರ್ಜಾಲಕ್ಕೆ ಮಾರುಹೋಗದೆ, ಪೆನ್-ಪೇಪರ್​ನಿಂದ ಬರೆದು ಕಲಿತ ಜ್ಞಾನ ಆಳವಾದದ್ದು ಎಂಬ ಕಿವಿಮಾತನ್ನೂ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ‘ವಿಜಯವಾಣಿ’ ಇಂಥ ಉತ್ತಮ ವಿಚಾರಧಾರೆಗಳುಳ್ಳ ಲೇಖನಗಳನ್ನು ನಿರಂತರವಾಗಿ ಪ್ರಕಟಿಸುತ್ತಿರುವುದು ಶ್ಲಾಘನೀಯ.

| ಅನೀಶ್ ಬಿ. ಕೊಪ್ಪ, ಚಿಕ್ಕಮಗಳೂರು

ಲೋಪ ಸರಿಪಡಿಸಿ

2018ರಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ 836 ಪುಟಗಳ ಬೃಹತ್ ಜೀವನಚರಿತ್ರೆಯನ್ನು ಬರೆದು, ನಾನೇ ಪ್ರಕಟಿಸಿ ಅದರ ಆಯ್ಕೆಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರ ಕಚೇರಿಗೆ ತಲುಪಿಸಿದ್ದೆ. ಆ ವರ್ಷದ ಆಯ್ಕೆಯಾದ ಕೃತಿಗಳ ಪಟ್ಟಿ ಇತ್ತೀಚೆಗೆ ಪ್ರಕಟವಾಗಿದೆ. ಸರ್ದಾರರ ಜೀವನಚರಿತ್ರೆ ಆಯ್ಕೆಯಾಗಿಲ್ಲ. ಈ ಕೃತಿಯನ್ನು ನಾಡಿನ ಅನೇಕ ವಿದ್ವಾಂಸರು ಮೆಚ್ಚಿ ನನಗೆ ದೂರವಾಣಿ ಕರೆ ಮಾಡಿದ್ದಾರೆ. ಈ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಜೀವನಚರಿತ್ರೆ ವಿಭಾಗದಲ್ಲಿ ‘ಪುಸ್ತಕ ಬಹುಮಾನ’ಕ್ಕೆ ಆಯ್ಕೆ ಮಾಡಿದೆ. ಆದರೆ ಇಂಥ ಕೃತಿಯನ್ನು ಗ್ರಂಥಾಲಯ ಇಲಾಖೆ ಆಯ್ಕೆ ಮಾಡಿಲ್ಲ. ಹಾಗಾದರೆ ಆಯ್ಕೆಗೆ ಅವರ ಮಾನದಂಡವೇನು? ಸರ್ದಾರ್ ಪಟೇಲರ ಸವಿಸ್ತಾರವಾದ ಜೀವನಚರಿತ್ರೆಯಂತಹ ಕೃತಿ ತಿರಸ್ಕೃತವಾಗುವುದು ಉಚಿತವೆ? ಇದನ್ನು ಸರ್ಕಾರ ಮತ್ತು ಸಾರ್ವಜನಿಕರು ಗಮನಿಸಿ ಸರಿಪಡಿಸಬೇಕು.

| ಮ.ಸು. ಮನ್ನಾರ್ ಕೃಷ್ಣ ರಾವ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net